ಝಕಾತ್-‘ಹಂಚಿ ತಿನ್ನುವ ಸಂಸ್ಕೃತಿ’ಯ ವಿವಿಧ ಆಯಾಮಗಳು

Update: 2021-04-30 05:10 GMT

ಕುರ್‌ಆನ್‌ನಲ್ಲಿ ಒಂದು ಕಡೆ ಸ್ವರ್ಗಕ್ಕೆ ಅರ್ಹರು ಯಾರೆಂಬುದನ್ನು ವಿವರಿಸುತ್ತಾ ಅವರ ಒಂದೊಂದೇ ಗುಣಗಳನ್ನು ಎಣಿಸಲಾಗಿದೆ. ಆ ಸಾಲಲ್ಲಿ ಪ್ರಸ್ತಾಪಿಸಲಾಗಿರುವ ಒಂದು ಗುಣ ಹೀಗಿದೆ:

‘‘ಅವರ ಸಂಪತ್ತಿನಲ್ಲಿ, ಯಾಚಕರಿಗೆ ಹಾಗೂ ವಂಚಿತರಿಗೆ ಹಕ್ಕಿತ್ತು.’’ (51:19)

ಇನ್ನೊಂದು ಕಡೆ ಕುರ್‌ಆನ್‌ನಲ್ಲಿ ಧರ್ಮನಿಷ್ಠರ ಗುಣವನ್ನು ಈ ರೀತಿ ವರ್ಣಿಸಲಾಗಿದೆ:

 ‘‘... ಮತ್ತು ಅವರು ಸ್ವತಃ ತಾವು ಕಷ್ಟದಲ್ಲಿದ್ದರೂ ಅವರಿಗೆ (ಇತರರಿಗೆ) ಪ್ರಾಶಸ್ತ್ಯ ನೀಡುತ್ತಾರೆ. ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ವಿಜಯಿಗಳು.’’

 ಕುರ್‌ಆನ್‌ನಲ್ಲಿ, ಶುದ್ಧ ಮನಸ್ಸಿನಿಂದ, ಅಲ್ಲಾಹನ ಮೆಚ್ಚುಗೆ ಗಳಿಸಲು, ಸತ್ಕಾರ್ಯಗಳಿಗಾಗಿ ಮತ್ತು ಜನಸೇವೆಗಾಗಿ ಮಾಡುವ ಖರ್ಚನ್ನು ‘‘ಅಲ್ಲಾಹನಿಗೆ ನೀಡಲಾದ ಸಾಲ’’ ಎಂದು ವೈಭವೀಕರಿಸಲಾಗಿದೆ. ಅಂದರೆ ಅದಕ್ಕೆ ಪ್ರತಿಫಲ ನೀಡುವ ಋಣ ಅಲ್ಲಾಹನ ಮೇಲಿರುತ್ತದೆ. ಜಿಪುಣರು, ಧನದಾಹಿಗಳು ಮತ್ತು ಸಂಗ್ರಹಕೋರರ ಕುರಿತು ಕುರ್‌ಆನ್ ಹೀಗೆನ್ನುತ್ತದೆ:

‘‘ಅಲ್ಲಾಹನು ಅವನ ಅನುಗ್ರಹದಿಂದ ತಮಗೆ ದಯಪಾಲಿಸಿರುವುದರಲ್ಲಿ (ಸಂಪತ್ತಿನಲ್ಲಿ) ಜಿಪುಣತೆ ತೋರುವವರು, ಅದು ತಮ್ಮ ಪಾಲಿಗೆ ಉತ್ತಮವೆಂದು ಭಾವಿಸದಿರಲಿ. ನಿಜವಾಗಿ ಅದು (ಜಿಪುಣತೆ) ಅವರ ಪಾಲಿಗೆ ಕೆಟ್ಟದಾಗಿದೆ. ಅವರು ಜಿಪುಣತೆ ತೋರಿದ ಆ ಸಂಪತ್ತನ್ನು ಪುನರುತ್ಥಾನ ದಿನ ಹೊರೆಯಾಗಿಸಿ ಅವರ ಕೊರಳಿಗೆ ಕಟ್ಟಲಾಗುವುದು. ಆಕಾಶಗಳ ಮತ್ತು ಭೂಮಿಯ ಅಂತಿಮ ಒಡೆತನವು ಅಲ್ಲಾಹನಿಗೇ ಸೇರಿದೆ ಮತ್ತು ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.’’ (3:180)

‘‘ವಿನಾಶ ಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ. ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ. ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ. ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು. ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು? ಅದು ಅಲ್ಲಾಹನು ಉರಿಸಿದ ಬೆಂಕಿ. ಅದು ಹೃದಯಗಳನ್ನೂ ತಲುಪುವುದು.8. ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು. ಉದ್ದದ ಸ್ತಂಭಗಳ ರೂಪದಲ್ಲಿ.’’ (104: 1 ರಿಂದ 9)

 ಇಸ್ಲಾಮ್ ಧರ್ಮದಲ್ಲಿ, ಸಮಾಜ ಮತ್ತು ಸಹಜೀವಿಗಳಿಗಾಗಿ ಖರ್ಚು ಮಾಡುವುದಕ್ಕೆ ಅಸಾಮಾನ್ಯ ಮಹತ್ವ ನೀಡಲಾಗಿದೆ. ಇಸ್ಲಾಮ್ ಧರ್ಮದ ಪಂಚ ಸ್ತಂಭಗಳ ಪೈಕಿ ಮೂರನೆಯ ಅಥವಾ ಮಧ್ಯದ ಸ್ತಂಭ ಝಕಾತ್. ಝಕಾತ್ ಅನ್ನು ಸಾಮಾನ್ಯವಾಗಿ ಕಡ್ಡಾಯ ದಾನ ಎಂದು ಅನುವಾದಿಸಲಾಗುತ್ತದೆ. ಆದರೆ ಇಸ್ಲಾಮ್ ಧರ್ಮದಲ್ಲಿ ದಾನದ ಹಲವು ಸ್ವರೂಪಗಳನ್ನು ಪರಿಚಯಿಸಲಾಗಿದ್ದು, ಝಕಾತ್ ಅವುಗಳಿಗಿಂತ ಭಿನ್ನವಾಗಿದೆ. ಇತರ ದಾನಗಳಂತೆ ಇದು ಕೊಡುವಾತನ ಇಷ್ಟ ಅಥವಾ ಔದಾರ್ಯವನ್ನು ಅವಲಂಬಿಸಿರುವುದಿಲ್ಲ. ಮುಸ್ಲಿಮರ ಆಡಳಿತ ಇರುವಲ್ಲಿ, ಝಕಾತ್ ಕೊಡಬೇಕಾದವರು ಸ್ವಪ್ರೇರಣೆಯಿಂದ ಅದನ್ನು ಕೊಡದಿದ್ದರೆ, ಬಲವಂತವಾಗಿ ಅದನ್ನು ಅವರಿಂದ ಕಿತ್ತುಕೊಂಡು ಅರ್ಹರಿಗೆ ತಲುಪಿಸಬೇಕಾದ ಹೊಣೆ ಸರಕಾರದ ಮೇಲಿದೆ. ಈ ದೃಷ್ಟಿಯಿಂದ ಝಕಾತ್ ತೆರಿಗೆಯ ಸ್ವರೂಪದ ಒಂದು ಕಡ್ಡಾಯ ಪಾವತಿಯಾಗಿದೆ.

 ಮುಸ್ಲಿಮರ ಪಾಲಿಗೆ ನಮಾಜ್ ಎಂಬ ಆರಾಧನೆ ಪ್ರತಿ ದಿನ 5 ಹೊತ್ತು ಕಡ್ದಾಯ. ಅದೇ ವೇಳೆ ಝಕಾತ್ ವರ್ಷಕ್ಕೊಮ್ಮೆ ಮಾತ್ರ ಕಡ್ಡಾಯ. ಆದರೂ ಕುರ್‌ಆನ್‌ನಲ್ಲಿ 25ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ನಮಾಜ್ ಮತ್ತು ಝಕಾತ್ ಅನ್ನು ಜೊತೆ ಜೊತೆಯಾಗಿ ಪ್ರಸ್ತಾಪಿಸಲಾಗಿದೆ. ಎರಡಕ್ಕೂ ಸಮಾನ ಮಹತ್ವ ನೀಡಲಾಗಿದೆ. ಪ್ರವಾದಿ ಮುಹಮ್ಮದ್(ಸ) ಅವರ ಬಳಿಕ ಅವರ ಉತ್ತರಾಧಿಕಾರಿಗಳಾದ ಅಬೂಬಕರ್ ಮತ್ತು ಉಮರ್ (ರ) ಇವರ ಪೈಕಿ ಅಬೂಬಕರ್ ತುಂಬಾ ಮೃದು ಸ್ವಭಾವದವರು ಮತ್ತು ಉಮರ್ ತುಂಬಾ ಕಠಿಣ ನಿಲುವಿನವರು ಎಂದು ಹೆಚ್ಚಿನವರು ನಂಬಿರುತ್ತಾರೆ. ಆದರೆ ಪ್ರವಾದಿವರ್ಯರ (ಸ) ನಿಧನಾನಂತರ ಮುಸ್ಲಿಮ್ ಸಮಾಜದ ಒಂದು ವರ್ಗ ಬಂಡಾಯವೆದ್ದು, ತಾವು ಧರ್ಮದ ಬೇರೆಲ್ಲ ಆದೇಶಗಳನ್ನು ಪಾಲಿಸುತ್ತೇವೆ, ಆದರೆ ಝಕಾತ್ ಅನ್ನು ಮಾತ್ರ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿಯಿತು. ಅವರ ವಿಷಯದಲ್ಲಿ ಎಂತಹ ಧೋರಣೆ ಅನುಸರಿಸಬೇಕೆಂಬ ಕುರಿತು ನಾಯಕರ ನಡುವೆ ಸಮಾಲೋಚನೆ ನಡೆದಾಗ ಅವರಿಗೆ ಕಾಲಾವಕಾಶ ಕೊಡಬೇಕು ಎಂಬುದು ಉಮರ್ (ರ) ಅವರ ಅಭಿಮತವಾಗಿತ್ತು. ಆದರೆ ಅಬೂಬಕರ್ (ರ) ಅವರ ಪ್ರಕಾರ, ಝಕಾತ್, ಧರ್ಮದ ಮೂಲ ಸ್ತಂಭಗಳ ಪೈಕಿ ಒಂದಾದ್ದರಿಂದ ಅದನ್ನು ತೊರೆದವರನ್ನು ಧರ್ಮದ್ರೋಹಿಗಳೆಂದು ಪರಿಗಣಿಸುವುದು ಅನಿವಾರ್ಯವಾಗಿತ್ತು. ‘‘ಪ್ರವಾದಿಯವರ ಕಾಲದಲ್ಲಿ ಕೇವಲ ಒಂಟೆ ಕಟ್ಟುವ ಒಂದು ಹಗ್ಗವನ್ನು ಝಕಾತ್ ರೂಪದಲ್ಲಿ ಕೊಡುತ್ತಿದ್ದವನು ಕೂಡಾ ಈಗ ಅದನ್ನು ಕೊಡಲು ನಿರಾಕರಿಸಿದರೆ ನಾನು ಅವನ ವಿರುದ್ಧ ಯುದ್ಧ ಸಾರುತ್ತೇನೆ ಎಂದು ಅವರು ಘೋಷಿಸಿದರು.’’ ಅವರು ಆ ಮಾತು ಹೇಳಿ ಹಲವು ಶತಮಾನಗಳು ಕಳೆದರೂ, ಇಂದು ಕೂಡಾ ಝಕಾತ್‌ನ ಮಹತ್ವದ ಕುರಿತು ನಡೆಯುವ ಪ್ರತಿಯೊಂದು ಚರ್ಚೆಯಲ್ಲಿ ಅವರ ಆ ಮಾತು ಮಾರ್ದನಿಸುತ್ತದೆ. ಇದರ ಸರಳ ಅರ್ಥ ಇಷ್ಟೇ. ಝಕಾತ್‌ನ ನಿರಾಕರಣೆ ಧರ್ಮದ ನಿರಾಕರಣೆಗೆ ಸಮಾನವಾಗಿದೆ.

ಮರೆಯಬಾರದ ವ್ಯತ್ಯಾಸ

 ಝಕಾತ್ ಕುರಿತು ಯಾವುದೇ ಚರ್ಚೆಗೆ ಮುನ್ನ ಒಂದು ವಿಷಯ ಬಹಳ ಸ್ಪಷ್ಟವಾಗಿರಬೇಕು. ಮುಸ್ಲಿಮರು ಎಲ್ಲೇ ಇರಲಿ, ಅವರ ಮೇಲೆ ‘ಇನ್ಫಾಕ್’ ಎಂಬೊಂದು ನಿತ್ಯ ಕರ್ತವ್ಯವಿದೆ. ‘ಇನ್ಫಾಕ್’ ಎಂದರೆ ವಿವಿಧ ಬಗೆಯ ಸತ್ಕಾರ್ಯಗಳಿಗಾಗಿ, ತನ್ನ ಸ್ವಂತದ್ದಲ್ಲದ ಕಲ್ಯಾಣ ಕಾರ್ಯಗಳಲ್ಲಿ ಅಥವಾ ಸಾರ್ವಜನಿಕ ಹಿತದ ಕಾರ್ಯಗಳಲ್ಲಿ, ಬಂಧು ಬಳಗ ಮತ್ತು ನೆರೆಯವರಿಗಾಗಿ ಖರ್ಚು ಮಾಡುವುದು. ಸಾಮಾನ್ಯವಾಗಿ ಮುಸ್ಲಿಮರು ಜನಸೇವೆ, ಸತ್ಕಾರ್ಯ ಇತ್ಯಾದಿಗಳಿಗಾಗಿ ಮಾಡುವ ಒಟ್ಟು ವಾರ್ಷಿಕ ‘ಇನ್ಫಾಕ್’ ಅಥವಾ ಖರ್ಚಿನಲ್ಲಿ ಝಕಾತ್‌ನ ಭಾಗ ತೀರಾ ಸಣ್ಣದು. ಅದರ ಹೆಚ್ಚಿನ ಭಾಗ ‘ಸದಕಃ’ ದ ರೂಪದಲ್ಲಿರುತ್ತದೆ. ಅದು ಧಾರ್ಮಿಕ, ಸಾಮಾಜಿಕ ಹಾಗೂ ನೈತಿಕ ಸ್ವರೂಪದ ಸಾಮಾಜಿಕ ಹೊಣೆಗಾರಿಕೆ. ಅದು ಕಾನೂನಿನ ಮೂಲಕ ಅನುಷ್ಠಾನಿಸಬಹುದಾದ ಕರ್ತವ್ಯವಲ್ಲ. ಹಂಚಿ ತಿನ್ನುವ ಈ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ನಿತ್ಯವೂ ತಮ್ಮ ಸಾಮರ್ಥ್ಯಾನುಸಾರ ಪಾಲಿಸುತ್ತಿರಬೇಕು. ಹಾಗೆ ಮಾಡುವುದಕ್ಕೆ ಇತರರನ್ನು ಪ್ರೇರೇಪಿಸುತ್ತಲೂ ಇರಬೇಕು. ಅದಕ್ಕೆ ಇಂತಿಷ್ಟು ಎಂಬ ಅಳತೆ, ಪ್ರಮಾಣವನ್ನೇನೂ ನಿಗದಿ ಪಡಿಸಲಾಗುವುದಿಲ್ಲ.

 ಮುಸ್ಲಿಮರು ನಂಬುವಂತೆ, ಸಂಪತ್ತಿನ ಮೇಲೆ ಮಾನವರ ಮಾಲಕತ್ವದ ಸ್ವರೂಪ ತೀರಾ ಸೀಮಿತ. ಜಗತ್ತಿನಲ್ಲಿರುವ ಎಲ್ಲ ಸಂಪತ್ತು, ಸವಲತ್ತುಗಳ ಅಂತಿಮ ಹಾಗೂ ನೈಜ ಒಡೆಯ ಈ ವಿಶ್ವದ ಸೃಷ್ಟಿಕರ್ತ ಹಾಗೂ ಪರಿಪಾಲಕನಾದ ಅಲ್ಲಾಹನು ಮಾತ್ರ. ಮನುಷ್ಯರು ತಮ್ಮ ಬಳಿ ಏನಿದೆಯೋ ಅದರ ಕೇವಲ ತಾತ್ಕಾಲಿಕ ಪಾಲಕರು, ಪರಿಪಾಲಕರು ಅಥವಾ ಉಸ್ತುವಾರಿ ಹೊತ್ತವರು ಮಾತ್ರ. ಬದುಕೇ ಪರೀಕ್ಷಾರ್ಥವಾದ್ದರಿಂದ ದಾರಿದ್ರ್ಯ, ಶ್ರೀಮಂತಿಕೆಗಳೆಲ್ಲವನ್ನೂ ಪರೀಕ್ಷೆ ಎಂದೇ ಪರಿಗಣಿಸಬೇಕು. ಯಾವ ಸ್ಥಿತಿಯೂ ಶಾಶ್ವತವಲ್ಲ ಎಂಬುದನ್ನು ಸದಾ ನೆನಪಿಟ್ಟಿರಬೇಕು. ದಾರಿದ್ರ್ಯದ ಪರೀಕ್ಷೆಯನ್ನು, ಅಸೂಯೆ, ಅಕ್ರಮ, ಅಪರಾಧಗಳಲ್ಲಿ ತೊಡಗದೆ ಶ್ರಮ, ಘನತೆ, ಪ್ರಾಮಾಣಿಕತೆ ಮತ್ತು ಸ್ವಾಭಿಮಾನಗಳ ಮೂಲಕ ಗೆಲ್ಲಬಹುದು, ಶ್ರೀಮಂತಿಕೆಯ ಪರೀಕ್ಷೆ ಹೆಚ್ಚು ಕಠಿಣವಾಗಿರುತ್ತದೆ. ಶ್ರೀಮಂತನಾದವನು ಜಿಪುಣತೆ, ದೊಡ್ಡಸ್ತಿಕೆ, ದಾಸ್ತಾನುಕೋರತನ, ಆಡಂಬರ, ಅತಿವ್ಯಯ, ದುರ್ವ್ಯಯ, ತೋರಿಕೆ ಇತ್ಯಾದಿ ಹಲವು ಕೆಡುಕುಗಳಿಂದ ದೂರ ಉಳಿದಿರಬೇಕಾಗುತ್ತದೆ. ತನ್ನ ಬಳಿ ಇದ್ದುದನ್ನು ಗರಿಷ್ಠ ಪ್ರಮಾಣದಲ್ಲಿ ತನ್ನ ಅಕ್ಕಪಕ್ಕದವರು ಮತ್ತು ಸಮಾಜದ ಜೊತೆ ಹಂಚಿಕೊಳ್ಳುತ್ತಾ ಇರಬೇಕಾಗುತ್ತದೆ. ಅನ್ಯಥಾ ಅವನ ಸಂಪತ್ತೇ ಅವನ ಪಾಲಿಗೆ ವಿನಾಶದ ಸಾಧನವಾಗಿ ಬಿಡುತ್ತದೆ.

ಝಕಾತ್ - ಅರ್ಥ

ಅರಬಿ ಭಾಷೆಯಲ್ಲಿ ಝ, ಕಾಫ್ ಮತ್ತು ಯ ಎಂಬ ಮೂರಕ್ಷರಗಳಿಂದ ಮೂಡುವ ‘ಝಕಾತ್’ ಎಂಬ ಪದಕ್ಕೆ ಶುಚೀಕರಿಸುವ ಸಾಧನ, ಸಂಸ್ಕರಣ, ಸಮೃದ್ಧಿ ಎಂಬಿತ್ಯಾದಿ ಅರ್ಥಗಳಿವೆ. ಆರಾಧನಾ ಕರ್ಮಗಳ ಮೂಲಕ ಚಿತ್ತ ಶುದ್ಧಿ ಪ್ರಾಪ್ತವಾಗುವಂತೆ ದಾನದ ಮೂಲಕ ಸೊತ್ತು, ಸಂಪತ್ತುಗಳು ಶುದ್ಧವಾಗುತ್ತವೆ, ಝಕಾತ್ ಪಾವತಿಸಲು ಬದ್ಧರಾದವರು ಅದನ್ನು ಪಾವತಿಸಿದರೆ ಆ ಮೂಲಕ ಅವರ ಸಂಪತ್ತು ಶುದ್ಧವಾಗುತ್ತದೆ ಮತ್ತು ಅವರಿಗೆ ಸಮೃದ್ಧಿ ಪ್ರಾಪ್ತವಾಗುತ್ತದೆ ಅನ್ಯಥಾ ಅವರ ಸಂಪೂರ್ಣ ಸಂಪತ್ತು ಅವರ ಪಾಲಿಗೆ ಮಲಿನವಾಗಿಯೇ ಉಳಿಯುತ್ತದೆ ಎಂದು ಮುಸ್ಲಿಮರು ನಂಬುತ್ತಾರೆ.

ಝಕಾತ್ - ಸಮಯ

 ಝಕಾತ್ ಅನ್ನು ವರ್ಷಕ್ಕೊಮ್ಮೆ ಪಾವತಿಸಲಾಗುತ್ತದೆ. ವರ್ಷವನ್ನು ಚಂದ್ರಮಾನ ಕ್ಯಾಲೆಂಡರ್ ಆಧಾರದಲ್ಲಿ (354 ದಿನಗಳು) ಗಣಿಸಲಾಗುತ್ತದೆ. ವರ್ಷದ ಯಾವ ತಿಂಗಳ ಯಾವ ದಿನವನ್ನು ಝಕಾತ್ ಪಾವತಿಗಾಗಿ ವರ್ಷಾಂತ್ಯವೆಂದು ಪರಿಗಣಿಸಬೇಕೆಂಬುದು ಆಯಾ ವ್ಯಕ್ತಿಯ ನಿರ್ಧಾರಕ್ಕೆ ಬಿಟ್ಟದ್ದು. ರಮಝಾನ್ ತಿಂಗಳಲ್ಲೇ ಅದನ್ನು ಪಾವತಿಸಬೇಕೆಂಬ ನಿರ್ಬಂಧವೇನಿಲ್ಲ.

ಝಕಾತ್-ಯಾರು, ಎಷ್ಟು ಪಾವತಿಸಬೇಕು?

 ಯಾರ ಬಳಿ ‘ನಿಸಾಬ್’ ಅಥವಾ ನಿರ್ದಿಷ್ಟ ಕನಿಷ್ಠ ಮೊತ್ತಕ್ಕಿಂತ ಹೆಚ್ಚು ಸಂಪತ್ತಿದೆಯೋ ಅವರು ಕಡ್ಡಾಯವಾಗಿ ಝಕಾತ್ ಪಾವತಿಸಬೇಕು. ಆಧುನಿಕ ಲೆಕ್ಕಾಚಾರ ಪ್ರಕಾರ ವರ್ಷಾಂತ್ಯದಲ್ಲಿ, ಒಬ್ಬ ವ್ಯಕ್ತಿಯ ಮಾಲಕತ್ವದಲ್ಲಿ, 87.48 ಗ್ರಾಂಗಿಂತ ಅಧಿಕ ಚಿನ್ನ ಅಥವಾ 612.36 ಗ್ರಾಮ್‌ಗಿಂತ ಅಧಿಕ ಬೆಳ್ಳಿ ಅಥವಾ ಅವುಗಳ ಮೌಲ್ಯಕ್ಕಿಂತ ಹೆಚ್ಚಿನ ನಗದು ಅಥವಾ ಸೊತ್ತು ಇದ್ದರೆ, ಅವರು ತಮ್ಮ ಬಳಿ ಇರುವ ಒಟ್ಟು ಸೊತ್ತಿನ ಮೌಲ್ಯದ ಶೇ.2.5 ಭಾಗವನ್ನು ವಾರ್ಷಿಕ ಝಕಾತ್ ರೂಪದಲ್ಲಿ ಪಾವತಿಸಬೇಕಾಗುತ್ತದೆ. ವ್ಯಕ್ತಿಗತವಾಗಿ ಬಳಸಲಾಗುತ್ತಿರುವ ಮನೆ, ವಾಹನ ಅಥವಾ ನಿತ್ಯ ಬಳಕೆಯ ಆಭರಣಗಳ ಮೇಲೆ ಝಕಾತ್ ಅನ್ವಯಿಸುವುದಿಲ್ಲ. ಉತ್ಪಾದನೆಯ ಸಾಧನಗಳಾಗಿ ಬಳಕೆಯಲ್ಲಿರುವ ಹೊಲ, ತೋಟ, ಯಂತ್ರೋಪಕರಣಗಳ ಮೇಲೂ ಝಕಾತ್ ಅನ್ವಯಿಸುವುದಿಲ್ಲ. ಅವುಗಳಿಂದ ದೊರೆತ ಉತ್ಪನ್ನವನ್ನು ಮಾರಿ ಸಿಕ್ಕ ಆದಾಯದ ಮೇಲೆ ಝಕಾತ್ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಒಂದು ವರ್ಷದ ಅವಧಿಯಲ್ಲಿ ವಿವಿಧ ಸತ್ಕಾರ್ಯಗಳಿಗಾಗಿ ಎಷ್ಟು ಮೊತ್ತವನ್ನು ದಾನವಾಗಿ ನೀಡಿದ್ದರೂ ಆ ಕಾರಣಕ್ಕಾಗಿ ಅವನಿಗೆ ಝಕಾತ್‌ನಿಂದ ವಿನಾಯಿತಿ ದೊರೆಯುವುದಿಲ್ಲ.

ಝಕಾತ್-ಯಾರಿಗೆ ಸಲ್ಲಬೇಕು? ಯಾರಿಗೆ ಸಲ್ಲಬಾರದು?

 ‘‘ನಿಜವಾಗಿ ದಾನಗಳು (ಝಕಾತ್) ಇರುವುದು - ಬಡವರಿಗಾಗಿ, ದೀನರಿಗಾಗಿ, ಅದರ ವಿತರಕರಿಗಾಗಿ, ಯಾರ ಮನ ಒಲಿಸಬೇಕಾಗಿದೆಯೋ ಅವರಿಗಾಗಿ, ಕೊರಳು ಬಿಡಿಸುವುದಕ್ಕಾಗಿ (ದಾಸ್ಯ ವಿಮೋಚನೆಗಾಗಿ), ಸಾಲಗಾರರಿಗಾಗಿ, ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ. ಇದು ಅಲ್ಲಾಹನು ವಿಧಿಸಿರುವ ಕಡ್ಡಾಯ ನಿಯಮ. ....’’ (9:60) ಈ ಮೇಲಿನ ಕುರ್‌ಆನ್ ಆದೇಶದ ಆಧಾರದಲ್ಲಿ 8 ವಿವಿಧ ವರ್ಗಗಳನ್ನು ಝಕಾತ್ ಪಡೆಯಲು ಅರ್ಹವೆಂದು ಪರಿಗಣಿಸಲಾಗಿದೆ:

 1. ಮತ್ತು 2. ಫುಖರಾ ಮತ್ತು ಮಸಾಕೀನ್ - ಬಡವರು, ಕಡು ಬಡತನದಲ್ಲಿದ್ದರೂ ಯಾಚಿಸಲು ಹಿಂಜರಿಯುವವರು, ಅನಾಥರು, ನಿರ್ಗತಿಕರು, ವಿಕಲಾಂಗಿಗಳು, ಮೂಲಭೂತ ಅಗತ್ಯಗಳಿಗಾಗಿ ಪಾಡು ಪಡುತ್ತಿರುವವರು, ಯಾಚಕರು, ನಿರಾಶ್ರಿತರು ಇತ್ಯಾದಿ.

3. ಝಕಾತ್ ಸಂಗ್ರಹ ಮತ್ತು ವಿತರಣೆಯ ಉದ್ಯೋಗದಲ್ಲಿ ನಿಯುಕ್ತರಾಗಿರುವವರು- ಈ ಕಾರ್ಯವನ್ನು ಸ್ವಯಂಸೇವಕರು ಅಥವಾ ಸ್ವಯಂಸೇವಕ ಸಂಸ್ಥೆಗಳು ಉಚಿತವಾಗಿ ನಡೆಸುತ್ತಿದ್ದರೆ, ಆ ಮೊತ್ತವನ್ನು, ಈ ಪಟ್ಟಿಯಲ್ಲಿರುವ ಇತರ ಅರ್ಹರಿಗೆ ಸಲ್ಲಿಸಬೇಕು.

4. ಸದ್ಭಾವನೆ ಬೆಳೆಸುವ ಚಟುವಟಿಕೆಗಳು-ಸಹಾಯ ಹಸ್ತ ಚಾಚಿದರೆ ಸಮುದಾಯದ ಹತ್ತಿರ ಬರುವುದಕ್ಕೆ ಅಥವಾ ಅದರಿಂದ ದೂರ ಹೋಗದಿರುವುದಕ್ಕೆ ಒಲವು ತೋರಬಹುದಾದವರು.

5. ದಾಸ್ಯ ಅಥವಾ ಬಂಧನದಲ್ಲಿರುವವರು - ದಾಸ್ಯ, ಜೀತ, ಸೆರೆ ಅಥವಾ ಒತ್ತೆ ಸ್ಥಿತಿಯಲ್ಲಿರುವವರನ್ನು ವಿಮೋಚಿಸಲು. 6. ಸಾಲಗಾರರು-ಮೂಲಭೂತ ಅಗತ್ಯಗಳಿಗಾಗಿ ಅನಿವಾರ್ಯವಾಗಿ ಸಾಲ ಪಡೆದು, ಮರುಪಾವತಿ ಮಾಡಲಾಗದೆ ನರಳುತ್ತಿರುವವರನ್ನು ಸಾಲಮುಕ್ತರಾಗಿಸಲು.

7. ಅಲ್ಲಾಹನ ಮಾರ್ಗದ ಸತ್ಕಾರ್ಯಗಳು (ಸನ್ನಿವೇಶಕ್ಕನುಸಾರ ರಕ್ಷಣೆ, ಭದ್ರತೆ, ಸಮಷ್ಟಿ ಹಿತ ಹಾಗೂ ಸಮಾಜ ಕಲ್ಯಾಣ ಕಾರ್ಯಗಳು)

8. ಪ್ರಯಾಣಿಕರು (ಹೊರನಾಡುಗಳಿಂದ ಬಂದವರ ಅಗತ್ಯಗಳು, ದಾರಿಹೋಕರ ಹಿತಾಸಕ್ತಿ, ರಸ್ತೆ, ಸೇತುವೆಗಳ ನಿರ್ಮಾಣ, ಪ್ರಯಾಣಿಕರ ಸತ್ರ, ತಾಣ, ಆಶ್ರಯಗಳ ನಿರ್ಮಾಣ ಇತ್ಯಾದಿ)

ಪ್ರಸ್ತುತ ಪಟ್ಟಿಯಲ್ಲಿನ ಎಲ್ಲರಿಗೂ ಪ್ರತ್ಯಪ್ರತ್ಯೇಕವಾಗಿ ಝಕಾತ್ ಪಾವತಿಸಬೇಕಾಗಿಲ್ಲ. ಈ ಪೈಕಿ ಯಾವುದಾದರೂ ಒಂದು ವಿಭಾಗಕ್ಕೆ ಪಾವತಿಸಿದರೂ ಸಾಕಾಗುತ್ತದೆ.

   ತಂದೆ ತಾಯಿ, ಅಜ್ಜ, ಅಜ್ಜಿ, ಮಕ್ಕಳು, ಮೊಮ್ಮಕ್ಕಳು - ಇವರಿಗೆ ಝಕಾತ್ ಪಾವತಿಸುವಂತಿಲ್ಲ. ಹಾಗೆಯೇ ಪತಿಯು ಪತ್ನಿಗೆ ಅಥವಾ ಪತ್ನಿಯು ಪತಿಗೆ ಝಕಾತ್ ಪಾವತಿಸುವಂತಿಲ್ಲ.

 ಸ್ವಾಲಂಬಿಯಾಗಿರುವ ಮತ್ತು ಸ್ವತಃ ಸಂಪಾದಿಸಬಲ್ಲವರಿಗೆ ಝಕಾತ್ ಪಾವತಿ ಸಲ್ಲದು. ಅದು ಅಸಹಾಯಕರ ಹಕ್ಕು.

ಸಾಮಾನ್ಯ ನಿಯಮ ಪ್ರಕಾರ ಝಕಾತ್ ಎಂಬುದು ಮುಸ್ಲಿಮ್ ಸಮಾಜದ ಒಂದು ಶುದ್ಧ ಆಂತರಿಕ ವ್ಯವಹಾರ. ಝಕಾತ್ ಅನ್ನು ಸ್ಥಿತಿವಂತ ಮುಸ್ಲಿಮರಿಂದ ಸಂಗ್ರಹಿಸಿ ನೆರವಿನ ಅಗತ್ಯ ಇರುವ ಮುಸ್ಲಿಮರಿಗೆ ತಲುಪಿಸಲಾಗುತ್ತದೆ. ಮುಸ್ಲಿಮರ ಸರಕಾರ ಇರುವಲ್ಲೂ ಮುಸ್ಲಿಮರಿಂದ ಮಾತ್ರ ಇದನ್ನು ಸಂಗ್ರಹಿಸಲಾಗುತ್ತದೆ. ಇತರ ಸಮಾಜಗಳ ಸದಸ್ಯರು ಎಷ್ಟು ಶ್ರೀಮಂತರಾಗಿದ್ದರೂ ಅವರಿಂದ ಝಕಾತ್ ಸಂಗ್ರಹಿಸಲಾಗುವುದಿಲ್ಲ. ಝಕಾತ್ ಎಂಬುದು ಇನ್ಫಾಕ್ ಅಥವಾ ಸದಕಃ ಎಂಬ ಬಹಳ ವಿಶಾಲ ಸಂಸ್ಥೆಯೊಂದರ ಒಂದು ಸಣ್ಣ ಭಾಗ ಮಾತ್ರ. ಒಬ್ಬ ಸರಾಸರಿ ಸ್ಥಿತಿವಂತ ಮುಸಲ್ಮಾನ ಒಂದು ವರ್ಷದಲ್ಲಿ ವಿತರಿಸುವ ಒಟ್ಟು ದಾನದ ಮೊತ್ತಕ್ಕೆ ಹೋಲಿಸಿದರೆ ಝಕಾತ್ ಮೊತ್ತ ಹೆಚ್ಚು ಎಂದರೆ ಶೇ.10ರಷ್ಟಾಗಬಹುದು. ಆದ್ದರಿಂದ ಸಮಾಜದ ಇತರ ಸಮುದಾಯಗಳ ಸದಸ್ಯರಿಗೆ ಸಲ್ಲಬೇಕಾದ ಎಲ್ಲ ನೆರವನ್ನು ಝಕಾತ್ ಅಲ್ಲದ ಇತರ ನಿಧಿಗಳಿಂದ, ಅಂದರೆ ಉಳಿದ ಶೇ.90 ಭಾಗದಿಂದ ತಲುಪಿಸಬಹುದು - ಇದು ವಿದ್ವಾಂಸರ ಒಂದು ವರ್ಗದ ಅಭಿಪ್ರಾಯವಾದರೆ, ಸಣ್ಣ ಸಂಖ್ಯೆಯ ಇನ್ನೊಂದು ವರ್ಗವು, ಮಾನವೀಯ ನೆಲೆಯಲ್ಲಿ ನೆರವಿಗೆ ಅರ್ಹರಾದ ಇತರ ಸಮುದಾಯಗಳ ಜನರಿಗೂ ಝಕಾತ್‌ನ ಒಂದು ಭಾಗವನ್ನು ನೀಡಬಹುದು ಎಂದು ವಾದಿಸಿದ್ದಾರೆ.

ಕಿವಿಮಾತು

 ಝಕಾತ್ ಅನ್ನು ವ್ಯಕ್ತಿಗತವಾಗಿ ಭಿಕ್ಷೆಯ ರೂಪದಲ್ಲಿ ಕೊಡುವುದಕ್ಕಿಂತ, ಪ್ರವಾದಿವರ್ಯರ (ಸ) ಕಾಲದಲ್ಲಿ ಮತ್ತು ಅವರ ಉತ್ತರಾಧಿಕಾರಿಗಳ ಕಾಲದಲ್ಲಿ ಮಾಡಿದಂತೆ ಬಹಳ ವ್ಯವಸ್ಥಿತ ರೂಪದಲ್ಲಿ ಸಾಮೂಹಿಕ ಸ್ತರದಲ್ಲಿ ಪಾವತಿಸುವುದು ಒಳ್ಳೆಯದು. ಹಾಗೆ ಮಾಡಿದಾಗ ಪೂರ್ವಭಾವಿಯಾಗಿ ಅರ್ಹರನ್ನು ಗುರುತಿಸಿ ಅವರನ್ನು ಸ್ವಾವಲಂಬಿಗಳಾಗಿಸುವ ಮತ್ತು ಕ್ರಮೇಣ ಝಕಾತ್ ಪಡೆಯುವವರನ್ನು ಝಕಾತ್ ಕೊಡುವವರಾಗಿ ಪರಿವರ್ತಿಸುವ ದೊಡ್ಡ ಪ್ರಮಾಣದ ದೂರಗಾಮಿ ಯೋಜನೆಗಳನ್ನು ಅನುಷ್ಠಾನಿಸಲು ಸಾಧ್ಯವಾಗುತ್ತದೆ.

ವಿ.ಸೂ: ಇದು ಕೇವಲ ಪ್ರಾಥಮಿಕ ಮಾಹಿತಿ ಒದಗಿಸಲಿಕ್ಕಾಗಿರುವ ಕಿರುಬರಹ. ವಿವರಗಳಿಗಾಗಿ, ಈ ವಿಷಯದಲ್ಲಿ ತಜ್ಞರಾಗಿರುವ ವಿದ್ವಾಂಸರನ್ನು ಸಂಪರ್ಕಿಸಬೇಕಾಗಿ ವಿನಂತಿ.

Writer - ಯೂಸುಫ್, ಪುತ್ತಿಗೆ

contributor

Editor - ಯೂಸುಫ್, ಪುತ್ತಿಗೆ

contributor

Similar News