×
Ad

ಒಂದೇ ಒಂದು ಶವಸಂಸ್ಕಾರ ಮಾಡಿರುವ ಉದಾಹರಣೆ ತೋರಿಸು: ತೇಜಸ್ವಿ ಸೂರ್ಯಗೆ ಝಮೀರ್ ಅಹ್ಮದ್ ಸವಾಲು

Update: 2021-05-06 18:17 IST

ಬೆಂಗಳೂರು, ಮೇ 6: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಅವ್ಯವಹಾರದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಆಪ್ತ ಸಹಾಯಕ ಹರೀಶ್ ಎಂಬುವವರ ಕೈವಾಡ ವಿರುವುದಾಗಿ ಇವತ್ತು ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾಗಿದೆ. ಮೊನ್ನೆ ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್‍ನಲ್ಲಿ ಅಬ್ಬರಿಸಿದ ಸಂಸದ ತೇಜಸ್ವಿ ಸೂರ್ಯ ಈಗ ಯಾಕೆ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ಗುರುವಾರ ಚಾಮರಾಜಪೇಟೆಯ ಜೆ.ಜೆ.ಆರ್.ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸತೀಶ್ ರೆಡ್ಡಿ ಅವರು ಬಿಬಿಎಂಪಿ ವಾರ್ ರೂಮ್ ಅನ್ನು ಮದ್ರಸಾ ಮಾಡಲು ಹೊರಟ್ಟಿದ್ದೀರಾ ಎಂದು ಅಧಿಕಾರಿಗಳ ವಿರುದ್ಧ ಕಿಡಿಗಾರಿದ್ದರು. ಈಗ ಅವರ ಆಪ್ತ ಸಹಾಯಕನೇ ಈ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಮಿಸ್ಟರ್ ಸೂರ್ಯ ಇದಕ್ಕೆ ಏನು ಉತ್ತರ ಕೊಡುತ್ತಿಯಾ? ಇದೇ ಶಾಸಕರನ್ನು ಕರೆದುಕೊಂಡು ಹೋಗಿದ್ದಲ್ಲಪ್ಪ ನೀನು ಎಂದು ವಾಗ್ದಾಳಿ ನಡೆಸಿದರು.

ಕ್ರಿಸ್ಟಲ್ ಸಂಸ್ಥೆಯವರು ಬಿಬಿಎಂಪಿ ವಾರ್ ರೂಮ್‍ಗಾಗಿ ನೇಮಕ ಮಾಡಿಕೊಂಡಿದ್ದ 205 ಜನರ ಪೈಕಿ ಕೇವಲ 17 ಜನ ಮಾತ್ರ ಮುಸ್ಲಿಮರು. ಇವರ ಪೈಕಿ ಕೇವಲ ಒಬ್ಬರು ಮಾತ್ರ ಬೆಡ್ ಹಂಚಿಕೆ ವಿಭಾಗದಲ್ಲಿದ್ದಾರೆ. ಮಿಕ್ಕವರು ಇಂಡೆಕ್ಸ್, ಹೆಲ್ಪ್ ಲೈನ್‍ನಲ್ಲಿ ಕೆಲಸ ಮಾಡುವವರು. 13 ಸಾವಿರ ರೂ.ಸಂಬಳಕ್ಕೆ ಕೆಲಸ ಮಾಡುವ ಈ ಹುಡುಗರು ಅವ್ಯವಹಾರ ಮಾಡುವಂತೆ ಕಾಣುತ್ತಿದ್ದಾರಾ? ಬಿಬಿಎಂಪಿ ಯಾರ ಅಧೀನದಲ್ಲಿದೆ. ನಿಮ್ಮದೇ ಸರಕಾರ ಅಧಿಕಾರದಲ್ಲಿದೆ. ಈ ಬಗ್ಗೆ ತನಿಖೆ ಮಾಡಿಸಿ, ತಪ್ಪಿಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿ. ಆದರೆ, ಈ ರೀತಿ ಅಮಾಯಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.

ಹಾಸಿಗೆಗಳ ಅವ್ಯವಹಾರ ಯಾವ ಸರಕಾರದಲ್ಲಿ ನಡೆದಿರುವುದು? ಇಷ್ಟೆಲ್ಲ ಆಗುತ್ತಿದ್ದರೂ ಸರಕಾರ ಕಣ್ಣುಮುಚ್ಚಿಕೊಂಡು ಕೂತಿದೆಯೇ? ಸರಕಾರ ನಿಜಕ್ಕೂ ಅಸ್ತಿತ್ವದಲ್ಲಿದೆಯೇ ತೇಜಸ್ವಿ ಸೂರ್ಯ ಅವರೇ ? ಜಾತಿ ರಾಜಕಾರಣ ಮಾಡುವುದಾದರೆ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಿ. ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ಸಹನೆಯ ಕಟ್ಟೆ ಒಡೆದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕಡಿಮೆ ವಯಸ್ಸಿನಲ್ಲಿ ಸಂಸದರಾಗಿದ್ದೀರ. ನಿಮ್ಮಿಂದ ಒಳ್ಳೆಯ ಕೆಲಸಗಳು ಆಗುತ್ತೆ ಅಂತ ನಿರೀಕ್ಷೆಗಳಿದ್ದವು. ಆದರೆ, ಇಂತಹ ನಿರೀಕ್ಷೆಗಳು ಇರಲಿಲ್ಲ ಎಂದು ಅವರು ಹೇಳಿದರು.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ನಾನು ಹಾಗೂ ನಮ್ಮ ತಂಡ 558 ಮಂದಿ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಯನ್ನು ಅವರವರ ಜಾತಿ, ಧರ್ಮದ ಅನುಸಾರ ನೆರವೇರಿಸಿದ್ದೇವೆ. ಕೋವಿಡ್ ಸೋಂಕಿತರ ಶವಗಳನ್ನು ಅವರ ಕುಟುಂಬದವರು ಮುಟ್ಟಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ನಾವು ಮುಂದೆ ಬಂದಿದ್ದೇವೆ. ನಮ್ಮ ಕಾರ್ಯಕ್ಕೆ ಸ್ವತಃ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತೇಜಸ್ವಿ ಸೂರ್ಯ ನೀನು ಒಂದೇ ಒಂದು ಶವ ಸಂಸ್ಕಾರ ಮಾಡಿರುವ ಉದಾಹರಣೆ ತೋರಿಸು ನೋಡೋಣ ಎಂದು ಝಮೀರ್ ಅಹ್ಮದ್ ಸವಾಲು ಹಾಕಿದರು.

ಬಿಜೆಪಿಯವರಿಗೆ ಮುಸ್ಲಿಮರು ಮತ ಕೊಡಲ್ಲ ಎಂದು ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ಅಪಾರ್ಥ ಉಂಟು ಮಾಡಲು ತೇಜಸ್ವಿ ಸೂರ್ಯ ಪ್ರಯತ್ನ ಮಾಡುತ್ತಿದ್ದಾರೆ. ಈಗ ಬಿಜೆಪಿಯ ನೈಜ ಬಣ್ಣ ಏನು ಅನ್ನೋದು ಹಿಂದೂಗಳಿಗೂ ಗೊತ್ತಾಗಿದೆ. ಖತರ್, ದುಬೈ, ಸೌದಿ ಅರೇಬಿಯಾದಿಂದ ಬಂದಿರುವ ಆಕ್ಸಿಜನ್ ಕೇವಲ ಮುಸ್ಲಿಮರಿಗೆ ಎಂದು ಹೇಳಿದ್ದಾರಾ. ಮಾನವೀಯತೆ ದೃಷ್ಠಿಯಿಂದ ಅಲ್ಲಿನ ಸರಕಾರಗಳು ಕಳುಹಿಸಿದ್ದಾರೆ. ಇಷ್ಟಾದರೂ ಇವರಿಗೆ ಬುದ್ಧಿ ಬೇಡವೇ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಪ್ರಧಾನಿ ಹೇಳುವ ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಅಂದರೆ ಇದೇನಾ ತೇಜಸ್ವಿ ಸೂರ್ಯ? 205 ಜನರಲ್ಲಿ ಕೇವಲ 17 ಜನರನ್ನು ಗುರಿಯಾಗಿಸಿಕೊಂಡು ಆರೋಪಗಳನ್ನು ಮಾಡುವುದು ಸರಿಯೇ. ಅಚ್ಚೇದೀನ್ ಬರುತ್ತೆ ಅಂದರು, ಆದರೆ ಈಗ ಹೆಣಗಳು ಬೀಳುತ್ತಿವೆ. ಇದೇನಾ ಅಚ್ಚೇದಿನ್. ನಮಗೆ ನಮ್ಮ ಹಳೆಯ ದಿನಗಳನ್ನೆ ವಾಪಸ್ ಕೊಟ್ಟು ಬಿಟ್ಟರೆ ಸಾಕು ಎಂದು ಅವರು ಹೇಳಿದರು.

ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡಿಸೇಲ್ ದರಗಳನ್ನು ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಯಾಕೆ ತೇಜಸ್ವಿ ಸೂರ್ಯ ಮಾತನಾಡಲ್ಲ. ಕಳೆದ ಬಾರಿ ಬಿಐಇಸಿ ಕೇಂದ್ರದಲ್ಲಿ 10 ಸಾವಿರ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಮಾಡಿದ್ರಲ್ಲ, ಈಗ ಅದು ಎಲ್ಲಿ ಹೋಗಿದೆ. ಈ ಸರಕಾರಕ್ಕೆ ಏನು ಆಗಬೇಕಿಲ್ಲ, ಎಲ್ಲ ವಿಚಾರದಲ್ಲೂ ದುಡ್ಡು ಮಾಡಲು ಹೊರಟ್ಟಿದ್ದಾರೆ. ಬದುಕುವವರು ಬದುಕಲಿ, ಸಾಯುವವರು ಸಾಯಲಿ, ಇವರಿಗೆ ಏನು ಆಗಬೇಕಿಲ್ಲ ಎಂದು ಅವರು ದೂರಿದರು.

ಬಡವರು ಲಕ್ಷ ಲಕ್ಷ ಕೊಟ್ಟು ಹಾಸಿಗೆಗಳನ್ನು ಪಡೆಯುವ ಪರಿಸ್ಥಿತಿ ಇದೇ. ಶ್ರೀಮಂತರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ. ಒಂದು ರೆಮ್‍ಡಿಸಿವಿರ್ ಚುಚ್ಚುಮದ್ದು ಕೊಡಿಸಲು ಆಗುತ್ತಿಲ್ಲ. ಈ ಬಗ್ಗೆ ಯಾಕೆ ತೇಜಸ್ವಿ ಸೂರ್ಯ ಮಾತನಾಡಲ್ಲ. ನಿನ್ನೆ ಒಂದೇ ದಿನ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 50 ಸಾವಿರ ಪ್ರಕರಣಗಳು ದಾಖಲಾಗಿವೆ. ಕೋವಿಡ್ ನಿಯಂತ್ರಿಸಲು ಈ ಸರಕಾರಕ್ಕೆ ಆಗುತ್ತಿಲ್ಲ. ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

17 ಯುವಕರು ಕೆಲಸ ಮಾಡದಂತೆ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಕ್ರಿಸ್ಟಲ್ ಸಂಸ್ಥೆ ಜೊತೆ ಮಾತನಾಡಿ ಇವರಿಗೆ ಕೆಲಸ ಮುಂದುವರಿಸಲು ಅವಕಾಶ ನೀಡಲು ಪ್ರಯತ್ನಿಸುತ್ತೇನೆ. ಒಂದು ವೇಳೆ ಅವರು ಸ್ಪಂದಿಸದಿದ್ದರೆ ಇನ್ನೂ ಒಂದು ವಾರದಲ್ಲಿ ಕೋವಿಡೇತರ ರೋಗಿಗಳಿಗಾಗಿ ತಲಾ 50 ಹಾಗೂ 30 ಆಕ್ಸಿಜನ್ ಹಾಸಿಗೆಗಳ ಆಸ್ಪತ್ರೆಯನ್ನು ಸ್ವಂತ ಖರ್ಚಿನಲ್ಲಿ ಆರಂಭಿಸಲಾಗುತ್ತಿದೆ. ಅಲ್ಲಿ ಈ ಎಲ್ಲ ಹುಡುಗರನ್ನು ಮಾಸಿಕ 15 ಸಾವಿರ ರೂ.ವೇತನದೊಂದಿಗೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುತ್ತೇನೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಇವತ್ತು ಬಾಬು ಜಗಜೀವನ್‍ರಾಮ್ ನಗರದಲ್ಲಿ ರೆಫರಲ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲಿ 32 ಆಕ್ಸಿಜನ್ ಹಾಸಿಗೆ ಇದೆ, 8 ಐಸಿಯು ಸೌಲಭ್ಯ ಬರುತ್ತದೆ. ಇನ್ನೊಂದು ವಾರದಲ್ಲಿ ಬಿಬಿಎಂಪಿ ಸಮುದಾಯ ಭವನದಲ್ಲಿ ಕೋವಿಡೇತರ ರೋಗಿಗಳಿಗಾಗಿ 50 ಆಕ್ಸಿಜನ್ ಹಾಸಿಗೆಗಳು, ತಾಜ್ ಫಂಕ್ಷನ್ ಹಾಲ್‍ನಲ್ಲಿ 30 ಆಕ್ಸಿಜನ್ ಹಾಸಿಗೆಗಳ ಸೌಲಭ್ಯವನ್ನು ಸ್ವಂತ ಖರ್ಚಿನಲ್ಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಬೆಡ್ ಬ್ಲಾಕಿಂಗ್ ಅವ್ಯವಹಾರದಲ್ಲಿ ಮುಸ್ಲಿಮ್ ಸಂಘಟನೆಯ ಪಾತ್ರವಿದೆ ಎಂದು ಉಡಾಫೆಯ ಹೇಳಿಕೆಯನ್ನು ನೀಡಿದ್ದಾರೆ. ಸತ್ಯವನ್ನು ಅರಿಯದೆ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯೇ? ಪದೇ ಪದೇ ಎಲ್ಲದಕ್ಕೂ ಮುಸ್ಲಿಮರ ಹೆಸರನ್ನು ಎಳೆದು ತರುವುದು ನಿಮಗೆ ಶೋಭೆ ತರುತ್ತದೆಯೇ? ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಬಳಿ ಟ್ಯೂಷನ್ ಪಡೆಯಲಿ: ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಸರಕಾರ ಹೇಗೆ ನಡೆಸಬೇಕು ಎಂದು ಅವರ ಬಳಿ ತೇಜಸ್ವಿ ಸೂರ್ಯ ಹಾಗೂ ಮುಖ್ಯಮಂತ್ರಿ ಹೋಗಿ ಟೂಷನ್ ತೆಗೆದುಕೊಳ್ಳಲಿ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಈ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೆ ಒಂದು ಸಮಸ್ಯೆಯೂ ಆಗುತ್ತಿರಲಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಜನ ಸತ್ತರು. ಆ ಪ್ರಕರಣವನ್ನು ಮುಚ್ಚಿಹಾಕಲು ಈ ಬೆಡ್ ಬ್ಲಾಕಿಂಗ್ ಅನ್ನು ಮುಂದೆ ತರಲಾಗಿದೆ. ನಿಮಗೆ ಕೋವಿಡ್ ಸೋಂಕಿತರಿಗೆ ಹಾಸಿಗೆ ಕೊಡಲು ಸಾಧ್ಯವೇ? ನಿಮ್ಮ ಕ್ಷೇತ್ರದ ವ್ಯಾಪ್ತಿಗೊಳಪಡುವ ಕೋಣನಕುಂಟೆಯಿಂದ ಒಬ್ಬ ರೋಗಿಯ ಸಂಬಂಧಿ ರೆಮ್‍ಡಿಸಿವಿರ್ ಚುಚ್ಚುಮದ್ದು ಕೊಡಿಸುವಂತೆ ನಮಗೆ ಕರೆ ಮಾಡುತ್ತಾರೆ. ಇಷ್ಟೇ ಅಲ್ಲ, ನಿಮ್ಮ ಕ್ಷೇತ್ರದ ಬಸವನಗುಡಿ, ಜಯನಗರ, ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರ ಕಡೆಯಿಂದಲೂ ನಮಗೆ ಸಹಾಯ ಕೋರಿ ಕರೆಗಳು ಮಾಡುತ್ತಾರೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಝಮೀರ್ ಅಹ್ಮದ್ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News