ಉ.ಪ್ರ. ಪಂಚಾಯತ್ ಚುನಾವಣೆ: ಪ್ರಧಾನಿ ಕ್ಷೇತ್ರ ವಾರಣಾಸಿ, ಮಥುರಾ,ಅಯೋಧ್ಯೆಯಲ್ಲಿ ಬಿಜೆಪಿಗೆ ಹಿನ್ನಡೆ

Update: 2021-05-04 12:00 GMT
ಸಾಂದರ್ಭಿಕ ಚಿತ್ರ (PTI)

ಲಕ್ನೋ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲಿನ ಬೆನ್ನಲ್ಲೇ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಗಳ ಫಲಿತಾಂಶವೂ ಬಿಜೆಪಿಗೆ ಉಂಟಾಗುತ್ತಿರುವ ಹಿನ್ನಡೆಯ ಸುಳಿವು ನೀಡಿದೆ. ಅಯೋಧ್ಯೆ, ಮಥುರಾ ಹಾಗೂ ಪ್ರಧಾನಿಯ ಸಂಸದೀಯ ಕ್ಷೇತ್ರ ವಾರಣಾಸಿಯ ಪಂಚಾಯತ್ ಗಳಲ್ಲಿ ಬಿಜೆಪಿಯ ಸ್ಥಿತಿ ಉತ್ತಮವಾಗಿಲ್ಲ. ಆದರೆ ಪಂಚಾಯತ್ ಚುನಾವಣೆಗಳ ಅಂತಿಮ ಫಲಿತಾಂಶ ಇನ್ನೂ ಘೋಷಣೆಯಾಗಿಲ್ಲ, ಮತ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಬಿಜೆಪಿ ಹೇಳುತ್ತಿದೆಯಲ್ಲದೆ ಪಕ್ಷಕ್ಕೆ ಗರಿಷ್ಠ ಸ್ಥಾನಗಳು ದೊರೆತಿವೆ ಎನ್ನುತ್ತಿದೆ.

ಅಯೋಧ್ಯೆಯಲ್ಲಿ 40 ಜಿ.ಪಂ. ಕ್ಷೇತ್ರಗಳಿದ್ದು, ಸಮಾಜವಾದಿ ಪಾರ್ಟಿಗೆ 24, ಬಿಜೆಪಿಗೆ ಆರು ಮತ್ತು 12 ಸ್ಥಾನಗಳು ಪಕ್ಷೇತರರಿಗೆ ಹೋಗಿವೆ. ಇಲ್ಲಿ ಬಿಜೆಪಿ ತನ್ನ ಕೆಲ ನಾಯಕರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅವರ ಪೈಕಿ 13 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ ಈಗ ಬಿಜೆಪಿ ತನಗೆ ಪಕ್ಷೇತರರ ಬೆಂಬಲವೂ ಇದೆ ಎಂದು ಹೇಳುತ್ತಿದೆ.

ಪ್ರಧಾನಿಯ ಕ್ಷೇತ್ರ ವಾರಣಾಸಿಯಲ್ಲಿ 40 ಜಿ.ಪಂ. ಕ್ಷೇತ್ರಗಳಿದ್ದು, ಇಲ್ಲಿಯ ತನಕ ಬಿಜೆಪಿಗೆ ಕೇವಲ ಎಂಟರಲ್ಲಿ ಜಯ ದೊರಕಿದೆ. ಸಮಾಜವಾದಿ ಪಕ್ಷಕ್ಕೆ 14 ಸ್ಥಾನಗಳು ದೊರಕಿವೆ ಎಂದು ಆ ಪಕ್ಷ ಹೇಳಿಕೊಂಡಿದ್ದು ಬಿಎಸ್‌ಪಿಗೆ ಐದು ಸ್ಥಾನಗಳು ದೊರಕಿವೆ.

ಮಥುರಾದಲ್ಲಿ ಬಿಎಸ್‌ಪಿಗೆ 12 ಸ್ಥಾನಗಳು, ರಾಷ್ಟ್ರೀಯ ಲೋಕ ದಳಕ್ಕೆ ಎಂಟು ಸ್ಥಾನಗಳು ಹಾಗೂ ಬಿಜೆಪಿಗೆ ಇಲ್ಲಿಯ ತನಕ ಒಂಬತ್ತು ಸ್ಥಾನಗಳು ದೊರಕಿವೆ ಎನ್ನಲಾಗಿದೆ. ಸಮಾಜವಾದಿ ಪಕ್ಷಕ್ಕೆ ಒಂದು ಸ್ಥಾನ ಮತ್ತು ಪಕ್ಷೇತರರಿಗೆ ಮೂರು ಸ್ಥಾನಗಳು ದೊರಕಿವೆ. ಪಕ್ಷೇತರ ಅಭ್ಯರ್ಥಿಗಳೆಲ್ಲರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆಂದು ಪಕ್ಷ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News