ಬೆಂಗಳೂರು: ಶೇ.50ರಷ್ಟು ಹಾಸಿಗೆ ಮೀಸಲಿಡದ 66 ಆಸ್ಪತ್ರೆಗಳಿಗೆ ತುರ್ತು ನೋಟಿಸ್

Update: 2021-04-21 17:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.21: ಕೋವಿಡ್ ಚಿಕತ್ಸೆಗಾಗಿ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕೆಂದು ಸರಕಾರದ ಆದೇಶವನ್ನು ಪಾಲಿಸದ ನಗರದ ಪ್ರಮುಖ 66 ಆಸ್ಪತ್ರೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್ ನೀಡಿದೆ.

ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತ, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿಡದ 66 ಆಸ್ಪತ್ರೆಗಳಿಗೆ ತುರ್ತು ನೋಟೀಸ್ ನೀಡಿ ಸರಕಾರದ ಆದೇಶದಂತೆ ಕೋವಿಡ್ ಸೋಂಕಿತರಿಗಾಗಿ ಹಾಸಿಗೆಗಳನ್ನು ತ್ವರಿತವಾಗಿ ಮೀಸಲಿಡಲು ಸೂಚನೆ ನೀಡಿದ್ದಾರೆ.

ನಗರದ ಎಂ.ಎಸ್.ರಾಮಯ್ಯ, ಎಂ.ಎಸ್.ಶೇಖರ್ ಆಸ್ಪತ್ರೆ, ಲಂಡನ್‍ಕೇರ್ ಆಸ್ಪತ್ರೆ, ಮೀನಾಕ್ಷಿ, ನಂದನ್ ಹೆಲ್ತ್ ಕೇರ್, ನಾರಾಯಣ ಹೃದಯಾಲಯ, ನವಚೇತನ, ಪುಣ್ಯ ಆಸ್ಪತ್ರೆ, ಅಗಡಿ ಆಸ್ಪತ್ರೆ, ಅಪೋಲೋ, ಸಿಟಿ ಆಸ್ಪತ್ರೆ, ಫೋರ್ಟಿಸ್, ಶ್ರೀಸಾಯಿ ಆಸ್ಪತ್ರೆ, ವಿಜಯನಗರ ಆಸ್ಪತ್ರೆ ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಪ್ರಮುಖ 66 ಆಸ್ಪತ್ರೆಗಳಿಗೆ ತುರ್ತು ನೋಟಿಸ್ ನೀಡಿದ್ದಾರೆ.

ಎ.18ರಂದು ವಿಕ್ರಂ ಅಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಆಸ್ಟರ್ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ದಿಢೀರ್ ಭೇಟಿ ನೀಡಿ, ಸರಕಾರದ ಆದೇಶದಂತೆ ಶೇ.50ರಷ್ಟು ಹಾಸಿಗೆ ಮೀಸಲಿಡದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಪತ್ರೆಗಳ ಆಡಳಿತ ಮಂಡಳಿ ಸರಕಾರದ ಆದೇಶದಂತೆ ಹಂತ, ಹಂತವಾಗಿ ಶೇ.50ರಷ್ಟು ಹಾಸಿಗೆ ಮೀಸಲಿಡಲಾಗುವುದೆಂದು ಆಯುಕ್ತರಿಗೆ ಪತ್ರ ಬರೆದು, ಅದರಂತೆ ಈ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News