ರೈತರ ಪ್ರತಿಭಟನೆ ವಿರುದ್ಧ ಅಪಪ್ರಚಾರಕ್ಕಾಗಿ ಇತರ ಪತ್ರಿಕೆಗಳ ಹಳೆ ವರದಿಗಳನ್ನು ಪ್ರಕಟಿಸುತ್ತಿರುವ ಆರೆಸ್ಸೆಸ್ ಮುಖವಾಣಿ

Update: 2021-04-20 16:36 GMT
Photo: Newslaundry.com

ಹೊಸದಿಲ್ಲಿ,ಎ.20: ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಲು ಪಂಜಾಬ್,ಹರ್ಯಾಣ ಮತ್ತಿತರ ಕಡೆಗಳಿಂದ ರೈತರು ಕಳೆದ ವರ್ಷ ದಿಲ್ಲಿಯ ಗಡಿಗಳಲ್ಲಿ ಠಿಕಾಣಿ ಹೂಡಿದಾಗಿನಿಂದ ಅವರ ನೈತಿಕ ಸ್ಥೈರ್ಯವನ್ನು ಉಡುಗಿಸಲು ಸರಕಾರವು ಮಾಡದ ಪ್ರಯತ್ನಗಳಿಲ್ಲ. ಇತ್ತೀಚಿನ ಇಂತಹ ಯತ್ನಕ್ಕೆ ಆರೆಸ್ಸೆಸ್ನ ಹಿಂದಿ ಮುಖವಾಣಿ ‘ಪಾಂಚಜನ್ಯ’ದ ಎಪ್ರಿಲ್ ಸಂಚಿಕೆಯು ನಿದರ್ಶನವಾಗಿದೆ. ರೈತರ ಪ್ರತಿಭಟನೆಗೆ ಮಸಿ ಹಚ್ಚಲು ಅದು ಇತರ ಪತ್ರಿಕೆಗಳಲ್ಲಿಯ ಹಳೆಯ ವರದಿಗಳನ್ನು ಯಥಾವತ್ ಪ್ರಕಟಿಸಿದೆ. ಸೌಜನ್ಯಕ್ಕಾದರೂ ವರದಿಯ ಮೂಲವನ್ನು ಉಲ್ಲೇಖಿಸುವ ಗೋಜಿಗೆ ಅದು ಹೋಗಿಲ್ಲ ಮತ್ತು ವರದಿಗಳನ್ನು ತನ್ನ ಸ್ವಂತದ್ದೆಂಬಂತೆ ಪ್ರಕಟಿಸಿರುವುದನ್ನು ಸುದ್ದಿ ಜಾಲತಾಣ Newslaundry ಬಯಲಿಗೆಳೆದಿದೆ.

14 ರೈತರ ಬಗ್ಗೆ ವರದಿಗಳನ್ನು ಪ್ರಕಟಿಸಿರುವ ಪಾಂಚಜನ್ಯ ಇವರೆಲ್ಲ ಮೋದಿಯವರ ಕೃಷಿ ನೀತಿಗಳಿಂದ ಲಾಭ ಪಡೆಯುತ್ತಿದ್ದಾರೆ ಮತ್ತು ಭಾರತವನ್ನು ಬದಲಾವಣೆಯತ್ತ ಮತ್ತು ಸಮೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದೆ. ಹಾಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ತೀವ್ರ ಅಶಾಂತಿ ಸೃಷ್ಟಿಯಾಗಿದೆ. ನೂತನ ಕೃಷಿ ಕಾಯ್ದೆಗಳು ರೈತರನ್ನು ಸರ್ವನಾಶ ಮಾಡುತ್ತವೆ ಎಂದು ಅಪಪ್ರಚಾರ ಮಾಡುವ ಮೂಲಕ ಆಂದೋಲನಜೀವಿಗಳು ಅವರನ್ನು ಪ್ರಚೋದಿಸುತ್ತಿದ್ದಾರೆ. ಆದರೆ ವಾಸ್ತವವು ಬೇರೆಯದೇ ಆಗಿದೆ ಎಂದು ತನ್ನ ಕವರ್ ಸ್ಟೋರಿಯಲ್ಲಿ ಬರೆದಿರುವ ರಾಕೇಶ ಸೇನ್,‌ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಡಿ ಕೇಂದ್ರ ಸರಕಾರದ ಪ್ರಯತ್ನಗಳು ರೈತರ ಬದುಕುಗಳಲ್ಲಿ ಬದಲಾವಣೆಗಳನ್ನು ತರುತ್ತಿರುವಂತೆ ಕಾಣುತ್ತಿದೆ. ಹಲವಾರು ಮಣ್ಣಿನ ಮಕ್ಕಳು ತಮ್ಮ ಕಠಿಣ ಪರಿಶ್ರಮ ಮತ್ತು ಸರಕಾರಿ ಯೋಜನೆಗಳ ಮೂಲಕ ದೇಶವನ್ನು ಬದಲಾವಣೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದಿದ್ದಾರೆ.


 
ತನ್ನ ವರದಿಗಾರರು ಈ ರೈತರನ್ನು ಅವರ ಹೊಲಗಳಲ್ಲಿ ಭೇಟಿಯಾಗಿದ್ದರು ಎಂದು ಪಾಂಚಜನ್ಯ ಹೇಳಿಕೊಂಡಿದೆ. ಇದೊಂದು ಅಪ್ಪಟ ಸುಳ್ಳಾಗಿದೆ. ಈ ಎಲ್ಲ 14 ರೈತರ ಕುರಿತು ವರದಿಗಳನ್ನು ವಿವಿಧ ಪತ್ರಿಕೆಗಳಿಂದ ಎತ್ತಿಕೊಳ್ಳಲಾಗಿದೆ ಮತ್ತು ಹೆಚ್ಚಿನವುಗಳನ್ನು ಶಬ್ದಶಃ ಪ್ರಕಟಿಸಲಾಗಿದೆ. ಪಾಂಚಜನ್ಯವು ಮೂಲಗಳಿಗೆ ಪುಟ್ಟ ಥ್ಯಾಂಕ್ಸ್ ಅನ್ನೂ ಹೇಳದೆ ವರದಿಗಳಲ್ಲಿಯ ಚಿತ್ರಗಳನ್ನೂ ಬಳಸಿಕೊಂಡಿದೆ ಎಂದು Newslaundry ಬೆಟ್ಟುಮಾಡಿದೆ.
ಅತ್ಯಂತ ಅತಿರೇಕವೆಂದರೆ ಪಾಂಚಜನ್ಯವು ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರೈತರೋರ್ವರ ಯಶೋಗಾಥೆಯನ್ನು ಪ್ರಕಟಿಸಿದೆ ಮತ್ತು ಅದಕ್ಕಾಗಿ ಮೋದಿ ಸರಕಾರವನ್ನು ಹೊಗಳಿದೆ! ರಾಜಸ್ಥಾನದ ಜೈಪುರ ಬಳಿಯ ಕಿರಾತಪುರ ಗ್ರಾಮದ ರೈತ ಕೈಲಾಷ ಚೌಧರಿಯವರ ಕುರಿತ ಈ ವರದಿಯು 2010ರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವೆಬ್ಸೈಟ್ನಲ್ಲಿ ಪ್ರಕಟಗೊಂಡಿತ್ತು.

ಪಾಂಚಜನ್ಯ ಚೌಧರಿಯನ್ನು ಭೇಟಿಯಾಗುವುದಿರಲಿ,ಅವರನ್ನೆಂದೂ ಸಂಪರ್ಕಿಸಿಯೇ ಇಲ್ಲ. ‘ಪಾಂಚಜನ್ಯದಿಂದ ಯಾರೂ ನನ್ನ ಜೊತೆ ಮಾತನಾಡಿಲ್ಲ. ಈ ವರದಿಯು 10 ವರ್ಷಗಳ ಹಿಂದೆಯೇ ಪ್ರಕಟಗೊಂಡಿತ್ತು. ಚಿತ್ರದಲ್ಲಿ ನನ್ನೊಂದಿದ್ದ ರಾಜಸ್ಥಾನದ ಆಗಿನ ಕೃಷಿ ಸಚಿವ ಹರ್ಜಿರಾಮ ಬುರ್ದಕ್ ಅವರು ಈಗಿಲ್ಲ ’ಎಂದು ಚೌಧರಿ ತಿಳಿಸಿದ್ದಾರೆ.

ಪಾಂಚಜನ್ಯವು ಪ್ರಕಟಿಸಿರುವ ಇತರ 13 ಯಶೋಗಾಥೆಗಳ ಪೈಕಿ ಏಳನ್ನು ‘ದೈನಿಕ ಜಾಗರಣ್ ’ ಪತ್ರಿಕೆಯಿಂದ ಎತ್ತಿಕೊಂಡಿದೆ. ಅವುಗಳನ್ನು ಯಥಾವತ್ ಪ್ರಕಟಿಸಲಾಗಿದೆ ಇಲ್ಲವೇ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಪಂಜಾಬಿನ ಮೊಹಾಲಿಯ ಟಿಂಗೋರಿ ಗ್ರಾಮದ ರೈತ ಸುಜಿತ್ ಸಿಂಗ್ ಅವರ ಕುರಿತ ವರದಿ ಇವುಗಳಲ್ಲಿ ಸೆರಿದೆ. ಪಂಜಾಬ ಪೊಲೀಸ್ ಇಲಾಖೆಯಿಂದ ನಿವೃತ್ತರಾದ ಬಳಿಕ ಅವರು ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಜಾಗರಣ್ ಅವರ ಕುರಿತ ಈ ವರದಿಯನ್ನು 2020,ಡಿಸೆಂಬರ್ನಲ್ಲಿ ಪ್ರಕಟಿಸಿತ್ತು. 

ಪಾಂಚಜನ್ಯವು ವರದಿಯ ಶೀರ್ಷಿಕೆಯನ್ನು ಮತ್ತು ಕೆಲವು ಶಬ್ದಗಳನ್ನು ಬದಲಿಸಿದೆ,ಅಲ್ಲದೆ ಸುದೀರ್ಘ ವರದಿಯಲ್ಲಿನ ಕೆಲವು ಪ್ಯಾರಾಗಳನ್ನೂ ತೆಗೆದುಹಾಕಿದೆ. 

ಚೋದ್ಯವೆಂದರೆ,ಜಾಗರಣ್ನಿಂದ ತನ್ನನ್ನು ಯಾರೂ ಎಂದಿಗೂ ಸಂಪರ್ಕಿಸಿರಲಿಲ್ಲ ಎಂದು Newslaundry ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಿಂಗ್ ಸ್ಪಷ್ಟಪಡಿಸಿದ್ದಾರೆ. ‘ಕೆಲವು ಕೃಷಿ ಅಧಿಕಾರಿಗಳು ಅವರಿಗೆ ನನ್ನ ಬಗ್ಗೆ ತಿಳಿಸಿದ್ದರು ಮತ್ತು ಅವರು ಅದನ್ನೇ ಬರೆದಿದ್ದರು. ಪಾಂಚಜನ್ಯದಿಂದಲೂ ಯಾರೂ ನನ್ನನ್ನು ಭೇಟಿಯಾಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಸಿಂಗ್ ಅವರು ರೈತರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸರಕಾರದಿಂದ ತನಗೆ ಯಾವುದೇ ನೆರವು ಲಭಿಸಿಲ್ಲ ಎಂದೂ ಅವರು ಈ ವೇಳೆ ತಿಳಿಸಿದರು. ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಜಾಗರಣ್ನ ವರದಿಗಳಲ್ಲಿಯ ಇತರ ರೈತರಿಗೂ ಈ ಆರೆಸ್ಸೆಸ್ ಮುಖವಾಣಿಯ ಬಗ್ಗೆ ಗೊತ್ತೇ ಇಲ್ಲ.


 
‘ಅಪ್ನಿ ಖೇತಿ’ಮೊಹಾಲಿಯಿಂದ ನಿರ್ವಹಿಸಲಾಗುತ್ತಿರುವ ವೆಬ್ಸೈಟ್ ಅಗಿದ್ದು,ಕೃಷಿಗೆ ಸಂಬಂಧಿಸಿದ ಸಲಹೆಗಳನ್ನು ರೈತರಿಗೆ ನೀಡುತ್ತದೆ ಮತ್ತು ಯಶಸ್ವಿ ರೈತರ ಕುರಿತು ವರದಿಗಳನ್ನು ಪ್ರಕಟಿಸುತ್ತಿದೆ. ಪಾಂಚಜನ್ಯವು ಈ ವೆಬ್ಸೈಟ್ನಲ್ಲಿಯ ಇಂತಹ ಐದು ರೈತರ ಕುರಿತ ವರದಿಗಳನ್ನು ತನ್ನದೆಂಬಂತೆ ಪ್ರಕಟಿಸಿದೆ. ಇವಿಷ್ಟೇ ಅಲ್ಲ, Access Agriculture ವೆಬ್ಸೈಟ್ನಿಂದಲೂ ವರದಿಯೊಂದನ್ನು ಕದ್ದಿರುವ ಪಾಂಚಜನ್ಯ ಅದನ್ನೂ ತನ್ನದೆಂಬಂತೆ ಪ್ರಕಟಿಸಿದೆ.

ರೈತರ ಕುರಿತು ವರದಿಗಳ ಪುನರ್ ಪ್ರಕಟನೆಗೆ ಅನುಮತಿಯನ್ನು ಪಡೆದುಕೊಂಡಿದ್ದೀರಾ ಎಂಬ Newslaundryಯ ಪ್ರಶ್ನೆಗೆ ಪಾಂಚಜನ್ಯದ ಸಂಪಾದಕ ಹಿತೇಶ ಶಂಕರ ಅವರು,‘ಈ ವಿಷಯವು ನಮ್ಮ ಗಮನಕ್ಕೆ ಬಂದಿದೆ ಮತ್ತು ವರದಿಗಾರನಿಂದ ಉತ್ತರವನ್ನು ಕೇಳಿದ್ದೇವೆ. ಉತ್ತರ ದೊರಕಿದ ಬಳಿಕ ಕ್ರಮವನ್ನು ಕೈಗೊಳ್ಳಲಾಗುತ್ತದೆ ’ ಎಂದು ಸಮಜಾಯಿಷಿ ನೀಡಿದ್ದಾರೆ.

ಕೃಪೆ: Newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News