ವಿಸಿಕೆ ಕಾರ್ಯದರ್ಶಿ ಎಂ.ಎಸ್.ಶೇಖರ್ ನಿಧನ

Update: 2021-05-06 17:50 GMT

ಬೆಂಗಳೂರು, ಮೇ 6: ವಿಡುದಲೈ ಚಿರುತೈಗಳ್-ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಎಸ್.ಶೇಖರ್(50) ಅವರು ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲೆ ಅಸ್ವಸ್ಥರಾಗಿದ್ದು ಸೂಕ್ತ ಸಮಯಕ್ಕೆ ಆಸ್ಪತ್ರೆ ಮತ್ತು ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.

ಪತ್ನಿ ಭವಾನಿ, ಪುತ್ರರಾದ ಭರತ್, ಸಂಜಯ್ ಹಾಗೂ ಪುತ್ರಿ ಭಾರತಿ ಸಹಿತ ವಿಸಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಬಂಧು-ಮಿತ್ರರನ್ನು ಶೇಖರ್ ಅಗಲಿದ್ದಾರೆ.

ಮಲ್ಲೇಶ್ವರಂನ ವಳ್ಳುವರ್‍ಪುರಂ ನಿವಾಸಿಯಾಗಿರುವ ಶೇಖರ್ ಅವರಿಗೆ ಮೇ 4ರ ತಡರಾತ್ರಿ ಅವರಿಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿದ್ದು, ಕೂಡಲೇ ಸಮೀಪದ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಟ ನಡೆಸಲಾಗಿದೆ.

ಕೊನೆಯಲ್ಲಿ ಯಶವಂತಪುರದ ಖಾಸಗಿ ಆಸ್ಪತ್ರೆ ದಾಖಲು ಮಾಡಿದ್ದು ಚಿಕಿತ್ಸೆ ಫಲಿಸದೆ ಮೇ 5ರ ಸಂಜೆ ಅಸುನೀಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. ಪಾರ್ಥಿವ ಶರೀರವನ್ನು ಇಲ್ಲಿನ ವಳ್ಳುವರ್‍ಪುರಂನ ಅವರ ನಿವಾಸದ ಬಳಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ವಿಡುದಲೈ ಚಿರುತೈಗಳ್ ರಾಷ್ಟ್ರೀಯಾಧ್ಯಕ್ಷ ಹಾಗೂ ಸಂಸದ ತೋಳ್ ತಿರುಮಾವಳವನ್, ವಿಸಿಕೆ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ಪದಾಧಿಕಾರಿಗಳಾದ ಗೋವಿಂದು ಶೇಖರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಶ್ರೀರಾಮಪುರದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News