ಮಹಾರಾಷ್ಟ್ರದಂತೆಯೇ ಬೆಂಗಳೂರಿನಲ್ಲೂ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

Update: 2021-04-26 12:20 GMT

ಬೆಂಗಳೂರು, ಎ.26: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿರುವ ಕೋವಿಡ್ ಸೋಂಕಿನಂತೆಯೇ ಬೆಂಗಳೂರಿನಲ್ಲೂ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಎಚ್ಚರ ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತಾರು ದಿನಗಳಿಂದ ಬೆಂಗಳೂರಿನಲ್ಲಿ ತೀವ್ರವಾಗಿ ಕೋವಿಡ್ ಹರಡಿದೆ. ಇದಕ್ಕೆ ಮಹಾರಾಷ್ಟ್ರದ ಸೋಂಕು ಕಾರಣ ಎನ್ನುವ ಶಂಕೆ ಇದೆ ಎಂದು ತಿಳಿಸಿದರು.

ಕೋವಿಡ್ ವೇಗ ಪಡೆದುಕೊಂಡಿರುವ ಕಾರಣ ಇದರಲ್ಲಿ ಹೊಸ ತಳಿ ಏನಾದರೂ ಇದೆಯಾ ಎನ್ನುವ ಕುರಿತು ಆರೋಗ್ಯ ತಜ್ಞರು ಸಂಶೋಧನೆ ಕೈಗೊಳ್ಳಲಿದ್ದಾರೆ ಎಂದ ಅವರು, ಈ ಮೊದಲೇ ಹೊರರಾಜ್ಯ ಪ್ರಯಾಣಕ್ಕೆ ಕಡಿವಾಣ ಹಾಕಬೇಕಿತ್ತು. ಇದರಿಂದ ಕೋವಿಡ್ ಹರಡುವ ಪ್ರಮಾಣ ತಗ್ಗುತ್ತಿತ್ತು ಎಂದು ಹೇಳಿದರು.

ಸೋಂಕಿತರ ಪ್ರಮಾಣ ಹೆಚ್ಚಾಗಿರುವ ಕಾರಣ ಬಿಬಿಎಂಪಿ ಸಕಲ ಸಿದ್ಧತೆ ಕೈಗೊಂಡಿದ್ದು, ಆರೋಗ್ಯ ಸೇವೆಗಳಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈಗಿರುವ ಸನ್ನಿವೇಶದಲ್ಲೂ ದೇಶದಲ್ಲಿಯೇ ವೈದ್ಯಕೀಯ ಸೌಲಭ್ಯ ಬೆಂಗಳೂರಿನಲ್ಲಿಯೇ ಚೆನ್ನಾಗಿದೆ ಎಂದು ಹೇಳಿದರು.

9 ಸಾವಿರ ಹಾಸಿಗೆ: ಖಾಸಗಿ ಆಸ್ಪತ್ರೆಗಳಿಂದ 11 ಸಾವಿರ ಬೆಡ್‍ಗಳನ್ನು ಪಡೆಯಬೇಕೆಂಬ ಗುರಿ ಇಟ್ಟುಕೊಂಡಿದ್ದು, ಈವರೆಗೂ 9 ಸಾವಿರ ಹಾಸಿಗೆ ಲಭ್ಯವಾಗಿದೆ. ಶೀಘ್ರದಲ್ಲಿಯೇ 11 ಸಾವಿರ ಪೂರ್ಣಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹಾಸಿಗೆ ಪಡೆಯಲು ಬಿಬಿಎಂಪಿ ಕ್ರಮವಹಿಸಲಿದೆ ಎಂದರು.

ಶೋಕಾಸ್ ನೋಟಿಸ್: ಕೋವಿಡ್ ಸೋಂಕು ಸಂಬಂಧ ಬಿಯು ಸಂಖ್ಯೆಯಲ್ಲಿ ತೊಂದರೆ ಆಗುತ್ತಿರುವ ದೂರುಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲ ಲ್ಯಾಬ್‍ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಈ ಸಮಸ್ಯೆ ಉಲ್ಬಣ ಆಗದಂತೆ ಕ್ರಮವಹಿಸಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.

ಮಾರುಕಟ್ಟೆ ವಿಕೇಂದ್ರಿಕರಣ: ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಬೇಕು ಎನ್ನುವ ಗುರಿಯಿದೆ. ಈ ಸಂಬಂಧ ಸ್ಥಳೀಯ ವಲಯ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ವರ್ತಕರೊಂದಿಗೆ ಚರ್ಚಿಸಿ ಶೀಘ್ರ ಕ್ರಮಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News