ಜನರಿಗೆ ಚಿಕಿತ್ಸೆಯಷ್ಟೇ ಆತ್ಮವಿಶ್ವಾಸ ತುಂಬುವುದು ಮುಖ್ಯ: ಬಿ.ವೈ. ವಿಜಯೇಂದ್ರ
ಬೆಂಗಳೂರು, ಎ. 25: `ಕೊರೋನ ಎರಡನೇ ಅಲೆ ಈ ಪರಿಯ ಸಂಕಷ್ಟ ಉಂಟು ಮಾಡಬಹುದೆಂದು ಯಾರೂ ಊಹಿಸಿರಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ, ಅಧಿಕಾರಿ ಹಾಗೂ ವೈದ್ಯಕೀಯ ಸಮೂಹ ಹಗಲಿರುಳೆನ್ನದೇ ಶ್ರಮಿಸುತ್ತಿದೆ. ಇಂತಹ ಸಂದಿಗ್ಧತೆಯ ಸಮಯದಲ್ಲಿ, ಜನತೆಗೆ ಚಿಕಿತ್ಸೆಯಷ್ಟೇ ಮುಖ್ಯವಾಗಿ ಕಲ್ಪಿಸಬೇಕಿರುವುದು, ಆತ್ಮವಿಶ್ವಾಸ ತುಂಬುವ ವಾತಾವರಣ' ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಜನರಲ್ಲಿ ಆತಂಕ ಹೆಚ್ಚಿಸುವ ವರದಿಗಳಿಂದಾಗಿ, ಸೋಂಕಿತರೆಂದು ಕಂಡುಬಂದ ತಕ್ಷಣ ಅವಶ್ಯವಿಲ್ಲದಿದ್ದರೂ ಭಯದಿಂದ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರ ಪರಿಣಾಮವಾಗಿ ಬೆಡ್‍ಗಳ ಕೊರತೆಯುಂಟಾಗಿ, ತುರ್ತಾಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಅನಿವಾರ್ಯವಿರುವವರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಗಮನ ಸೆಳೆದಿದ್ದಾರೆ.
`ಕೋವಿಡ್ ಪಾಸಿಟಿವ್ ವರದಿ ಬಂದ ತಕ್ಷಣ ಧೃತಿಗೆಡದೆ, ವೈದ್ಯರ ಸಲಹೆಯಂತೆ ನಡೆದುಕೊಳ್ಳವುದರಿಂದ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗುತ್ತದೆ. ಮೊದಲು ಮನೆಯಲ್ಲೇ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಚಿಕಿತ್ಸೆ ಪಡೆದುಕೊಂಡು, ರೋಗ ಲಕ್ಷಣಗಳು ಉಲ್ಬಣಿಸಿದರೆ, ಅಗತ್ಯವಿದ್ದಾಗ ಮಾತ್ರ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುವುದು ಸೂಕ್ತ' ಎಂದು ವಿಜಯೇಂದ್ರ ಸಲಹೆ ಮಾಡಿದ್ದಾರೆ.
`ಈ ನಿಟ್ಟಿನಲ್ಲಿ ಸಮೂಹ ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದ್ದು, ರೋಗದಿಂದ ಗುಣಮುಖರಾಗುವವರ ಸಂಖ್ಯೆಗೆ ಆದ್ಯತೆ ನೀಡಲಿ, ಸಕಾರಾತ್ಮಕ ಅಂಶಗಳತ್ತ ಬೆಳಕು ಚೆಲ್ಲಲಿ, ಜನರನ್ನು ಜಾಗೃತಗೊಳಿಸುವ ತಜ್ಞರ ಸಲಹೆ, ಮಾರ್ಗದರ್ಶನಗಳು ನಿರಂತರ ತಲುಪುವಂತಾಗಲು ಹೆಚ್ಚಿನ ಸಮಯ ಮೀಸಲಿಟ್ಟಾಗ ಸಾಮಾನ್ಯ ಜನರಲ್ಲಿ ಭರವಸೆ, ಆತ್ಮವಿಶ್ವಾಸ ಮೂಡಿಸುವುದು ಸಾಧ್ಯ' ಎಂದು ವಿಜಯೇಂದ್ರ ತಿಳಿಸಿದ್ದಾರೆ.
`ಕೊರೋನ ವಿರುದ್ಧ ಹೋರಾಡಲು ಆತ್ಮವಿಶ್ವಾಸ ಮೂಡಿಸುವ ಸುದ್ದಿಗಳಿಗೆ ಪ್ರಾಮುಖ್ಯತೆ ಇರಲಿ, ತಪ್ಪು, ಲೋಪಗಳನ್ನು ತೋರಿಸುವುದು ಸರಿ, ಇದರ ಜೊತೆಗೆ, ಪರಿಹಾರಾತ್ಮಕ ಸಲಹೆಗಳೂ ಹರಿದು ಬರಲಿ ಎಂದು ವಿನಂತಿಸುವೆ. ನಾವೆಲ್ಲರೂ ಸಮಸ್ಯೆ ಎದುರಿಸಲು ಸಂಘಟನಾತ್ಮಕವಾಗಿ ಹೋರಾಡೋಣ, ಜನತೆಯೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ತುಂಬುವ ಸಂದೇಶ ಸಾರೋಣ' ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.