ನೋಡಲ್ ಅಧಿಕಾರಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ ಶಾಸಕ ರಿಝ್ವಾನ್ ಆರ್ಶದ್

Update: 2021-05-07 17:19 GMT

ಬೆಂಗಳೂರು, ಮೇ 7: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ದ್ವಿಗುಣ ನಡುವೆಯೂ ರಾಜ್ಯ ಸರಕಾರ ಬೆಂಗಳೂರಿಗಾಗಿ ನಿಯೋಜಿಸಿದ್ದ ನೋಡಲ್ ಅಧಿಕಾರಿ ಕಾಣೆಯಾಗಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಶಾಸಕ ರಿಝ್ವಾನ್ ಆರ್ಶದ್ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡನೆ ಅಲೆಯೂ ಬಂದು ಎರಡು ತಿಂಗಳಾಗಿವೆ. ಈಗಲೂ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ರೆಮ್‍ಡೆಸಿವಿರ್ ಚುಚ್ಚುಮದ್ದು ಅಭಾವ ತಲೆದೋರಿದೆ. ಪ್ರಮುಖವಾಗಿ ರೆಮ್‍ಡೆಸಿವಿರ್ ಇಂಜೆಕ್ಷನ್ ಕೊರತೆಯಾಗದಂತೆ ತಡೆಯಲು ಕಳೆದ ತಿಂಗಳು 17ರಂದು ಕೆಂಪಯ್ಯ ಸುರೇಶ್ ಎಂಬುವರನ್ನು ರಾಜ್ಯ ಸರಕಾರ ನೋಡಲ್ ಅಧಿಕಾರಿಯನ್ನು ನಿಯೋಜಿಸಿತ್ತು. ಅಧಿಕಾರಿ ನೇಮಕವಾಗಿ ಹಲವು ದಿನಗಳು ಕಳೆದರೂ ಅವರ ಭೇಟಿಯೇ ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸತತ 25 ದಿನಗಳಿಂದಲೂ ಸಂಪರ್ಕಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಆ ನೋಡಲ್ ಅಧಿಕಾರಿಗೆ ಕೈಗೆ ಸಿಗುತ್ತಿಲ್ಲ. ಅವರು ಬ್ಲಾಕ್ ಮಾರ್ಕೆಟ್‍ನವರ ಜೊತೆ ಶಾಮೀಲಾಗಿದ್ದಾರಾ ಎಂಬ ಅನುಮಾನ ಬರುತ್ತಿದೆ. ಕಾಣೆಯಾಗಿರುವ ಅವರನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News