ವಿದೇಶಿ ಆಟಗಾರರನ್ನು ವಾಪಸ್ ಕಳುಹಿಸಲುಪ್ರಯತ್ನ

Update: 2021-05-05 04:41 GMT

ಹೊಸದಿಲ್ಲಿ: ಬಯೋ-ಬಬಲ್‌ನಲ್ಲಿ ಕೋವಿಡ್ -19 ಸೋಂಕು ಪ್ರಕರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಏಕಾಏಕಿ ಮುಂದೂಡಿರುವ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಮಾರ್ಗೋಪಾಯವನ್ನು ಕಂಡು ಹಿಡಿಯಲಾಗುವುದು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.

‘‘ನಾವು ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸಬೇಕಾಗಿದೆ ಮತ್ತು ಇದಕ್ಕಾಗಿ ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ’’ ಎಂದು ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದರು.

ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ವಿಧಿಸಲಾದ ಪ್ರಯಾಣ ನಿರ್ಬಂಧಗಳಿಂದಾಗಿ ಲಾಭದಾಯಕ ಲೀಗ್‌ನಲ್ಲಿ ಭಾಗಿಯಾಗಿರುವ ವಿದೇಶಿಯರು ಆಯಾ ದೇಶಗಳಿಗೆ ಮರಳುವ ಬಗ್ಗೆ ಕಾಳಜಿ ವಹಿಸಿದಾಗ ಬಿಸಿಸಿಐ ವಿದೇಶಿ ಆಟಗಾರರಿಗೆ ಸುರಕ್ಷಿತವಾಗಿ ಮರಳುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿತ್ತು.

ಕೆಲವು ದಿನಗಳ ಹಿಂದೆ ಮೂವರು ಆಸ್ಟ್ರೇಲಿಯದ ಆಟಗಾರರು ಸ್ವದೇಶಕ್ಕೆ ಮರಳಿದ ನಂತರ ಐಪಿಎಲ್‌ನಲ್ಲಿ 14 ಆಸ್ಟ್ರೇಲಿಯದ ಆಟಗಾರರು ಉಳಿದಿದ್ದರು. ಜೊತೆಗೆ ನ್ಯೂಝಿಲ್ಯಾಂಡ್‌ನ 10 ಮತ್ತು ಇಂಗ್ಲೆಂಡ್‌ನ 11 ಆಟಗಾರರು ಇದ್ದರು.

ದಕ್ಷಿಣ ಆಫ್ರಿಕಾದ 11 ಆಟಗಾರರು ಲೀಗ್‌ನಲ್ಲಿ ಇದ್ದಾರೆ. ವೆಸ್ಟ್‌ಇಂಡೀಸ್‌ನ 9, ಅಫ್ಘಾನಿಸ್ತಾನದ 9, ಅಫ್ಘಾನಿಸ್ತಾನದ ಮೂವರು ಮತ್ತು ಇಬ್ಬರು ಬಾಂಗ್ಲಾದೇಶದ ಆಟಗಾರರು ಇದ್ದಾರೆ. ನ್ಯೂಝಿಲ್ಯಾಂಡ್ ಕ್ರಿಕೆಟ್ ಪರಿಸ್ಥಿತಿಯನ್ನು ನಿಭಾಯಿಸುವ ಬಿಸಿಸಿಐ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾಗಿಯಾಗಲು ಭಾರತ ಮತ್ತು ನ್ಯೂಝಿಲ್ಯಾಂಡ್‌ನ ಆಟಗಾರರು ಇಂಗ್ಲೆಂಡ್‌ಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆಸ್ಟ್ರೇಲಿಯ ತನ್ನ ಗಡಿಗಳನ್ನು ಮುಚ್ಚಿದೆ ಮತ್ತು ಭಾರತದಿಂದ ಯಾವುದೇ ವಾಣಿಜ್ಯ ವಿಮಾನಯಾನಕ್ಕೆ ಅವಕಾಶ ನೀಡದ ಕಾರಣ ಆಸ್ಟ್ರೇಲಿಯದ ಆಟಗಾರರು ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.

 ಐಪಿಎಲ್ ಮುಗಿದ ನಂತರ ಭಾರತ, ನ್ಯೂಝಿಲ್ಯಾಂಡ್ ಮತ್ತು ಇಂಗ್ಲೆಂಡ್ ಆಟಗಾರರನ್ನು ಯುಕೆಗೆ ಕರೆದೊಯ್ಯುವ ವಿಮಾನದಲ್ಲಿ ಆಸ್ಟ್ರೇಲಿಯ ಆಟಗಾರರು ತೆರಳುವ ಯೋಜನೆಯನ್ನು ಹೊಂದಿಲ್ಲ ಎಂದು ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದರು.

ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಎಲ್.ಬಾಲಾಜಿ ಜೊತೆಗೆ ಕೋಲ್ಕತಾ ನೈಟ್ ರೈಡರ್ಸ್ ಬೌಲರ್‌ಗಳಾದ ಸಂದೀಪ್ ವಾರಿಯರ್ ಮತ್ತು ವರುಣ್ ಚಕ್ರವರ್ತಿ ಅವರಿಗೆ ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News