ನೀರಿನಲ್ಲಿ ಮುಳುಗಿದ ನಿಲ್ದಾಣ: ಉದ್ಘಾಟನೆಗೂ ಮುಂಚೆಯೇ ವೈರಲ್ ಆದ ನಮ್ಮ ಮೆಟ್ರೋ

Update: 2021-04-26 14:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.26: ದೇಶದ ಮೊಟ್ಟ ಮೊದಲ ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯದ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಗರದ ಬೈಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನೀರಿನಲ್ಲಿ ಮುಳುಗಿ ಹೋಗಿದ್ದ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆಗೆ ನಿಲ್ದಾಣದ ಛಾವಣಿಗಳಲ್ಲಿ ನೀರು ಸೋರಿದ ಪರಿಣಾಮ ನಿಲ್ದಾಣದೊಳಗೆ ಪ್ಲಾಟ್ ಫಾರಂ 1 ಮತ್ತು 7ನ್ನು ಸಂಪರ್ಕಿಸಲು ನಿರ್ಮಿಸಲಾಗಿರುವ ಸುರಂಗ ಮಾರ್ಗದಲ್ಲಿ ಎರಡು ಅಡಿಗಿಂತ ಹೆಚ್ಚು ಎತ್ತರದಲ್ಲಿ ನೀರು ನಿಂತಿದೆ.

ಆನಂತರ ನಮ್ಮ ಮೆಟ್ರೋ ಅಧಿಕಾರಿಗಳು, ಸಿಬ್ಬಂದಿ ಕರೆಸಿ ನೀರನ್ನೆಲ್ಲ ಹೊರ ಹಾಕಿದ್ದಾರೆ. ನೀರು ಸೋರಿಕೆಗೆ ಕಾರಣ ಏನು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಛಾವಣಿಯಿಂದ ಸೋರಿಕೆಯಾಗಿದೆ ಎಂಬುದು ಸುಳ್ಳು. ಸುರಂಗ ಅಥವಾ ಸಬ್‍ವೇದಲ್ಲಿ ನೀರು ಹರಿದಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದ್ದು, ಈ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದೆ ಎಂತಹ ಮಳೆ ಬಂದರೂ ನೀರು ಸರಾಗವಾಗಿ ಹರಿದು ಹೋಗಿ ಸಂಗ್ರಹವಾಗುತ್ತದೆ. ನಿಲ್ದಾಣದಲ್ಲಿ ಮಳೆ ನೀರು ನಿಲ್ಲುವುದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

314 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಮಳೆಯ ನೀರು ನುಗ್ಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News