ಬೆಂಗಳೂರು: ಬಿಲ್ ಪಾವತಿಸಲಾಗದೆ ಆಸ್ಪತ್ರೆಯಲ್ಲೇ ಪತಿಯ ಮೃತದೇಹ ಬಿಟ್ಟು ಹೋದ ಮಹಿಳೆ
ಬೆಂಗಳೂರು, ಎ.27: ಆಸ್ಪತ್ರೆಯ ಬಿಲ್ ಕಟ್ಟಲಾಗದ ಮಹಿಳೆಯೊಬ್ಬರು ತನ್ನ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಬಿಲ್ ಪಾವತಿ ಮಾಡಲು ಸಾಧ್ಯವಾಗದೇ ಮಹಿಳೆಯೊಬ್ಬರು ತನ್ನ ಪತಿಯ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದು, ಈ ಮೃತದೇಹ ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿಯೇ ಇದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪತಿಯನ್ನು ಕಳೆದುಕೊಂಡಿರುವ ಮಹಿಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆಸ್ಪತ್ರೆಯ ಬಿಲ್ ನಾಲ್ಕು ಲಕ್ಷವಾಗಿದ್ದು, ಇದನ್ನು ಪಾವತಿಸಿ ಆಮೇಲೆ ನಿಮ್ಮ ಪತಿಯ ಮೃತದೇಹವನ್ನು ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಆದರೆ, ಅಷ್ಟು ಹಣ ನನ್ನ ಬಳಿ ಇಲ್ಲವಾಗಿದೆ. ಹೀಗಾಗಿ, ನೀವೇ ನನ್ನ ಪತಿಯ ಅಂತ್ಯ ಸಂಸ್ಕಾರವನ್ನು ಮಾಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಮೃತ ವ್ಯಕ್ತಿಯ ಮಗಳು ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ತಂದೆಗೆ 4 ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ನಂತರ ಕೊರೋನ ಪರೀಕ್ಷೆ ನಡೆಸಿದೆವು. ಕೊರೋನ ಪಾಸಿಟಿವ್ ಬಂತು, ಬಿಬಿಎಂಪಿಯವರಿಗೆ ಕರೆ ಮಾಡಿದೆವು. ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾವು ಮೊದಲು ಯಶವಂತಪುರದಲ್ಲಿ ಇರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಹೋದೆವು. 1 ಗಂಟೆಯ ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿದರು.
ಮೊದಲಿಗೆ 50 ಸಾವಿರ ಮುಂಗಡ ಹಣ ಕೊಡಿ ಅಂದರು. ನಮ್ಮ ಬಳಿ ಅಷ್ಟು ಹಣ ಇರಲಿಲ್ಲ, 20 ಸಾವಿರ ಪಾವತಿ ಮಾಡಿದೆವು. ಈ ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಈ ಆಸ್ಪತ್ರೆಯಲ್ಲಿ ಇದ್ದರೆ ನಾನು ಸಾಯುತ್ತೇನೆ. ಬೇರೆ ಆಸ್ಪತ್ರೆಗೆ ಸೇರಿಸು ಎಂದು ವಿಡಿಯೋ ಕಾಲ್‍ನಲ್ಲಿ ನಮ್ಮ ತಂದೆ ಹೇಳಿದ್ದರು. ಮೊದಲಿಗೆ ಸೋಂಕಿನಿಂದ ಶೇ.30ರಷ್ಟು ಗುಣಮುಖ ಆಗಿದ್ದಾರೆ ಅಂದಿದ್ದರು ಆಸ್ಪತ್ರೆಯವರು. ಆದಾಗಿ ಎರಡು ದಿನಗಳ ನಂತರ ಮೃತಪಟ್ಟರು ಎಂದು ಮೃತರ ಮಗಳು ಹೇಳಿದ್ದಾರೆ.