ವಾರಾಂತ್ಯ ಕರ್ಫ್ಯೂ ಕೊರೋನ ನಿಯಂತ್ರಣದ ಬದಲು ಹರಡುವುದಕ್ಕೆ ಅವಕಾಶ ನೀಡುತ್ತದೆ

Update: 2021-04-21 09:31 GMT

ಮಾನ್ಯರೇ, ಕಳೆದ ಜುಲೈ 16ರಂದು ವಾರ ಕಾಲದ ಕರ್ಫ್ಯೂ ವಿಧಿಸಿದ್ದಾಗ ನಾನು ತಮಗೆ ಬರೆದಿದ್ದ ಮಿಂಚೋಲೆಯನ್ನು ಕೆಳಗೆ ಲಗತ್ತಿಸಿ, ಈಗ ಮತ್ತೆ ವಾರಾಂತ್ಯಗಳಲ್ಲಿ ಕರ್ಫ್ಯೂ ವಿಧಿಸುವ ನಿರ್ಧಾರವನ್ನು ವಿರೋಧಿಸಿ, ಸೂಕ್ತ ಬದಲಿ ವ್ಯವಸ್ಥೆ ಅಥವಾ ಪರಿಹಾರವನ್ನು ಕೇಳಿ ಈ ಓಲೆಯನ್ನು ಬರೆಯುತ್ತಿದ್ದೇನೆ.

ಕೊರೋನ ಸೋಂಕು ಮನುಷ್ಯರೊಳಗೆ ಪರಸ್ಪರ ನಿಕಟವಾಗಿ ಮಾತಾಡುವುದರಿಂದ, ಹೆಚ್ಚಿನ ಸಂದರ್ಭಗಳಲ್ಲಿ ಮನೆಗಳೊಳಗೆಯೇ ಹರಡುವ ಸೋಂಕೆನ್ನುವುದು ಈಗ ಅತಿ ದೃಢವಾಗಿ ಸಾಬೀತಾಗಿದೆ. ಯಾವುದೇ ಲಾಕ್ ಡೌನ್, ಸೀಲ್ ಡೌನ್, ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಇತ್ಯಾದಿಗಳಿಂದ ಈ ಸೋಂಕಿನ ಹರಡುವಿಕೆಯನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ವೈಜ್ಞಾನಿಕ ವಿಧಾನಗಳನ್ನೂ, ದೇಶದ ಸಾಮಾಜಿಕ ಸ್ಥಿತಿಗತಿಗಳನ್ನೂ ಕಡೆಗಣಿಸಿ, ಸಾಮಾನ್ಯ ಪ್ರಜ್ಞೆಯನ್ನೂ ಮರೆತು ವಾರಾಂತ್ಯದ ಕರ್ಫ್ಯೂ ಇತ್ಯಾದಿ ತೀರಾ ನಿರುಪಯುಕ್ತವಾದ, ಪ್ರತಿಕೂಲವಾಗಬಹುದಾದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಬೇಸರದ ವಿಷಯವಾಗಿದೆ.

ಹೀಗೆ ವಾರಾಂತ್ಯದ ಕರ್ಫ್ಯೂ ಇತ್ಯಾದಿ ಹೇರುವುದರಿಂದ ಜನರು ದಿಕ್ಕು ತೋಚದೆ, ಆತಂಕಿತರಾಗಿ, ನೂರಾರು ಜನರ ಗುಂಫುಗಳಾಗಿ ತಮ್ಮ ಹಳ್ಳಿಗಳಿಗೆ ಮರಳುತ್ತಾರೆ, ಅದನ್ನು ಈಗಲೇ ನೋಡುತ್ತಿದ್ದೇವೆ. ಹಾಗೆಯೇ, ವಾರಾಂತ್ಯದ ಕರ್ಫ್ಯೂ ಕಾರಣಕ್ಕೆ ಅದಕ್ಕೆ ಮೊದಲಿನ ಎರಡು ದಿನಗಳಲ್ಲಿ, ಆ ನಂತರದ ಎರಡು ದಿನಗಳಲ್ಲಿ ಜನರು ತಮ್ಮೆಲ್ಲಾ ಕೆಲಸಗಳಿಗಾಗಿ, ಖರೀದಿಗಳಿಗಾಗಿ ಹೆಚ್ಚು ಸಂಖ್ಯೆಯಲ್ಲಿ ಗುಂಪು ಸೇರುವುದು ಅನಿವಾರ್ಯವಾಗುತ್ತದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಈಗ ಅನೇಕರು ಮನೆಯಲ್ಲೇ ಇದ್ದು ಕೆಲಸ ಮಾಡುತ್ತಿರುವುದರಿಂದ, ಮತ್ತು ಅವರ ಕೆಲಸದ ಅವಧಿಗಳು ನಡುರಾತ್ರಿಯವರೆಗೂ ಚಾಚುವುದರಿಂದ, ವಾರಾಂತ್ಯಗಳಲ್ಲಷ್ಟೇ ಅವರು ಹೊರಬಂದು ಅವಶ್ಯಕವಾದುದನ್ನು ಖರೀದಿಸಲು ಸಾಧ್ಯವಾಗುವುದರಿಂದ ಹೀಗೆ ಅಸಂಬದ್ಧವಾದ, ಅವೈಜ್ಞಾನಿಕವಾದ ಕರ್ಫ್ಯೂ ಹೇರುವುದರಿಂದ ಬಹಳಷ್ಟು ಕಷ್ಟಗಳೂ, ಆತಂಕಗಳೂ ಉಂಟಾಗುತ್ತವೆ. ಮಾತ್ರವಲ್ಲ, ಹೀಗೆ ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂ, ಸೀಮಿತ ಅವಧಿಯ ಖರೀದಿ ಇತ್ಯಾದಿ ನಿರ್ಬಂಧಗಳು ಜನರನ್ನು ಪರಸ್ಪರ ದೂರವಿರಿಸುವ ಬದಲು ಖರೀದಿಯ ಸ್ಥಳಗಳಲ್ಲಿ, ಊರುಗಳಿಗೆ ತೆರಳುವಲ್ಲಿ, ಇತರೆಡೆಗಳಲ್ಲಿಯೂ, ಮತ್ತಷ್ಟು ಗುಂಪಾಗುವಂತೆ ಮಾಡುತ್ತವೆ, ಕೊರೋನ ನಿಯಂತ್ರಿಸುವ ಬದಲಿಗೆ ಹರಡುವುದಕ್ಕೆ ಅವಕಾಶ ನೀಡುತ್ತವೆ. ಇಂತಹ ಸರಳ ಸಂಗತಿಗಳು ತಥಾಕಥಿತ ತಜ್ಞರಿಗೂ, ಕೇಂದ್ರ ಸರಕಾರದಿಂದ ಸ್ಥಳೀಯ ಮಟ್ಟದವರೆಗೆ ಆಡಳಿತದಲ್ಲಿರುವವರಿಗೂ ಅರ್ಥವಾಗುವುದಿಲ್ಲ ಎನ್ನುವುದು ಈ ದೇಶದ ದುರಂತವೆಂದೇ ಹೇಳಬೇಕಾಗಿದೆ. ಆದ್ದರಿಂದ ಇಂಥ ಅವೈಜ್ಞಾನಿಕವಾದ ನಿರ್ಧಾರವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಬಲವಾಗಿ ಆಗ್ರಹಿಸುತ್ತೇನೆ. ಸರಕಾರಕ್ಕೆ ನಿಜಕ್ಕೂ ಕೊರೋನ ಹರಡುವಿಕೆಯನ್ನು ತಡೆಯುವ ಆಸಕ್ತಿಯಿದ್ದರೆ ಕರ್ಫ್ಯೂ ಹೇರುವ ಬದಲಿಗೆ, ಖರೀದಿಯ ಅವಧಿಯನ್ನು ಕಡಿತಗೊಳಿಸುವ ಬದಲಿಗೆ, ಜನರು ನಿಧಾನವಾಗಿ, ಬಿಡುವಾಗಿ, ಆತಂಕವೇನೂ ಇಲ್ಲದೆ ಖರೀದಿಸಲು ಸಾಧ್ಯವಾಗುವಂತೆ ಮಾರುಕಟ್ಟೆ, ಮಳಿಗೆಗಳಲ್ಲಿ ವಹಿವಾಟಿನ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು, ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಅವುಗಳ ವಿಸ್ತೀರ್ಣವನ್ನೂ ಹೆಚ್ಚಿಸಬೇಕು, ಹೊರತು ಕುಗ್ಗಿಸುವುದಲ್ಲ.

ವೈದ್ಯಕೀಯ ಸೌಲಭ್ಯಗಳನ್ನು ಈ ಕರ್ಫ್ಯೂನಿಂದ ಹೊರಗಿಡಲಾಗಿದೆ ಎನ್ನುವುದು ಕೇವಲ ತೋರಿಕೆಯಷ್ಟೇ ಆಗುತ್ತದೆ; ಅದರಿಂದ ವೈದ್ಯರಿಗೂ, ಸಿಬ್ಬಂದಿಗೂ, ವೈದ್ಯಕೀಯ ಸೇವೆಗಳನ್ನು ಪಡೆಯುವ ಚಿಕಿತ್ಸಾರ್ಥಿಗಳಿಗೂ ವಿಪರೀತವಾದ ಸಮಸ್ಯೆಗಳೇ ಆಗುತ್ತವೆ. ಶನಿವಾರಕ್ಕೆಂದು ಮೊದಲೇ ಭೇಟಿಯನ್ನು ನಿಗದಿಪಡಿಸಿಕೊಂಡಿದ್ದ ಚಿಕಿತ್ಸಾರ್ಥಿಗಳಿಗೆ ಅಂದು ಬರಲಾಗದಂತೆ ತಡೆಯುವುದರಿಂದ ಎಲ್ಲರಿಗೂ ಸಮಸ್ಯೆಗಳಾಗುತ್ತವೆ, ಮಾತ್ರವಲ್ಲ, ಅವರ ಭೇಟಿಯನ್ನು ಮತ್ತೊಂದು ದಿನಕ್ಕೆ ನಿಗದಿ ಪಡಿಸುವುದಕ್ಕೂ ಕಷ್ಟವಾಗುತ್ತದೆ; ವಾರವಿಡೀ ದುಡಿಯುವವರು ಶನಿವಾರಕ್ಕೆಂದೇ ಭೇಟಿಯನ್ನು ನಿಗದಿಪಡಿಸಿಕೊಂಡಿದ್ದರೆ, ಕೊರೋನ ನೆಪದಲ್ಲಿ ವಾರಗಟ್ಟಲೆ ವಾರಾಂತ್ಯಗಳಲ್ಲಿ ಕರ್ಫ್ಯೂ ಹೇರಿದರೆ ಏನು ಮಾಡಲು ಸಾಧ್ಯವಿದೆ? ಆದ್ದರಿಂದ ಈ ಸೇವೆಗಳು ಲಭ್ಯವಿವೆ ಎಂದು ಕೇವಲ ತೋರಿಕೆಗಾಗಿ ಒಕ್ಕಣೆ ಸೇರಿಸಿದರೆ ಸಾಲದು, ಈ ಸೌಲಭ್ಯಗಳು ಸಾಂಗವಾಗಿ ಲಭ್ಯವಿರುವಂತೆ ಎಲ್ಲಾ ನೆರವನ್ನೂ ಸರಕಾರವೇ ಒದಗಿಸಬೇಕಾಗುತ್ತದೆ. ಕಳೆದ ಜುಲೈ16ರಂದು, ಈ ಕೆಳಗೆ ಲಗತ್ತಿಸಿದ ಪತ್ರದಲ್ಲಿ, ಬರೆದಿದ್ದಂತೆ, ನಮ್ಮ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದಕ್ಕೆ ನಮ್ಮೆಲ್ಲಾ ಸಿಬ್ಬಂದಿಗೂ, ಇಲ್ಲಿಗೆ ಬರಲಿಚ್ಚಿಸುವ ಎಲ್ಲಾ ಚಿಕಿತ್ಸಾರ್ಥಿಗಳಿಗೂ ವಾಹನಗಳು ಹಾಗೂ ಊಟೋಪಚಾರವನ್ನು ಸರಕಾರವೇ ಒದಗಿಸಬೇಕೆಂದೂ, ಅದಕ್ಕಾಗಿ ಮಾಡಿರುವ ವ್ಯವಸ್ಥೆಯ ವಿವರಗಳನ್ನು ಈ ಕೂಡಲೇ ನಮಗೆ ತಿಳಿಸಬೇಕೆಂದೂ ಮತ್ತೆ ಕೇಳುತ್ತಿದ್ದೇನೆ. ಅಂತಹ ಸೌಲಭ್ಯವನ್ನು ಒದಗಿಸಲು ಆಡಳಿತಕ್ಕೆ ಅಸಾಧ್ಯವಾದರೆ ಆ ದಿನದ ವೇತನವನ್ನೂ, ಆದಾಯವನ್ನೂ ಸರಕಾರವೇ ನೀಡಬೇಕೆಂದೂ, ಮೊದಲೇ ತಮ್ಮ ಭೇಟಿಯನ್ನು ನಿಗದಿಪಡಿಸಿಕೊಂಡಿದ್ದ ಚಿಕಿತ್ಸಾರ್ಥಿಗಳಿಗೆ ಆಗಬಹುದಾದ ಎಲ್ಲಾ ಸಮಸ್ಯೆಗಳ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳಬೇಕೆಂದೂ ಈ ಮೂಲಕ ತಿಳಿಸುತ್ತಿದ್ದೇನೆ.

ಇನ್ನೂ ಮುಖ್ಯವಾಗಿ ಈಗ ಕೊರೋನ ಲಸಿಕೆಯನ್ನು ನೀಡುವುದಕ್ಕೆಂದು ಎಲ್ಲಾ ಆಸ್ಪತ್ರೆಗಳಲ್ಲಿ, ಕೆಲವು ಲ್ಯಾಬೊರೇಟರಿ, ಸಮುದಾಯ ಸಂಸ್ಥೆಗಳು ಮುಂತಾದೆಡೆ ಲಸಿಕೆ ಹಾಕುವ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲೆಲ್ಲ ಒತ್ತೊತ್ತಾಗಿ ಜನಸಂದಣಿಯಿರುವುದು ಕಂಡುಬರುತ್ತಿದೆ. ಆಸ್ಪತ್ರೆಗಳಲ್ಲಿ ಮತ್ತು ಇತರೆಡೆಗಳಲ್ಲೂ ಕೊರೋನ ಸೋಂಕಿತರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿರುವುದರಿಂದ ಈ ಲಸಿಕೆ ಹಾಕಿಸಿಕೊಳ್ಳುವವರು ಅಂಥವರ ಸಂಪರ್ಕಕ್ಕೆ ಬರುವ ಅಪಾಯವು ಇದ್ದೇ ಇರುತ್ತದೆ. ಆದ್ದರಿಂದ ಈ ಬಗ್ಗೆ ಸರಕಾರವು ಕೂಡಲೇ ಗಮನ ಹರಿಸಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಈ ಮೇಲಿನ ಸಲಹೆಗಳನ್ನೂ, ಬೇಡಿಕೆಗಳನ್ನೂ ತಾವು ಸಕಾರಾತ್ಮಕವಾಗಿ ಪರಿಗಣಿಸಿ, ವೈದ್ಯಕೀಯ ಸೌಲಭ್ಯಗಳನ್ನು ತೆರೆದಿಡುವುದಕ್ಕೆ ತಾವು ನೀಡಬೇಕಾದ ನೆರವಿನ ಬಗ್ಗೆ ಕೂಡಲೇ ಮಾಹಿತಿಯನ್ನು ನೀಡುವಿರಾಗಿ ಹಾರೈಸುತ್ತೇನೆ.

ಇಂತೀ ತಮ್ಮ ವಿಶ್ವಾಸಿ,

ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಲೈಟ್ ಹೌಸ್ ಪಾಲಿಕ್ಲಿನಿಕ್, ಮಂಗಳೂರು 575001

Dr. B. Srinivas Kakkilaya, Mangaluru, India

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News