ಪಶ್ಚಿಮಬಂಗಾಳ: ಕೊರೋನ ಶಿಷ್ಟಾಚಾರ ಉಲ್ಲಂಘಿಸಿದ ಅಭ್ಯರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಚುನಾವಣಾ ಆಯೋಗ
ಹೊಸದಿಲ್ಲಿ, ಎ. 24: ಕೋವಿಡ್-19 ಸುರಕ್ಷಾ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದಲ್ಲಿ 13 ಮಂದಿ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಆಯೋಗ ಶುಕ್ರವಾರ ಎಫ್ಐಆರ್ ದಾಖಲಿಸಿದೆ.
ಇದಲ್ಲದೆ, ಪಶ್ಚಿಮಬಂಗಾಳ ವಿಧಾನ ಸಬೆ ಚುನಾವಣೆಯ 7 ಹಾಗೂ 8ನೇ ಹಂತದ ಮತದಾನದ ಸಂದರ್ಭ ಸುರಕ್ಷಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ 33 ಮಂದಿ ಅಭ್ಯರ್ಥಿಗಳಿಗೆ ಶೋಕಾಸ್ ನೋಟಿಸು ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭ ಕೋವಿಡ್-19 ಶಿಷ್ಟಾಚಾರ ಉಲ್ಲಂಘಿಸಿದ ಕುರಿತು ಕೋಲ್ಕತಾ ಉಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಎಪ್ರಿಲ್ 22ರಂದು ಗುರುವಾರ ಚುನಾವಣಾ ಆಯೋಗ ರ್ಯಾಲಿ ಹಾಗೂ 500ಕ್ಕಿಂತ ಹೆಚ್ಚು ಜನ ಸೇರುವ ಬೃಹತ್ ಸಾರ್ವಜನಿಕ ಸಭೆಗೆ ನಿಷೇಧ ವಿಧಿಸಿದೆ.
ಶಿಷ್ಟಾಚಾರದ ಉಲ್ಲಂಘನೆ ಸ್ಪಷ್ಟವಾಗಿ ಬೆಳಕಿಗೆ ಬಂದ ಬಳಿಕ ಚುನಾವಣಾ ಆಯೋಗ, ಶಿಷ್ಟಾಚಾರಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವಂತೆ ವರ್ಚುವಲ್ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದೆ.
‘‘ಕೊರೋನ ವೈರಸ್ ಶಿಷ್ಟಾಚಾರವನ್ನು ಉಲ್ಲಂಘಿಸಿದ ಆರೋಪದಲ್ಲಿ ಅಭ್ಯರ್ಥಿಗಳಿಗೆ ಮೊದಲು ಶೋಕಾಸ್ ನೋಟೀಸು ರವಾನಿಸಲಾಗುವುದು. ನೋಟಿಸಿಗೆ ಅವರ ಪ್ರತಿಕ್ರಿಯೆ ಬಗ್ಗೆ ಸಮಾಧಾಕರವಾಗಿರದಿದ್ದರೆ, ಎಫ್ಐಆರ್ ದಾಖಲಿಸಲಾಗುವುದು. ಅಧಿಕಾರಿಗಳು ಆಯೋಗಕ್ಕೆ ಅನುಸರಣಾ ವರದಿ ಸಲ್ಲಿಸಬೇಕು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಐಆರ್ ದಾಖಲಿಸಲಾದ 13 ಅಭ್ಯರ್ಥಿಗಳಲ್ಲಿ 6 ಮಂದಿ ಬಿರ್ಭೂಮ್ ಜಿಲ್ಲೆಯವರು ಎಂದು ಅವರು ಹೇಳಿದ್ದಾರೆ