ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಗೋಡೆ ಕುಸಿತ, ವಾಹನಗಳು ಜಖಂ

Update: 2021-04-24 16:40 GMT

ಬೆಂಗಳೂರು, ಎ.24: ಬೆಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಲವೆಡೆ ಮರದ ಕೊಂಬೆಗಳು ಮುರಿದು ಹಾಗೂ ಗೋಡೆ ಕುಸಿತದಿಂದಾಗಿ ವಾಹನಗಳು ಜಖಂಗೊಂಡಿವೆ. ಶನಿವಾರವು ಮಳೆ ಸುರಿದಿದ್ದು, ಎ.26ರವರೆಗೂ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಪಶ್ಚಿಮ ವಲಯದಲ್ಲಿ ಮೂರು, ಆರ್‍ಆರ್ ನಗರ ವ್ಯಾಪ್ತಿಯಲ್ಲಿ ಎರಡು, ಯಲಹಂಕ ಒಂದು ಪೂರ್ವ ವಲಯದಲ್ಲಿ ಎರಡು ಸೇರಿದಂತೆ ಹತ್ತು ಅಧಿಕ ಮರಗಳು ನೆಲಕ್ಕೆ ಬಿದ್ದಿದೆ. ಇದರ ಪರಿಣಾಮ ಹಲವು ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ವೇಳೆ ಸ್ಥಳೀಯರ ಸಹಕಾರದಿಂದ ಮರದ ಕೊಂಬೆಗಳನ್ನು ತೆರವುಗೊಳಿಸಲಾಯಿತು.

ನಗರದ ಮೆಜೆಸ್ಟಿಕ್, ಶಿವಾನಂದ ವೃತ್ತ, ಮಲ್ಲೇಶ್ವರಂ, ಮೇಖ್ರಿ ವೃತ್ತ, ಯಶವಂತಪುರ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ, ಹೆಬ್ಬಾಳ, ವಿಜಯನಗರ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿ.ನಾಗೇನಹಳ್ಳಿ, ಕೆ.ಜಿ.ಹಳ್ಳಿ, ಯಲಹಂಕ, ಎಚ್.ಗೊಲ್ಲಹಳ್ಳಿ, ವಡೇರಹಳ್ಳಿ, ದಯಾನಂದನಗರ, ಶಿವಕೋಟೆ, ಮಂಡೂರು, ಅಟ್ಟೂರು, ಮನೋರಾಯನಪಾಳ್ಯ, ಹೆಮ್ಮಿಗೆಪುರ, ನಾಗಪುರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗುಸಹಿತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸುರಿದ ವರ್ಷದ ಮೊಲದ ಮಳೆ ದಾಖಲೆ ಪ್ರಮಾಣದಲ್ಲಿ ಸುರಿದಿದ್ದು, ಎ.26ವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News