ಬೆಂಗಳೂರು ನಗರದಲ್ಲಿ ಒಂದೇ ದಿನ 68 ಪೊಲೀಸ್ ಸಿಬ್ಬಂದಿಗೆ ಕೋವಿಡ್ ದೃಢ

Update: 2021-05-06 17:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 6: ಕೋವಿಡ್ ಎರಡನೇ ಅಲೆಯ ತೀವ್ರತೆಯ ಪ್ರಮಾಣ ಕಡಿಮೆಯಾಗುವ ಲಕ್ಷಣವಂತೂ ಗೋಚರಿಸುತ್ತಿಲ್ಲ. ಮತ್ತೊಂದೆಡೆ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಯಲ್ಲಿ ಹೆಚ್ಚಾಗಿ ಸೋಂಕು ಕಂಡುಬರುತ್ತಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ನಗರದಲ್ಲಿ ಒಂದೇ ದಿನ ಹೊಸದಾಗಿ 68 ಪೊಲೀಸ್ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತ ಪೊಲೀಸರ ಸಂಖ್ಯೆ 1,014 ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.

ಸೋಂಕಿತರ ಪೈಕಿ 752 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದು, ಇದುವರೆಗೆ 209 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಜನರಲ್ ವಾರ್ಡ್ ನಲ್ಲಿ 40, ಐಸಿಯು ಮತ್ತು ಆಕ್ಸಿಜನ್ ವಾರ್ಡ್ ಗಳಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಸೋಂಕು ಪತ್ತೆಯಾದ 68 ಮಂದಿ ಪೊಲೀಸ್ ಸಿಬ್ಬಂದಿ ಪೈಕಿ, 14 ಮಂದಿ ಮೊದಲ ಲಸಿಕೆ ಪಡೆದವರು ಮತ್ತು 47 ಮಂದಿ ಎರಡನೆ ಲಸಿಕೆ ಪಡೆದವರು. ಲಸಿಕೆ ಪಡೆಯದ 7 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

ನಗರ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 18,821 ಸಿಬ್ಬಂದಿ ಪೈಕಿ, 17,892 ಮಂದಿ ಮೊದಲು ಲಸಿಕೆ ಪಡೆದರೆ, 14,676 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News