ಕೊರೋನ ವರದಿ ನೆಗೆಟಿವ್ ಬಂದರೂ ಶ್ವಾಸಕೋಶ ಎಕ್ಸ್ ರೆ ಅಗತ್ಯ: ಡಾ. ಶಿವಕುಮಾರ್
ಬೆಂಗಳೂರು: ಕೊರೋನ ಸೋಂಕಿನ ವರದಿ ನೆಗೆಟಿವ್ ಬಂದರೂ ಸೋಂಕು ಶ್ವಾಸಕೋಶಕ್ಕೆ ತಗುಲಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ನೆಗೆಟಿವ್ ಬಂದರೂ ಶ್ವಾಸಕೋಶ ಎಕ್ಸರೇ ಮಾಡುವುದು ಅವಶ್ಯ ಎಂದು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಉಸ್ತುವಾರಿ ಡಾ.ಶಿವಕುಮಾರ್ ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ, ಸರಿಯಾಗಿ ಚಿಕಿತ್ಸೆ ಆಗುತ್ತಿಲ್ಲ ಎಂದು ಕೊರೋನ ಸೋಂಕಿತರ ಸಂಬಂಧಿಗಳು ವೈದ್ಯರೊಂದಿಗೆ ವಾಗ್ವಾದ, ಮಾತಿನ ಚಕಮಕಿ ನಡೆಸಿದ ಸಂದರ್ಭದಲ್ಲಿ ಸಂಬಂಧಿಗಳನ್ನು ಸಮಾಧಾನಪಡಿಸಿ ಮಾತನಾಡಿದ ಅವರು, ಕೊರೋನ ಎಲ್ಲ ಕಡೆಗೂ ವ್ಯಾಪಿಸಿದೆ ಇದನ್ನು ತಡೆಗಟ್ಟುವ ಕೆಲಸವಾಗಬೇಕಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಿ. ನಾವು ರೋಗಿಗಳಿಗೆ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದೇವೆ. ಶ್ವಾಸಕೋಶಕ್ಕೆ ಸೋಂಕು ತಗುಲಿ ವೆಂಟಿಲೇಟರ್ ಅಳವಡಿಸಿರುವ ರೋಗಿಗಳು ಉಳಿಯುವುದು ಕಷ್ಟ ಎಂದು ತಿಳಿಸಿದರು.
ದೇಶದ ಜನಪ್ರತಿನಿಧಿಗಳೇ ಕೊರೋನಕ್ಕೆ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಯುವ ವೈದ್ಯ ಡಾ.ಸುಹಾಸ್ ಕೊರೋನಕ್ಕೆ ಬಲಿಯಾದರು. ನಾವು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆರ್‍ಟಿಪಿಸಿಆರ್ ನೆಗೆಟಿವ್ ಬಂದಿದೆ ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ. ಶ್ವಾಸಕೋಶ ಪರೀಕ್ಷೆಗೆ ಒಳಗಾಗಬೇಕು. ಶ್ವಾಸಕೋಶದಲ್ಲಿ ಸೋಂಕು ಹೆಚ್ಚಿದ್ದರೆ ರೋಗಿ ಬದುಕುವುದು ಕಷ್ಟ. ಕೊರೋನ ವಿಚಾರದಲ್ಲಿ ಸುಳ್ಳು, ಸತ್ಯ ಎನ್ನುವುದಿಲ್ಲ. ಎಲ್ಲವೂ ಹಣೆ ಬರಹ ಎಂದು ಅವರು ಬೇಸರದಿಂದ ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಶಕ್ತಿಮೀರಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ರೋಗಿಗಳು ಸಾಯುತ್ತಿದ್ದಾರೆ. ಏನು ಮಾಡುವುದು, ಸೋಂಕು ಹೆಚ್ಚಾಗಿ ಶ್ವಾಸಕೋಶಕ್ಕೆ ತಗುಲಿದ್ದರೆ ಬದುಕುವುದು ಕಷ್ಟ. ಹೀಗಾಗಿ, ಆರಂಭದಲ್ಲೆ ಸೋಂಕನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆಯಬೇಕು. ಸೋಂಕು ಉಲ್ಬಣವಾದ ಬಳಿಕ ಕೊರೋನ ರೋಗಿಯನ್ನು ಬದುಕಿಸುವುದು ಕಷ್ಟ ಎಂದು ಹೇಳಿದರು.
‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಾವುದೇ ಪ್ರಭಾವಕ್ಕೆ ಮಣಿದು ಬೆಡ್ ನೀಡುತ್ತಿಲ್ಲ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಬೆಡ್ ನೀಡಿದ್ದೇವೆ. ಎಷ್ಟೋ ಜನ ಐಎಎಸ್, ಕೆಎಎಸ್, ಪೊಲೀಸ್ ಅಧಿಕಾರಿಗಳು ದೂರವಾಣಿ ಕರೆ ಮಾಡಿ ಬೆಡ್‍ಗೆ ಬೇಡಿಕೆ ಇಟ್ಟಿದ್ದಾರೆ. ಏನೂ ಮಾಡಲು ಸಾಧ್ಯವಿಲ್ಲ. ದೇವರೇ ಎಲ್ಲರನ್ನೂ ಕಾಪಾಡಬೇಕು.
-ಡಾ.ಶಿವಕುಮಾರ್, ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಉಸ್ತುವಾರಿ