ಹಾಸಿಗೆ ನೀಡದ ಆರೋಪ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಎಫ್‍ಐಆರ್
ಬೆಂಗಳೂರು, ಎ.22: ಕೋವಿಡ್ ಸೋಂಕಿತರಿಗೆ ಹಾಸಿಗೆ ಮೀಸಲಿಡದ ಮತ್ತು ರೋಗಿಗಳಿಂದ ಹಣ ವಸೂಲಿ ಮಾಡಿದ ಆರೋಪದಡಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ.
ಕೋವಿಡ್ ಸೋಂಕು ದ್ವಿಗುಣವಾಗಿರುವ ಹಿನ್ನೆಲೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲು ಇಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಉಲ್ಲಂಘಿಸಿದ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಆಸ್ಪತ್ರೆಯು ಕೋವಿಡ್ ಸೋಂಕಿತರಿಗೆ ಹಾಸಿಗೆ ನೀಡಲು ನಿರಾಕರಿಸಿತ್ತು. ಜತೆಗೆ ದಾಖಲಾದ ಹಲವು ಮಂದಿ ಸೋಂಕಿತರಿಂದ ಹಣ ವಸೂಲಿ ಮಾಡಿದ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.
ಇತ್ತೀಚಿಗೆಷ್ಟೇ, ಬೊಮ್ಮನಹಳ್ಳಿ ಬಿಬಿಎಂಪಿ ವಲಯ ಆಡಳಿತ ನಿರ್ವಹಣಾಧಿಕಾರಿ ರಾಜೇಂದ್ರ ಚೋಳನ್ ಹಾಗೂ ಇತರೆ ಅಧಿಕಾರಿಗಳು ಹಾಸಿಗೆ ನೀಡದ ಆಸ್ಪತ್ರೆ ಮೇಲೆ ದಾಳಿ ನಡೆಸಿ ಶೋಕಾಸ್ ನೋಟಿಸ್ ನೀಡಿದ್ದರು.
ಈ ಸಂಬಂಧ ಈವರೆಗೂ ಸಮಜಾಯಿಷಿ ನೀಡದೆ ಆಸ್ಪತ್ರೆ ಆಡಳಿತ ಮಂಡಳಿ ನಿರ್ಲಕ್ಷ್ಯ ಪ್ರದರ್ಶಿಸಿತ್ತು. ಈ ಹಿನ್ನೆಲೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ವಿರುದ್ಧ ದಾಖಲಾದ ದೂರಿನನ್ವಯ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.