ರಾಜ್ಯದ ಜನರಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಅನಗತ್ಯವಾಗಿ ಮನೆ ಬಿಟ್ಟು ಹೊರಗೆ ಬರಬೇಡಿ: ಸಿಎಂ ಯಡಿಯೂರಪ್ಪ

Update: 2021-04-22 12:40 GMT

ಬೆಂಗಳೂರು, ಎ.22: ರಾಜ್ಯದ ಜನರಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ದಯಮಾಡಿ ಅನಗತ್ಯವಾಗಿ ಮನೆ ಬಿಟ್ಟು ಹೊರಗೆ ಬರಬೇಡಿ. ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕೋವಿಡ್ ಸೋಂಕಿಗೆ ಒಳಗಾಗಿ ಎ.16ರಂದು ನಗರದ ಎಚ್‍ಎಎಲ್‍ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪ, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾರ್ವಜನಿಕರು ಇನ್ನಾದರೂ ಅನಗತ್ಯವಾಗಿ ಮನೆಗಳಿಂದ ಹೊರಗೆ ಬರುವುದನ್ನು ನಿಲ್ಲಿಸಬೇಕು. ಅನಗತ್ಯ ತಿರುಗಾಟದಿಂದಲೆ ಕೊರೋನ ಸೋಂಕು ಉಲ್ಬಣಗೊಳ್ಳುತ್ತಿದೆ. ಸರಕಾರ ಈಗಾಗಲೆ ಸಾಕಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ಅನಗತ್ಯವಾಗಿ ಪೊಲೀಸರು ದಂಡ ಹಾಕುವಂತಹ ಬಿಗಿ ಪರಿಸ್ಥಿತಿ ನಿರ್ಮಾಣ ಆಗೋದಕ್ಕೆ ಅವಕಾಶ ಕೊಡಬೇಡಿ ಎಂದು ಅವರು ಮನವಿ ಮಾಡಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು. ಪ್ರತಿದಿನ ಕೊರೋನ ಸೋಂಕು ಉಲ್ಬಣಗೊಳ್ಳುತ್ತಿದೆ. ಒಂದೇ ಮನೆಯಲ್ಲಿ ಮೂರರಿಂದ ನಾಲ್ಕು ಜನರಲ್ಲಿ ಕೊರೋನ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.

ಕೊರೋನ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಬಿಟ್ಟು ಬೇರೆ ಯಾವ ಮಾರ್ಗವು ಇಲ್ಲ. ಈಗಾಗಲೆ ಪ್ರಧಾನಿ ನರೇಂದ್ರ ಮೋದಿಯವರು ಈ ಮಾತನ್ನು ಪುನರುಚ್ಚರಿಸಿದ್ದಾರೆ ಎಂದು ಅವರು ಹೇಳಿದರು.

ನಾನು ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದೇನೆ. ಇಂದು ಸಚಿವ ಸಂಪುಟದ ಸಹೋದ್ಯೋಗಿಗಳ ಸಭೆಯನ್ನೂ ಕರೆದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಿ ಕೂತು ಕೋವಿಡ್ ತಡೆಯೋದಕ್ಕೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಕಳೆದ ನಾಲ್ಕು ದಿನಗಳಿಂದ ಎಲ್ಲ ಸಚಿವರೊಂದಿಗೆ ಸತತ ಸಂಪರ್ಕದಲ್ಲಿ ಇದ್ದೇನೆ. ಇಂದು ಎಲ್ಲರೂ ಕೂತು ಚರ್ಚೆ ಮಾಡಿ ರಾಜ್ಯದಲ್ಲಿರುವ ವಾಸ್ತವತೆಯನ್ನು ತಿಳಿದುಕೊಂಡು ಈ ಕೋವಿಡ್ ಮಹಾಮಾರಿಯ ವಿರುದ್ಧ ಯಾವ ರೀತಿ ಹೋರಾಡಬೇಕು ಎಂಬುದರ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News