ಭಾರತಕ್ಕೆ ʼಉಸಿರಾಡಿಸಲುʼ ಸಾಧ್ಯವಾಗುತ್ತಿಲ್ಲ

Update: 2021-04-25 15:48 GMT

ಭಾರತವಿಂದು ಐಸಿಯುನಲ್ಲಿದೆ ಮತ್ತು ಅದನ್ನು ಅಲ್ಲಿ ಸೇರುವಂತೆ ಮಾಡಿದವರು ಈಗ ಆ ಹೊಣೆಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಕೋವಿಡ್ ಮೇಲಿನ ‘ವಿಜಯ’ದಿಂದ ಆಮ್ಲಜನಕಕ್ಕಾಗಿ ಹಾಹಾಕಾರಕ್ಕೆ ಬದಲಾವಣೆಯು ಈ ವರ್ಷದ ಜನವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತವು ಸಾಂಕ್ರಾಮಿಕವನ್ನು ಸೋಲಿಸಿದ್ದು ಮಾತ್ರವಲ್ಲ,ಇತರ ದೇಶಗಳಿಗೂ ಸ್ಫೂರ್ತಿಯಾಗಿದೆ ಎಂದು ಹೆಮ್ಮೆಯಿಂದ ಘೋಷಿಸಿದಾಗಲೇ ಆರಂಭಗೊಂಡಿತ್ತು. 

ಈ ಘೋಷಣೆಯ ಬಳಿಕ ಮೋದಿಯವರು ಅಗತ್ಯವುಳ್ಳ ದೇಶಗಳಿಗೆ ಲಸಿಕೆ ರಫ್ತಿನ ಉಸ್ತುವಾರಿಯನ್ನು ಖುದ್ದಾಗಿ ನೋಡಿಕೊಂಡಿದ್ದರು ಮತ್ತು ಅವರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ಬಗ್ಗೆ ಸಾಕಷ್ಟು ಬಡಾಯಿಯನ್ನು ಕೊಚ್ಚಿಕೊಂಡಿತ್ತು. ಈ ‘ವಿಜಯ’ದ ಬಳಿಕ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಮಾಸ್ಕ್ಗಳನ್ನು ಧರಿಸದೆ ಮತ್ತು ಜನರ ಭಾರೀ ಗುಂಪುಗಳು ಸೇರಲು ಪ್ರಚೋದಿಸುತ್ತ ಪಶ್ಚಿಮ ಬಂಗಾಳ ಮತ್ತು ಅಸ್ಸಾಮಗಳಲ್ಲಿ ಬಿರುಸಿನ ಚುನಾವಣಾ ರ್ಯಾಲಿಗಳನ್ನು ಸಂಘಟಿಸುತ್ತ ತಮ್ಮ ಸಮಯವನ್ನು ಕಳೆದಿದ್ದರು.

ಚುನಾವಣಾ ಆಯೋಗವು ಇದನ್ನು ನಡೆಯಲು ಏಕೆ ಅವಕಾಶ ನೀಡಿತ್ತು ಎನ್ನುವುದು ಬೇರೆಯೇ ಕಥೆ. ವರ್ಷದ ಇದೇ ಸಮಯದಲ್ಲಿ ಆರಂಭಗೊಂಡಿದ್ದ ಕುಂಭಮೇಳಕ್ಕೆ ತಾವು ನಿರಾಳತೆಯಿಂದ ತೆರಳಬಹುದು ಮತ್ತು ಪರ್ವತ ಪ್ರದೇಶಗಳಲ್ಲಿಯ ಮಂದಿರಗಳಿಗೆ ಯಾತ್ರೆಗಳನ್ನು ಹಮ್ಮಿಕೊಳ್ಳಬಹುದು ಎಂಬ ಸಂದೇಶವನ್ನು ಸಾಮಾನ್ಯ ಜನರು ತಮ್ಮ ನಾಯಕರ ಉದಾಹರಣೆಗಳಿಂದ ಪಡೆದಿದ್ದರು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಬೃಹತ್ ಚುನಾವಣಾ ರ್ಯಾಲಿಗಳಿಗೆ ಅವಕಾಶ ನೀಡುವುದು ತಪ್ಪು ಎಂದು ಪ್ರತಿಪಕ್ಷ ನಾಯಕರು ಹೇಳಿದಾಗ ಅವರೆಲ್ಲ ರಾಜಕೀಯದ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರರು ದಾಳಿ ನಡೆಸಿದ್ದರು. 

ಪ.ಬಂಗಾಳ ಚುನಾವಣೆಯ ಹಲವಾರು ಹಂತಗಳ ನಡುವೆ ಸರಣಿ ಟಿವಿ ಸಂದರ್ಶನಗಳನ್ನು ನೀಡಿದ್ದ ಮತ್ತು ಬಿಜೆಪಿ ಗೆಲ್ಲುತ್ತದೆ ಎನ್ನುವುದು ಗೊತ್ತಿರುವುದರಿಂದ ಪ್ರತಿಪಕ್ಷ ನಾಯಕರು ಪ.ಬಂಗಾಳದಲ್ಲಿ ರ್ಯಾಲಿಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿ ಸಂದರ್ಶನದಲ್ಲಿಯೂ ಪುನರುಚ್ಚರಿಸಿದ್ದ ಅಮಿತ್ ಶಾ ಅವರಿಂದ ಈ ವಕ್ತಾರರು ಪ್ರೇರಣೆಯನ್ನು ಪಡೆದಿದ್ದರು. ಅಸ್ಸಾಂ ಚುನಾವಣೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರೇಕೆ ದೂರಿಕೊಂಡಿರಲಿಲ್ಲ ಎಂದೂ ಅವರು ಪ್ರಶ್ನಿಸಿದ್ದರು.

 ಕೊರೋನವೈರಸ್ನ ಎರಡನೇ ಅಲೆಯ ಸಾಧ್ಯತೆಯ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ವೈದ್ಯರು ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸಿದಾಗ ತಮ್ಮ ಶರೀರವಿಡೀ ಧಿಮಾಕನ್ನು ತುಂಬಿಕೊಂಡಿರುವ ಸರಕಾರದಲ್ಲಿನ ಉನ್ನತ ಅಧಿಕಾರಿಗಳು ಅವರನ್ನು ಕಡೆಗಣಿಸಿದ್ದರು. ಪರಿಸ್ಥಿತಿಯ ಕೆಟ್ಟ ನಿರ್ವಹಣೆಗೆ ಈ ಅಧಿಕಾರಿಗಳು ಹೊಣೆಯಾಗಿದ್ದಾರೆ ಮತ್ತು ತಮ್ಮ ಹುದ್ದೆಗಳಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಕೇಂದ್ರಿಯವಾಗಿ ಯೋಜಿತ ರೀತಿಯಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಡುವುದು ಅವರ ಕಾರ್ಯತಂತ್ರವಾಗಿತ್ತು. ಈಗ ಇದೇ ಅಧಿಕಾರಿಗಳು ದಿಲ್ಲಿ ಮತ್ತು ಮುಂಬೈನ ಪ್ರಮುಖ ಆಸ್ಪತ್ರೆಗಳಲ್ಲಿ ನಾವು ನೋಡುತ್ತಿರುವ ಆಮ್ಲಜನಕದ ತೀವ್ರ ಕೊರತೆಗೆ ರಾಜ್ಯ ಸರಕಾರಗಳನ್ನು ದೂರುತ್ತಿದ್ದಾರೆ. ಅವರ ಕಾರ್ಯತಂತ್ರ ಎಷ್ಟೊಂದು ದೋಷಪೂರ್ಣವಾಗಿತ್ತೆಂದರೆ ಇಂದು ಇತರ ಯಾವುದೇ ದೇಶಕ್ಕಿಂತ ಹೆಚ್ಚು ದೈನಂದಿನ ಹೊಸ ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ. ಸಾವಿನ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು ಚಿತಾಗಾರಗಳ ಹೊರಗೆ ಶವಗಳೊಂದಿಗೆ ಉದ್ದನೆಯ ಸರದಿ ಸಾಲುಗಳಿವೆ,ಸ್ಮಶಾನಗಳಲ್ಲಿ ಶವವನ್ನು ಹೂಳಲೂ ಜಾಗವಿಲ್ಲದಂತಾಗಿದೆ.

ಈಗಿನ ಬೆಳವಣಿಗೆಗಳ ಭೀಕರತೆಯು ಕೊನೆಗೂ ಮೋದಿಯವರ ‘ಇಕೋ ಚೇಂಬರ್ ’ನ್ನು ಭೇದಿಸಿರುವಂತಿದೆ ಮತ್ತು ಕಳೆದ ವಾರ ಅವರು ಸರಣಿ ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ವಿದೇಶಿ ಲಸಿಕೆಗಳ ಆಮದಿಗೆ ಅನುಮತಿ ನೀಡುವ ಮೂಲಕ ತನ್ನ ‘ಆತ್ಮನಿರ್ಭರ’ ಘೋಷಣೆಯ ಸಮಯ ಸರಿಯಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಅಗತ್ಯ ಕಚ್ಚಾ ಸಾಮಗ್ರಿಗಳು ಇತರ ದೇಶಗಳಿಂದಲೇ ಬರಬೇಕಿರುವುದರಿಂದ ಅದು ದೋಷಪೂರ್ಣವೂ ಆಗಿತ್ತು. ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ ತಡವಾಗಿಯಾದರೂ ಮೋದಿ ಪ.ಬಂಗಾಳದಲ್ಲಿ ತನ್ನ ಚುನಾವಣಾ ರ್ಯಾಲಿಗಳನ್ನು ರದ್ದುಪಡಿಸಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಮ್ಲಜನಕ ಪೂರೈಕೆದಾರರೊಂದಿಗೆ ಸರಣಿ ಸಭೆಗಳನ್ನೂ ನಡೆಸಿದ್ದಾರೆ. ಆದರೆ ಇವುಗಳಿಂದ ಹೊರಹೊಮ್ಮುವ ಯಾವುದೇ ನೂತನ ಕಾರ್ಯತಂತ್ರವು ಪರಿಣಾಮಕಾರಿಯಾಗಲು ಹಲವಾರು ತಿಂಗಳುಗಳು ಬೇಕಾಗುತ್ತವೆ. ಆ ವೇಳೆಗೆ ಇನ್ನೂ ಬಹಳಷ್ಟು ಭಾರತೀಯರು ಸಾವಿನ ಮನೆಯನ್ನು ಸೇರಿರುತ್ತಾರೆ.

ತನ್ನ ಅಧಿಕಾರಿಗಳ ಅಪರಾಧಿಕ ಕೆಟ್ಟ ನಿರ್ವಹಣೆಯ ಪರಿಣಾಮವಾಗಿರುವ ಭಯಂಕರ ಸ್ಥಿತಿಯ ಬಗ್ಗೆ ಮೋದಿಯವರಿಗೆ ಈಗ ಸಂಪೂರ್ಣ ಅರಿವಾಗಿರಬಹುದೇನೋ,ಆದರೆ ಅವರ ಸಚಿವರು,ಭಟ್ಟಂಗಿಗಳು ಮತ್ತು ಬಿಜೆಪಿ ವಕ್ತಾರರು ಈಗಲೂ ರವಾನಿಸುತ್ತಿರುವ ಸಂದೇಶಗಳು ಉದ್ಧಟಪೂರ್ವಕವಾಗಿಯೇ ಮುಂದುವರಿದಿವೆ. ಸಾಂಕ್ರಾಮಿಕವನ್ನು ನಿರ್ವಹಿಸಿದ ನಮ್ಮ ಕಾರ್ಯತಂತ್ರವು ತಪ್ಪಾಗಿದ್ದರಿಂದಲೇ ಭಾರತವೀಗ ಐಸಿಯುನಲ್ಲಿದೆ ಎಂದು ಯಾರಾದರೂ ಧೈರ್ಯದಿಂದ ಹೇಳಿದರೆ ಈ ದುಷ್ಟಕೂಟ ಅವರನ್ನು ತಿರಸ್ಕಾರದಿಂದ ನೋಡುತ್ತದೆ. ಕಳೆದ ವಾರ ಪ್ರೈಂ ಟೈಮ್ ಚಾಟ್ ಶೋವೊಂದರಲ್ಲಿ ಕಾಣಿಸಿಕೊಂಡಿದ್ದ ಹಿರಿಯ ಬಿಜೆಪಿ ವಕ್ತಾರರೋರ್ವರು ಪ್ರತಿಪಕ್ಷಗಳು ಕ್ಷುದ್ರ ರಾಜಕೀಯವನ್ನು ನಡೆಸುತ್ತಿವೆ ಎಂದು ಘೋಷಿಸಿದ್ದರು. ತಪ್ಪಾಗಿರುವ ಪ್ರತಿಯೊಂದಕ್ಕೂ ಮಹಾರಾಷ್ಟ್ರ ಸರಕಾರವನ್ನು ಹೊಣೆಯಾಗಿಸುವ ಪ್ರತಿಯೊಂದು ಪ್ರಯತ್ನವನ್ನೂ ಬಿಜೆಪಿಯ ವಕ್ತಾರರು ಮಾಡುತ್ತಿದ್ದಾರೆ,ಏಕೆಂದರೆ ಪ.ಬಂಗಾಳವನ್ನು ಗೆಲ್ಲುವುದನ್ನು ಹೊರತುಪಡಿಸಿದರೆ ಮಹಾರಾಷ್ಟ್ರವನ್ನು ತಾನು ಗೆದ್ದಿದ್ದೆ ಎಂಬ ಭ್ರಮೆಯಲ್ಲಿರುವ ಬಿಜೆಪಿಗೆ ರಾಜ್ಯವನ್ನು ವಾಪಸ್ ತನ್ನ ತೆಕ್ಕೆಗೆ ಪಡೆದುಕೊಳ್ಳುವುದನ್ನು ಬಿಟ್ಟರೆ ಇನ್ನೇನೂ ಬೇಕಾಗಿಲ್ಲ.

ತಾವು ಏನು ಹೇಳುತ್ತೇವೆ ಎನ್ನುವುದರ ಬಗ್ಗೆ ಬಿಜೆಪಿಯ ವಕ್ತಾರರು ಎಚ್ಚರಿಕೆ ವಹಿಸಬೇಕು. ಏಕೆಂದರೆ ದೇಶದಲ್ಲಿಯ ರಾಜ್ಯಗಳ ಪೈಕಿ ಈಗ ಉತ್ತರ ಪ್ರದೇಶವು ಅತ್ಯಂತ ದೊಡ್ಡ ರಾಜ್ಯವಾಗಿದೆ ಮತ್ತು ಅದು ಹಿಂದುತ್ವ ವಲಯಗಳಲ್ಲಿ ಹಿರೋ ಮಾತ್ರವಲ್ಲ,ಭವಿಷ್ಯದ ಪ್ರಧಾನಿಯೆಂದೂ ಪರಿಗಣಿಸಲ್ಪಡುತ್ತಿರುವ ವ್ಯಕ್ತಿಯ ಆಡಳಿತದಲ್ಲಿದೆ. ಇಂಡಿಯಾ ಟುಡೇ ಇತ್ತಿಚಿಗೆ ತನ್ನ ಜನಮತ ಸಂಗ್ರಹದಲ್ಲಿ ಯೋಗಿ ಆದಿತ್ಯನಾಥರನ್ನು ಭಾರತದ ‘ಅತ್ಯುತ್ತಮ’ ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದೆ. ಆದಿತ್ಯನಾಥ ಈಗ ಕೊರೋನವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕಿಂತ ತನ್ನ ಈ ಹೊಸ ವರ್ಚಸ್ಸನ್ನು ಉಳಿಸಿಕೊಳ್ಳಲು ಹೆಚ್ಚು ಆಸಕ್ತರಾಗಿರುವಂತಿದೆ,ಏಕೆಂದರೆ ಅವರ ಕಚೇರಿಯು ಈಗ ಕೊರೋನವೈರಸ್ ಸಾವುಗಳ ಸಂಖ್ಯೆ ಬಗ್ಗೆ ಸುಳ್ಳುಗಳನ್ನು ಹೇಳುವಲ್ಲಿ ನಿರತವಾಗಿದೆ. ವೃತ್ತಿನಿಷ್ಠೆಯನ್ನು ಮೆರೆಯುತ್ತಿರುವ ಧೀಮಂತ ಪತ್ರಕರ್ತರು ಬಹಿರಂಗಗೊಳಿಸುತ್ತಿರುವ ಸಾಲುಸಾಲು ಚಿತೆಗಳು ಮತ್ತು ಆಸ್ಪತ್ರೆಗಳ ಹೊರಗೆ ಆಮ್ಲಜನಕ ಹಾಗೂ ಹಾಸಿಗೆಗಳಿಗಾಗಿ ಗೋಗರೆಯುತ್ತಿರುವ ಹತಾಶ ಜನರ ಚಿತ್ರಗಳು ತಾನು ‘ಪರಿವರ್ತನೆ ’ಯನ್ನು ತಂದಿದ್ದೇನೆ ಎಂದು ಆದಿತ್ಯನಾಥ ಕೊಚ್ಚಿಕೊಳ್ಳುತ್ತಿರುವ ರಾಜ್ಯದಲ್ಲಿ ಸ್ಥಿತಿ ಎಷ್ಟು ಕೆಟ್ಟದ್ದಾಗಿದೆ ಎನ್ನುವುದನ್ನು ಬಿಂಬಿಸುತ್ತಿವೆ.

ಹೀಗಾಗಿ ಈಗ ಏನಾಗಬೇಕು? ಮೊದಲ ಕ್ರಮವಾಗಿ ಮೋದಿಯವರು ತಮ್ಮ ತಪ್ಪು ನಿರ್ವಹಣೆಯಿಂದ ಭಾರತವನ್ನು ಆಮ್ಲಜನಕವಿಲ್ಲದ ಐಸಿಯುನಲ್ಲಿ ತಳ್ಳಿರುವ ಅಧಿಕಾರಿಗಳನ್ನು ವಜಾಗೊಳಿಸುವ ಅಗತ್ಯವಿದೆ. ನಂತರ ಅವರು ಎಲ್ಲ ಮುಖ್ಯಮಂತ್ರಿಗಳನ್ನೊಳಗೊಂಡ ಹೊಸ ತಂಡವೊಂದನ್ನು ಕಟ್ಟಬೇಕು ಮತ್ತು ನೂತನ ಕಾರ್ಯತಂತ್ರವನ್ನು ರೂಪಿಸಲು ಅವರ ಸಲಹೆಗಳನ್ನು ಪಡೆದುಕೊಳ್ಳಬೇಕು. ತನ್ನ ಬೆಂಬಲಿಗರು ಈಗಲೂ ಮುಂದುವರಿಸಿರುವ ಪಕ್ಷಪಾತ ರಾಜಕೀಯವನ್ನು ತಾನು ಮೀರಿದ್ದೇನೆ ಎನ್ನುವುದನ್ನು ಅವರು ತೋರಿಸಬೇಕು. ದೇಶದ ಜನಸಂಖ್ಯೆಯ ಕನಿಷ್ಠ ಶೇ.50ರಷ್ಟು ಜನರಿಗಾದರೂ ಸಾಧ್ಯವಿದ್ದಷ್ಟು ಶೀಘ್ರ ಲಸಿಕೆಯನ್ನು ಒದಗಿಸಲು ಮುಂಗಡಪತ್ರದಲ್ಲಿ ಹಂಚಿಕೆ ಮಾಡಲಾಗಿರುವ 35,000 ಕೋ.ರೂ.ಗಳ ಜೊತೆಗೆ ಪಿಎಂ ಕೇರ್ಸ್ ನಿಧಿಯ ಗಂಟನ್ನೂ ಬಿಚ್ಚುವುದು ಅವರು ಅತ್ಯಂತ ಅಗತ್ಯವಾಗಿ ಮಾಡಬೇಕಿರುವ ಕೆಲಸವಾಗಿದೆ.

ಕೋವಿಡ್-19 ವಿರುದ್ಧದ ತಮ್ಮ ಹೋರಾಟದ ಮಧ್ಯೆ ತಮ್ಮ ಪ್ರಜೆಗಳಿಗೆ ಲಸಿಕೆಗಳನ್ನು ಹಾಕಿಸಿದ್ದ ದೇಶಗಳು ಬೇಸಿಗೆಯ ವೇಳೆಗೆ ಸಾಂಕ್ರಾಮಿಕದ ಪೂರ್ವದಲ್ಲಿದ್ದ ಸಹಜ ಸ್ಥಿತಿಗೆ ತಲುಪುವುದನ್ನು ನಿರೀಕ್ಷಿಸುತ್ತಿವೆ. ಈ ಪೈಕಿ ಹೆಚ್ಚಿನ ದೇಶಗಳು ಭಾರತೀಯ ಅವಳಿ ರೂಪಾಂತರಿತ ವೈರಸ್ನ ವಿರುದ್ಧ ಲಸಿಕೆ ನೀಡಿಕೆಯು ಪರಿಣಾಮಕಾರಿಯಾಗಿದೆ ಎಂದು ನಾವು ಸಾಬೀತುಗೊಳಿಸುವವರೆಗೆ ತಮ್ಮ ಗಡಿಗಳು ಭಾರತೀಯರಿಗೆ ಮುಚ್ಚಿರುತ್ತವೆ ಎನ್ನುವುದನ್ನು ಸ್ಪಷ್ಟಪಡಿಸಿವೆ. ನಮ್ಮ ಅತ್ಯುತ್ತಮ ವಿಜ್ಞಾನಿಗಳನ್ನು ಈ ಕಾರ್ಯಕ್ಕೆ ನಿಯೋಜಿಸುವುದು ಆದ್ಯತೆಯ ಕಾರ್ಯವಾಗಬೇಕಿದೆ. ಸದ್ಯಕ್ಕೆ ಭಾರತವು ಸಮುದ್ರದಲ್ಲಿ ಗೊತ್ತುಗುರಿಯಲ್ಲದೆ ಅಲೆುುತ್ತಿರುವ ಹಡಗಿನಂತಾಗಿದೆ.

ಕೃಪೆ: FINANCIAL EXPRESS

Writer - ತವ್ಲೀನ್ ಸಿಂಗ್

contributor

Editor - ತವ್ಲೀನ್ ಸಿಂಗ್

contributor

Similar News