ಬೆಂಗಳೂರು: ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ ಸೋಂಕಿತರಿಗೆ 'ಸೋನು ಸೂದ್ ಚಾರಿಟೇಬಲ್ ಟ್ರಸ್ಟ್' ಸಹಾಯ ಹಸ್ತ

Update: 2021-05-04 17:19 GMT

ಬೆಂಗಳೂರು, ಮೇ 4: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣ ದ್ವಿಗುಣಗೊಳ್ಳುತ್ತಿವೆ. ಇದರ ನಡುವೆ ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ 10ಕ್ಕೂ ಹೆಚ್ಚು ಸೋಂಕಿತರಿಗೆ ಸಕಾಲಕ್ಕೆ ಆಕ್ಸಿಜನ್ ಒದಗಿಸುವಲ್ಲಿ ಬಾಲಿವುಡ್ ನಟ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಯಶಸ್ವಿಯಾಗಿದೆ.

ನಗರದ ಯಲಹಂಕ ಬಳಿಯ ಅರ್ಕ ಖಾಸಗಿ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸೋಮವಾರ ತಡರಾತ್ರಿ ರೋಗಿಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ ಎದುರಾಗಿದೆ. ಬಳಿಕ ಆಕ್ಸಿಜನ್ ಖಾಲಿ ಆಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕೂಡಲೇ ಯಲಹಂಕ ಉಪನಗರ ಪೊಲೀಸರಿಗೆ ಕರೆ ಮಾಡಿದ್ದಾರೆ.

ಈ ವೇಳೆ ಅರ್ಕ ಆಸ್ಪತ್ರೆ ಬಳಿ ಬಂದ ಇನ್‍ಸ್ಪೆಕ್ಟರ್ ಸತ್ಯನಾರಾಯಣ್, ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿದ್ದಾರೆ. ಇನ್‍ಸ್ಪೆಕ್ಟರ್ ಮನವಿಗೆ ಕೂಡಲೇ ಸ್ಪಂದಿಸಿರುವ ಸೋನುಸೂದ್ ಟ್ರಸ್ಟ್ ಸಿಬ್ಬಂದಿ, 11 ಆಕ್ಸಿಜನ್ ಸಿಲಿಂಡರ್ ಗಳನ್ನು ಬೈಕ್ ಹಾಗೂ ಕಾರುಗಳಲ್ಲಿ ತಂದಿದ್ದಾರೆ.

ಸಮಯಕ್ಕೆ ಸರಿಯಾಗಿ ಆಕ್ಸಿಜನ್ ತಂದಿದ್ದರಿಂದ ಕೂಡಲೇ 10ಕ್ಕೂ ಹೆಚ್ಚು ಸೋಂಕಿತರಿಗೆ ಆಕ್ಸಿಜನ್ ನೀಡಲಾಗಿದೆ. ಆಕ್ಸಿಜನ್ ಸಿಲಿಂಡರ್ ತರುವುದು ಇನ್ನೊಂದು ತಾಸು ತಡವಾಗಿದ್ದರೂ ಐಸಿಯುನಲ್ಲಿದ್ದ ಕೋವಿಡ್ ಸೋಂಕಿತರು ಮೃತಪಡುವ ಸಾಧ್ಯತೆಯಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News