ಮೋದಿ ಸರಕಾರದಿಂದ ಕೋವಿಡ್-19 ಬಿಕ್ಕಟ್ಟಿನ ನಿರ್ವಹಣೆಯ ಕುರಿತು ಉತ್ತರ ಸಿಗದ ಪ್ರಶ್ನೆಗಳು

Update: 2021-04-30 14:26 GMT
Photo: Thewire.in

ಕಳೆದ ವರ್ಷ ಕೊರೋನವೈರಸ್ ಸಾಂಕ್ರಾಮಿಕ ಸ್ಫೋಟಗೊಂಡ ಬಳಿಕ ನರೇಂದ್ರ ಮೋದಿ ಸರಕಾರವು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿಗಳನ್ನು ಒದಗಿಸಲು ಮೂವರು ವಿಜ್ಞಾನಿಗಳನ್ನು ನಿಯೋಜಿಸಿದೆ. ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ‌ ರಾಘವನ್, ನೀತಿ ಆಯೋಗದ ಸದಸ್ಯ ಮತ್ತು ಲಸಿಕೆಗಳ ಕುರಿತು ರಾಷ್ಟ್ರೀಯ ತಜ್ಞರ ಸಮಿತಿಯ ಮುಖ್ಯಸ್ಥ ವಿ.ಕೆ.ಪೌಲ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಮಹಾನಿರ್ದೇಶಕ ಬಲರಾಮ ಭಾರ್ಗವ್ ಅವರು ಈ ಮೂವರು ವಿಜ್ಞಾನಿಗಳಾಗಿದ್ದಾರೆ.

ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಈ ವಿಜ್ಞಾನಿಗಳು ಸಾರ್ವಜನಿಕರಿಗೆ ಮಾಹಿತಿಗಳು ಮತ್ತು ಮಾರ್ಗದರ್ಶನವನ್ನು ನೀಡಬೇಕಿರುವ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಕೋವಿಡ್-19 ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಎದುರಿಸಲು ಮುಂದೆ ಬರುತ್ತಿಲ್ಲ. ಇವರಿಗೆ ಹೋಲಿಸಿದರೆ ವಿದೇಶಗಳ,ವಿಶೇಷವಾಗಿ ಅಮೆರಿಕ ಮತ್ತು ಬ್ರಿಟನ್ಗಳ ಅಧಿಕಾರಿಗಳೇ ಹೆಚ್ಚು ವಾಸಿ,ಅವರು ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಯುವುದಿಲ್ಲ.

ಕೊರೋನವೈರಸ್ ಸಾಂಕ್ರಾಮಿಕ ಮತ್ತು ಅದರ ಪರಿಣಾಮಗಳ ಕುರಿತು ಪ್ರಮುಖ ಭಾರತೀಯ ಮತ್ತು ಜಾಗತಿಕ ತಜ್ಞರೊಂದಿಗೆ ನಾನು ನಡೆಸಿರುವ ಸರಣಿ ಸಂದರ್ಶನಗಳ ಪರವಾಗಿ ಕಳೆದೊಂದು ವರ್ಷದಿಂದಲೂ ಈ ಮೂವರು ಅಧಿಕೃತ ತಜ್ಞರ ಪೈಕಿ ಪ್ರತಿಯೊಬ್ಬರೊಂದಿಗೂ ಸಂದರ್ಶನಗಳನ್ನು ನಡೆಸಲು ಬಹಳ ಸಲ ಪ್ರಯತ್ನಿಸಿದ್ದೇನೆ. ದುರದೃಷ್ಟವಶಾತ್ ನನ್ನ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಅವರು ನಮಗೆ ಸಂದರ್ಶನವನ್ನು ನೀಡುವುದಿಲ್ಲ ಎಂದು ಸ್ಪಷ್ಟವಾಗಿರುವುದರಿಂದ ನನ್ನ ತಲೆಯಲ್ಲಿರುವ ಕೆಲವು ಪ್ರಶ್ನೆಗಳನ್ನು ಸಾರ್ವಜನಿಕರ ಮುಂದಿಡುತ್ತಿದ್ದೇನೆ,ಅವರು ತಮ್ಮಿಂದಿಗೆ ಮಾತನಾಡಲು ಯಾರಿಗಾದರೂ ಅನುಮತಿ ನೀಡಿದರೆ ಅಂತಹವರು ಈ ಪ್ರಶ್ನೆಗಳನ್ನು ಕೇಳಲಿ ಎಂಬ ಆಶಯದೊಂದಿಗೆ....

* ಕೋವಿಡ್-19 ಎರಡನೇ ಅಲೆಯು ಏಕಾಏಕಿ ಅಪ್ಪಳಿಸುತ್ತದೆ ಮತ್ತು ಅದರ ಸ್ವರೂಪ ತೀವ್ರವಾಗಿರಲಿದೆ ಎಂದು ಯಾರೂ ಭವಿಷ್ಯ ನುಡಿಯಲು ಸಾಧ್ಯವಿರಲಿಲ್ಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ,ಆದರೆ ಎರಡನೇ ಅಲೆ ಅಪ್ಪಳಿಸುವ ಸಾಧ್ಯತೆ ಇರಲೇ ಇಲ್ಲವೇ? ಅದಾಗಲೇ ಯುರೋಪ್ ಮತ್ತು ಅಮೆರಿಕ ಎರಡನೇ ಮತ್ತು ಮೂರನೇ ಅಲೆಯ ಹಾನಿಯನ್ನು ಅನುಭವಿಸಿದ್ದವು,ಹೀಗಾಗಿ ಭಾರತದಲ್ಲಿ ಸಾಂಕ್ರಾಮಿಕದ ಹಾವಳಿ ಒಂದೇ ಅಲೆಯೊಂದಿಗೆ ಮುಗಿಯುತ್ತದೆ ಎಂದು ನಂಬಬಹುದಿತ್ತೇ?

* ಎರಡನೇ ಅಲೆಯನ್ನು ನಿರೀಕ್ಷಿಸಿ ಎಂದು ವಿಜ್ಞಾನಿಗಳು ಪ್ರಧಾನಿಯವರಿಗೆ ಸಲಹೆ ನೀಡಿದ್ದರೇ?

* ಯುರೋಪ್ ಮತ್ತು ಅಮೆರಿಕಗಳಲ್ಲಿ ಮೊದಲ ಅಲೆಗಿಂತ ಎರಡನೇ ಅಲೆಯು ಹೆಚ್ಚು ಭೀಕರವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಇದೇ ಸ್ಥಿತಿಯುಂಟಾಗಬಹುದು ಎಂದು ಅವರು ಮೋದಿಯವರಿಗೆ ತಿಳಿಸಿದ್ದರೇ?

* ಮೊದಲ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸೃಷ್ಟಿಸಲಾಗಿದ್ದ ವಿಶೇಷ ಆಸ್ಪತ್ರೆಗಳಂತಹ ಸೌಲಭ್ಯಗಳಿಗೆ ಇತಿಶ್ರೀ ಹಾಡಲಾಗುತ್ತದೆ ಎನ್ನುವುದು ಜನವರಿಯಲ್ಲಿ ಸ್ಪಷ್ಟವಾಗಿದ್ದಾಗ ಇದು ಅವಸರದ ನಿರ್ಧಾರವಾಗಿದೆ ಮತ್ತು ಎರಡನೇ ಅಲೆಯು ಅಪ್ಪಳಿಸಿದ ಸಂದರ್ಭದಲ್ಲಿ ಮತ್ತು ಅದು ಮೊದಲ ಅಲೆಗಿಂತ ಹೆಚ್ಚು ವಿನಾಶಕಾರಿಯಾಗಿದ್ದಲ್ಲಿ ಮುಂಬೈ ಮತ್ತು ದಿಲ್ಲಿಗಳಿಗೆ ಯಾವುದೇ ಸಿದ್ಧತೆಗಳು ಇಲ್ಲದಂತೆ ಮಾಡುತ್ತದೆ ಎಂದು ಈ ವಿಜ್ಞಾನಿಗಳು ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದರೇ?

* ವಿ.ಕೆ.ಪೌಲ್ ನೇತೃತ್ವದ ಅಧಿಕಾರಯುತ ಸಮಿತಿಯು ಆಮ್ಲಜನಕದ ಕೊರತೆಯನ್ನು ನಿರೀಕ್ಷಿಸಿದೆ ಮತ್ತು ಅದರ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ನಿರೀಕ್ಷಿಸಿದ್ದನ್ನು ದಿ ಇಂಡಿಯನ್ ಎಕ್ಸ್ಪ್ರೆಸ್ 2020, ಎಪ್ರಿಲ್ನಲ್ಲಿಯೇ ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಏನು ನಡೆಯುತ್ತಿದೆ ಎನ್ನುವುದರ ಮೇಲೆ ಈ ವಿಜ್ಞಾನಿಗಳು ನಿಗಾ ಇರಿಸಿದ್ದರೇ ಮತ್ತು ಅನುಸರಣಾ ಕ್ರಿಯೆ ವಿಳಂಬಗೊಳ್ಳುತ್ತಿದೆ ಅಥವಾ ಅದನ್ನು ಕೈಗೊಳ್ಳಲಾಗುತ್ತಿಲ್ಲ ಎನ್ನುವುದನ್ನು ಸರಕಾರಕ್ಕೆ ತಿಳಿಸಿದ್ದರೇ?

* ಬೃಹತ್ ಚುನಾವಣಾ ರ್ಯಾಲಿಗಳು, ಕುಂಭಮೇಳದಲ್ಲಿ ಬೃಹತ್ ಜನಸ್ತೋಮ ಮತ್ತು ಕ್ರೀಡಾಂಗಣಗಳಲ್ಲಿ 60,000ದಷ್ಟು ವೀಕ್ಷಕರೊಂದಿಗೆ ಕ್ರಿಕೆಟ್ ಪಂದ್ಯಗಳು ಇವೆಲ್ಲ ವಿವೇಚನಾರಹಿತ ಮಾತ್ರವಲ್ಲ,ಇವು ಸಾಂಕ್ರಾಮಿಕದ ಸೂಪರ್ ಸ್ಪ್ರೆಡರ್ ಆಗಿಯೂ ಪರಿಣಮಿಸಬಲ್ಲವು ಎಂದು ಈ ವಿಜ್ಞಾನಿಗಳು ಸರಕಾರಕ್ಕೆ ಕಿವಿಮಾತು ಹೇಳಿದ್ದರೇ? ಇದು ಬೆಂಕಿಯೊಂದಿಗೆ ಸರಸವಾಡಿದಂತೆ ಆಗುವುದರಿಂದ ಇವುಗಳನ್ನು ನಿಲ್ಲಿಸಲೇಬೇಕು ಎಂದು ಅವರು ಸರಕಾರಕ್ಕೆ ತಿಳಿಸಿದ್ದರೇ?

* ಕಳೆದ ವರ್ಷದ ಮೇ-ಜೂನ್ ಹಿಂದೆಯೇ ಫೈಝರ್, ಮೊಡೆರ್ನಾ ಮತ್ತು ಆಸ್ಟ್ರಾಝೆನೆಕಾ ಎರಡು ಡೋಸ್ಗಳ ಕೋವಿಡ್-19 ಲಸಿಕೆಗಳನ್ನು ಅಭಿವೃದ್ಧಿಗೊಳಿಸುತ್ತಿವೆ ಎನ್ನುವುದು ಸ್ಪಷ್ಟವಾಗಿದ್ದಾಗ ಶೇ.75ರಷ್ಟು ಭಾರತೀಯರಿಗೆ ಪೂರ್ಣವಾಗಿ ಲಸಿಕೆ ಹಾಕಲು ಎರಡು ಶತಕೋಟಿ ಡೋಸ್ಗಳು ಅಗತ್ಯವಾಗುತ್ತವೆ ಎನ್ನುವುದನ್ನು ಈ ವಿಜ್ಞಾನಿಗಳು ಲೆಕ್ಕ ಹಾಕಿದ್ದರೇ? ನಿಗದಿತ ಕಾಲಮಿತಿಯಲ್ಲಿ ಅಷ್ಟೊಂದು ದೊಡ್ಡಪ್ರಮಾಣದಲ್ಲಿ ಲಸಿಕೆಗಳ ಉತ್ಪಾದನೆ ಭಾರತದ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವುದು ಸ್ಪಷ್ಟವಿದ್ದಾಗ ಅದನ್ನು ಸಮರೋಪಾದಿಯಲ್ಲಿ ಹೆಚ್ಚಿಸಬೇಕು ಎನ್ನುವದು ಅವರಿಗೆ ಹೊಳೆದಿತ್ತೇ? ಇದನ್ನು ಲೆಕ್ಕ ಹಾಕಲು ರಾಕೆಟ್ ವಿಜ್ಞಾನದ ಅಗತ್ಯವಿರಲಿಲ್ಲ ಮತ್ತು ಪ್ರಾಥಮಿಕ ಗಣಿತದ ಲೆಕ್ಕಾಚಾರ ಸಾಕಿತ್ತು. ಈ ಸರಳ ಗಣಿತದ ಲೆಕ್ಕಾಚಾರವನ್ನು ಅವರು ಮಾಡಿದ್ದಿದ್ದರೆ ಅದನ್ನು ಸರಕಾರಕ್ಕೆ ತಿಳಿಸಿದ್ದರೇ? ಪ್ರಧಾನಿಯವರಿಗೆ ಮತ್ತು ಸರಕಾರಕ್ಕೆ ಈ ಮಾಹಿತಿಯನ್ನು ನೀಡಿರದಿದ್ದರೆ ಅದಕ್ಕೆ ಕಾರಣವೇನಾಗಿತ್ತು?

* ಬ್ರಿಟನ್,ಅಮೆರಿಕ ಮತ್ತು ಯುರೋಪ್ ಲಸಿಕೆ ಸಂಶೋಧನೆಗೆ ಆರ್ಥಿಕ ನೆರವನ್ನು ಒದಗಿಸುತ್ತಿವೆ ಮತ್ತು ಖಚಿತ ಪೂರೈಕೆಗಳನ್ನು ಖಾತರಿಪಡಿಸಿಕೊಳ್ಳಲು ಮುಂಗಡ ಬೇಡಿಕೆಗಳನ್ನು ಸಲ್ಲಿಸುತ್ತಿವೆ ಎನ್ನುವುದು ಸ್ಪಷ್ಟವಿದ್ದಾಗ ಇದೇ ರೀತಿ ಕ್ರಮವನ್ನು ಕೈಗೊಳ್ಳುವಂತೆ ಈ ವಿಜ್ಞಾನಿಗಳು ಸರಕಾರಕ್ಕೆ ಸಲಹೆ ನೀಡಿದ್ದರೇ? ಹಾಗೆ ನೀಡಿದ್ದರೆ ಅವರಿಗೆ ಯಾವ ಉತ್ತರ ದೊರಕಿತ್ತು? ಸಲಹೆ ನೀಡಿರದಿದ್ದರೆ ಅದಕ್ಕೆ ಕಾರಣವೇನಿತ್ತು?
 
* 2020,ಜುಲೈ ಆರಂಭದಲ್ಲಿ ಬಲರಾಮ ಭಾರ್ಗವ್ ಅವರು ಕೋವ್ಯಾಕ್ಸಿನ್ ಲಸಿಕೆಯು ಆ ವರ್ಷದ ಆ.15ರೊಳಗೆ ತನ್ನ ಕ್ಲಿನಿಕಲ್ ಟ್ರಯಲ್ನ ಮೂರನೇ ಹಂತವನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ್ದರು. ಸ್ವತಃ ಓರ್ವ ವೈದ್ಯಕೀಯ ಸಂಶೋಧಕರಾಗಿ ಇಷ್ಟೊಂದು ಅಲ್ಪಾವಧಿಯಲ್ಲಿ ಕ್ಲಿನಿಕಲ್ ಟ್ರಾಯಲ್ ಪೂರ್ಣಗೊಳಿಸಲು ಸಾಧ್ಯ ಎಂಬ ಭರವಸೆ ಅವರಿಗೆ ಇತ್ತೇ? ಅವರ ನೋಟಿಸು ಆಸ್ಪತ್ರೆಗಳಿಗೆ ಬೆದರಿಕೆಯನ್ನೂ ಒಳಗೊಂಡಿತ್ತು ಎನ್ನುವುದನ್ನು ಪರಿಗಣಿಸಿದರೆ ಈ ನಿರ್ದೇಶವು ಸರಕಾರದಲ್ಲಿಯ ಬೇರೆ ಎಲ್ಲಿಂದಲೋ ಹೊರಬಿದ್ದಿತ್ತೇ? ಏಕೆಂದರೆ ಆಸ್ಪತ್ರೆಗಳನ್ನು ಹೀಗೆ ನಿರ್ಬಂಧಿಸಲು ಐಸಿಎಂಆರ್ಗೆ ಯಾವುದೇ ಅಧಿಕಾರವಿಲ್ಲ.

* ಕೋವ್ಯಾಕ್ಸಿನ್ನ ಮೂರನೇ ಹಂತದ ಟ್ರಯಲ್ ನ ಪರಿಣಾಮಕಾರಿತ್ವದ ಬಗ್ಗೆ ಫಲಿತಾಂಶಗಳು ಲಭ್ಯವಿಲ್ಲದಿದ್ದಾಗ ಅದರ ಕ್ಲಿನಿಕಲ್ ಟ್ರಯಲ್ ಗೆ ಸರಕಾರವು ಅವಸರದಿಂದ ಅನುಮತಿಸಿದ್ದು ವೈಜ್ಞಾನಿಕ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಮಾತ್ರವಲ್ಲ, ಲಸಿಕೆಯ ಬಗ್ಗೆ ಹಿಂಜರಿಕೆಯನ್ನೂ ಗಂಭೀರವಾಗಿ ಹೆಚ್ಚಿಸುತ್ತದೆ ಎಂದು ಈ ವಿಜ್ಞಾನಿಗಳು ಸರಕಾರದ ಗಮನಕ್ಕೆ ತಂದಿರಲಿಲ್ಲವೇ?
 
* ಭಾರತವು ದಿನವೊಂದಕ್ಕೆ ಕೇವಲ 25 ಲಕ್ಷಕ್ಕೂ ಕಡಿಮೆ ಡೋಸ್ಗಳನ್ನು ತಯಾರಿಸುತ್ತಿದೆ,ಹೀಗಿರುವಾಗ 18ರಿಂದ 44 ವರ್ಷ ವಯೋಮಾನದ 59.5 ಕೋ.ಜನರಿಗೆ ಮೇ 1ರಿಂದ ಲಸಿಕೆಯನ್ನು ನೀಡಲು ಹೇಗೆ ಸಾಧ್ಯ? 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿರುವಾಗ 18ರಿಂದ 44 ವರ್ಷ ಪ್ರಾಯದವರಿಗೆ ಶುಲ್ಕವನ್ನು ವಿಧಿಸುವುದು ನ್ಯಾಯವೇ?:ಈ ಪ್ರಶ್ನೆಗಳನ್ನು ಈ ವಿಜ್ಞಾನಿಗಳು ಸರಕಾರವು ಈ ವಯೋಮಾನದವರಿಗೆ ಲಸಿಕೆ ನೀಡಲು ನಿರ್ಧರಿಸಿದಾಗ ಕೇಳಿದ್ದರೇ?

* ಕೋವ್ಯಾಕ್ಸಿನ್ ಅನ್ನು ಐಸಿಎಂಆರ್ನ ಬೆಂಬಲ ಮತ್ತು ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದೆ,ಹೀಗಿರುವಾಗ ಭಾರತ ಬಯೊಟೆಕ್ನಿಂದ ಅದರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಖರೀದಿಸುವಂತೆ ಮತ್ತು ದೇಶದೊಳಗೆ ಹಾಗೂ ಇತರ ದೇಶಗಳಲ್ಲಿ ಲಸಿಕೆಯ ವ್ಯಾಪಕ ಉತ್ಪಾದನೆಗೆ ಅನುಮತಿ ನೀಡುವಂತೆ ಈ ವಿಜ್ಞಾನಿಗಳು ಸರಕಾರಕ್ಕೇಕೆ ಸಲಹೆ ನೀಡಿರಲಿಲ್ಲ? ಇದು ಇತರ ಕೋವಿಡ್-19 ಲಸಿಕೆಗಳ ಬೌದ್ಧಿಕ ಆಸ್ತಿಗಳ ಹಕ್ಕುಗಳನ್ನು ಅಮಾನತುಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಭಾರತದ ಮನವಿಗೆ ಪುಷ್ಟಿಯನ್ನೂ ನೀಡುತ್ತಿತ್ತು.

* ಭಾರತದಲ್ಲಿ ಕೊರೋನವೈರಸ್ ಸಾವುಗಳ ಒಟ್ಟು ಸಂಖ್ಯೆ ಅಧಿಕೃತವಾಗಿ ಎರಡು ಲಕ್ಷಕ್ಕಿಂತ ಕೊಂಚ ಹೆಚ್ಚಿದೆ. ಆದರೆ ಇದು ನಂಬಲನರ್ಹವಲ್ಲದಿದ್ದರೂ ಕೀಳಂದಾಜು ಆಗಿದೆ ಎಂದು ಪ್ರತಿಯೊಂದೂ ದೇಶವು ನಂಬಿದೆ. ಈ ಸಂಖ್ಯೆಯು ಸರಿಯಾಗಿದೆ ಎನ್ನುವುದನ್ನು ಅವರು ದೇಶಕ್ಕೆ ಹೇಗೆ ಮನದಟ್ಟು ಮಾಡುತ್ತಾರೆ?

* ಸರಕಾರವು ಲಸಿಕೆ ನೀಡಿಕೆಯ ಪ್ರತಿಕೂಲ ಪರಿಣಾಮಗಳ ವರದಿಗಳ ಬಿಡುಗಡೆಯನ್ನು 2021,ಫೆ.26ರಿಂದ ನಿಲ್ಲಿಸಿದೆ ಏಕೆ?

* ಅಧಿಕೃತವಾಗಿ ಭಾರತದಲ್ಲಿ ಪ್ರತಿದಿನ ಸುಮಾರು ನಾಲ್ಕು ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಮರಣ ದರವು ಶೇ.1.7ರಲ್ಲಿಯೇ ಉಳಿದುಕೊಂಡಿದ್ದರೆ ಎರಡು ವಾರಗಳಲ್ಲಿ ಪ್ರತಿದಿನ 6,800 ಸಾವುಗಳನ್ನು ನಾವು ನಿರೀಕ್ಷಿಸಬಹುದು ಎಂದು ಹೇಳಿದರೆ ಅವರು ಒಪ್ಪಿಕೊಳ್ಳುತ್ತಾರೆಯೇ?
  
* ಇಲ್ಲೊಂದು ಮಹತ್ವದ ಪ್ರಶ್ನೆಯಿದೆ. ಅವರು ಯಾವಾಗಲೂ ಭಾರತದಲ್ಲಿಯ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಗಳನ್ನು ಯುರೋಪ್ ಮತ್ತು ಅಮೆರಿಕದೊಂದಿಗೆ ಹೋಲಿಸುತ್ತಾರೆ. ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ನೇಪಾಳದಂತಹ ನಮ್ಮ ನೆರೆಯ ದೇಶಗಳು ಅಥವಾ ಮಲೇಶಿಯಾ,ಥೈಲಂಡ್ ಮತ್ತು ಫಿಲಿಪ್ಪೀನ್ಸ್‌ ನಂತಹ ದೂರದ ದೇಶಗಳೊಂದಿಗೆ ಏಕೆ ಹೋಲಿಸುತ್ತಿಲ್ಲ? ಏಕೆಂದರೆ ಈ ದೇಶಗಳಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಪ್ರಕರಣಗಳು ಮತ್ತು ಸಾವುಗಳ ಪ್ರಮಾಣ ಕಡಿಮೆಯಿದೆ ಮತ್ತು ಅವುಗಳೊಂದಿಗೆ ಹೋಲಿಸಿದರೆ ಭಾರತದ ಸ್ಥಿತಿ ಹೆಚ್ಚು ಭೀಕರವಾಗಿ ಕಂಡು ಬರುತ್ತದೆ ಮತ್ತು ಯುರೋಪ್ ಮತ್ತು ಅಮೆರಿಕಕ್ಕೆ ಹೋಲಿಸಿದರೆ ನಾವೇ ವಾಸಿ ಎಂದು ಅನಿಸುತ್ತದೆ.

ಕೃಪೆ: thewire.in

Writer - ಕರಣ್ ಥಾಪರ್

contributor

Editor - ಕರಣ್ ಥಾಪರ್

contributor

Similar News