×
Ad

ಚಿಕ್ಕಮಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಸಿ ಗ್ರಾಹಕರ ಸುಲಿಗೆ ಆರೋಪ

Update: 2021-04-25 22:34 IST

ಚಿಕ್ಕಮಗಳೂರು, ಎ.25: ಕೊರೋನ ನಿಯಂತ್ರಣದ ಉದ್ದೇಶದಿಂದ ಸರಕಾರ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂನಂತಹ ಕ್ರಮಗಳನ್ನು ಜಾರಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕೆಲ ವ್ಯಾಪಾರಿಗಳು ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರಾಜ್ಯಾದ್ಯಂತ ಸರಕಾರ ವಾರಾಂತ್ಯದ ಕರ್ಫ್ಯೂ ಹೇರಿರುವ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳು ಮತ್ತು ಸೇವೆಗೆ ಅವಕಾಶ ಕಲ್ಪಿಸಿದೆ. ಆದರೆ ಇಂತಹ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರಿಗಳು ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ. ಕರ್ಫ್ಯೂ ಇರುವುದರಿಂದ ಸರಕುಗಳ ಪೂರೈಕೆ ಇಲ್ಲ ಎಂಬ ಸಬೂಬು ಹೇಳುವ ವ್ಯಾಪಾರಿಗಳು ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಸರಕು ಸಂಗ್ರಹ ಇಲ್ಲ, ಬೆಲೆ ಏರಿಕೆಯಾಗಿದೆ ಎಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಪ್ರವೃತ್ತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ವ್ಯಾಪಾರಿಗಳು ಹೇಳುವ ಬೆಲೆ ನೀಡಿ ಸಾರ್ವಜನಿಕರು ವಸ್ತುಗಳನ್ನು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ದಿನಸಿ ವಸ್ತುಗಳ ಬೆಲೆಯಲ್ಲಿ 5ರಿಂದ 10 ರೂ. ಏರಿಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಬೀಡಿ, ಸಿಗರೇಟ್‌ನಂತಹ ತಂಬಾಕು ಉತ್ಪನ್ನಗಳನ್ನು ಪೂರೈಕೆ ಇಲ್ಲ ಎಂದು ಹೇಳಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮೀನು, ಮಾಂಸದ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಕೋಳಿ ಮಾಂಸಕ್ಕೂ ದಿಢೀರ್ ಬೆಲೆ ಏರಿಕೆಯಾಗಿದೆ. ಗ್ರಾಹಕರು ಕರ್ಫ್ಯೂ ಸಂದರ್ಭದಲ್ಲಿ ಇದ್ಯಾವುದನ್ನೂ ಪ್ರಶ್ನೆ ಮಾಡದೆ ವ್ಯಾಪಾರಿಗಳು ಹೇಳಿದ ಬೆಲೆ ನೀಡಿ ಕೊಂಡುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. ಆದರೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನಿಗಳ ಕೈಗೆ ಪ್ರತಿದಿನ ಮದ್ಯ ಸಿಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಮದ್ಯ ಮಾರಾಟ ಜೋರಾಗಿದ್ದು, ಸದ್ಯ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿರುವುದರಿಂದ ಅಕ್ರಮ ಮದ್ಯ ಮಾರಾಟಗಾರರು ಮೊದಲೇ ಮದ್ಯ ಖರೀದಿಸಿ ಸಂಗ್ರಹಿಸಿಕೊಂಡು ದುಪ್ಪಟ್ಟು ಬೆಲೆಗೆ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಸರಕಾರ ಅಗತ್ಯ ವಸ್ತುಗಳ ಮಾರಾಟಕ್ಕೆ ಸಮಯ ನಿಗದಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈ ಸಂದರ್ಭವನ್ನು ಕೆಲ ವ್ಯಾಪಾರಿಗಳು ದುರ್ಬಳಕೆ ಮಾಡಿಕೊಂಡು ವಸ್ತುಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಸಂಗ್ರಹ ಇಲ್ಲ, ಪೂರೈಕೆ ಇಲ್ಲ ಎನ್ನುತ್ತಾ ಅಗತ್ಯ ವಸ್ತುಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಅಕ್ರಮ ಮದ್ಯ ಮಾರಾಟವೂ ಎಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸರು ಈ ಸಂಬಂಧ ಅಗತ್ಯ ಕ್ರಮವಹಿಸಬೇಕು. ಸಂಕಷ್ಟದ ಸಂದರ್ಭದಲ್ಲಿ ಬಡ ಜನತೆಯನ್ನು ಸುಲಿಗೆ ಮಾಡುವವರ ವಿರುದ್ಧ ಕ್ರಮ ವಹಿಸಬೇಕು.
-ರಸೂಲ್ ಖಾನ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News