ವಿದ್ಯಾಗಮ, ಆನ್‍ಲೈನ್ ಚುಟುವಟಿಕೆ ಆಧರಿಸಿ 1-9ನೇ ತರಗತಿಗಳಿಗೆ ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ

Update: 2021-04-20 13:55 GMT

ಬೆಂಗಳೂರು, ಎ.20: ಕೊರೋನ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳಿಗೆ ವಿದ್ಯಾಗಮ, ಆನ್‍ಲೈನ್ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಆಧರಿಸಿ ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ ಪ್ರಕಟನೆಗೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಕ್ಕಳ ತರಗತಿ, ವಾರ್ಷಿಕ ಮೌಲ್ಯಾಂಕನ, ಪರೀಕ್ಷೆ ಕುರಿತಂತೆ ಚರ್ಚಿಸಲು ಶಿಕ್ಷಕರ ಸಂಘಟನೆ, ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳು, ಪೋಷಕರ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರ ಸಭೆಗಳನ್ನು ನಡೆಸಿ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು, ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

1ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು, ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್‍ಲೈನ್ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆಗಳನ್ನಾಧರಿಸಿ ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ತರಗತಿಗೆ ಬಡ್ತಿ ನೀಡುವುದು ಮತ್ತು ಅದನ್ನು ಪ್ರಗತಿ ಪತ್ರದಲ್ಲಿ ದಾಖಲಿಸುವುದು ಸೇರಿದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಎ.30ರೊಳಗೆ ನಿರ್ವಹಿಸಿ ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

-ಒಂದರಿಂದ ಐದನೇ ತರಗತಿವರೆಗೆ ಶಾಲಾ ಹಂತದಲ್ಲಿ ಮಕ್ಕಳ ಪ್ರಗತಿ ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಭಡ್ತಿ ನೀಡಲಾಗುವುದು. ಹಾಗೂ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್ ಇಲ್ಲವೇ ಆಫ್‍ಲೈನ್ ಮೂಲಕ ಮೌಲ್ಯಾಂಕನ ಮಾಡಬಾರದು.

-6ರಿಂದ 9ನೇ ತರಗತಿಗಳ ಮಕ್ಕಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದರು. ದೂರದರ್ಶನ ಚಂದನ ವಾಹಿನಿಯ ಸಂವೇದ, ಇ-ಕಲಿಕಾ, ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಪ್ರವಚನ ಆಲಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈವರೆಗೂ ಪೂರೈಸಿದ ಚಟುವಟಿಕೆಗಳನ್ನು ಆಧರಿಸಿ ಮಾತ್ರ ಮೌಲ್ಯಂಕನ ಮಾಡಲು ತಿಳಿಸಿರುವುದರಿಂದ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್-ಆಫ್‍ಲೈನ್ ಮೂಲಕ ಮೌಲ್ಯಾಂಕನ ಮಾಡಬಾರದು.

 -ಈ ಮೌಲ್ಯಾಂಕನದ ಉದ್ದೇಶ ವಿದ್ಯಾರ್ಥಿಗಳನ್ನು ಉತ್ತೀರ್ಣ, ಅನುತ್ತೀರ್ಣ ಎಂದು ತೀರ್ಮಾನಿಸುವುದಲ್ಲ. ಬದಲಾಗಿ ಅವರ ಕಲಿಕೆಯ ಪ್ರಗತಿ ಹಾಗೂ ಕೊರತೆಯನ್ನು ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೇತು-ಬಂಧ ಕಾರ್ಯಕ್ರಮವನ್ನು ನಡೆಸಿ ಈ ಕೊರತೆಯನ್ನು ತುಂಬಲು ಕ್ರಮ ವಹಿಸಲು ಶಾಲಾ ಯೋಜನೆಯನ್ನು ತಯಾರಿಸಲಾಗುತ್ತದೆ.

-ಸಿಬಿಎಸ್ಸಿ, ಐಸಿಎಸ್ಸಿ ಮಂಡಳಿ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಹಾಗೂ ರಾಜ್ಯ ಪಠ್ಯಕ್ರಮದ ಕಲಿಸುವ ಶಾಲೆಗಳಲ್ಲಿ ಈಗಾಗಲೇ ಸಂಕಲನಾತ್ಮಕ ಮೌಲ್ಯಾಂಕನವನ್ನು ಪೂರ್ಣಗೊಳಿಸಲಾಗಿದೆ. ಹಾಗೆಯೇ ಕೆಲ ಶಾಲೆಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಪರೀಕ್ಷೆಗಿಂತ ಕಲಿಕೆ ಮುಖ್ಯವಾಗಿದ್ದು, ಪರೀಕ್ಷೆಗಳ ಮೂಲ ಉದ್ದೇಶವೇ ಕಲಿಕೆಯಲ್ಲಿನ ತೊಡಕುಗಳನ್ನು ಗುರುತಿಸಿ ಕಲಿಕೆಯನ್ನು ಮತ್ತಷ್ಟು ಉತ್ತಮಗೊಳಿಸುವುದು. ಹಾಗೆಯೇ ಎಲ್ಲ ಮಕ್ಕಳು ಕಲಿಕಾ ಮಟ್ಟವನ್ನು ಸಾಧಿಸಬೇಕಾಗಿರುವುದರಿಂದ ಇಲಾಖೆ ವಿಶೇಷವಾಗಿ ಸೇತುಬಂಧ ಹಾಗೂ ವೇಗವರ್ಧಿತ ಕಲಿಕಾ ಕಾರ್ಯಕ್ರಮದ ಮೂಲಕ ಮುಂದಿನ ಶೈಕ್ಷಣಿಕ ವರ್ಷ 2021-22 ಪ್ರಾರಂಭವಾಗುವ ಮುನ್ನ ಎಲ್ಲ ಮಕ್ಕಳು ತರಗತಿವಾರು ವಿಷಯವಾರು ನಿಗದಿತ ಕಲಿಕೆಯನ್ನು ಪೂರ್ಣಗೊಳಿಸುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ನಿರಂತರ ಮೌಲ್ಯಮಾಪನದ ಅನ್ವಯ ಸಂಕಲನಾತ್ಮಕ ಮೌಲ್ಯಾಂಕನ ಮಾಡಬಹುದೆಂಬ ಸಲಹೆಗಳನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ.

-ಸುರೇಶ್‍ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News