ಮೀಸಲಾತಿಯ ಶೇ.50ರ ಮಿತಿ ಮರುಪರಿಶೀಲನೆಗೆ ಸುಪ್ರೀಂ ನಕಾರ

Update: 2021-05-05 18:23 GMT

ಹೊಸದಿಲ್ಲಿ, ಮೇ 5: ಮೀಸಲಾತಿಗೆ 50ಶೇ. ಮಿತಿ ವಿಧಿಸಿದ ತನ್ನ 1992ರ ಆದೇಶದ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಅಂತೆಯೇ, ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸುವ ಮಹಾರಾಷ್ಟ್ರ ಸರಕಾರದ ಘೋಷಣೆ ಅಸಿಂಧು ಎಂದು ತೀರ್ಪು ನೀಡಿದೆ. ಮೀಸಲಾತಿ ಒದಗಿಸಲು ಮರಾಠ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ಘೋಷಿಸಲು ಸಾಧ್ಯವಿಲ್ಲ. ಅಲ್ಲದೆ 50ಶೇ. ಮಿತಿಯನ್ನು ಮೀರಿ ಮರಾಠರಿಗೆ ಮೀಸಲಾತಿ ಒದಗಿಸುವುದನ್ನು ಸಮರ್ಥಿಸುವ ಯಾವುದೇ ಅಸಾಧಾರಣ ಪರಿಸ್ಥಿತಿ ಅಥವಾ ಸಂದರ್ಭ ಉದ್ಭವಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್, ಎಸ್.ಅಬ್ದುಲ್ ನಝೀರ್, ಹೇಮಂತ್ ಗುಪ್ತಾ ಮತ್ತು ಎಸ್. ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಸರ್ವಾನುಮತದ ತೀರ್ಪು ಪ್ರಕಟಿಸಿದೆ.

ಮರಾಠರಿಗೆ ಉದ್ಯೋಗದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 50ಶೇ. ಮೀಸಲಾತಿ ಒದಗಿಸುವ ಕಾನೂನನ್ನು ಮಹಾರಾಷ್ಟ್ರ ಸರಕಾರ 2018ರ ನವೆಂಬರ್ 30ರಂದು ರೂಪಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್, ಮೀಸಲಾತಿ ಮಿತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ 12ಶೇ. ಕ್ಕೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ 13ಶೇ. ಕ್ಕೆ ಇಳಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಯಾವುದೇ ಸಂದರ್ಭದಲ್ಲೂ ಮೀಸಲಾತಿ ಮಿತಿ 50ಶೇ. ಮೀರುವಂತಿಲ್ಲ ಎಂದು 1992ರ ಇಂದ್ರಾ ಸಾಹ್ನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಹೈಕೋರ್ಟ್‌ನ ಆದೇಶ ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆ 50ಶೇ. ಮಿತಿಯನ್ನು ಮೀರಿ ಹಲವು ರಾಜ್ಯಗಳು ಮೀಸಲಾತಿ ಒದಗಿಸಿರುವುದರಿಂದ ಮರಾಠರಿಗೆ ಮೀಸಲಾತಿ ಒದಗಿಸಿರುವುದು ತಪ್ಪಲ್ಲ ಎಂದು ರಾಜ್ಯ ಸರಕಾರ ಪ್ರತಿಪಾದಿಸಿತ್ತು. ಮಹಾರಾಷ್ಟ್ರ ಸರಕಾರದ ನಿಲುವನ್ನು ಹಲವು ರಾಜ್ಯಗಳು ಬೆಂಬಲಿಸಿದ್ದವು. ಮರಾಠರಿಗೆ ಮೀಸಲಾತಿ ಒದಗಿಸುವ ಕಾನೂನು ಅಸಿಂಧುವಲ್ಲ ಎಂದು ಕೇಂದ್ರ ಸರಕಾರವೂ ಸುಪ್ರೀಂಕೋರ್ಟ್‌ನಲ್ಲಿ ಅಭಿಪ್ರಾಯ ಸೂಚಿಸಿತ್ತು.

ಆದರೆ ಮೀಸಲಾತಿಗೆ 50ಶೇ. ಮಿತಿ ವಿಧಿಸಿರುವ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News