ನಾವು ಮರೆತ ಕಾರ್ಮಿಕರ ನಾಯಕ ಡಾ.ಬಿ.ಆರ್.ಅಂಬೇಡ್ಕರ್

Update: 2021-04-30 19:30 GMT

ಇಂದು ಪ್ರಪಂಚದಾದ್ಯಂತ ಕೋವಿಡ್-19ರ ಆರ್ಭಟಕ್ಕೆ ಜನರು ತಲ್ಲಣಗೊಂಡಿರುವುದಷ್ಟೇ ಅಲ್ಲ, ವಿವಿಧ ದೇಶಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಅದರ ನೇರ ಪರಿಣಾಮ ದುಡಿವ, ಶ್ರಮಿಕ ಕಾರ್ಮಿಕರ ಮೇಲಾಗಿದೆ. ಕಾರ್ಮಿಕರು ಗುಳೆ ಹೋಗುವುದು ನಿತ್ಯದ ಸುದ್ದಿಯಾಗುತ್ತಿದೆ. ಈ ಸಂದರ್ಭದಲ್ಲೇ ಕಾರ್ಮಿಕ ದಿನ ಅಥವಾ ಮೇ ದಿನಬಂದಿದೆ. ಅಂತರ್‌ರಾಷ್ಟ್ರೀಯ ಕಾರ್ಮಿಕ ಚಳವಳಿಗಳಿಂದ ಉತ್ತೇಜಿಸಲ್ಪಡುವ ಈ ಮೇ ದಿನಾಚರಣೆ ಕಾರ್ಮಿಕ ವರ್ಗಗಳ ಆಚರಣೆಯಾಗಿದೆ. ಭಾರತದಲ್ಲೂ ಸಹ ಮೇ ದಿನಾಚರಣೆಯನ್ನು ಕೊರೋನದ ಈ ಸಮಯದಲ್ಲಿ ಔಪಚಾರಿಕವಾಗಿಯಾದರೂ ಆಚರಿಸಲಾಗುತ್ತಿದೆ.

ಕಳೆದ ಎಪ್ರಿಲ್14ರಂದು ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿಧಾತ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ 130ನೇ ಜನ್ಮ ದಿನವನ್ನು ಆಚರಿಸಲಾಗಿದೆ. ಇವೆರಡೂ ಒಟ್ಟೊಟ್ಟಿಗೆ ಬಂದಿರುವಾಗ ಕಾರ್ಮಿಕರಿಗಾಗಿ ಸ್ವತಂತ್ರ ಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸದೆ ಯಾವುದೇ ಕಾರ್ಮಿಕ ದಿನಾಚರಣೆ ಅರ್ಥಹೀನ ಹಾಗೂ ಭಾರತ ಕಂಡ ಒಬ್ಬ ಮೇರು ನಾಯಕನಿಗೆ ಮಾಡುವ ದ್ರೋಹವಾಗುತ್ತದೆ. ಇಂದು ಭಾರತದಲ್ಲಿ, ಕಾರ್ಮಿಕರು ಯಾವುದೇ ಹಕ್ಕು ಪಡೆದಿದ್ದರೆ, ಅದು ಡಾ. ಅಂಬೇಡ್ಕರ್ ಅವರ ಕಾರಣದಿಂದಲೇ ಎಂದರೆ ತಪ್ಪಾಗಲಾರದು. ಸಮಾನ ಸಮಾಜದ ನಿರ್ಮಾಣಕ್ಕೆ ಡಾ. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಆದರೆ ದೇಶದ ಬಹುತೇಕರು ಕಾರ್ಮಿಕ ನಾಯಕನಾಗಿ ಅಂಬೇಡ್ಕರ್ ಪಾತ್ರವನ್ನು ನಿರ್ಲಕ್ಷಿಸುತ್ತಿದ್ದಾರೆ.

ಬ್ರಿಟಿಷರ ಆಡಳಿತಾವಧಿಯಲ್ಲಿ ಅಂದರೆ, 1937ರಲ್ಲೇ ಕಾರ್ಮಿಕ ಇಲಾಖೆ ಜನನವಾದರೂ, ಅದಕ್ಕೆ ಜೀವ ತುಂಬಿದ್ದು 1942ರಲ್ಲಿ ಡಾ. ಅಂಬೇಡ್ಕರ್ ಕಾರ್ಮಿಕ ಸಚಿವರಾದ ನಂತರ. ಉತ್ಪಾದನಾ ವ್ಯವಸ್ಥೆಯ ಆಧಾರದ ಮೇಲೆ ಪ್ರತಿಯೊಂದು ದೇಶವೂ ತನ್ನ ಸ್ವತಂತ್ರ ರಾಜಕೀಯ ವ್ಯವಸ್ಥೆಯನ್ನು ರೂಪಿಸಿಕ್ಕೊಳ್ಳುತ್ತದೆ. ಒಂದು ಪ್ರತ್ಯೇಕ ಸಮಾಜದಲ್ಲಿ ಉಂಟಾದ ವ್ಯವಸ್ಥೆಗಳು, ಹೊರಗಿನವರು ರೂಪಿಸಿದ ವ್ಯವಸ್ಥೆಯಂತಿರಬೇಕೆಂದೇನೂ ಇಲ್ಲ. ಕಾರ್ಲ್‌ಮಾರ್ಕ್ಸ್ ತನ್ನ ರಾಜಕೀಯ ತತ್ವಶಾಸ್ತ್ರವನ್ನು ದುಡಿವ ವರ್ಗದ ಸುತ್ತಲೂ ರೂಪಿಸಿದ. ಆದರೆ ಭಾರತದಲ್ಲಿ ಇದು ಭಿನ್ನ. ಇಲ್ಲಿ ಜಾತಿ ವ್ಯವಸ್ಥೆ ನಿರ್ದಿಷ್ಟವಾದದ್ದು, ಇದನ್ನು ಚೆನ್ನಾಗಿ ಅರಿತ್ತಿದ್ದವರು ಅಂಬೇಡ್ಕರ್.

ಚಾತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಕೊಡುಗೆ ಉತ್ಪಾದನಾ ಕ್ಷೇತ್ರದಲ್ಲಿ ಅಷ್ಟಕಷ್ಟೆ. ದುಡಿವ ವರ್ಗ ಸಾಮಾಜಿಕವಾಗಿ, ರಾಜಕೀಯವಾಗಿ ಅಷ್ಟೇ ಅಲ್ಲದೆ ಆರ್ಥಿಕವಾಗಿಯೂ ಶೋಷಣೆಗೆ ಒಳಗಾಗಿತ್ತು. ಈ ನಿಟ್ಟಿನಲ್ಲಿ ಕಾರ್ಮಿಕರ ಅಥವಾ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸುಭದ್ರಗೊಳಿಸಲು ಸರಿಯಾದ ಕಾನೂನಾತ್ಮಕ ರಕ್ಷಣೆ ಜರೂರಾಗಿ ಆಗಬೇಕಾದ ಕೆಲಸ ಎಂದು ಮನಗಂಡಿದ್ದರು. ಅದಕ್ಕಾಗಿ ಅವಿದ್ಯಾವಂತರೇ ಹೆಚ್ಚಾಗಿ ಕೂಡಿದ ಕಾರ್ಮಿಕ ವರ್ಗಕ್ಕೆ ಅರಿವು ಮೂಡಿಸುವುದರ ಜೊತೆಗೆ ಅವರ ಸಂಘಟನೆಗೆ ಒತ್ತು ಕೊಟ್ಟರು. ‘‘ಗುಲಾಮನಿಗೆ ನೀನು ಗುಲಾಮ ಎಂದು ತಿಳಿ ಹೇಳು ಆಗ ಅವನು ಗುಲಾಮಗಿರಿಯ ವಿರುದ್ಧ ಹೋರಾಡುತ್ತಾನೆ’’ ಎಂದು ತಿಳಿದ್ದಿದ ಬಾಬಾಸಾಹೇಬರು ಕಾರ್ಮಿಕರಿಗೆ ಆಗುತ್ತಿದ್ದ ಮೋಸ ಹಾಗೂ ವಂಚನೆಗಳನ್ನು ಬೆರಳು ಮಾಡಿ ತೋರಿಸಿದರು. ಇದಕ್ಕಾಗಿ 1936ರಲ್ಲಿ ಸ್ವತಂತ್ರ ಲೇಬರ್ ಪಾರ್ಟಿಯನ್ನು (Independent Labour Party, ILP) ಸ್ಥಾಪಿಸಿದರು. ಕಮ್ಯುನಿಸ್ಟರು ಇದರಿಂದ ದುಡಿವ ವರ್ಗ ಇಬ್ಭಾಗವಾಗಿ ಮತಗಳು ಛಿದ್ರವಾಗುತ್ತವೆ ಎಂದು ವಾದಿಸಿ ಪ್ರಬಲವಾಗಿ ವಿರೋಧ ವ್ಯಕ್ತ ಪಡಿಸಿದರು. ಅಂಬೇಡ್ಕರ್‌ರವರು ವಿಚಲಿತರಾಗದೆ, ಇದರಿಂದ ಕಾರ್ಮಿಕರಲ್ಲಿ ಒಡಕು ಮೂಡದು, ಇದು ದುಡಿಯುವ ವರ್ಗದ ಮೇಲಿನ ಅಸಮಾನತೆಯ ಕಂದಕದ ವಿರುದ್ಧ ನಮ್ಮ ಹೋರಾಟ ಎಂದು ಘಂಟಾಘೋಷವಾಗಿ ಹೇಳಿದರು.

ಐಎಲ್‌ಪಿಯ ಮುಖ್ಯ ಉದ್ದೇಶ ಸರಕಾರಿ ಸಾಮ್ಯದ ಕಾರ್ಖಾನೆಗಳ ಸ್ಥಾಪನೆಗೆ ಒತ್ತು, ಬಲಿಷ್ಠ ಕಾರ್ಮಿಕ ಕಾನೂನು, ಕೆಲಸಕ್ಕೆ ತಕ್ಕುದಾದ ಪ್ರತಿಫಲದ ಕೂಲಿ, ಕೆಲಸದ ಗರಿಷ್ಠ ಸಮಯದ ನಿಗದಿ, ಕೂಲಿಯೊಂದಿಗೆ ರಜೆ, ಕೆಲಸದ ಸ್ಥಳಗಳಲ್ಲಿ ಸಮಂಜಸವಾದ ಆರೋಗ್ಯಕರ ವಾತಾವರಣದ ಸೃಷ್ಟಿ, ಊಳಿಗಮಾನ್ಯ ಪದ್ಧತಿಯ ನಿರ್ಮೂಲನೆ, ತಾಂತ್ರಿಕ ಸಂಸ್ಥೆಗಳಲ್ಲಿ ತರಬೇತಿ, ಲಾಭದಾಯಕ ಉದ್ಯೋಗಗಳಲ್ಲಿ ಮಹಿಳೆಯರು ಸೇರಿದಂತೆ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ನಿರ್ಬಂಧದ ವಿರುದ್ಧ ಹೋರಾಟ. ಐಎಲ್‌ಪಿಯ ಈ ಕಾರ್ಮಿಕ ಪರ ಧೋರಣೆಗಳು ಜನ ಮೆಚ್ಚುಗೆ ಪಡೆಯಿತು, ಅಷ್ಟೇ ಅಲ್ಲದೆ ಶೋಷಿತ ದುಡಿವ ವರ್ಗದಲ್ಲಿ ಒಂದು ಆಶಾಕಿರಣ ಮೂಡಿತು. ಹಾಗಾಗಿ 1937ರಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ ಐಎಲ್‌ಪಿಗೆ ಅಮೋಘ ಬೆಂಬಲ ದೊರೆತು, ಸ್ವರ್ಧಿಸಿದ್ದ 17 ಕ್ಷೇತ್ರಗಳಲ್ಲಿ 14ರಲ್ಲಿ ಜಯ ಸಾಧಿಸಿತ್ತು.

ಅಂಬೇಡ್ಕರ್‌ರವರು ಕೇವಲ ಸಂಘಟನೆ ಮತ್ತು ಹೋರಾಟಕ್ಕೆ ಒತ್ತು ಕೊಡದೆ, ಸರಕಾರದಲ್ಲಿ ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಐಎಲ್‌ಪಿಯ ಧ್ಯೇಯೋದ್ದೇಶಗಳ ಜೊತೆಗೆ, ಇನ್ನೂ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದರು. 1942ರಿಂದ 1946ರವರೆಗೆ ವೈಸರಾಯ್ ಎಕ್ಸಿಕ್ಯುಟಿವ್ ಕೌನ್ಸಿಲ್‌ನಲ್ಲಿ ಡಾ. ಅಂಬೇಡ್ಕರ್ ಕಾರ್ಮಿಕ ಸಚಿವರಾಗಿದ್ದಾಗ ಅನೇಕ ಕಾರ್ಮಿಕ ಹಕ್ಕುಗಳನ್ನು ಜಾರಿಗೆ ತಂದರು. ಹಿಂದೆ ಪ್ರತಿಯೊಬ್ಬ ಕಾರ್ಮಿಕ ದಿನಕ್ಕೆ 12 ಗಂಟೆಗಳ ಕಾಲ ಕಾರ್ಖಾನೆಯಲ್ಲಿ ದುಡಿಯ ಬೇಕಿತ್ತು ಅದನ್ನು ಗರಿಷ್ಠ 8 ಗಂಟೆಗಳಿಗೆ ನಿಗದಿ ಪಡಿಸಿ, 8 ಗಂಟೆಗಳ ಕೆಲಸವನ್ನು ಒಂದು ಪಾಳಿ ಎಂದು ಜಾರಿಗೆ ತಂದರು. ಇಂದು ಕಾರ್ಖಾನೆಗಳು ಸೇರಿದಂತೆ ಭಾರತದ ಎಲ್ಲಾ ರಂಗದ ಕೆಲಸಗಳು ದಿನದ 8 ಗಂಟೆಗೆ ನಿಗದಿಯಾಗಿದೆ, ಇದು ಬಾಬಾಸಾಹೇಬರ ಸಾಧನೆ. 1926ರಲ್ಲಿ ಇಂಡಿಯನ್ ಟ್ರೇಡ್ ಯೂನಿಯನ್ಸ್ ಆ್ಯಕ್ಟ್ ಅನ್ನು ಜಾರಿಗೆ ತಂದಿದ್ದರೂ ಅದರ ಅನ್ವಯ ಟ್ರೇಡ್ ಯೂನಿಯನ್ಸ್ ನೋಂದಣಿಗೆ ಮಾತ್ರ ನೆರವಾಗಿತ್ತು. ಆದರೆ ಸರಕಾರದಿಂದ ಈ ಟ್ರೇಡ್ ಯೂನಿಯನ್‌ಗಳಿಗೆ ಯಾವುದೇ ಮಾನ್ಯತೆ ಇರಲಿಲ್ಲ.

1943ರ ನವೆಂಬರ್ 8ರಂದು ಬಾಬಾಸಾಹೇಬ್ ಅವರು ಟ್ರೇಡ್ ಯೂನಿಯನ್ಸ್ ಅನ್ನು ಕಡ್ಡಾಯವಾಗಿ ಗುರುತಿಸಲು ಇಂಡಿಯನ್ ಟ್ರೇಡ್ ಯೂನಿಯನ್ಸ್ (ತಿದ್ದುಪಡಿ) ಮಸೂದೆಯನ್ನು ತಂದರು. ಇದು ಪ್ರತಿಯೊಂದು ಕಾರ್ಖಾನೆ ಅಥವಾ ಕಂಪೆನಿಯಲ್ಲಿ ಕಡ್ಡಾಯವಾಗಿ ಉದ್ಯೋಗಿಗಳಿಗೆ ಟ್ರೇಡ್ ಯೂನಿಯನ್‌ನ್ನು ಸ್ಥಾಪಿಸಲು ಅವಕಾಶ ದೊರಕಿಸಿಕೊಡುವುದರ ಜೊತೆಗೆ, ಅದಕ್ಕೆ ಪೂರಕವಾದ ವ್ಯವಸ್ಥೆ ನಿರ್ಮಾಣ ಮಾಡುವಂತಾಯಿತು ಹಾಗೂ ಒಂದೊಮ್ಮೆ ಮಾಲಕರು ಈ ಟ್ರೇಡ್ ಯೂನಿಯನ್‌ಗಳಿಗೆ ಅವಕಾಶ ನಿರಾಕರಿಸಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಯಿತು. ಇದರಿಂದ ಪ್ರಪ್ರಥಮ ಬಾರಿಗೆ ಕಾರ್ಮಿಕರು ತಮ್ಮ ಹಕ್ಕುಗಳ ಹೋರಾಟಕ್ಕೆ ಒಂದು ವೇದಿಕೆ ದೊರೆಯಿತು.

ಬಾಬಾಸಾಹೇಬರೇ ಹೇಳುವಂತೆ ಆಗಸ್ಟ್ 7, 1942ರಲ್ಲಿ ಅವರು ಆಯೋಜಿಸಿದ್ದ Tripartite Labour Conference ಒಂದು ಮಹತ್ತರವಾದ ಸಾಧನೆ. ಇದರ ಮೂಲಕ ಸರಕಾರ, ಉದ್ಯೋಗದಾತರು ಮತ್ತು ಉದ್ಯೋಗಿಗಳನ್ನು ಒಂದೇ ಸೂರಿನ ಕೆಳಗೆ ಬರುವಂತೆ ಮಾಡಿತು. ಇದರಿಂದಾಗಿ ಸರಕಾರ ಮಾಲಕರ ಹಾಗೂ ಉದ್ಯೋಗಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳ ಶೀಘ್ರ ಇತ್ಯರ್ಥಕ್ಕೆ ಅನುವು ಮಾಡಿಕೊಟ್ಟಿತು. ಇದರ ಮುಂದುವರಿದ ಭಾಗವಾಗಿ ಕೈಗಾರಿಕಾ ಅಂಕಿ ಅಂಶ ಕಾಯ್ದೆ (Industrial Statistics Act) ಮೂಲಕ ಉದ್ಯೋಗ ವಿನಿಮಯ ಸಂಸ್ಥೆಗಳ ಸ್ಥಾಪನೆ ಮತ್ತು ಅಂಕಿ ಅಂಶಗಳ ಸಂಗ್ರಹ (Employment Exchanges, and Collection of Statistics) ಕಾರ್ಯವನ್ನು ಜಾರಿಗೆ ತಂದರು. ಈ ಮೂಲಕ ಡಾ. ಅಂಬೇಡ್ಕರ್ ಅವರು ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೂರ್ವ ಏಶ್ಯದ ದೇಶಗಳಲ್ಲಿ ಮೊದಲ ಬಾರಿಗೆ ‘ವಿಮೆ ಕಾಯ್ದೆ’ಯನ್ನು ಜಾರಿಗೆ ತಂದಿದ್ದು ಭಾರತದಲ್ಲಿ. ಅದರ ಕೀರ್ತಿ ನೇರವಾಗಿ ಡಾ. ಅಂಬೇಡ್ಕರ್‌ಗೆ ಸಲ್ಲುತ್ತದೆ.

ಯಾಕೆಂದರೆ, ಕೈಗಾರಿಕಾ ರಂಗದಲ್ಲಿ ಕಾರ್ಮಿಕರ ವಿಮಾ ಯೋಜನೆಯ ವರದಿಯನ್ನು ಸಿದ್ಧಪಡಿಸಿ ನಂತರ 1948ರಲ್ಲಿ ಕಾರ್ಮಿಕ ಉದ್ಯೋಗ ವಿಮೆ (ಇಎಸ್‌ಐ) ಕಾಯ್ದೆ ಅನುಷ್ಠಾನಗೊಳಿಸಿದರು. ಆ ಮೂಲಕ ಪ್ರಸ್ತುತ ಕಾರ್ಮಿಕರಿಗೆ ಇಎಸ್‌ಐ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ, ವೈದ್ಯಕೀಯ ರಜೆ, ಅಷ್ಟೇ ಅಲ್ಲದೆ ಕೆಲಸದ ಸಮಯದಲ್ಲಿ ಗಾಯಗೊಂಡ ಹಾಗೂ ದೈಹಿಕವಾಗಿ ನಂತರ ಕೆಲಸ ಮಾಡಲು ಅಸಮರ್ಥರಾದವರಿಗೆ ವಿವಿಧ ಸೌಲಭ್ಯಗಳು ಮತ್ತು ಪರಿಹಾರ ನೀಡಲಾಗುತ್ತಿದೆ. 1928ರಲ್ಲಿ ನಡೆದ ಜಿನೀವಾ ಅಂತರ್‌ರಾಷ್ಟ್ರೀಯ ಕಾರ್ಮಿಕರ ಸಮಾವೇಶದಲ್ಲಿ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಪಡಿಸಬೇಕೆಂದು ಹೇಳಲಾಗಿದ್ದರೂ, ಭಾರತದಲ್ಲಿ ಅದು ಅನುಷ್ಠಾನಗೊಂಡಿರಲಿಲ್ಲ.

ಉತ್ಪಾದನಾ ರಂಗದಲ್ಲಿ ಕನಿಷ್ಠ ಜೀವನಮಟ್ಟ ನಿರ್ವಹಣೆಗೆ ಕನಿಷ್ಠ ವೇತನ ಒಂದು ಮಾನದಂಡ ಎಂದು ಅರಿತಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರು 1946, ಎಪ್ರಿಲ್‌ನಲ್ಲಿ ಸರಕಾರದ ಮೇಲೆ ಒತ್ತಡ ತಂದು ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಕಾಯ್ದೆಯನ್ನು ಜಾರಿಗೆ ತಂದರು. ಇದು ಇಂದಿಗೂ ಪ್ರಚಲಿತದಲ್ಲಿ ಇರುವುದು ಗಮನಾರ್ಹ. ಕೆಲಸಗಾರರಿಗೆ ತಮ್ಮ ಕೆಲಸದಲ್ಲಿ ನೈಪುಣ್ಯತೆ ಹೊಂದಲು ತಾಂತ್ರಿಕ ತರಬೇತಿ ಯೋಜನೆ, ಕಾರ್ಮಿಕರಿಗೆ ವೇತನದೊಂದಿಗೆ ರಜಾದಿನಗಳು, ಆರೋಗ್ಯ ವಿಮೆ, ನೌಕರರ ವೇತನದ ಪರಿಷ್ಕರಣೆ, ಕಾರ್ಮಿಕರು ಮುಷ್ಕರ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ, ತುಟ್ಟಿ ಭತ್ತೆ, ಭವಿಷ್ಯ ನಿಧಿ ಇವೆಲ್ಲವನ್ನು ಬಾಬಾ ಸಾಹೇಬರು ವೈಸರಾಯ್ ಅವರ ಎಕ್ಸಿಕ್ಯುಟಿವ್ ಕೌನ್ಸಿಲ್‌ನಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕೈಗೊಂಡ ಕಾರ್ಮಿಕ ಪರ ಕಾಯ್ದೆಗಳು. 1945ರಲ್ಲಿ ಮೈಕಾ ಮೈನ್ಸ್ ಲೇಬರ್ ವೆಲ್ಫೇರ್ ಫಂಡ್ ಅನ್ನು ಜಾರಿಗೆ ತಂದರು. ಇದು ವಸತಿ, ನೀರು ಸರಬರಾಜು, ಶಿಕ್ಷಣ, ಮನರಂಜನೆ, ಕಾರ್ಮಿಕರ ಜೀವನೋಪಾಯದ ಸುಧಾರಣೆ, ಪೌಷ್ಟಿಕಾಂಶ, ಸಾಮಾಜಿಕ ಪರಿಸ್ಥಿತಿಗಳ ಸುಧಾರಣೆ, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಸುಧಾರಣೆ, ರೋಗದ ತಡೆಗಟ್ಟುವಿಕೆ ಮತ್ತು ವೈದ್ಯಕೀಯ ಸೌಲಭ್ಯಗಳ ಅವಕಾಶವನ್ನು ಒದಗಿಸಿತ್ತು.

ಸಾಮಾಜಿಕ ಹಾಗೂ ಆರ್ಥಿಕವಾಗಿ ದಲಿತ, ಹಿಂದುಳಿದವರಿಗಿಂತ ಮಹಿಳೆಯರ ಸ್ಥಾನಮಾನ ಭಿನ್ನವಲ್ಲವೆಂದು ಅರಿತಿದ್ದ ಬಾಬಾಸಾಹೇಬರು ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ಹೊಂದಿದ್ದರು. ಅದಕ್ಕಾಗಿ ಅವರ ‘ಮೂಕ ನಾಯಕ’ ಹಾಗೂ ‘ಬಹಿಷ್ಕೃತ ಭಾರತ’ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು. ಅದರ ಜೊತೆಗೆ ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ನಾಮ ನಿರ್ದೇಶನಗೊಂಡ ನಂತರ ಡಾ. ಬಾಬಾ ಸಾಹೇಬರು 1927 ಮಹಿಳಾ ಘನತೆಯನ್ನು ಗುರುತಿಸಲು ಮತ್ತು ಮಹಿಳಾ ಕಾರ್ಮಿಕರಿಗೆ ಹೆರಿಗೆ ಲಾಭದ ಮಸೂದೆಯನ್ನು (Maternity Benefit Bill) ಪರಿಚಯಿಸಿದರು.

ನಂತರ 1942ರಲ್ಲಿ ಈ ಕಾಯ್ದೆಯನ್ನು ಭಾರತದಾದ್ಯಂತ ಜಾರಿಗೆ ತರಲು ಶ್ರಮಿಸಿದರು. ಇದರಿಂದ ಮಹಿಳೆಯರು ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆಯ ನಂತರ ಸಂಬಳದೊಂದಿಗೆ ರಜೆ ಪಡೆಯುವಂತಾಯಿತು. ಇದರ ಜೊತೆಗೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲಿಂಗ ಭೇದವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದರು (ಆದರೆ ಅಸಂಘಟಿತ ವಲಯದಲ್ಲಿ ಇದು ಇಂದಿಗೂ ಸಹ ಜಾರಿಗೆ ಬರದಿರುವುದು ವಿಷಾದನೀಯ). ಇದರ ಜೊತೆಗೆ ಮಹಿಳಾ ಕಾರ್ಮಿಕ ಕಲ್ಯಾಣ ನಿಧಿ, ಮಹಿಳಾ ಮತ್ತು ಮಕ್ಕಳ, ಕಾರ್ಮಿಕ ರಕ್ಷಣೆ ಕಾಯ್ದೆ ಜಾರಿಗೆ ಬಂದವು. ಅಂಬೇಡ್ಕರ್ ಅವರು ನೀರಾವರಿ ಮತ್ತು ವಿದ್ಯುತ್ ಶಕ್ತಿಯ ಅಭಿವೃದ್ಧಿಗೆ ನೀತಿ ಮತ್ತು ಯೋಜನೆಯ ಬಗ್ಗೆ ಪ್ರಮುಖ ಕಾಳಜಿ ವಹಿಸಿದ್ದರು. ವಿದ್ಯುತ್ ಶಕ್ತಿ ವ್ಯವಸ್ಥೆ ಅಭಿವೃದ್ಧಿಗೆ, ಪವನ ಶಕ್ತಿ ಕೇಂದ್ರಗಳ ನಿರ್ಮಾಣ, ಉಷ್ಣ ವಿದ್ಯುತ್ ಸ್ಥಾವರ ಹೈಡ್ರೊ-ವಿದ್ಯುತ್ ಸಮೀಕ್ಷೆಗಳಿಗೆ ವಿದ್ಯುತ್ ತಾಂತ್ರಿಕ ಪವರ್ ಬೋರ್ಡ್ (ಸಿಟಿಪಿಬಿ) ಅನ್ನು ಸ್ಥಾಪಿಸಲು ನಿರ್ಧರಿಸಿದ್ದರು.

ನೀರಾವರಿ ಮತ್ತು ವಿದ್ಯುತ್ ಗ್ರಿಡ್ ಸಿಸ್ಟಮ್ ಸ್ಥಾಪನೆಯನ್ನು ಪ್ರತಿಪಾದಿಸಿದರು. ಇದರಿಂದ ವಿದ್ಯುತ್ ಉತ್ಪಾದನೆಗೆ ಪ್ರಾಮುಖ್ಯತೆ ಕೊಟ್ಟಂತೆಯೂ ಆಗುತ್ತದೆ ಹಾಗೆಯೇ ಹೆಚ್ಚು ವಿದ್ಯುತ್ ಶಕ್ತಿ ದೊರೆತಂತೆಲ್ಲ ಕಾರ್ಖಾನೆಗಳ ಸ್ಥಾಪನೆಯಾಗಿ ಜನರಿಗೆ ಉದ್ಯೋಗ ಅವಕಾಶಗಳು ಹೆಚ್ಚುತ್ತದೆ ಎಂಬುದು ಡಾ. ಅಂಬೇಡ್ಕರ್ ಅವರ ಆಶಯವಾಗಿತ್ತು. ಒಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಕಾರ್ಖಾನೆಗಳ ಸ್ಥಾಪನೆ, ನೀರಿನ ಸದ್ಬಳಕೆ, ವಿದ್ಯುತ್ ಉತ್ಪಾದನೆ, ಹೆಚ್ಚು ಕಾರ್ಖಾನೆಗಳ ಸ್ಥಾಪನೆಗೆ ಕ್ರಿಯಾಯೋಜನೆ, ಜೊತೆಗೆ ದುಡಿವ ಜನರ ಮಾನವೀಯ ಮೌಲ್ಯಗಳು ಹಾಗೂ ಹಕ್ಕುಗಳ ಭದ್ರತೆಗೆ ಅಂಬೇಡ್ಕರ್ ಅವರು ರಚನಾತ್ಮಕವಾದ ಕಾನೂನುಗಳ ಅಡಿಪಾಯ ಹಾಕಿಕೊಟ್ಟರು. ಇವು ಇಂದಿಗೂ, ಬದಲಾದ ಕಾಲಘಟ್ಟದಲ್ಲೂ ಸಹ ಭದ್ರ ಬುನಾದಿಯಂತೆ ಇವೆ. ಇದು ಅಂಬೇಡ್ಕರ್‌ರವರು ಹೊಂದಿದ್ದ ದೂರದೃಷ್ಟಿ ಮತ್ತು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಅಸಮತೋಲನ ನಿವಾರಣೆಗೆ ಅವರಿಗಿದ್ದ ಬದ್ಧತೆಗೆ ಹಿಡಿದ ಕನ್ನಡಿ.

Writer - ಡಾ. ಎ. ಮಹಾದೇವ ಪಡುವಣಗೆರೆ

contributor

Editor - ಡಾ. ಎ. ಮಹಾದೇವ ಪಡುವಣಗೆರೆ

contributor

Similar News