ಗುತ್ತಿಗೆ ಆಧಾರದ ಸಿಬ್ಬಂದಿಗೆ ಹಾಸಿಗೆ ಕಾಯ್ದಿರಿಸುವ ಅಧಿಕಾರವೇ ಇಲ್ಲ: ವಿಜಯಕುಮಾರ್ ಸ್ಪಷ್ಟನೆ
ಬೆಂಗಳೂರು, ಮೇ 6: ಕೋವಿಡ್ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಕೋವಿಡ್ ವಾರ್ ಕೊಠಡಿಯ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಹಾಸಿಗೆ ಕಾಯ್ದಿರಿಸುವ ಅಧಿಕಾರವೇ ಇಲ್ಲ ಎಂದು ಕ್ರಿಸ್ಟಲ್ ಇನ್ಫೋಸಿಸ್ಟಮ್ ಸರ್ವಿಸಸ್ ಕಾರ್ಯನಿರ್ವಾಹಕ ವಿಜಯಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಾರ್ ರೂಂನಲ್ಲಿ ಡಾಟ ಆಪರೇಟರ್ ಮತ್ತು ಟೆಲಿಕಾಲರ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವಾರ್ ರೂಂ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದರು.
ಸೋಂಕಿತರ ಬಗ್ಗೆ ನೋಂದಣಿ ಮತ್ತು ಹಾಸಿಗೆ ಮಾಹಿತಿ, ಸೋಂಕಿತರನ್ನು ಯಾವ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೃತಪಟ್ಟವರ ಬಗ್ಗೆ ಮತ್ತು ಸೋಂಕಿತರ ಬಿ.ಯು.ನಂಬರ್ ಗಳ ಬಗ್ಗೆ ಕಂಪ್ಯೂಟರ್ ಅಪ್‍ಡೇಟ್ ಮಾಡುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ಹೊರಗುತ್ತಿಗೆ ನೇಮಕವಾಗಿರುವ ಗಣಕಯಂತ್ರ ನಿರ್ವಾಹಕರು ಮತ್ತು ಟೆಲಿಕಾಲರ್ ಗಳಿಗೆ ಹಾಸಿಗೆ ಮೀಸಲಿಡುವ ಅಧಿಕಾರವಿರುವುದಿಲ್ಲ ಎಂದು ಹೇಳಿದರು.