ಮಧುಮೇಹಿಗಳು ಕೋವಿಡ್-19ಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಯೇ?

Update: 2021-04-29 18:40 GMT

ಕಳೆದ ವರ್ಷ ಕೊರೋನವೈರಸ್ ಸಾಂಕ್ರಾಮಿಕವು ಸ್ಫೋಟಗೊಂಡಾಗಿನಿಂದಲೂ ಹೆಚ್ಚುವರಿ ಕಾಳಜಿಯನ್ನು ವಹಿಸುವಂತೆ ಇತರ ಕಾಯಿಲೆಗಳನ್ನು ಹೊಂದಿರುವವರಿಗೆ ತಜ್ಞರು ವಿಶೇಷ ಸೂಚನೆಯನ್ನು ನೀಡುತ್ತಲೇ ಇದ್ದಾರೆ. ಮಧುಮೇಹ,ಹೃದ್ರೋಗಗಳು,ಅಧಿಕ ರಕ್ತದೊತ್ತಡ ಮತ್ತು ಇಂತಹುದೇ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇವರಲ್ಲಿ ಸೇರುತ್ತಾರೆ. ಕೊರೋನವೈರಸ್‌ನ ಎರಡನೇ ಅಲೆಯು ದೇಶವನ್ನು ಅಪ್ಪಳಿಸಿರುವ ಈ ಸಂಕಷ್ಟದ ಸಮಯದಲ್ಲಿ ಕೋಮಾರ್ಬಿಡಿಟಿ ಅಥವಾ ಇತರ ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್-19 ಸೋಂಕು ಕುರಿತು ಕೇಳಲಾಗುವ ಸಾಮಾನ್ಯ ಪ್ರಶ್ನೆಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಉತ್ತರಗಳನ್ನು ನೀಡಿದೆ.

* ಹೃದಯರೋಗ,ಮಧುಮೇಹ ಅಥವಾ ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಕೊರೋನವೈರಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಯೇ?

-ಇಲ್ಲ,ಈ ಸಮಸ್ಯೆಗಳನ್ನು ಹೊಂದಿರುವವರು ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವಿಲ್ಲ.

* ಈ ರೋಗಗಳಿರುವ ವ್ಯಕ್ತಿಗಳಿಗೆ ಸೋಂಕು ತಗುಲಿದರೆ ತೀವ್ರ ಅನಾರೋಗ್ಯ ಅಥವಾ ತೊಂದರೆಗಳುಂಟಾಗುವ ಹೆಚ್ಚಿನ ಅಪಾಯವಿದೆಯೇ?

-ಕೋವಿಡ್-19 ಸೋಂಕುಪೀಡಿತರ ಪೈಕಿ ಶೇ.80ರಷ್ಟು ಜನರು ಉಸಿರಾಟ ಸೋಂಕಿನ (ಜ್ವರ,ಗಂಟಲು ಕೆರೆತ,ಕೆಮ್ಮು) ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ದುರ್ಬಲ ಹೃದಯ ಸೇರಿದಂತೆ ಹೃದಯ ರೋಗಗಳನ್ನು ಹೊಂದಿರುವ ಕೆಲವರಲ್ಲಿ ತೀವ್ರ ಲಕ್ಷಣಗಳು ಮತ್ತು ತೊಂದರೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಇಂತಹ ರೋಗಿಗಳು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

* ಮಧುಮೇಹವನ್ನು ಹೊಂದಿರುವವರು ಕೋವಿಡ್-19ಕ್ಕೆ ಸುಲಭವಾಗಿ ತುತ್ತಾಗುತ್ತಾರೆಯೇ?

-ಸಾಮಾನ್ಯವಾಗಿ ಅನಿಯಂತ್ರಿತ ಮಧುಮೇಹವನ್ನು ಹೊಂದಿರುವವರು ಎಲ್ಲ ಸೋಂಕುಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುವ ಮಧುಮೇಹಿಗಳು ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿಲ್ಲ,ಆದರೆ ಕೆಲವರು ಸೋಂಕಿಗೆ ತುತ್ತಾದರೆ ಹೆಚ್ಚು ತೀವ್ರ ಕಾಯಿಲೆಗೆ ಗುರಿಯಾಗಬಹುದು. ಹೀಗಾಗಿ ಮಧುಮೇಹಿಗಳು ತಮ್ಮ ರೋಗವನ್ನು ನಿಯಂತ್ರಣದಲ್ಲಿರಿಸಲು ತಮ್ಮ ಆಹಾರ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಸಾಧ್ಯವಾದಷ್ಟು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಔಷಧಿಗಳನ್ನು ಸೇವಿಸುವ ಮೂಲಕ ಆಗಾಗ್ಗೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಮಧುಮೇಹಿಗಳು ಅನಾರೋಗ್ಯಕ್ಕೊಳಗಾದಾಗ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ನಿಯಮಿತ ನಿಗಾ,ಇನ್ಸುಲಿನ್ ಸೇರಿದಂತೆ ಔಷಧಿಗಳ ಹೊಂದಾಣಿಕೆ,ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮತ್ತು ಅಧಿಕ ದ್ರವಗಳ ಸೇವನೆ ಅಗತ್ಯವಾಗಬಹುದು. ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಗಳನ್ನು ಹೊಂದಿರುವವರು ಸೌಮ್ಯ ಸ್ವರೂಪದ ಸೋಂಕಿನ ಲಕ್ಷಣಗಳಿದ್ದರೂ ಮೊದಲಿನಂತೆ ಎಲ್ಲ ಔಷಧಿಗಳನ್ನು ನಿಯಮಿತವಾಗಿ ಸೇವಿಸಬೇಕು ಎನ್ನುತ್ತಾರೆ ತಜ್ಞರು. ನಿಮ್ಮ ವೈದ್ಯರು ಸೂಚಿಸಿದ ಹೊರತು ಯಾವುದೇ ಔಷಧಿಯ ಸೇವನೆಯನ್ನು ನಿಲ್ಲಿಸಬೇಡಿ,ನಿಮ್ಮ ವೈದ್ಯರನ್ನು ಭೇಟಿಯಾಗಲು ತಕ್ಷಣಕ್ಕೆ ಸಾಧ್ಯವಿಲ್ಲದಿದ್ದರೆ ನಿಮ್ಮ ಅಧಿಕ ರಕ್ತದೊತ್ತಡ,ಮಧುಮೇಹ ಮತ್ತು ಹೃದ್ರೋಗಗಳ ಔಷಧಿಗಳ ಸೇವನೆಯನ್ನು ಮುಂದುವರಿಸಿ. ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವ ಔಷಧಿಗಳ (ಸ್ಟಾಟಿನ್‌ಗಳು) ಸೇವನೆಯನ್ನು ಅಗತ್ಯವಾಗಿ ಮುಂದುವರಿಸಬೇಕು.

* ಅಧಿಕ ರಕ್ತದೊತ್ತಡದ ಔಷಧಿಗಳು ಕೋವಿಡ್-19ರ ತೀವ್ರತೆಯನ್ನು ಹೆಚ್ಚಿಸುತ್ತವೆ ಎಂಬ ವರದಿಗಳಿವೆಯಲ್ಲ?

 - ರ್ಯಾಮಿಪ್ರಿಲ್,ಎನಲ್‌ಪ್ರಿಲ್‌ನಂತಹ ಎಸಿಇ ಇನಹಿಬಿಟರ್‌ಗಳು ಮತ್ತು ಲೊಸಾರ್ಟಿನ್,ಟೆಲ್ಮಿಸಾರ್ಟಾನ್‌ನಂತಹ ಆ್ಯಂಜಿಯೊಟೆನ್ಸಿನ್ ರಿಸೆಪ್ಟರ್ ಬ್ಲಾಕರ್‌ಗಳು ಈ ಎರಡು ಗುಂಪುಗಳಿಗೆ ಸೇರಿದ ಔಷಧಿಗಳು ಕೋವಿಡ್-19ಕ್ಕೆ ತುತ್ತಾಗುವ ಅಪಾಯವನ್ನು ಅಥವಾ ಅಥವಾ ತೀವ್ರತೆಯನ್ನು ಹೆಚ್ಚಿಸುತ್ತವೆ ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷಾಧಾರವಿಲ್ಲ. ಈ ಔಷಧಿಗಳು ಹೃದಯದ ಕಾರ್ಯವನ್ನು ಬೆಂಬಲಿಸುವ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯ ವೈಫಲ್ಯದ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿವೆ. ವೈದ್ಯರ ಸಲಹೆ ಪಡೆಯದೆ ನೀವಾಗಿಯೇ ಈ ಔಷಧಿಗಳ ಸೇವನೆಯನ್ನು ನಿಲ್ಲಿಸುವುದು ಹಾನಿಕಾರಕವಾಗಬಹುದು ಮತ್ತು ಹೃದಯದ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು.

    * ನೋವು ಅಥವಾ ಜ್ವರಕ್ಕೆ ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು? -ಇಬುಪ್ರೊಫೆನ್‌ನಂತಹ ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳು (ಎನ್‌ಎಸ್‌ಎಐಡಿ) ಕೋವಿಡ್-19 ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ ಎನ್ನುವುದು ಕಂಡುಬಂದಿದೆ. ಇಂತಹ ಔಷಧಿಗಳು ದುರ್ಬಲ ಹೃದಯವನ್ನು ಹೊಂದಿರುವವರಿಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಎನ್‌ಎಸ್‌ಎಐಡಿಗಳ ಸೇವನೆಯನ್ನು ನಿವಾರಿಸಿ ಅಥವಾ ವೈದ್ಯರು ಸೂಚಿಸಿದರೆ ಮಾತ್ರ ತೆಗೆದುಕೊಳ್ಳಿ. ಪ್ಯಾರಾಸಿಟಮಲ್ ಅಗತ್ಯವಿದ್ದರೆ ಬಳಸಬಹುದಾದ ಅತ್ಯಂತ ಸುರಕ್ಷಿತ ನೋವು ನಿವಾರಕವಾಗಿದೆ. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಿ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಅಲ್ಲದೆ ಅಪಾಯವನ್ನುಂಟು ಮಾಡುವ ಕೆಲವು ಅಂಶಗಳತ್ತಲೂ ಗಮನ ನೀಡಬೇಕು. ಧೂಮ್ರಪಾನ ಮತ್ತು ಮದ್ಯಪಾನವನ್ನು ನಿವಾರಿಸಿ. ನಿಮ್ಮ ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News