ಇದಕ್ಕಿಂತ ಅನ್ಯಾಯ ಇನ್ನೊಂದಿಲ್ಲ

Update: 2021-04-20 07:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ವರ್ಷ ಕಾಣಿಸಿಕೊಂಡ ಕೊರೋನ ಮೊದಲನೇ ಅಲೆಯಲ್ಲಿ ಈ ಸೋಂಕಿಗೆ ಸಾರ್ವಜನಿಕರು ಮಾತ್ರವಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅವರ ಕುಟುಂಬದ ಸದಸ್ಯರು ಕೂಡ ಬಲಿಯಾಗಿದ್ದರು. ಆಗ ಒಮ್ಮೆಲೇ ದಾಳಿಯಿಟ್ಟ ಈ ಸೋಂಕನ್ನು ಎದುರಿಸಲು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಸಜ್ಜಾಗಿರಲಿಲ್ಲ. ತೊಂಭತ್ತರ ದಶಕದಲ್ಲಿ ಕಾಲಿರಿಸಿದ ಜಾಗತೀಕರಣ ಮತ್ತು ನವ ಉದಾರೀಕರಣದ ಹೊಡೆತಕ್ಕೆ ಸಾರ್ವಜನಿಕ (ಸರಕಾರಿ) ಆರೋಗ್ಯ ವ್ಯವಸ್ಥೆ ತತ್ತರಿಸಿ ಹೋಗಿತ್ತು. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿತ್ತು. ಹಾಸಿಗೆಗಳು ಹಾಗೂ ವೆಂಟಿಲೇಟರ್‌ಗಳ ಅಭಾವವಿತ್ತು. ಇಷ್ಟೆಲ್ಲ ಕೊರತೆಗಳ ನಡುವೆ ಸೇವೆ ಸಲ್ಲಿಸುತ್ತಿದ್ದ ಸೀಮಿತ ವೈದ್ಯಕೀಯ ಸಿಬ್ಬಂದಿ ದಿನಕ್ಕೆ ಹದಿನೆಂಟರಿಂದ ಇಪ್ಪತ್ತು ತಾಸುಗಳ ಕಾಲ ಕೆಲಸ ಮಾಡಿದರು. ಅನೇಕರು ಆಸ್ಪತ್ರೆಯಲ್ಲೇ ತಂಗಿ ಒಂದೆರಡು ತಾಸು ನಿದ್ರೆ ಮಾಡಿ ಮತ್ತೆ ಸೇವೆಗೆ ಅಣಿಯಾಗುತ್ತಿದ್ದರು. ಅಂತಲೇ ನಮ್ಮ ಸರಕಾರ, ನಮ್ಮ ಜನ ಪ್ರತಿನಿಧಿಗಳು ಮಾತ್ರವಲ್ಲ, ನಾವೆಲ್ಲ ಈ ವೈದ್ಯರ, ವೈದ್ಯಕೀಯ ಸಿಬ್ಬಂದಿಯ ತ್ಯಾಗವನ್ನು ಗೌರವಿಸಿ ವಾರಿಯರ್ಸ್ (ಯೋಧರು) ಎಂದು ಗೌರವಿಸಿದೆವು. ಅವರ ಬೆನ್ನು ತಟ್ಟಿದೆವು. ಆದರೆ ಅವರ ಹೊಟ್ಟೆಯ ಹಸಿವಿನ ಬಗ್ಗೆ ಯೋಚಿಸಲಿಲ್ಲ. ಕೊರೋನ ಮೊದಲ ಅಲೆಯ ತೀವ್ರತೆ ಕೊಂಚ ಕಡಿಮೆಯಾದ ನಂತರ ಅವರಲ್ಲಿ ಅನೇಕರ ಬಾಕಿ ಉಳಿದ ಸಂಬಳವನ್ನೂ ಸರಕಾರ ಪಾವತಿ ಮಾಡಲಿಲ್ಲ. ಅವರಿಗೆ ಭರವಸೆ ನೀಡಿದ 50 ಲಕ್ಷ ರೂ. ಮೊತ್ತದ ವಿಮೆ ಹಣ ಈ ವರೆಗೆ ತಲುಪಿಲ್ಲ.

ಕೊರೋನ ಮೊದಲನೇ ಅಲೆಯ ಸಮಯದಲ್ಲಿ ಕರ್ನಾಟಕದಲ್ಲಿ 55 ವೈದ್ಯರು ಸೋಂಕಿನಿಂದ ಸಾವಿಗೀಡಾದರು. ಈ ಪೈಕಿ ಹತ್ತು ಮಂದಿಯ ಕುಟುಂಬಗಳಿಗೆ ಮಾತ್ರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ತಲುಪಿದೆ. 11 ಮಂದಿ ಆಶಾ ಕಾರ್ಯಕರ್ತೆಯರು ಸೋಂಕಿಗೆ ಬಲಿಯಾದರು. ಇವರ ಪೈಕಿ ಒಬ್ಬರ ಕುಟುಂಬಕ್ಕೆ ಮಾತ್ರ ವಿಮಾ ಪರಿಹಾರ ತಲುಪಿದೆ ಎಂದು ಭಾರತೀಯ ವೈದ್ಯರ ಸಂಘದ ರಾಜ್ಯ ಘಟಕ ತಿಳಿಸಿದೆ. ಇನ್ನು ಬೇರೆ ರಾಜ್ಯಗಳಲ್ಲಿ ಏನೇನಾಗಿದೆಯೋ ಗೊತ್ತಿಲ್ಲ.

ಈ ನಡುವೆ ಕೊರೋನ ಎರಡನೇ ಅಲೆ ಅಪ್ಪಳಿಸಿದೆ. ಇದು ಮೊದಲಿನದಕ್ಕಿಂತ ತೀವ್ರವಾಗಿದೆ. ಇಂತಹ ಆತಂಕದ ಸನ್ನಿವೇಶದಲ್ಲೇ ಕೇಂದ್ರ ಸರಕಾರ ಕೊರೋನ ಆರೈಕೆ ಸಂದರ್ಭದಲ್ಲಿ ಕೊನೆಯುಸಿರೆಳೆದ ಆರೋಗ್ಯ ಕಾರ್ಯಕರ್ತರಿಗೆ ಪ್ರಕಟಿಸಲಾಗಿದ್ದ ರೂ. 50 ಲಕ್ಷದ ವಿಮಾ ಸೌಲಭ್ಯವನ್ನೂ ವಾಪಸು ಪಡೆದುದು ಅನ್ಯಾಯದ ಪರಮಾವಧಿಯಾಗಿದೆ. ಇದು ನಂಬಿಕೆ ದ್ರೋಹವಲ್ಲದೆ ಬೇರೇನೂ ಅಲ್ಲ. ಸರಕಾರ ವಾಪಸು ಪಡೆಯುವ ತೀರ್ಮಾನವನ್ನು ಕೈ ಬಿಟ್ಟು ಇದನ್ನು ಮುಂದುವರಿಸುವುದು ಅಗತ್ಯವಾಗಿದೆ.

ಎರಡನೆಯದಾಗಿ ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಕೊರೋನ ಎರಡನೇ ಅಲೆ ಅತ್ಯಂತ ತೀವ್ರವಾಗಿ ಅಪ್ಪಳಿಸುತ್ತಿದೆ. ನಿತ್ಯ ಎರಡು ಲಕ್ಷಕ್ಕೂ ಮಿಕ್ಕಿದ ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ದಿಲ್ಲಿ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇಂತಹ ತುರ್ತಿನ ಸಂದರ್ಭದಲ್ಲಿ ನಮ್ಮ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ, ಸಿಬ್ಬಂದಿಯ ಹಾಗೂ ಪ್ರಾಣ ವಾಯುವಿನ ಕೊರತೆ ಎದ್ದು ಕಾಣುತ್ತಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗಳಿಗೆ ಬರುತ್ತಿರುವವರಿಗೆ ಹಾಸಿಗೆಗಳು ಸಿಗುತ್ತಿಲ್ಲ. ಹೇಗೋ ಹಾಸಿಗೆ ವ್ಯವಸ್ಥೆ ಮಾಡಿಕೊಂಡರೂ ಪ್ರಾಣವಾಯು (ಆಕ್ಸಿಜನ್) ಸಿಗುತ್ತಿಲ್ಲ. ಮಧ್ಯಪ್ರದೇಶದ ಶಹ್ದೊಲ್ ಆಸ್ಪತ್ರೆಯಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೆ ಆರು ಮಂದಿ ಮೃತಪಟ್ಟಿದ್ದಾರೆ. ಇಂತಹ ಸನ್ನಿವೇಶದಲ್ಲಿ ದೇಶದ ರಾಜಧಾನಿ ದಿಲ್ಲಿಯಲ್ಲೇ ಇದ್ದು ಎಲ್ಲ ರಾಜ್ಯಗಳಲ್ಲಿ ಸಾವು ಬದುಕಿನ ನಡುವೆ ಸೆಣಸುತ್ತಿರುವವರಿಗೆ ಧೈರ್ಯ ತುಂಬ ಬೇಕಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ. ದೈಹಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಕೊರೋನ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಜನರ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿಯಂತಹವರು ತಮ್ಮ ಮುಂದಿನ ಚುನಾವಣಾ ಪ್ರಚಾರ ಸಭೆಗಳನ್ನು ರದ್ದುಗೊಳಿಸಿದ್ದಾರೆ. ಆದರೂ ಬಿಜೆಪಿ ಅಬ್ಬರದಿಂದ ಪ್ರಚಾರ ಮಾಡುತ್ತಿದೆ.ಮಹಾರಾಷ್ಟ್ರದಲ್ಲಿ ಆಕ್ಸಿಜನ್ ಕೊರತೆಯಾಗಿದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ಮೋದಿಯವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಇದು ದೇಶದ ಇಂದಿನ ಪರಿಸ್ಥಿತಿ.

ಕಳೆದ ವರ್ಷದ ಕೊರೋನ ಹೊಡೆತದಿಂದ ಪಾಠ ಕಲಿತು ಸರಕಾರ (ಪರಿಣಿತರ ಎಚ್ಚರಿಕೆಯನ್ನು ಮನ್ನಿಸಿ) ಎರಡನೇ ಅಲೆಯನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಾಗಿತ್ತು. ಹೊಸ ನೇಮಕಗಳನ್ನು ಮಾಡಿಕೊಂಡು ಸಿಬ್ಬಂದಿಯ ಕೊರತೆಯನ್ನು ನೀಗಿಸಬೇಕಾಗಿತ್ತು. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ ಆ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವು ದು ಗಂಭೀರ ಲೋಪವಾಗಿದೆ. ಇನ್ನಾದರೂ ಸರಕಾರ ಆಕ್ಸಿಜನ್ ಸೇರಿದಂತೆ ಎಲ್ಲಾ ಕೊರತೆಯನ್ನು ನಿವಾರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸೋಂಕಿತರೆಲ್ಲರೂ ಗಾಬರಿಯಿಂದ ಆಸ್ಪತ್ರೆಗಳಿಗೆ ಧಾವಿಸಬೇಕಾಗಿಲ್ಲ. ಮನೆಯಲ್ಲೇ ಅವರು ಕ್ವಾರಂಟೈನ್ ಆಗಿದ್ದು ಈ ಸೋಂಕಿನ ಅಪಾಯದಿಂದ ಪಾರಾಗಬಹುದಾಗಿದೆ. ಅವರಿಗೆ ಸರಕಾರ ಆ ತಿಳಿವಳಿಕೆ ನೀಡಬೇಕು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಮಾತ್ರ ಆಸ್ಪತ್ರೆಗಳಲ್ಲಿ ಸಕಲ ಸೌಕರ್ಯಗಳನ್ನು ಕಲ್ಪಿಸಬೇಕು. ಸರಕಾರ ಈ ನಿಟ್ಟಿನಲ್ಲಿ ತಕ್ಷಣ ಸ್ಪಂದಿಸಿ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಅದಕ್ಕೆ ಅವಕಾಶ ನೀಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News