ಎಲ್ಲ ಭಾರತೀಯರಿಗೆ ಲಸಿಕೆ ನೀಡಲು ಮೋದಿ ಸರಕಾರವು ಬಯಸುತ್ತಿದೆ, ಆದರೆ ಅದರ ಯೋಜನೆ ಬೇರೆಯದನ್ನೇ ತೋರಿಸುತ್ತಿದೆ

Update: 2021-04-24 14:39 GMT

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ವಿರುದ್ಧ ಲಸಿಕೆಯನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಪ್ರಕಟಿಸಿದ್ದಾರೆ. ಇದು ಕೇಳಲು ಒಳ್ಳೆಯ ಸುದ್ದಿಯಾಗಿದ್ದರೂ ಹಲವಾರು ಕಳವಳಕಾರಿ ಅಂಶಗಳು (ಇವುಗಳಲ್ಲಿ ಹೆಚ್ಚಿನವು ಸೂಕ್ಷ್ಮವಾಗಿವೆ) ಎಷ್ಟೊಂದು ತೀವ್ರವಾಗಿವೆ ಎಂದರೆ ಅವು ಸರಕಾರದ ಈ ಪ್ರಕಟಣೆಯನ್ನು ಕೇವಲ ಪ್ರಕಟಣೆಯಾಗಿಯೇ ಉಳಿಸುವ ಸಾಧ್ಯತೆಗಳಿವೆ.
ಸರಕಾರಕ್ಕೆ ಈ ಕಳವಳಗಳ ಬಗ್ಗೆ ಅರಿವಿದೆಯೇ ಎಂಬ ಸಂದೇಹವೂ ವ್ಯಕ್ತವಾಗಿದೆ. ಒಂದು ವೇಳೆ ಸರಕಾರಕ್ಕೆ ಈ ಬಗ್ಗೆ ಅರಿವಿದ್ದರೆ ಈಗಾಗಲೇ ಬಲಗುಂದುತ್ತಿರುವ ಲಸಿಕೆ ಅಭಿಯಾನಕ್ಕಾಗಿ ಈ ಕಳವಳಗಳನ್ನು ನಿಭಾಯಿಸಲು ಯಾವ ಯೋಜನೆಯನ್ನು ಹಾಕಿಕೊಂಡಿದೆ?

ಭಾರತ ಸರಕಾರದ ಕೋ-ವಿನ್ ಆ್ಯಪ್ನಲ್ಲಿ ಲಭ್ಯ ಮಾಹಿತಿಯಂತೆ ಎ.22ರವರೆಗೆ ದೇಶದಲ್ಲಿ ಕೋವಿಡ್-19 ಲಸಿಕೆಯ 13.28 ಕೋಟಿ ಡೋಸ್ಗಳನ್ನು ಜನರಿಗೆ ಒದಗಿಸಲಾಗಿದೆ. ಶೇ.8ಕ್ಕೂ ಕೊಂಚ ಹೆಚ್ಚಿನ ಭಾರತೀಯರು ಮೊದಲ ಡೋಸ್ ಅನ್ನು ಪಡೆದಿದ್ದರೆ ಶೇ.1.4ರಷ್ಟು ಜನರು ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದಾರೆ. 138 ಕೋ.ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಲಸಿಕೆ ನೀಡಿಕೆಯ ಮೂಲಕ ಗುಂಪು ನಿರೋಧಕತೆಯನ್ನು ಸಾಧಿಸಲು ಬೃಹತ್ ಸಂಖ್ಯೆಯಲ್ಲಿ ಡೋಸ್ಗಳು ಅಗತ್ಯವಾಗುತ್ತವೆ. ಹಾಗೆ ನೋಡಿದರೆ ಕೊರೋನವೈರಸ್ ಸಾಂಕ್ರಾಮಿಕವನ್ನು ನಿರ್ಮೂಲನಗೊಳಿಸಲು ಇಷ್ಟು ಪ್ರಮಾಣದಲ್ಲಿಯೂ ಡೋಸ್ಗಳು ಸಾಕಾಗದಿರಬಹುದು.
 
ಮಾ.31ರೊಳಗೆ ಮೂರು ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡುವ ಗುರಿಯೊಂದಿಗೆ ಭಾರತವು 2021, ಜ.16ರಂದು ತನ್ನ ಲಸಿಕೆ ಅಭಿಯಾನವನ್ನು ಆರಂಭಿಸಿತ್ತು. ಇದಕ್ಕೂ ಮುನ್ನ ಅದೇ ತಿಂಗಳಲ್ಲಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ (ಎಸ್ಐಐ)ನ ಕೋವಿಶೀಲ್ಡ್ ಮತ್ತು ಹೈದರಾಬಾದಿನ ಭಾರತ ಬಯೊಟೆಕ್ನ ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮತಿ ಲಭಿಸಿತ್ತು. ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆಯ ಸಂಪೂರ್ಣ ವೆಚ್ಚವನ್ನು ತಾನೇ ಭರಿಸಲು ಕೇಂದ್ರವು ನಿರ್ಧರಿಸಿತ್ತು.

ಆದರೆ ಎಪ್ರಿಲ್ 19ರ ಮಾಧ್ಯಮ ವರದಿಯಂತೆ ಆವರೆಗೆ ಮೂರು ಕೋಟಿ ಮುಂಚೂಣಿ ಕಾರ್ಯಕರ್ತರ ಪೈಕಿ ಕೇವಲ ಶೇ.37ರಷ್ಟು ಜನರು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ನ ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದರು ಮತ್ತು ಇನ್ನೊಂದು ಶೇ.30ರಷ್ಟು ಜನರು ಮೊದಲ ಡೋಸ್ ಅನ್ನು ಮಾತ್ರ ಪಡೆದಿದ್ದರು. ಮುಂಚೂಣಿ ಕಾರ್ಯಕರ್ತರಲ್ಲಿ ಲಸಿಕೆ ಪಡೆಯಲು ಹಿಂಜರಿಕೆ ಮತ್ತು ಮಾ.1ರಿಂದ ಅಭಿಯಾನದ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಇತರ ಕಾಯಿಲೆಗಳನ್ನು ಹೊಂದಿರುವ 45 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಲಸಿಕೆಗಳನ್ನು ನೀಡಲು ಪ್ರಾರಂಭಿಸಿದ್ದು ಈ ಕಳಪೆ ಸಾಧನೆಗೆ ಸಂಭಾವ್ಯ ಕಾರಣಗಳಾಗಿವೆ. ಅಭಿಯಾನದ ವೇಗವನ್ನು ಹೆಚ್ಚಿಸಲು ಲಸಿಕೆ ಸೇವೆಗಳನ್ನು ಒದಗಿಸಲು ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸರಕಾರವು ಅನುಮತಿ ನೀಡಿತ್ತು. ಉಚಿತ ಲಸಿಕೆಗಾಗಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡುವುದು ಅಥವಾ ಪ್ರತಿ ಡೋಸ್ಗೆ 250 ರೂ.ಶುಲ್ಕವನ್ನು ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳುವುದು;ಹೀಗೆ ಎರಡು ಆಯ್ಕೆಗಳು ಜನರ ಮುಂದಿದ್ದವು.

ಲಸಿಕೆ ಅಭಿಯಾನಕ್ಕೆ ಸಮಾನಾಂತರವಾಗಿ ಫೆಬ್ರವರಿಯಲ್ಲಿ ದೇಶದಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿತ್ತು. ಮಾ.20ರ ವೇಳೆಗೆ ದಿನಕ್ಕೆ ಸುಮಾರು 40,000 ಹೊಸ ಪ್ರಕರಣಗಳು ವರದಿಯಾಗತೊಡಗಿದ್ದು,ಏರಿಕೆ ಕೆಲವೇ ರಾಜ್ಯಗಳಿಗೆ ಸೀಮಿತಗೊಂಡಿತ್ತು. ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರು ಸಾರ್ವತ್ರಿಕ ಲಸಿಕೆ ನೀಡಿಕೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಆದಾಗ್ಯೂ ಕೆಲವೇ ದಿನಗಳ ಬಳಿಕ ಸರಕಾರವು ಎ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲು ನಿರ್ಧರಿಸಿತ್ತು.

ಸಾರ್ವಜನಿಕ ವಿತರಣೆ ವ್ಯವಸ್ಥೆಯು ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಿಭಾಯಿಸಲು ಶಕ್ತವಾಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್-19 ಕಾರ್ಯಪಡೆಯ ಅಧ್ಯಕ್ಷ ವಿನೋದ ಕೆ.ಪಾಲ್ ಅವರು ಸರಕಾರದ ಬಳಿ ಸಾಕಷ್ಟು ಪೂರೈಕೆ ಲಭ್ಯವಿದೆ ಎಂದು ಹೇಳಿದ್ದರು.

ದೈನಂದಿನ ಲಸಿಕೆ ನೀಡಿಕೆ ಪ್ರಮಾಣವು ಮಾರ್ಚ್ ಮೊದಲ ವಾರದಲ್ಲಿ 10 ಲಕ್ಷ ಡೋಸ್ಗಳನ್ನು ದಾಟಿತ್ತು ಮತ್ತು ಎ.5ರಂದು 45 ಲಕ್ಷ ಡೋಸ್ಗಳ ಗರಿಷ್ಠ ಸಂಖ್ಯೆಯನ್ನು ತಲುಪಿತ್ತು. ಆದರೆ ಆಗಿನಿಂದ ಲಸಿಕೆಯ ಕೊರತಯಿಂದಾಗಿ ದೈನಂದಿನ ಡೋಸ್ಗಳ ನೀಡಿಕೆಯ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಇದೆ.

ಸರಾಸರಿ ಪ್ರತಿ ತಿಂಗಳು ಎಸ್ಐಐ ಆರರಿಂದ ಏಳು ಕೋಟಿ ಕೋವಿಶೀಲ್ಡ್ ಡೋಸ್ಗಳನ್ನು ಮತ್ತು ಭಾರತ ಬಯೊಟೆಕ್ ಕೇವಲ ಸುಮಾರು 50 ಲಕ್ಷ ಡೋಸ್ಗಳನ್ನು ತಯಾರಿಸುತ್ತಿವೆ. ಅಂದರೆ ದೇಶದಲ್ಲಿ ಪ್ರತಿ ದಿನ ಸರಾಸರಿ 25 ಲಕ್ಷ ಡೋಸ್ಗಳು ತಯಾರಾಗುತ್ತಿವೆ ಮತ್ತು ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಲಸಿಕೆಗಳನ್ನು ನೀಡುವುದು ಕಾರ್ಯಸಾಧ್ಯವಲ್ಲ.
ಹಲವಾರು ರಾಜ್ಯಗಳು ಲಸಿಕೆ ಕೊರತೆಯ ಬಗ್ಗೆ ದೂರಿಕೊಳ್ಳುತ್ತಿವೆ. ಮೊದಲು ಸರಕಾರವು ಲಸಿಕೆಗಳ ಕೊರತೆಯನ್ನು ಬಲವಾಗಿ ನಿರಾಕರಿಸಿತ್ತು. ಆದರೆ ನಿರಾಕರಿಸಲು ಸಾಧ್ಯವಿಲ್ಲದ ಸ್ಥಿತಿಯು ಸೃಷ್ಟಿಯಾದಾಗ ಅದು,ವಿಶೇಷವಾಗಿ ಈ ತಿಂಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ ಕೊರತೆಯನ್ನು ನೀಗಿಸಲು ಲಸಿಕೆ ತಯಾರಿಕೆ ಕಂಪನಿಗಳಿಗೆ ಮುಂಗಡ ಸಾಲ ನೀಡಿಕೆ ಸೇರಿದಂತೆ ಕೆಲವು ಕ್ರಮಗಳನ್ನು ಕೈಗೊಂಡಿದೆ. 

ಎ.19ರಂದು ಪ್ರಕಟಿಸಿದ ನೂತನ ನೀತಿಯಡಿ ಕೇಂದ್ರವು 45 ವರ್ಷಕ್ಕಿಂತ ಕಡಿಮೆ ಪ್ರಾಯದವರಿಗೆ ಲಸಿಕೆ ನೀಡುವ ಹೊಣೆಗಾರಿಕೆಯನ್ನು ರಾಜ್ಯ ಸರಕಾರಗಳ ಮೇಲೆ ಹೊರಿಸಿದೆ. ಅವು ಲಸಿಕೆ ಕಂಪನಿಗಳಿಗೆ ಹಣ ತೆತ್ತು ಡೋಸ್ಗಳನ್ನು ಖರಿದಿಸಬೇಕಿದೆ ಮತ್ತು ಇದೇ ವೇಳೆ ಈ ಕಂಪನಿಗಳು ತಮ್ಮ ಉತ್ಪಾದನೆಯ ಶೇ.50ರಷ್ಟನ್ನು ಕೇಂದ್ರಕ್ಕೆ ಪೂರೈಸಬೇಕಿದೆ. ಎಸ್ಐಐ ಇತರ ದೇಶಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅದು ತನ್ನ ಉತ್ಪಾದನೆಯ ಕನಿಷ್ಠ ಶೇ.50ರಷ್ಟು ಡೋಸ್ಗಳನ್ನು ಈ ದೇಶಗಳಿಗೆ ಪೂರೈಸುವ ಬದ್ಧತೆಯನ್ನು ಹೊಂದಿದೆ ಮತ್ತು ಕಳೆದೆರಡು ತಿಂಗಳುಗಳಿಂದ ಈ ಬದ್ಧತೆಯನ್ನು ಪೂರೈಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಸದ್ಯೋಭವಿಷ್ಯದಲ್ಲಿ ಎಂದಾದರೂ ಅದು ಈ ಬದ್ಧತೆಯನ್ನು ಪೂರೈಸಲೇಬೇಕಾಗುತ್ತದೆ ಮತ್ತು ಭಾರತಕ್ಕೆ ಲಭ್ಯವಾಗುವ ಡೋಸ್ಗಳ ಪ್ರಮಾಣ ಕಡಿಮೆಯಾಗುತ್ತದೆ.

ಮುಂದಿನೆರಡು ತಿಂಗಳುಗಳಲ್ಲಿ ದೇಶಿನಿರ್ಮಿತ ಮತ್ತು ಆಮದಿತ ಡೋಸ್ಗಳ ಪ್ರಮಾಣ ಹೆಚ್ಚುವ ಸಾಧ್ಯತೆ ಕಂಡು ಬರುತ್ತಿಲ್ಲ. ಭಾರತದಲ್ಲಿರುವ ಎಲ್ಲ ವಯಸ್ಕರಿಗೆ ಲಸಿಕೆ ನೀಡಲು 1.68 ಶತಕೋಟಿ ಡೋಸ್ಗಳ ಅಗತ್ಯವಿದೆ. ಈಗಿನ ಉತ್ಪಾದನೆ ಮಟ್ಟದಲ್ಲಿ ಇಷ್ಟು ಡೋಸ್ಗಳು ತಯಾರಾಗಲು 22 ತಿಂಗಳುಗಳು,ಅಂದರೆ ಫೆಬ್ರವರಿ 2023ರವರೆಗೆ ಕಾಲಾವಕಾಶ ಬೇಕಾಗುತ್ತದೆ. ಆದರೆ ದೇಶವು ಈಗಾಗಲೇ ಲಸಿಕೆಯ ತೀವ್ರ ಕೊರತೆಯನ್ನೆದುರಿಸುತ್ತಿದೆ. 2020ರ ಉತ್ತರಾರ್ಧದಲ್ಲಿ ಪಾಶ್ಚಾತ್ಯ ದೇಶಗಳು ತಮ್ಮ ಪ್ರಜೆಗಳಿಗಾಗಿ ಲಸಿಕೆಗಳಿಗೆ ಬೇಡಿಕೆಗಳನ್ನು ಸಲ್ಲಿಸುವ ತರಾತುರಿಯಲ್ಲಿದ್ದರೆ ಭಾರತ ಸರಕಾರವು ಅಂತಹ ತುರ್ತನ್ನು ಪ್ರದರ್ಶಿಸಿರಲಿಲ್ಲ ಅಥವಾ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಿರಲಿಲ್ಲ.
 
ದೇಶದಲ್ಲಿ ಇಂದು ಕೊರೋನವೈರಸ್ ಸ್ಥಿತಿ ಅತ್ಯಂತ ಭೀಕರ ಹಂತಕ್ಕೆ ತಲುಪಿದೆ. ಇದರ ನಡುವೆ ಲಸಿಕೆ ಅಭಿಯಾನ ಕುರಿತು ಸರಕಾರದ ಇತ್ತೀಚಿನ ಪ್ರಕಟಣೆಯು ಅದು ಯಾವುದೇ ಪೂರ್ವಸಿದ್ಧತೆಯಿಲ್ಲದೆ 2016ರಲ್ಲಿ ಘೋಷಿಸಿದ್ದ ನೋಟುನಿಷೇಧ ಮತ್ತು 2020ರಲ್ಲಿ ಘೋಷಿಸಿದ್ದ ಸಂಪೂರ್ಣ ಲಾಕ್ಡೌನ್ ಅನ್ನು ನೆನಪಿಸುತ್ತಿದೆ.

ಸರಕಾರದ ಬಳಿ ಮಂತ್ರದಂಡವಿಲ್ಲ ನಿಜ. ಆದರೆ ಅದು ಕನಿಷ್ಠ ಕಳೆದ ಕೆಲವು ತಿಂಗಳುಗಳಲ್ಲಿ ಆಡಳಿತದಲ್ಲಿಯ ತಪ್ಪುಗಳನ್ನಾದರೂ ತಿದ್ದಿಕೊಳ್ಳಬೇಕು. ಸದ್ಯದ ಸ್ಥಿತಿಯನ್ನು ಸುಧಾರಿಸಲು ಇದನ್ನು ಬಿಟ್ಟು ಅನ್ಯಮಾರ್ಗವಿಲ್ಲ.

ಮೊದಲನೆಯದಾಗಿ ಕೇಂದ್ರವು ರಾಜ್ಯಸರಕಾರಗಳೊಂದಿಗೆ ಕೈಜೋಡಿಸಿ ಎಲ್ಲ ಭಾರತೀಯರಿಗೆ ಲಸಿಕೆ ಒದಗಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ತುರ್ತಾಗಿ ಲಸಿಕೆಗಳನ್ನು ಪಡೆದುಕೊಳ್ಳಲು ಭಾರತಕ್ಕೆ ಲಾಭರಹಿತವಾಗಿ ಲಸಿಕೆ ಮಾರಾಟಕ್ಕೆ ಸಿದ್ಧವಿರುವ ಫೈಝರ್ನಂತಹ ಕಂಪನಿಗಳೊಂದಿಗೆ ಮಾತುಕತೆಗಳನ್ನು ಆರಂಭಿಸಬೇಕು.

ಎರಡನೆಯದಾಗಿ ಲಸಿಕೆ ನೀಡಿಕೆ ಕಾರ್ಯಕ್ರಮದ ವೇಳಾಪಟ್ಟಿಯನ್ನು ನಿಗದಿಗೊಳಿಸುವ ಮತ್ತು ಅದನ್ನು ಜಾರಿಗೊಳಿಸುವ ಕಾರ್ಯವನ್ನು ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿಯೊಂದಕ್ಕೆ ವಹಿಸಬೇಕು. ಈ ಸಮಿತಿಯು ಲಭ್ಯ ಲಸಿಕೆಗಳನ್ನು ಸಮಾನವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಹಂಚಿಕೆ ಮಾಡಬೇಕು. ಸಮಿತಿಯ ಕಾರ್ಯ ಚಟುವಟಿಕೆಗಳ ಮೇಲೆ ಸರಕಾರವು ನಿಗಾಯಿರಿಸಬೇಕು.

ಮೂರನೆಯದಾಗಿ 45 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಿಕೆಯ ವೆಚ್ಚದ ಶೇ.50ರಷ್ಟನ್ನು ಕೇಂದ್ರವು ಭರಿಸಬೇಕು. ಉಳಿದ ಶೇ.50ರಷ್ಟನ್ನು ರಾಜ್ಯ ಸರಕಾರಗಳು ಭರಿಸಬೇಕು ಅಥವಾ ಜನರಿಗೆ ವರ್ಗಾಯಿಸಬೇಕು. ಈ ಬಗ್ಗೆ ನಿರ್ಧಾರ ಅವುಗಳಿಗೇ ಬಿಟ್ಟಿದ್ದಾಗಿದೆ. ಒಟ್ಟಾರೆಯಾಗಿ ಭಾರತ ಸರಕಾರವು ಎಲ್ಲ ರಾಜ್ಯ ಸರಕಾರಗಳೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳಬೇಕು,ಏಕೆಂದರೆ ಈ ಬಿಕ್ಕಟ್ಟಿನ ಸಮಯದಲ್ಲಿ ಇದು ದೇಶಕ್ಕೆ ಅಗತ್ಯವಾಗಿದೆ.

ಕೃಪೆ: The Wire

Writer - ನೀತಾ ಸಾಂಘಿ

contributor

Editor - ನೀತಾ ಸಾಂಘಿ

contributor

Similar News