ಸಾಲ ನೀಡುವುದಾಗಿ ಕೋಟ್ಯಂತರ ರೂ. ವಂಚನೆ: ಆರೋಪಿ ಬಂಧನ, 3.8 ಕೆಜಿ ಚಿನ್ನಾಭರಣ ಜಪ್ತಿ

Update: 2021-05-06 12:31 GMT

ಬೆಂಗಳೂರು, ಮೇ 6: ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಸಾಲ ಕೊಡಿಸುವ ಸೋಗಿನಲ್ಲಿ ಕೋಟ್ಯಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಸುಮಾರು 3.893 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ತಮಿಳುನಾಡು ತಿರುನಲ್‍ವೇಲಿ ಮೂಲದ ಹರಿನಾಡರ್ ಯಾನೆ ಬಂಗಾರದ ಮನುಷ್ಯ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಹರಿನಾಡರ್, ರಂಜಿತ್ ಎಂಬವರು ವ್ಯವಸ್ಥಿತ ಸಂಚು ರೂಪಿಸಿಕೊಂಡು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಗುಜರಾತ್ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಸಾಲ ಕೊಡಿಸುವುದಾಗಿ ವಂಚಿಸುತ್ತಿದ್ದರು. ಬೆಂಗಳೂರಿನ ಉದ್ಯಮಿ ವೆಂಕಟರಮಣ ಶಾಸ್ತ್ರಿ ಅವರನ್ನು ಸಂಪರ್ಕಿಸಿದ ಆರೋಪಿಗಳು ಶೇ.6ರಷ್ಟು ಬಡ್ಡಿ ದರದಲ್ಲಿ 360 ಕೋಟಿ ರೂ. ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ದೀರ್ಘಕಾಲದ ಮಾತುಕತೆ ನಂತರ ಕೇರಳದ ಪಂಚತಾರ ಹೊಟೇಲ್‍ವೊಂದಕ್ಕೆ ಕರೆಸಿಕೊಂಡು ಸಾಲ ಕೊಡಿಸುವುದಾಗಿ ಪುಸಲಾಯಿಸಿದ್ದರು.

ಇದರಂತೆ ಒಪ್ಪಿಕೊಂಡ ಉದ್ಯಮಿಗೆ ಕೆಲ ದಿನಗಳ ಬಳಿಕ 360 ಕೋಟಿ ರೂ. ಬೆಲೆಯ ನಕಲಿ ಡಿಮ್ಯಾಂಡ್ ಡ್ರಾಪ್ಟ್ (ಡಿಡಿ) ತೋರಿಸಿ ಸಾಲ ಮಂಜೂರಾಗಿದೆ ಎಂದು ನಂಬಿಸಿದ್ದಾರೆ ಎನ್ನಲಾಗಿದೆ.

ಬಳಿಕ ಸಾಲ ಮಂಜೂರಿಗೆ ಶೇ.2 ರಷ್ಟು ಅಂದರೆ 7.20 ಕೋಟಿ ರೂ. ಹಣ ಪಡೆದಿದ್ದಾರೆ. ಹಣ ನೀಡಿ ಕೆಲ ದಿನಗಳ ಬಳಿಕ ಸಾಲ ಕೊಡಿಸದೆ ಅಸಲು ಹಣ ನೀಡದೆ ಯಾಮಾರಿಸಿದ್ದಾರೆ. ಹಣ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಗೆ ಉದ್ಯಮಿ ವೆಂಕಟರಮಣ ದೂರು ನೀಡಿದ್ದರು.

ಪ್ರಕರಣ ಸಿಸಿಬಿಗೆ ಹಸ್ತಾಂತರಿಸಿದ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈತನಿಂದ ಎರಡು ಕೋಟಿ ಮೌಲ್ಯದ 3.893 ಕೆಜಿ ಚಿನ್ನಾಭರಣ, 8.76 ಲಕ್ಷ ರೂ. ನಗದು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮುನ್ನ ಪ್ರಕರಣದ ಎರಡನೆ ಆರೋಪಿ ಕೇರಳದ ರಂಜಿತ್ ಎಸ್.ಪಣಿಕ್ಕರ್ ಅನ್ನು ಎ.4ರಂದು ಬಂಧಿಸಿ 10 ಲಕ್ಷ ಬೆಲೆಬಾಳುವ 140 ಗ್ರಾಂ ಚಿನ್ನ ಹಾಗೂ ವಜ್ರಾಭರಣ, ಒಂದು ಕಾರು ಹಾಗೂ 96 ಸಾವಿರ ರೂ.ಹಣ, ಆರೋಪಿ ಬ್ಯಾಂಕ್ ಖಾತೆಯಲ್ಲಿದ್ದ 38.85 ಲಕ್ಷ ರೂ.ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು.

ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಇತರೆ ಆರೋಪಿಗಳ ಶೋಧ ಮುಂದುವರೆಸಿದ್ದು, ಇವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News