ಕೊರೋನ ನಿರ್ವಹಣೆ ವೈಫಲ್ಯದ ಹಿಂದೆ ಸುಪ್ರೀಂಕೋರ್ಟ್ ಪಾತ್ರವಿದೆ: ದುಶ್ಯಂತ ದವೆ

Update: 2021-04-25 09:42 GMT

ತನ್ನ ಮುಂದೆ ಬಾರದ ಪ್ರಕರಣವೊಂದನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ. ಕೊರೋನ ವೈರಸ್ ಎರಡನೇ ಅಲೆ ಹಾಗೂ ಈ ಬಿಕ್ಕಟ್ಟನ್ನು ವಿವಿಧ ರಾಜ್ಯಗಳಲ್ಲಿ ನಿಭಾಯಿಸುತ್ತಿರುವ ರೀತಿ ಅಥವಾ ನಿಭಾಯಿಸುವಲ್ಲಿನ ವೈಫಲ್ಯಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠವೊಂದು ಹಿರಿಯ ವಕೀಲ ಹರೀಶ್ ಸಾಳ್ವೆಯನ್ನು ನ್ಯಾಯಾಲಯದ ಸಲಹೆಗಾರನಾಗಿ ನೇಮಿಸಲು ಮುಂದಾದುದು ವಿವಾದಕ್ಕೆ ಕಾರಣವಾಯಿತು. ಇದರೊಂದಿಗೆ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ನಡೆಸುತ್ತಿರುವ ಕೊರೋನ ವೈರಸ್‌ಗೆ ಸಂಬಂಧಿಸಿದ ಪ್ರಕರಣಗಳು ಸುಪ್ರೀಂಕೋರ್ಟ್‌ಗೆ ವರ್ಗಾವಣೆಗೊಳ್ಳುತ್ತಿವೆ. ದಿಲ್ಲಿ, ಬಾಂಬೆ, ಅಲಹಾಬಾದ್, ಮಧ್ಯಪ್ರದೇಶ, ಕೋಲ್ಕತಾ, ಸಿಕ್ಕಿಂ ಹೈಕೋರ್ಟ್‌ಗಳು ಈಗ ಕೊರೋನ ವೈರಸ್‌ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿವೆೆ. ಆಮ್ಲಜನಕದ ಲಭ್ಯತೆ, ಅಗತ್ಯ ಔಷಧಗಳ ಕೊರತೆ, ಲಸಿಕೆ ನೀಡಿಕೆ, ಲಾಕ್‌ಡೌನ್ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್‌ಗಳು ನಡೆಸುತ್ತಿವೆ. ಉತ್ತರಪ್ರದೇಶದ ಐದು ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಧಿಸುವಂತೆ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು. ಆದರೆ, ಬಳಿಕ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಹೈಕೋರ್ಟ್‌ನ ಆ ಆದೇಶಕ್ಕೆ ತಡೆ ನೀಡಿತ್ತು. ವಿವಿಧ ಹೈಕೋರ್ಟ್‌ಗಳಲ್ಲಿರುವ ವಿವಿಧ ಪ್ರಕರಣಗಳು ಗೊಂದಲಕ್ಕೆ ಕಾರಣವಾಗುತ್ತಿವೆ. ಹಾಗಾಗಿ, ಆಮ್ಲಜನಕ, ಅಗತ್ಯ ವಸ್ತುಗಳ ಪೂರೈಕೆ, ಲಸಿಕಾ ಕಾರ್ಯಕ್ರಮ ಮತ್ತು ಲಾಕ್‌ಡೌನ್ ವಿಧಿಸುವ ಅಧಿಕಾರಗಳ ಬಗ್ಗೆ ತಾನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಸುಪ್ರೀಂ ಕೋರ್ಟ್‌ನ ಈ ನಿರ್ಧಾರಕ್ಕೆ ಭಾರೀ ಟೀಕೆಯೂ ವ್ಯಕ್ತವಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಸುಪ್ರೀಂ ಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ದುಶ್ಯಂತ ದವೆ ದಿ ನ್ಯೂಸ್ ಮಿನಿಟ್ ಜೊತೆಗೆ ಮಾತನಾಡಿದ್ದಾರೆ.

ಪ್ರಶ್ನೆ: ದುಶ್ಯಂತ ದವೆಯವರೇ, ನಮಸ್ತೆ... ಈ ಪ್ರಕರಣಗಳನ್ನು ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್ ವಹಿಸಿಕೊಳ್ಳುವ ನಿರ್ಧಾರಕ್ಕೆ ನಿಮ್ಮ ಸಹಮತವಿಲ್ಲವೇ?

ದುಶ್ಯಂತ ದವೆ: ಸಹಮತವಿಲ್ಲ ಎನ್ನುವುದು ಅತ್ಯಂತ ಮೆದು ಭಾಷೆಯಾಯಿತು. ಸರಿಯಾಗಿ ಹೇಳಬೇಕೆಂದರೆ, ಈ ಪ್ರಕರಣಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸುಪ್ರೀಂ ಕೋರ್ಟ್‌ನ ಈ ನಡೆಯನ್ನು ನಾನು ವಿರೋಧಿಸುತ್ತೇನೆ. ಈ ವಿಷಯದಲ್ಲಿ ಹಲವು ತಿಂಗಳುಗಳ ಕಾಲ ಅಥವಾ ಬಹುತೇಕ ಒಂದು ವರ್ಷ ಮಲಗಿದ ಬಳಿಕ, ಪರಿಸ್ಥಿತಿ ಉಲ್ಬಣಗೊಂಡು ಹೈಕೋರ್ಟ್‌ಗಳು ಇಂಥ ಪ್ರಕರಣಗಳ ವಿಚಾರಣೆ ನಡೆಸುತ್ತಿರುವಾಗ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಸ್ವಯಂಪ್ರೇರಿತ ಗಮನ ಹರಿಸಿದೆ. ಹೈಕೋರ್ಟ್‌ಗಳು ಕೂಡ ಸುಪ್ರೀಂ ಕೋರ್ಟ್‌ನಂತೆಯೇ ಸಾಂವಿಧಾನಿಕ ನ್ಯಾಯಾಲಯಗಳಾಗಿವೆ. ವಾಸ್ತವವಾಗಿ, ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ಗಳಿಗಿಂತಲೂ ಹೆಚ್ಚಿನ ಅಧಿಕಾರಗಳನ್ನು ಹೊಂದಿವೆ. ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳನ್ನಷ್ಟೇ ಜಾರಿಗೊಳಿಸಬಹುದು. ಆದರೆ ಹೈಕೋರ್ಟ್‌ಗಳಿಗೆ ಮೂಲಭೂತ ಹಕ್ಕುಗಳ ಜೊತೆಗೆ ಕಾನೂನು ಹಕ್ಕುಗಳನ್ನೂ ಜಾರಿಗೊಳಿಸುವ ಅಧಿಕಾರವಿದೆ. ಹೈಕೋರ್ಟ್‌ಗಳಿಗೆ ತಮ್ಮ ರಾಜ್ಯಗಳಲ್ಲಿರುವ ಪರಿಸ್ಥಿತಿಯ ಅರಿವಿದೆ. ಹಾಗಾಗಿ, ಹೈಕೋರ್ಟ್ ಗಳು ತಮ್ಮ ರಾಜ್ಯಗಳ ನಾಗರಿಕರ ಮೂಲಭೂತ ಹಕ್ಕುಗಳು, ಬದುಕುವ ಹಕ್ಕುಗಳ ನಿಜವಾದ ಸಂರಕ್ಷಕ ಸಂಸ್ಥೆಗಳಾಗಿವೆ. ಕೆಲವು ಕಡೆ ಆಮ್ಲಜನಕ ಲಭ್ಯವಿಲ್ಲ. ಕೆಲವು ಕಡೆ ಲಸಿಕೆಗಳು ಲಭ್ಯವಿಲ್ಲ, ಕೆಲವು ಕಡೆ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿಲ್ಲ... ಇಂಥ ತುರ್ತು ಪರಿಸ್ಥಿತಿ ಇರುವಾಗ ಹೈಕೋರ್ಟ್‌ಗಳು ಮಧ್ಯಪ್ರವೇಶಿಸುತ್ತಿವೆ. ಈ ದೇಶದಲ್ಲಿ ಈಗ ಅರಾಜಕತೆಯಿದೆ. ಇಲ್ಲಿ ಯಾವುದೇ ರೀತಿಯ ಆಡಳಿತವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ವಾಸ್ತವವಾಗಿ, ಹೈಕೋರ್ಟ್‌ಗಳು ಕೂಡ ತುಂಬಾ ತಡವಾಗಿ ಈ ವಿಷಯವನ್ನು ಎತ್ತಿಕೊಂಡಿವೆ. ಅವುಗಳು ವಾರಗಳ ಹಿಂದೆಯೇ, ಅಂದರೆ ಜನವರಿ ಕೊನೆ ಅಥವಾ ಫೆಬ್ರವರಿ ಆರಂಭದಲ್ಲಿ ಈ ವಿಷಯದ ಬಗ್ಗೆ ಗಮನ ಹರಿಸಬೇಕಾಗಿತ್ತು. ಮುಂದೆ ಖಂಡಿತವಾಗಿಯೂ ಈ ದೇಶ ಎದುರಿಸಲಿದ್ದ ಬಿಕ್ಕಟ್ಟಿನ ಪೂರ್ವ ಸೂಚನೆಗಳು ಆಗಲೇ ಲಭ್ಯವಿದ್ದವು. ನ್ಯಾಯಾಲಯಗಳು ಸೇರಿದಂತೆ ಎಲ್ಲರೂ ಆಗ ಮಲಗಿದ್ದರು. ಅದಿರಲಿ, ಕೊನೆಗಾದರೂ ಹೈಕೋರ್ಟ್‌ಗಳು ಮಧ್ಯಪ್ರವೇಶಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಈಗ ಸುಪ್ರೀಂ ಕೋರ್ಟ್ ಈ ದೇಶಕ್ಕೆ ದೊಡ್ಡ ಹಾನಿಯನ್ನೇ ಮಾಡಿದೆ. ಯಾಕೆಂದು ನಾನು ಹೇಳುತ್ತೇನೆ. ಇದೇ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠವು, ಕಳೆದ ವರ್ಷ ವಲಸಿಗರ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಯೊಂದನ್ನು ಪುರಸ್ಕರಿಸಿತು. ಅದು ಸರಕಾರದ ಆಣತಿಯಂತೆ ಯಾರೋ ಸ್ವಹಿತಾಸಕ್ತಿಯಿಂದ ಸಲ್ಲಿಸಿದ್ದ ಅರ್ಜಿಯಾಗಿತ್ತು. ನ್ಯಾ. ಬೋಬ್ಡೆ ನೇತೃತ್ವದ ನ್ಯಾಯಪೀಠವು 24 ಗಂಟೆಯಲ್ಲಿ ಸರಕಾರಕ್ಕೆ ಸಂಪೂರ್ಣ ಕ್ಲೀನ್‌ಚಿಟ್ ನೀಡಿತು. ಯಾವುದೇ ವಲಸಿಗರ ಬಿಕ್ಕಟ್ಟೇ ಇಲ್ಲ, ಇವೆಲ್ಲಾ ಸುಳ್ಳು ಸುದ್ದಿಗಳು ಎಂಬುದಾಗಿ ನ್ಯಾಯಪೀಠ ಘೋಷಿಸಿತು. ಇದು ಸುಳ್ಳು ಸುದ್ದಿ ಎಂಬುದಾಗಿ ಸರಕಾರದ ಸಾಲಿಸಿಟರ್ ಜನರಲ್ ಹೇಳಿದರು ಹಾಗೂ ಸುಪ್ರೀಂ ಕೋರ್ಟ್ ಅದನ್ನು ಅಂಗೀಕರಿಸಿತು. ಅಷ್ಟಕ್ಕೇ ಮುಗಿಯಲಿಲ್ಲ. ಬಳಿಕ ಸುಪ್ರೀಂ ಕೋರ್ಟ್ ಜನರಿಗೆ ಎಚ್ಚರಿಕೆ ನೀಡಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಜಾರಿಯಲ್ಲಿದೆ. ಸರಕಾರ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳನ್ನು ನಾಗರಿಕರು ಅನುಸರಿಸದಿದ್ದರೆ ಆ ಕಾಯ್ದೆಯ ಅಡಿಯಲ್ಲಿ ಜನರನ್ನು ಶಿಕ್ಷಿಸಬಹುದು ಹಾಗೂ ಜೈಲಿಗೆ ಕಳುಹಿಸಬಹುದು ಎಂದು ಹೇಳಿತು. ಇದು ನಮ್ಮ ಸುಪ್ರೀಂ ಕೋರ್ಟ್. ಬಳಿಕ ಆಗಸ್ಟ್‌ನಲ್ಲಿ, ಸೆಂಟರ್ ಫಾರ್ ಪಬ್ಲಿಕ್ ಲಿಟಿಗೇಶನ್‌ನ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದರು. ನ್ಯಾಯಮೂರ್ತಿ ಭೂಷಣ್, ನ್ಯಾಯಮೂರ್ತಿ ರೆಡ್ಡಿ ಮತ್ತು ನ್ಯಾಯಮೂರ್ತಿ ಶಾ ಅವರಿದ್ದ ನ್ಯಾಯಪೀಠದ ಮುಂದೆ ನಾನು ವಾದಿಸಿದೆ. ಕೊರೋನ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಯಾವುದೇ ರಾಷ್ಟ್ರೀಯ ಯೋಜನೆಯಿಲ್ಲ ಎಂದು ನಾನು ಹೇಳಿದೆ. ದಯವಿಟ್ಟು ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸುವಂತೆ ಸರಕಾರಕ್ಕೆ ಸೂಚನೆ ನೀಡಿ, ಯಾಕೆಂದರೆ, ಕೋವಿಡ್ ಎನ್ನುವುದು ಅಸಾಧಾರಣ ಪರಿಸ್ಥಿತಿಯಾಗಿದೆ ಎಂಬುದಾಗಿ ನಾನು ಕೈಮುಗಿದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ. ಸಾಂಕ್ರಾಮಿಕವನ್ನು ತಡೆಯುವ, ಜನರಿಗೆ ಬೆಂಬಲ ನೀಡುವ ಹಾಗೂ ಪರಿಹಾರಕ್ಕೆ ಆದ್ಯತೆ ನೀಡುವ ರಾಷ್ಟ್ರೀಯ ಯೋಜನೆಯೊಂದನ್ನು ತಜ್ಞರೊಂದಿಗೆ ಸಮಾಲೋಚಿಸಿ ರೂಪಿಸಬೇಕು, ಇಲ್ಲದಿದ್ದರೆ ಈ ಸಾಂಕ್ರಾಮಿಕವನ್ನು ಎದುರಿಸಲು ನಮಗೆ ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಆದರೆ, ನಮ್ಮಲ್ಲಿ 2019ರ ಯೋಜನೆಯಿದೆ, ಅದೇ ಸಾಕು ಎಂಬುದಾಗಿ ಸರಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿತು. ಆದರೆ, ಅದನ್ನು ಯಾರಾದರೂ ಓದಿದರೆ, (ಆದರೆ, ಈ ದೇಶದಲ್ಲಿ ಅದನ್ನು ಯಾರೂ ಓದಿದಂತೆ ಕಾಣುವುದಿಲ್ಲ) ಅದರಲ್ಲಿ ಕೋವಿಡ್ ಅನ್ನುವ ಪದವೇ ಕಾಣಲು ಸಿಗುವುದಿಲ್ಲ. ಅದರಲ್ಲಿ ಅಲ್ಲಲ್ಲಿ ವೈರಸ್ ಎನ್ನುವ ಪದವೊಂದು ಕಾಣುತ್ತಿದೆ. ಬೇರೆ ಏನೂ ಇಲ್ಲ. ಆದರೆ, ಕೊರೋನ ವೈರಸ್‌ನಂಥ ಬೃಹತ್ ಸಾಂಕ್ರಾಮಿಕವನ್ನು ಎದುರಿಸಲು ಆ ಯೋಜನೆ ಸಾಕಾಗುವುದಿಲ್ಲ ಹಾಗೂ ಸಾಧ್ಯವಾಗುವುದಿಲ್ಲ. ಆ ಹಂತದಲ್ಲೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ರಾಷ್ಟ್ರೀಯ ಕೋವಿಡ್ ಯೋಜನೆಯೊಂದನ್ನು ರೂಪಿಸಲು ಸರಕಾರಕ್ಕೆ ಗಂಭೀರ ಸೂಚನೆ ನೀಡಿದ್ದರೆ, ಈಗ ನಾವು ಎದುರಿಸುತ್ತಿರುವ ಈ ಹತಾಶ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತು. ಹಾಗಾಗಿ, ಕೊರೋನ ವೈರಸ್ ಸಾಂಕ್ರಾಮಿಕ ನಿರ್ವಹಣೆಯ ವೈಫಲ್ಯದ ಹೊಣೆ ಸರಕಾರದ ಮೇಲೆ ಮಾತ್ರವಲ್ಲ, ಸುಪ್ರೀಂ ಕೋರ್ಟ್ ಮೇಲೂ ಇದೆ.

ಪ್ರಶ್ನೆ: ದವೆಯವರೇ, ಈಗ ನೀವು ಹೇಳಿದಿರಿ ದೇಶದಲ್ಲಿ ಅರಾಜಕತೆಯಿದೆ ಎಂದು. ಇದು ಅತ್ಯಂತ ಗಂಭೀರ ಆರೋಪವಾಗಿದೆ. ಯಾಕೆ ಅರಾಜಕತೆಯಿದೆ ಎಂದು ವಿವರಿಸಬಹುದೇ?

ದುಶ್ಯಂತ ದವೆ: ಇಂದು ಎಲ್ಲಿದೆ ಆಡಳಿತ? ನೀವು ಹೇಳುತ್ತೀರಿ... ಆದರೆ, ಜನರ ಸಂಕಟವನ್ನೊಮ್ಮೆ ನೋಡಿ... ದೇಶಾದ್ಯಂತದ ನಗರಗಳು, ಹಳ್ಳಿಗಳ ಪ್ರತಿಯೊಂದು ಆಸ್ಪತ್ರೆಗಳಲ್ಲಿ ಜನರ ಪರಿಸ್ಥಿತಿಯನ್ನೊಮ್ಮೆ ನೋಡಿ. ಅವರು ರಸ್ತೆಗಳಲ್ಲಿದ್ದಾರೆ ಹಾಗೂ ತಮ್ಮ ಆರೈಕೆಯನ್ನು ತಾವೇ ಮಾಡಬೇಕಾದ ಪರಿಸ್ಥಿತಿಗೆ ಒಳಗಾಗಿದ್ದಾರೆ. ಜನರು ತಮ್ಮ ಕುಟುಂಬ ಸದಸ್ಯರ ಜೊತೆಗೆ ಕುಳಿತು ಅಳುತ್ತಿದ್ದಾರೆ. ತಮ್ಮನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿಕೊಳ್ಳಿ ಎಂದು ಅವರು ಅಂಗಲಾಚುತ್ತಿದ್ದಾರೆ. ನಮಗೆ ಆಮ್ಲಜನಕ ಕೊಡಿ ಎಂದು ಬೇಡುತ್ತಿದ್ದಾರೆ, ನಮಗೆ ವೆಂಟಿಲೇಟರ್ ಕೊಡಿ, ನಮಗೆ ಲಸಿಕೆ ಕೊಡಿ, ನಮಗೆ ಆಂಬುಲೆನ್ಸ್ ಕೊಡಿ ಎಂದು ಬೇಡುತ್ತಿದ್ದಾರೆ. ಕೊನೆಗೆ ತಮ್ಮವರ ಶವಸಂಸ್ಕಾರ ಮಾಡಿ ಎಂದೂ ಬೇಡಿಕೊಳ್ಳುತ್ತಿದ್ದಾರೆ. ಇದು ಏನನ್ನು ತೋರಿಸುತ್ತದೆ? ಸರಕಾರ ಅವರ ನೆರವಿಗೆ ಬರಲು ವಿಫಲವಾಗಿದೆ ಎನ್ನುವುದನ್ನು ಇದು ತೋರಿಸುತ್ತಿದೆ. ಇದು ಅರಾಜಕತೆಯ ಲಕ್ಷಣಗಳಾಗಿವೆ. ಒಮ್ಮೆ ಇತ್ತ ಗಮನಹರಿಸಿ- ಆಮ್ಲಜನಕ ಟ್ಯಾಂಕರ್‌ಗಳನ್ನು ದೋಚಲಾಗುತ್ತಿದೆ. ಕೋವಿಡ್ ಲಸಿಕೆಗಳನ್ನು ಕದಿಯಲಾಗುತ್ತಿದೆ. ನಮ್ಮದು ಯಾವ ರೀತಿಯ ದೇಶ? ಈ ದೇಶದಲ್ಲಿ ಆಡಳಿತ ಯಂತ್ರ ಮತ್ತು ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಆದರೆ, ನಾನು ಇಲ್ಲಿ ಪೊಲೀಸರನ್ನು ದೂರುವುದಿಲ್ಲ. ಯಾಕೆಂದರೆ, ಅವರು ಒಂದು ವರ್ಷದಿಂದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ನಾವು ನಮ್ಮನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸಿಕೊಂಡಿದ್ದೇವೆ. ಪೊಲೀಸರನ್ನು ಎಲ್ಲ ರೀತಿಯ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಅವರು ನಿಂತುಕೊಂಡೇ ಇರುವಂತೆ ಮಾಡಲಾಗಿದೆ. ಅವರು ಈ ಅವಧಿಯಲ್ಲಿ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ. ಅದೇ ರೀತಿ ನಮ್ಮ ವೈದ್ಯರು, ನರ್ಸ್‌ಗಳು, ಆಸ್ಪತ್ರೆ ಸಿಬ್ಬಂದಿ, ನಮ್ಮ ನೈರ್ಮಲ್ಯ ಕೆಲಸಗಾರರು- ಎಲ್ಲರೂ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ, ಈಗ ನಾವು ಹಿಂದೆಂದೂ ಕಂಡಿರದಂಥ ಕಠಿಣ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಈ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಯ ಪರಿಸ್ಥಿತಿಯ ಬಗ್ಗೆ ಯಾರಾದರೂ ಯೋಚಿಸಿದ್ದಾರಾ? ಅವರಿಗೆ ಯಾರು ಸಹಾಯ ಮಾಡುತ್ತಾರೆ? ಇಂದು ಒಬ್ಬನೇ ಒಬ್ಬ ಸಚಿವ ಇಂಥ ಆಸ್ಪತ್ರೆಗಳಿಗೆ ಭೇಟಿ ನೀಡಿರುವುದನ್ನು ನೀವು ನೋಡಿದ್ದೀರಾ? ಜನರನ್ನು ಉದ್ದೇಶಿಸಿ ಮನ್ ಕಿ ಬಾತ್ ಹೇಳಲು ಇಷ್ಟಪಡುವ ನಮ್ಮ ಶ್ರೇಷ್ಠ ಪ್ರಧಾನಿ, ಆಸ್ಪತ್ರೆಗೆ ಬಂದು ಇಲ್ಲಿ ಏನಾಗಿದೆ ಎನ್ನುವುದನ್ನು ನಾನು ನೋಡುತ್ತೇನೆ. ಇಲ್ಲಿಗೆ ಬೇಕಾದ ವ್ಯವಸ್ಥೆಗಳನ್ನು ನಾನು ಮಾಡುತ್ತೇನೆ ಎಂದು ಹೇಳಿರುವುದನ್ನು ನೋಡಿದ್ದೀರಾ? ಈ ದೇಶದಲ್ಲಿ ಸಂಪೂರ್ಣ ಅರಾಜಕತೆ ನೆಲೆಸಿದೆ.

ಪ್ರಶ್ನೆ: ವಿವಿಧ ಹೈಕೋರ್ಟ್‌ಗಳು ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬೇರೆ ಬೇರೆಯಾಗಿ ನೋಡುವುದರಿಂದ ಗೊಂದಲ ಏರ್ಪಡುವ ಸಾಧ್ಯತೆಯಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಭಾವಿಸಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದರೆ, ರಾಷ್ಟ್ರ ಮಟ್ಟದಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಸಹಾಯವಾಗುವುದಿಲ್ಲವೇ? ನೀವೇ ಹೇಳಿದಂತೆ, ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಾಗಬಹುದು ಹಾಗೂ ಸುಪ್ರೀಂ ಕೋರ್ಟ್ ಮೂಲಕ ನಮಗೆ ರಾಷ್ಟ್ರೀಯ ಕೋವಿಡ್ ಯೋಜನೆಯೊಂದು ಲಭಿಸಬಹುದು...

ದುಶ್ಯಂತ ದವೆ: ಸುಪ್ರೀಂ ಕೋರ್ಟ್ ನ ಈ ಮಾತುಗಳು ತಮಾಷೆಯಾಗಿವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬೋಬ್ಡೆ, 2020, ಆಗಸ್ಟ್‌ನಲ್ಲಿ ಸಹ ನ್ಯಾಯಾಧೀಶರು ನೀಡಿರುವ ತೀರ್ಪನ್ನು ಓದಿದ್ದಾರೆ ಎಂದು ನನಗನಿಸುವುದಿಲ್ಲ. ಅದು 20 ಪುಟಗಳ ತೀರ್ಪು. ರಾಷ್ಟ್ರೀಯ ಕೋವಿಡ್ ಯೋಜನೆಯ ಅಗತ್ಯದ ಬಗ್ಗೆ ನಾವು ಅಂದು ವಿವರವಾಗಿ ವಾದಿಸಿದ್ದೆವು. ಆದರೆ, ಈ ಸುಪ್ರೀಂ ಕೋರ್ಟ್ ಅದನ್ನು ತಿರಸ್ಕರಿಸಿತು. ನ್ಯಾಯಮೂರ್ತಿ ಬೋಬ್ಡೆ, ಆ ಪ್ರಕರಣವನ್ನು ಆ ಪೀಠಕ್ಕೆ ಕಳುಹಿಸಿದ್ದರು. ಅವರು ರಾಜಕೀಯ ಮಹತ್ವವಿರುವ ಪ್ರಕರಣಗಳನ್ನು ತನಗೆ ಬೇಕಾದಂತೆ ನಿರ್ದಿಷ್ಠ ಪೀಠಗಳಿಗೆ ಕಳುಹಿಸುತ್ತಾರೆ. ಒಂದು ವೇಳೆ, ನಮ್ಮ ಅರ್ಜಿಯನ್ನು ಸ್ವತಂತ್ರ ಪೀಠವೊಂದಕ್ಕೆ ಕಳುಹಿಸಿದ್ದರೆ, ಅದರ ನ್ಯಾಯಾಧೀಶರು ನಮ್ಮ ಬೇಡಿಕೆಗಳನ್ನು ಮುಕ್ತವಾಗಿ ಅಂಗೀಕರಿಸುತ್ತಿದ್ದರು ಎಂಬುದಾಗಿ ನಾನು ಪ್ರಮಾಣ ಮಾಡುತ್ತೇನೆ. ನ್ಯಾಯಮೂರ್ತಿ ನಾರಿಮನ್ ಮುಂತಾದ ಹಲವು ನ್ಯಾಯಾಧೀಶರು ಖಂಡಿತವಾಗಿಯೂ ನಾವು ಹೇಳುವುದನ್ನು ತಾಳ್ಮೆಯಿಂದ ಆಲಿಸುತ್ತಿದ್ದರು. ಹಾಗೂ, ಹೌದು ಮಿಸ್ಟರ್ ದವೆ, ಮಿಸ್ಟರ್ ಭೂಷಣ್.. ನಿಮ್ಮ ವಾದದಲ್ಲಿ ಅರ್ಥವಿದೆ. ಇದು ಖಂಡಿತವಾಗಿಯೂ ನಾವು ಗಂಭಿರವಾಗಿ ಪರಿಶೀಲಿಸಬೇಕಾದ ವಿಚಾರವಾಗಿದೆ ಎಂಬುದಾಗಿ ಖಂಡಿತವಾಗಿಯೂ ಹೇಳುತ್ತಿದ್ದರು. ಅಂದು ಸರಕಾರ ವಾಸ್ತವಿಕವಾಗಿ ಸುಪ್ರೀಂ ಕೋರ್ಟನ್ನು ತಿರಸ್ಕಾರದಿಂದ ನಡೆಸಿಕೊಂಡಿತು. ನನಗೆ ಚೆನ್ನಾಗಿ ನೆನಪಿದೆ. ಅಂದು ವಿಚಾರಣೆಯ ವೇಳೆ ನಾವು ವಾದ ಮಾಡುತ್ತಿದ್ದಾಗ, ನ್ಯಾಯಮೂರ್ತಿ ಭೂಷಣ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರಿಗೆ ಹೇಳಿದರು: ನಿಮ್ಮ ಅಫಿಡವಿಟ್ ಅಪೂರ್ಣವಾಗಿದೆ, ಸರಿಯಾದ ಅಫಿಡವಿಟ್ ಸಲ್ಲಿಸಿ. ಅದಕ್ಕೆ ಪ್ರತಿಕ್ರಿಯಿಸಿದ ಮೆಹಾತಿ, ಅದೇನಿದ್ದರೂ ಅದು ನನ್ನ ಅಫಿಡವಿಟ್. ನಾನು ಬೇರೆ ಅಫಿಡವಿಟ್ ಸಲ್ಲಿಸುವುದಿಲ್ಲ ಎಂದು ಹೇಳಿದರು. ನ್ಯಾಯಾಧೀಶರು ಅದನ್ನು ಮರುಮಾತನಾಡದೆ ಸ್ವೀಕರಿಸಿದರು. ಹಾಗೂ ತೀರ್ಪು ನೀಡಿದರು. ಈಗ ಮುಖ್ಯ ನ್ಯಾಯಾಧೀಶರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ? ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನಿನ ಬಗ್ಗೆ ಅವರಿಗೆ ತಿಳಿದಿಲ್ಲವೇ? ಅವರು ಅದನ್ನು ಮೀರಿ ಹೋಗಲು ಸಾಧ್ಯವಿಲ್ಲ. ಇಂದಿನ ವಿಚಾರಣೆಯನ್ನು ನೋಡಿ ನನಗೆ ತಮಾಷೆ ಎನಿಸುತ್ತಿದೆ. ಈಗ ಮುಖ್ಯ ನ್ಯಾಯಾಧೀಶರು ನಿದ್ದೆಯಿಂದ ಎದ್ದು, ಇಲ್ಲ, ಇದರಿಂದ ಗೊಂದಲ ಏರ್ಪಡುವ ಸಾಧ್ಯತೆಯಿದೆ ಎಂದು ಹೇಳುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಗೊಂದಲ ಇರುವುದು ಸುಪ್ರೀಂ ಕೋರ್ಟ್‌ನ ಮನಸ್ಸಿನಲ್ಲಿ ಮಾತ್ರ ಎಂಬುದಾಗಿ ನಾನು ಗೌರವಪೂರ್ವಕವಾಗಿ ಹೇಳುತ್ತೇನೆ.

ಪ್ರಶ್ನೆ: ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಆಯಾಯ ರಾಜ್ಯಗಳ ಹೈಕೋರ್ಟ್‌ಗಳು ಹೆಚ್ಚಿನ ತಿಳುವಳಿಕೆಯನ್ನು ಹೊಂದಿವೆ, ಹಾಗಾಗಿ ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅವುಗಳು ಕ್ಷಿಪ್ರವಾಗಿ ತೀರ್ಪು ನೀಡಬಹುದು ಎಂಬ ವಾದವಿದೆ. ಅದೂ ಅಲ್ಲದೆ, ಇಂಥ ವಿಷಯಗಳಲ್ಲಿ ತೀರ್ಪು ನೀಡಲು ಸುಪ್ರೀಂ ಕೋರ್ಟ್ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದಾಗಿದೆ...

ದುಶ್ಯಂತ ದವೆ: ಮೊದಲನೆಯದಾಗಿ, ಸುಪ್ರೀಂ ಕೋರ್ಟ್ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅದರ ಇತಿಹಾಸವನ್ನು ನೋಡಿದರೆ, ಅದರ ನಿರ್ಧಾರಗಳು ಸರಕಾರದ ಪರವಾಗಿರುತ್ತವೆ. ವಲಸಿಗ ಕಾರ್ಮಿಕರ ಬಿಕ್ಕಟ್ಟು ಏನೂ ಇಲ್ಲ, ಅವೆಲ್ಲ ಸುಳ್ಳು ಸುದ್ದಿ ಆಧಾರಿತ ಬಿಕ್ಕಟ್ಟು ಎಂಬುದಾಗಿ ಮುಖ್ಯ ನ್ಯಾಯಾಧೀಶ ಬೋಬ್ಡೆ ಹಿಂದೆ ಘೋಷಿಸಿದ್ದಾರೆ. ಅದೇ ರೀತಿ, ಆಮ್ಲಜನಕ ಬಿಕ್ಕಟ್ಟು ಅಂತ ಏನೂ ಇಲ್ಲ. ಅವೆಲ್ಲ ಸುಳ್ಳು ಸುದ್ದಿ ಆಧರಿತ ಎಂದು ಕೂಡ ನಾಳೆ ಅವರು ಘೋಷಿಸಬಹುದು. ಸುಪ್ರೀಂ ಕೋರ್ಟ್ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ನಾನು ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ನಾನು ಈ ಸಂಸ್ಥೆಯನ್ನು ಪ್ರೀತಿಸುತ್ತೇನೆ. ನಾನು 42 ವರ್ಷ ವಕೀಲನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ನ್ಯಾಯಾಂಗಕ್ಕೆ ಸೇರಿದವನಾಗಿದ್ದೇನೆ. ನನ್ನ ತಂದೆ ನ್ಯಾಯಾಧೀಶರಾಗಿದ್ದರು. ಆದರೆ, ನಾನು ಈ ನ್ಯಾಯಾಧೀಶರಿಗೆ ಗೌರವ ನೀಡುತ್ತಲೇ ಒಂದು ಮಾತನ್ನು ಹೇಳಬೇಕಾಗಿದೆ. ಅವರು ಯಾವ ರೀತಿ ನಡೆದುಕೊಂಡಿದ್ದಾರೆಂದರೆ, ಅವರು ನಮ್ಮಿಂದ ಗೌರವವನ್ನು ಕೇಳುವ ಎಲ್ಲ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಸಾಮಾನ್ಯ ಪರಿಸ್ಥಿತಿಯಲ್ಲಾದರೆ, ಹೈಕೋರ್ಟ್‌ಗಳ ತೀರ್ಪುಗಳು ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶಕ್ಕೆ ಅರ್ಹವಾಗಿದ್ದವು ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ. ಆದರೆ, ಪರಿಸ್ಥಿತಿ ಈಗ ಹಾಗಿಲ್ಲ. ಈಗ ಹೈಕೊರ್ಟ್‌ಗಳು ತಮ್ಮ ರಾಜ್ಯಗಳಲ್ಲಿ ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿವೆ. ಅದನ್ನು ಮಾಡಲು ಅವುಗಳಿಗೆ ಅವಕಾಶ ನೀಡಬೇಕು. ಅವುಗಳ ಪ್ರಯತ್ನಗಳಿಂದಾಗಿ ಒಂದು ಜೀವವನ್ನಾದರೂ ಉಳಿಸಲು ಸಾಧ್ಯವಾದರೆ, ದಿಲ್ಲಿ ಹೈಕೋರ್ಟ್ ನ ಮಧ್ಯಪ್ರವೇಶದಿಂದಾಗಿ ಒಂದು ಜೀವವನ್ನಾದರೂ ಉಳಿಸಲು ಸಾಧ್ಯವಾದರೆ, ಅದು ಒಳ್ಳೆಯದು. ಸುಪ್ರೀಂ ಕೋರ್ಟ್ ಅದನ್ನು ನಿಲ್ಲಿಸಲು ಹೊರಟಿದೆಯೇ? ಆಮ್ಲಜನಕದ ಕೊರತೆಯಿಂದಾಗಿ ದಿಲ್ಲಿಯಲ್ಲಿ ಜನರನ್ನು ಸಾಯಲು ಬಿಡಲಿದೆಯೇ? ಸುಪ್ರೀಂ ಕೋರ್ಟ್ ಏನು ಮಾಡಲು ಬಯಸಿದೆ? ಇವತ್ತು ಯಾಕೆ? ನಾನು ಸುಪ್ರೀಂ ಕೋರ್ಟನ್ನು ಕೇಳಬೇಕು.. ನಾನು ಮುಖ್ಯ ನ್ಯಾಯಾಧೀಶ ಬೋಬ್ಡೆಯನ್ನು ನೇರವಾಗಿ ಕೇಳಬೇಕು.. ನೀವು ಈವರಗೆ ಏನು ಮಾಡುತ್ತಿದ್ದೀರಿ? ನೀವು ತಿಂಗಳುಗಳ ಕಾಲ ಟಾಟಾ ಮತ್ತು ಸೈರಸ್ ಮಿಸ್ತ್ರಿ ನಡುವಿನ ವ್ಯಾಜ್ಯದ ವಿಚಾರಣೆ ನಡೆಸುತ್ತಿದ್ದಿರಿ. ಕೋವಿಡ್-19 ಅವಧಿಯಲ್ಲಿ ತೀರ್ಮಾನಿಸಿ ಟಾಟಾಗಳ ಪರವಾಗಿ ತೀರ್ಪು ನೀಡಬೇಕಾದಂಥ ಪ್ರಕರಣವಾಗಿತ್ತೇ ಅದು? ಆ ಪ್ರಕರಣದಲ್ಲಿ ಹರೀಶ್ ಸಾಳ್ವೆ ಟಾಟಾಗಳ ಪರವಾಗಿ ವಾದಿಸಿ ಗೆದ್ದಿದ್ದಾರೆ. ಅದು ನೀವು ಅಗತ್ಯವಾಗಿ ತೀರ್ಮಾನಿಸಬೇಕಾಗಿದ್ದ ಪಕ್ರರಣವಾಗಿತ್ತೇ? ಅಥವಾ ನೀವು ಉಪೇಕ್ಷಿಸಿದ ಅದಕ್ಕಿಂತ ತುಂಬಾ ಮಹತ್ವದ ಪ್ರಕರಣಗಳ ವಿಚಾರಣೆಯನ್ನು ಮಾಡಬೇಕಾಗಿತ್ತೇ? ನೀವು 370, ಸಿಎಎ ಪ್ರಕರಣಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಜೈಲುಗಳಲ್ಲಿ ಕೊಳೆಯುತ್ತಿರುವ ಸಾವಿರಾರು ನಾಗರಿಕರ ಜಾಮೀನು ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ. ಸರಕಾರದ ಕೋವಿಡ್ ಸಿದ್ಧತೆಗಳ ಬಗ್ಗೆ ನೀವು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ, ನೀವು ಒಮ್ಮೆಲೆ ಈ ದೈತ್ಯ ಕಾರ್ಪೊರೇಟ್ ಸಂಸ್ಥೆಯ ಪ್ರಕರಣದ ವಿಚಾರಣೆ ನಡೆಸುತ್ತೀರಿ. ಮತ್ತೆ ಈಗ ಹೇಳುತ್ತೀರಿ, ಯಾವುದೋ ವಿಷಯದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಬೇಕಾಗಿದೆ ಎನ್ನುತ್ತೀರಿ. ನಾನು ಗೌರವವಿಟ್ಟುಕೊಂಡು ಹೇಳುತ್ತಿದ್ದೇನೆ- ಇಂದು (ಗುರುವಾರ) ಸುಪ್ರೀಂ ಕೋರ್ಟ್ ಏನು ಮಾಡಿದೆಯೋ ಆ ಮೂಲಕ ನಿಜವಾಗಿಯೂ ದೊಡ್ಡ ತಪ್ಪು ಮಾಡಿದೆ ಎಂದು ನನಗನಿಸುತ್ತಿದೆ.

ಪ್ರಶ್ನೆ: ಈ ನಿರ್ದಿಷ್ಟ ಪ್ರಕರಣದಲ್ಲಿ ಹರೀಶ್ ಸಾಳ್ವೆಯನ್ನು ನ್ಯಾಯಾಲಯ

Writer - ಸಂದರ್ಶನ: ಫೇ ಡಿಸೋಝ

contributor

Editor - ಸಂದರ್ಶನ: ಫೇ ಡಿಸೋಝ

contributor

Similar News