ಜನರು ಎಚ್ಚರ ವಹಿಸಿದ್ದರೆ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮದ ಅಗತ್ಯವೇ ಬರುತ್ತಿರಲಿಲ್ಲ: ಸಚಿವ ಡಾ.ಸುಧಾಕರ್

Update: 2021-04-20 04:56 GMT

ಬೆಂಗಳೂರು, ಎ.20: ಕೋವಿಡ್-19 ನಿಯಂತ್ರಣದ ದೃಷ್ಟಿಯಿಂದ ಜನರು ನಿರ್ಲಕ್ಷ್ಯ ವಹಿಸದೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದರೆ ಲಾಕ್ಡೌನ್, ಸೀಲ್ಡೌನ್ ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವೇ ಬರುತ್ತಿರಲಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಗುಂಪು ಸೇರುವುದರಿಂದ ಕೋವಿಡ್ ಹರಡುತ್ತಿದೆ, ನಾವು ಎಚ್ಚರದಿಂದ ಇರಬೇಕು, ಮನೆಯಿಂದ ಹೊರ ಬರಬೇಕಾದರೆ ಮಾಸ್ಕ್ ಧರಿಸಬೇಕು ಎಂಬುದನ್ನು ಜನರು ಅರಿತುಕೊಂಡಿದ್ದರೆ ಇಂತಹ ಸಂಕಷ್ಟ, ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಜನರು ಅದನ್ನು ಪಾಲಿಸದೇ ಇರುವುದರಿಂದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಎದುರಾಗಿದೆ ಎಂದರು. 

ಇಂದು (ಎ.20) ಸಂಜೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ, ತಾನು ವಿಪಕ್ಷದವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲರ ರಚನಾತ್ಮಕ ಸಲಹೆ, ಸೂಚನೆಗಳನ್ನು ಸ್ವೀಕರಿಸಲಾಗುವುದು. ಇದರಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿದರು.

ಸದ್ಯ ಯುದ್ಧದ ಸ್ಥಿತಿಯಿದೆ. ಇದು ಆರೋಪ-ಪ್ರತ್ಯಾರೋಪ ಮಾಡುವ ಸಮಯವಲ್ಲ. ಎಲ್ಲರೂ ಸೇರಿ ಹೋರಾಟದ ಮಾದರಿಯಲ್ಲಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News