ಪತ್ರಕರ್ತರಾಗಲು ಹೊರಟಿದ್ದ ಜಿ.ವಿ.

Update: 2021-04-21 05:15 GMT

1937ರಲ್ಲಿ ಎಂ.ಎ.ನಲ್ಲಿ ಬಂಗಾರದ ಪದಕ ಗಳಿಸಿದರೂ ನೌಕರಿ ಸಿಗುವುದು ಕಷ್ಟವಾಗಿದ್ದ ಕಾಲವದು. ಕೆಲಸದ ಹುಡುಕಾಟದಲ್ಲಿದ್ದಾಗ ಪತ್ರಕರ್ತರಾಗಬೇಕೆಂದು ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ ಕಚೇರಿಯ ಬಾಗಿಲು ತಟ್ಟಿದರು. ಅದರ ಸಂಪಾದಕ ಮೊಹರೆ ಹನುಮಂತರಾಯರು ನಯವಾದ ಮಾತುಗಳಿಂದ ಜಿ.ವಿ.ಯವರಿಗೆ ಹೇಳಿದರು: ‘‘ನೀನು ಎಂ.ಎ.ನಲ್ಲಿ ಬಂಗಾರದ ಪದಕ ಪಡೆದ ಬುದ್ಧಿವಂತ. ಮೇಷ್ಟ್ರು ಕೆಲಸ ಹುಡುಕಿಕೊ. ಪತ್ರಿಕೆಯಲ್ಲಿ ಉತ್ತರ ಕರ್ನಾಟಕದ ಭಾಷೆ ಕಷ್ಟವಾಗುತ್ತದೆ’’ ಎಂದು ಸಬೂಬು ಹೇಳಿ ಸಾಗ ಹಾಕಿದ್ದರು.

ನಿಘಂಟು ತಜ್ಞರೆಂದೇ ಹೆಸರಾಗಿದ್ದ ಜಿ. ವೆಂಕಟಸುಬ್ಬಯ್ಯ ಅವರಿಗೆ 105 ವರ್ಷ ತುಂಬಿದ ಸಂದರ್ಭ ನಾವು ಕೆಲವು ಸಾಹಿತ್ಯಾಸಕ್ತ ಮಿತ್ರರು ಹುಟ್ಟುಹಬ್ಬದ ಶುಭಾಶಯ ಹೇಳಲು ಜಯನಗರದ ಮನೆಗೆ ಹೋಗಿದ್ದೆವು. ನನಗೆ ಆಶ್ಚರ್ಯವಾದದ್ದು ನನ್ನ ಜೊತೆಗೆ ಇದ್ದ ಧಾರವಾಡದ ಕವಯಿತ್ರಿ ಒಬ್ಬರು ಹಾಗೂ ಬೆಂಗಳೂರಿನ ಸಂಗೀತ ನಿರ್ದೇಶಕರನ್ನು ಗುರುತಿಸಿ ಅವರ ಕ್ಷೇತ್ರಗಳ ಬಗ್ಗೆ ಮಾತಿಗೆ ತೊಡಗಿದ್ದು. ಅವರಿಗೆ ಕಿವಿ ಸ್ಪಷ್ಟವಾಗಿ ಕೇಳುತ್ತಿತ್ತು. ಕಣ್ಣಿಗೆ ಕನ್ನಡಕ ಇಲ್ಲದೆ ಓದುತ್ತಿದ್ದರು. ಆ ವಯಸ್ಸಲ್ಲೂ ಕಂಪ್ಯೂಟರ್ ಕೀಲಿಮಣೆಯಲ್ಲಿ ಕೈಯಾಡಿಸುತ್ತಿದ್ದರು! ಅವರಿಗೆ ಯಾವ ನೆನಪು ಮಾಸಿರಲಿಲ್ಲ. ಶತಾಯುಷಿ ಆಗಿದ್ದರೂ ಆಯಾಸ, ದಣಿವು ಆದಂತೆ ಕಾಣಲಿಲ್ಲ. ಒಂದು ಗಂಟೆಯ ಕಾಲ ನಿರರ್ಗಳ ಮಾತು, ಹರಟೆ, ಸಂವಾದ, ಚರ್ಚೆಯಲ್ಲಿ ತೊಡಗಿದ್ದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು, ‘ಕನ್ನಡ - ಕನ್ನಡ ನಿಘಂಟು’ವಿನ ಸಂಪಾದಕರಾಗಿದ್ದರು. ಅದಕ್ಕೂ ಮೊದಲು ಕಾಲೇಜು ಪ್ರಾಧ್ಯಾಪಕರಾಗಿದ್ದರು. ಇದೆಲ್ಲಕ್ಕೂ ಮೊದಲು ಅವರು ಪತ್ರಕರ್ತರಾಗಲು ಕನಸು ಕಂಡ ವಿಚಾರ ಬಹುತೇಕರಿಗೆ ತಿಳಿದಿಲ್ಲ.

1937ರಲ್ಲಿ ಎಂ.ಎ.ನಲ್ಲಿ ಬಂಗಾರದ ಪದಕ ಗಳಿಸಿದರೂ ನೌಕರಿ ಸಿಗುವುದು ಕಷ್ಟವಾಗಿದ್ದ ಕಾಲವದು. ಕೆಲಸದ ಹುಡುಕಾಟದಲ್ಲಿದ್ದಾಗ ಪತ್ರಕರ್ತರಾಗಬೇಕೆಂದು ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ ಕಚೇರಿಯ ಬಾಗಿಲು ತಟ್ಟಿದರು. ಅದರ ಸಂಪಾದಕ ಮೊಹರೆ ಹನುಮಂತರಾಯರು ನಯವಾದ ಮಾತುಗಳಿಂದ ಜಿ.ವಿ.ಯವರಿಗೆ ಹೇಳಿದರು: ‘‘ನೀನು ಎಂ.ಎ.ನಲ್ಲಿ ಬಂಗಾರದ ಪದಕ ಪಡೆದ ಬುದ್ಧ್ದಿವಂತ. ಮೇಷ್ಟ್ರು ಕೆಲಸ ಹುಡುಕಿಕೊ. ಪತ್ರಿಕೆಯಲ್ಲಿ ಉತ್ತರ ಕರ್ನಾಟಕದ ಭಾಷೆ ಕಷ್ಟವಾಗುತ್ತದೆ’’ ಎಂದು ಸಬೂಬು ಹೇಳಿ ಸಾಗ ಹಾಕಿದ್ದರು. ಆಗಲೇ ಜಿ.ವಿ. ಅವರು ‘ಕರ್ನಾಟಕ ಏಕೀಕರಣ’ದ ಅಗತ್ಯ ಇದೆ ಎಂದು ಯೋಚಿಸಿದ್ದರಂತೆ. ಪತ್ರಕರ್ತರಾಗುವ ಕನಸು ಕರಗಿದ ನಂತರ ಉದ್ಯೋಗ ಬೆೇಟೆ ಶುರು ಮಾಡಿದರು. ಆಗಲೇ ಕನ್ನಡದ ಕತೆಗಾರರಾಗಿ, ಅಧಿಕಾರಿಯಾಗಿ ಹೆಸರಾಗಿದ್ದ ಮಾಸ್ತಿ ಅವರನ್ನು ಕಂಡು ತಮ್ಮ ಸಮಸ್ಯೆ ಹೇಳಿಕೊಂಡರು. ಶಿಕ್ಷಣತಜ್ಞ ವಾಡಿಯಾ ಅವರನ್ನು ಭೇಟಿಯಾಗಲು ಸಲಹೆ ನೀಡಿದ್ದರಿಂದ ಅವರನ್ನು ಕಂಡಾಗ, ದಾವಣಗೆರೆ ಸರಕಾರಿ ಪ್ರೌಢಶಾಲೆಯಲ್ಲಿ ತಾತ್ಕಾಲಿಕ ಹುದ್ದೆ ನೀಡಿ ಅಲ್ಲಿಗೆ ಕಳುಹಿಸಿದರು. ಮಧ್ಯ ಕರ್ನಾಟಕದ ವ್ಯಾಪಾರ ಹಾಗೂ ಹತ್ತಿಗಿರಣಿಗೆ ಹೆಸರಾಗಿದ್ದ ದಾವಣಗೆರೆ ಪ್ರೌಢಶಾಲೆ ಸೇರಿದಾಗ ತಿಂಗಳಿಗೆ ಬರುತ್ತಿದ್ದ ಸಂಬಳ ರೂ.35 ಮಾತ್ರ! ಸಂಸಾರ ಕರೆತರುವುದು ಕಷ್ಟವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪಾಠ ಹೇಳಿ ಹೆಚ್ಚಿನ ಆದಾಯ ನಿರೀಕ್ಷಿಸಿದ್ದರು.

 ಆಗ ಇವರು ಕನ್ನಡ ಮೇಷ್ಟ್ರು ಮಾತ್ರ ಆಗಿರದೆ ಇಂಗ್ಲಿಷನ್ನು ಚೆನ್ನಾಗಿ ಬೋಧಿಸುವ ಹೆಸರಾಂತ ಮೇಷ್ಟ್ರು ಆಗಿ ಜನಾನುರಾಗಿಯಾಗಿದ್ದರು. ಇವರ ಪಾಠದ ವೈಖರಿ ಸಿರಿಗೆರೆ ತರಳಬಾಳು ಜಗದ್ಗುರು ಶಿವಕುಮಾರಸ್ವಾಮಿಗಳ ತನಕವೂ ತಲುಪಿತು. ಅವರ ಸಂಸ್ಥೆಯದ್ದೇ ಒಂದು ವಿದ್ಯಾರ್ಥಿ ನಿಲಯ ಅಲ್ಲಿತ್ತು. ಹಳ್ಳಿಗಳಿಂದ ಬಂದು ಓದುತ್ತಿದ್ದ ಮಕ್ಕಳಿಗೆ ಇಂಗ್ಲಿಷ್ ಕಷ್ಟವಾದ್ದರಿಂದ ಸಂಜೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಪ್ಪಿಸಿ, ಶಾಲೆಯಲ್ಲಿ ಬರುತ್ತಿದ್ದ ಸಂಬಳದ ಡಬ್ಬಲ್ ನೀಡಿ ಪ್ರೋತ್ಸಾಹಿಸಿದರು. ಇದರಿಂದ ವೆಂಕಟಸುಬ್ಬಯ್ಯ ಅವರಿಗೆ ಸಂತೋಷವಾದರೂ, ಮುಂದೆ ಗುರುಗಳ ಆದೇಶ ಪಾಲಿಸಲಾಗಲಿಲ್ಲ. ತಮ್ಮ ಸಂಸ್ಥೆಯಲ್ಲೇ ಇದ್ದು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ಮಾರ್ಗದರ್ಶನ ಮಾಡಲು ಹೇಳಿದರಾದರೂ, ಅವರಿಗೆ ಬೆಂಗಳೂರು ಹೈಸ್ಕೂಲ್ ಕರೆ ಬಂದಿದ್ದರಿಂದ ಗುರುಗಳಿಗೆ ತಿಳಿಸಿ, ಕೆಲವು ವರ್ಷದ ದಾವಣಗೆರೆ ವಾಸ ಮುಗಿಸಿ ಬೆಂಗಳೂರಿಗೆ ಬಂದು ನೆಲಸಿದರು.

ಜಿ.ವಿ. ಅವರು ಇದಿಷ್ಟು ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಎಲ್ಲಾ ನೆನಪು ಗಳನ್ನೂ ಅಂದು ಮಾಡಿಕೊಂಡರು. ‘ಕನ್ನಡ - ಕನ್ನಡ ನಿಘಂಟು’ ಕಣ್ಣೆದುರು ಬಂದಾಗಲೆಲ್ಲ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ನೆನಪು ಬರುತ್ತದೆ. 1905ರಲ್ಲಿ ಮೈಸೂರು ಜನಪರ ಕಾಳಜಿಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಸಾಹಿತ್ಯ, ಭಾಷಾಭಿವೃದ್ಧಿ, ಪುಸ್ತಕ ಪ್ರಕಟನೆಗೆ ವಿಶೇಷ ಗಮನಹರಿಸಿದ್ದರು. ಅನೇಕ ಮಹನೀಯರು ನಿಷ್ಪಹ ಸೇವೆಯಿಂದ ಕನ್ನಡದ ಹಲವು ಯೋಜನೆಗಳಿಗೆ ಅಲ್ಲಿ ಕನಸು ಗರಿಗೆದರಿತ್ತು.

 ರಾಜ್ಯ ಸರಕಾರದ ಸಹಾಯದಿಂದ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡ-ಕನ್ನಡ ನಿಘಂಟು’ ತಯಾರಿಸುವ ಬೃಹತ್ ಯೋಜನೆ ಕೈಗೊಂಡಿತ್ತು. ಅದು ಗಾತ್ರದಲ್ಲಿ ದೊಡ್ಡದಾಗುತ್ತಿದ್ದುದರ ಜೊತೆಗೆ ಹೆಚ್ಚು ಸಮಯ ಬೇಡುತ್ತಿತ್ತು. ಜನ ಸಾಮಾನ್ಯರಿಗೆ ಕನ್ನಡದ ಪದ ಕೋಶಗಳ ಅರ್ಥ, ಗ್ರಾಮ್ಯ, ನಗರ ಬದುಕಿನ ಅನೇಕ ದಿನ ಬಳಕೆಯ ಪದಗಳ ಅರ್ಥವನ್ನು ಕೊಟ್ಟರೆ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಅನುಕೂಲ ಆಗುತ್ತದೆಂದು ಸಂಕ್ಷಿಪ್ತ ಕನ್ನಡ ನಿಘಂಟು ಯೋಜನೆ ಕೈಗೆತ್ತಿಕೊಂಡಿತ್ತು. 1975ರಲ್ಲಿ ಈ ನಿಘಂಟಿನ ಅಧ್ಯಕ್ಷರಾಗಿದ್ದವರು ಪ್ರೊ. ಎಂ. ಮರಿಯಪ್ಪಭಟ್ಟರು. ಪ್ರೊ. ಜಿ.ವಿ. ಅವರು ಉಪಾಧ್ಯಕ್ಷ ಹಾಗೂ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅದಕ್ಕೆ ಕರ್ನಾಟಕದ ಹೆಸರಾಂತ ಹನ್ನೆರಡು ಖ್ಯಾತ ಸಾಹಿತಿಗಳು, ವಿಶ್ವವಿದ್ಯಾನಿಲಯಗಳ ಪ್ರೊಫೆಸರುಗಳು ಸದಸ್ಯರಾಗಿ ಸೇರ್ಪಡೆ ಆದರು. ಆಗ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತಾಗಿ ಮಾಡಿದ್ದು ಅಧ್ಯಕ್ಷ ಜಿ. ನಾರಾಯಣರು.

 ಮುಖ್ಯವಾಗಿ ನಿಘಂಟು ಕಾರ್ಯದಲ್ಲಿ ಎಲೆಮರೆಯ ಕಾಯಿಯಂತೆ ದುಡಿದವರನ್ನು ಸ್ಮರಿಸುವುದೇ ಕಡಿಮೆ. ಪ್ರಧಾನ ಸಂಪಾದಕರಷ್ಟೇ ಮುಖ್ಯವಾಗಿ, ವರ್ಷಗಟ್ಟಲೆ ದುಡಿದವರು ಮರೆಯಾಗಿ ಹೋಗುತ್ತಾರೆ. ಜಿ.ವಿ. ಅವರ ಜೊತೆಗೆ ಆಗ ನಿಘಂಟು ಶ್ರೇಷ್ಠತೆ ಪಡೆಯಲು, ಅದು ಮೌಲಿಕವಾಗಿ ಹೊರಬರಲು ದುಡಿದವರು ಉಪ ಸಂಪಾದಕರಾದ ಹಿ.ಚಿ. ಶಾಂತವೀರಯ್ಯ, ಟಿ.ಆರ್. ಮಹಾದೇವಯ್ಯ, ಆರ್.ವಿ. ಕುಲಕರ್ಣಿ ಕಾರಣರಾಗಿದ್ದರು. ಇವರೆಲ್ಲ ಗ್ರಾಮೀಣ ವಿದ್ಯಾರ್ಥಿಗಳು, ಅಧ್ಯಾಪಕರು, ಜಾನಪದ ಕಲಾವಿದರು, ಪತ್ರಕರ್ತರು, ಜನಸಾಮಾನ್ಯರನ್ನು ಸಂಪರ್ಕಿಸಿ, ಅವರನ್ನು ಬಳಸಿಕೊಂಡು ಲಕ್ಷಾಂತರ ಗ್ರಾಮ್ಯ ಹಾಗೂ ನಗರ ಭಾಷೆಯ ಪದಗಳನ್ನು ವಿಂಗಡಿಸಿ, ಅದಕ್ಕೆ ಪೂರಕ ಅರ್ಥಗಳನ್ನು ಹುಡುಕುವ ಪ್ರಯತ್ನ ಮಾಡಿದರು. ಇದಕ್ಕೆ ಜಿ.ವಿ. ಅವರ ಮಾರ್ಗದರ್ಶನ ಇತ್ತಾದರೂ ಉಪ ಸಂಪಾದಕರ ಪಾತ್ರ ಅಗಾಧ ಪ್ರಮಾಣದಲ್ಲಿತ್ತು. ಹಗಲು ರಾತ್ರಿಯೆನ್ನದೆ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದಾಗ ಖಾಯಂ ಉದ್ಯೋಗ ಇಲ್ಲದೆ ಎಷ್ಟೋ ಸಾರಿ ಅತಂತ್ರ ಸ್ಥಿತಿಯೂ ನಿರ್ಮಾಣವಾಗಿತ್ತು. ಸರಕಾರದ ಆರ್ಥಿಕ ಸಹಾಯ ಕೆಲವೊಮ್ಮೆ ಡೋಲಾಯಮಾನವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಇದಕ್ಕೆ ಸಹಾಯಕ ಸಂಪಾದಕರಾಗಿ ದುಡಿದವರಲ್ಲಿ ಮಂಜುಳಾರಾವ್ (ಪ್ರೊ. ಜಿ. ಕೆ. ಗೋವಿಂದರಾವ್ ಅವರ ಪತ್ನಿ) ಪ್ರಮುಖರು. ಇವರು ಹವ್ಯಾಸಿ ಕಲಾವಿದೆಯಾಗಿ, ಅನೇಕ ಹೊಸ ಅಲೆಯ ಸಿನೆಮಾ, ನಾಟಕಗಳಲ್ಲೂ ಪಾತ್ರ ಮಾಡಿದ್ದರು. ಮಂಜುಳಾ ಅವರ ಜೊತೆ ಬಿ. ಶಕುಂತಲಾ, ಟಿ. ತಿಪ್ಪಯ್ಯ ಅವರೂ ಇದ್ದರು. ಮುಖ್ಯವಾಗಿ ಮಂಜುಳಾರಾವ್ ಅವರು ನಿಘಂಟಿನ ಕ್ಲಿಷ್ಟಕರವಾದ ಪದಗಳನ್ನು, ಅರ್ಥಗಳನ್ನು, ಕೋಲನ್, ಚಿನ್ಹೆಗಳನ್ನು ಒಂದೂ ತಪ್ಪಿಲ್ಲದೆ ಬರೆಯುವುದರ ಜೊತೆಗೆ ಕರಡು ತಿದ್ದುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿದ್ದರು. ಇವತ್ತು ನಿಘಂಟಿನಲ್ಲಿ ಯಾವುದೇ ತಪ್ಪಿಲ್ಲದೆ ಇದ್ದರೆ ಅದಕ್ಕೆ ಉಪ ಸಂಪಾದಕ ಮಂಡಳಿಯ ಹಾಗೂ ಸಹಾಯಕ ಸಂಪಾದಕರ ಹೊಣೆ ಬಹು ದೊಡ್ಡದು. ತಮ್ಮ ದುಡಿಮೆಗೆ ತಕ್ಕ ಪ್ರತಿಫಲ ಬೇಕೆಂದು ಸಂಪಾದಕ ಮಂಡಳಿ ನಿಘಂಟು ಅಧ್ಯಕ್ಷರಾಗಿದ್ದ ಜಿ.ವಿ. ಅವರನ್ನು ಕೇಳಿಕೊಂಡಿತ್ತು. ಸಹಾಯಕ ಸಂಪಾದಕರಿಗೆ ಖಾಯಂ ನೌಕರಿ ಇರಲಿ, ವಯೋಸಹಜ ನಿವೃತ್ತಿಯಾದಾಗ ಬರಬೇಕಾದ ನಿವೃತ್ತಿ ವೇತನವೂ ಇಲ್ಲವಾಯಿತು. ಜೀವಿ ಅವರಲ್ಲಿ ಎಷ್ಟೋ ಸಾರಿ ಅಲವತ್ತುಕೊಂಡರೂ ಮಂಜುಳಾರಾವ್ ಮತ್ತು ಅವರ ಸಹಚರರಿಗೆ ನಿವೃತ್ತಿ ವೇತನ ಸರಕಾರದಿಂದ ಕೊಡಿಸುವಲ್ಲಿ ಜಿ.ವಿ. ಸೋತಿದ್ದರು. ನಿಘಂಟಿಗೆ ಸಂಬಂಧಿಸಿ ಇದೊಂದು ಕಪ್ಪು ಚುಕ್ಕೆಯಾಗಿ ಕೊನೆಯವರೆಗೂ ಉಳಿದು ಬಿಟ್ಟಿತು.

Writer - ಆರ್. ಜಿ. ಹಳ್ಳಿ ನಾಗರಾಜ

contributor

Editor - ಆರ್. ಜಿ. ಹಳ್ಳಿ ನಾಗರಾಜ

contributor

Similar News