ಆಯುಷ್ಮಾನ್ ಭಾರತ್: ಐಸಿಯು, ವೆಂಟಿಲೇಟರ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ

Update: 2021-05-01 04:59 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ. 30: ದ.ಕ. ಜಿಲ್ಲೆಯಲ್ಲಿ ಸದ್ಯ ಐಸಿಯು ಅಥವಾ ವೆಂಟಿಲೇಟರ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ಮಾತ್ರವೇ ವೆನ್ಲಾಕ್ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್- ಯೋಜನೆಯಡಿ ಚಿಕಿತ್ಸೆ ದೊರೆಯುತ್ತಿದೆ.

ಕೊರೋನ ಪ್ರಥಮ ಅಲೆಯ ಸಂದರ್ಭ ಆಯುಷ್ಮಾನ್‌ನಡಿ ಕೆಲವೊಂದು ಮಾನದಂಡ ಗಳೊಂದಿಗೆ ದ.ಕ. ಜಿಲ್ಲೆಯ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ನಡಿ ಚಿಕಿತ್ಸೆಗೆ ನೀಡಲಾಗುತ್ತಿತ್ತು.

ಪ್ರಸಕ್ತ ಐಸಿಯು ಹಾಗೂ ವೆಂಟಿಲೇಟರ್‌ನಲ್ಲಿರುವ ಕೋವಿಡ್ ರೋಗಿಗಳಿಗೆ 20 ಪ್ರಮುಖ ಆಸ್ಪತ್ರೆಗಳನ್ನು ಒಳಗೊಂಡು ಜಿಲ್ಲೆಯ ಒಟ್ಟು 80 ಖಾಸಗಿ ಆಸ್ಪತ್ರೆಗಳಲ್ಲಿ (ಒಳರೋಗಿಗಳಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಆಸ್ಪತ್ರೆಗಳು) ಐಸಿಯು ಹಾಗೂ ವೆಂಟಿಲೇಟರ್ ಅಗತ್ಯವಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ‘ಆಯುಷ್ಮಾನ್ ಭಾರತ್ ಯೋಜನೆಯಡಿ ನಗರದ 20 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ನವರಿಗೆ ಕೋವಿಡೇತರ ವಿಶೇಷ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಕಳೆದ ವರ್ಷ ಕೋವಿಡ್ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಇದೀಗ ಅಟೋ ಎಂಪಾನೆಲ್ಡ್ ವ್ಯವಸ್ಥೆಯಡಿ ಜಿಲ್ಲೆಯ ಇತರ 60 ಖಾಸಗಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸೆಗೆ ಈ ಯೋಜನೆಯಡಿ ಒಳಪಡಿಸಲಾಗಿದೆ’ ಎಂದು ದ.ಕ. ಜಿಲ್ಲಾ ಆಯುಷ್ಮಾನ್ ಯೋಜನೆಯ ನೋಡಲ್ ಅಧಿಕಾರಿ ಡಾ.ರತ್ನಾಕರ್ ಮಾಹಿತಿ ನೀಡಿದ್ದಾರೆ.

ಚಿಕಿತ್ಸೆಗೆ ಕರ್ನಾಟಕದ ಪ್ರಜೆಯಾಗಿದ್ದು, ಆಧಾರ್ ಕಾರ್ಡ್ ಇದ್ದರಷ್ಟೆ ಸಾಕು

  ಆಯುಷ್ಮಾನ್‌ನಡಿ ಜಿಲ್ಲೆಯ ಈ 80 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಐಸಿಯು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಆಧಾರ್ ಕಾರ್ಡ್ ಹೊಂದಿದ್ದು, ಆತ ಕರ್ನಾಟಕದ ಪ್ರಜೆಯಾಗಿರುವುದೊಂದೇ ಮಾನದಂಡ.

‘ಯಾರಾದರೂ ಕೋವಿಡ್ ಸೋಂಕಿತರಾ ಗಿದ್ದು, ಅವರಿಗೆ ಐಸಿಯು ಅಥವಾ ವೆಂಟಿಲೇಟರ್ ಅಗತ್ಯವಿದ್ದಲ್ಲಿ ವ್ಯಕ್ತಿ ದಾಖಲಾಗಿರುವ ಆಸ್ಪತ್ರೆಯವರು ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿಗೆ ರೆಫರಲ್ ನೀಡುವಂತೆ ನಿವೇದನಾ ಪತ್ರವನ್ನು ಕಳುಹಿಸುತ್ತಾರೆ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ರೆಫರಲ್ ಪತ್ರವನ್ನು ನೀಡಲಾಗುತ್ತದೆ. ಬಳಿಕ ಅವರಿಗೆ ಅಗತ್ಯವಿರುವಷ್ಟು ದಿನ ವೆಂಟಿಲೇಟರ್ ಅಥವಾ ಐಸಿಯುನಲ್ಲಿ ಈ ಯೋಜನೆಯಡಿ ಚಿಕಿತ್ಸೆ ಒದಗಿಸಲಾಗುತ್ತದೆ. ಈ ಯೋಜನೆಯಡಿ ರೋಗಿ ಚಿಕಿತ್ಸೆಗೆ ದಾಖಲಾಗಿ ನೋಡಲ್ ಅಧಿಕಾರಿಯಿಂದ ಆಸ್ಪತ್ರೆಗೆ ರೆಫರಲ್ ಪತ್ರ ಬರುವವರೆಗಿನ ಚಿಕಿತ್ಸಾ ವೆಚ್ಚವನ್ನು ರೋಗಿ ಅಥವಾ ಆತನ ಮನೆಯವರೇ ಭರಿಸಬೇಕಾಗುತ್ತದೆ. ಇದು ಸರಕಾರದ ನಿಯಮ’ ಎಂದು ಡಾ.ರತ್ನಾಕರ್ ಸ್ಪಷ್ಟಪಡಿಸಿದ್ದಾರೆ.

‘ವೆನ್ಲಾಕ್‌ನಲ್ಲಿಯೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆ ಇದೆ. ಐಸಿಯು, ವೆಂಟಿ ಲೇಟರ್ ಸೌಲಭ್ಯವೂ ಇದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಮಾತ್ರ ಆಯುಷ್ಮಾನ್ ಯೋಜನೆಯಡಿ ಎಪಿಎಲ್, ಬಿಪಿಎಲ್ ಮಾನದಂಡವಿಲ್ಲದೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಸದ್ಯ ಕೋವಿಡ್ ಸೋಂಕಿತರಿಗೆ ಯಾವುದೇ ರೋಗ ಗುಣಲಕ್ಷಣಗಳು ಇಲ್ಲವಾದಲ್ಲಿ ಹೋಂ ಐಸೋಲೇಶನ್‌ಗೆ ಆದ್ಯತೆ ನೀಡಲಾಗುತ್ತದೆ. ರೋಗ ಲಕ್ಷಣಗಳೊಂದಿಗೆ ಸಮಸ್ಯೆ ಇರುವಾಗ ವೆನ್‌ಲಾಕ್‌ನಲ್ಲಿ ಕೋವಿಡ್‌ಗಾಗಿ ಮೀಸಲಿರಿಸಲಾಗಿರುವ ವಿಭಾಗದಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಮುಂದೆ ವೆನ್ಲಾಕ್‌ನಲ್ಲಿ ಬೆಡ್‌ಗಳು ಖಾಲಿಯಾದಲ್ಲಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ನಿರ್ದೇಶನದಂತೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬಹುದು. ಖಾಸಗಿ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರರಿಂದ ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿ ಮಾಹಿತಿಯನ್ನು ಪಡೆಯಬಹುದು’ ಎಂದು ಡಾ. ರತ್ನಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News