ಉತ್ತರ ಪ್ರದೇಶ ಪಂಚಾಯತ್ ಚುನಾವಣೆ ಎಸ್ಪಿ ಮುನ್ನಡೆ: ಪಕ್ಷೇತರರ ಓಲೈಕೆಗೆ ಮುಂದಾದ ಬಿಜೆಪಿ

Update: 2021-05-05 04:12 GMT

ಲಕ್ನೋ, ಮೇ 5: ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಿದೆ. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈ ಚುನಾವಣೆಗೆ ವಿಶೇಷ ಮಹತ್ವ ಬಂದಿತ್ತು. ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 747 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ಬೆಂಬಲಿಗರು 666 ಸ್ಥಾನಗಳಲ್ಲಿ ಮುಂದಿದ್ದಾರೆ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸಿದ್ದು, 3,050 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಪಕ್ಷೇತರರ ಓಲೈಕೆಗೆ ಮುಂದಾಗಿದೆ. ಗರಿಷ್ಠ ಜಿಲ್ಲಾ ಪಂಚಾಯತ್ ಗಳನ್ನು ತೆಕ್ಕೆಗೆ ಪಡೆಯುವ ಉದ್ದೇಶದಿಂದ 1,238 ಪಕ್ಷೇತರರ ಜತೆಗೆ ಬಿಜೆಪಿ ಈಗಾಗಲೇ ಮಾತುಕತೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ. ಬಿಎಸ್ಪಿ 322 ಹಾಗೂ ಕಾಂಗ್ರೆಸ್ 77 ಜಿಲ್ಲಾ ಪಂಚಾಯತ್ ವಾರ್ಡ್‌ಗಳಲ್ಲಿ ಮುಂದಿವೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಇಲ್ಲದಿದ್ದರೂ, ಬಹುತೇಕ ಅಭ್ಯರ್ಥಿಗಳು ಒಂದಲ್ಲ ಒಂದು ಪಕ್ಷದ ಜತೆ ಗುರುತಿಸಿಕೊಂಡಿದ್ದು, ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ವ್ಯಾಪಕ ಪ್ರಚಾರ ನಡೆಸಿವೆ.

ಬಿಜೆಪಿ ಈಗಾಗಲೇ ಪಕ್ಷೇತರರ ಸಂಪರ್ಕದಲ್ಲಿದ್ದು, ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಕಸರತ್ತು ನಡೆಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಮೈನ್‌ಪುರಿ ಜಿಲ್ಲೆಯಲ್ಲಿ ಬಿಜೆಪಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಸಂಧ್ಯಾ ಯಾದವ್ ಅವರನ್ನು ಸೆಳೆದುಕೊಂಡರೂ, ಪಕ್ಷ ಹಿನ್ನಡೆ ಅನುಭವಿಸಿದೆ. ಸ್ವತಃ ಸಂಧ್ಯಾ ಯಾದವ್, ಸಮಾಜವಾದಿ ಪಕ್ಷದ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಇಲ್ಲಿ ಎಸ್ಪಿ 12, ಬಿಜೆಪಿ 8 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯ ಗಳಿಸಿದ್ದರೆ ಒಂಭತ್ತು ಸ್ಥಾನಗಳು ಪಕ್ಷೇತರರ ಪಾಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News