ಸ್ವ್ಯಾಬ್ ಪರೀಕ್ಷೆ ಅಕ್ರಮ ಆರೋಪ: ನಾಲ್ವರ ಬಂಧನ

Update: 2021-05-07 17:20 GMT

ಬೆಂಗಳೂರು, ಮೇ 7: ಕೋವಿಡ್ ಸಂಬಂಧ ಖಾಸಗಿ ಲ್ಯಾಬ್‍ನಿಂದ ಸಂಗ್ರಹಿಸಿದ ಸ್ವ್ಯಾಬ್ ಟೆಸ್ಟ್ ಅನ್ನು ಸರಕಾರದ ಲೆಕ್ಕದಲ್ಲಿ ಅಕ್ರಮವಾಗಿ ಪರೀಕ್ಷೆ ಮಾಡಿದಂತೆ ವರದಿ ಸಲ್ಲಿಸಿ ಹಣ ಪಡೆಯುತ್ತಿದ್ದ ಆರೋಪ ಸಂಬಂಧ ನಾಲ್ವರನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಸರಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‍ಗಳಾದ ಪದ್ಮನಾಭ, ಭಾವಿರೆಡ್ಡಿ, ಪುನೀತ್ ಹಾಗೂ ಖಾಸಗಿ ಲ್ಯಾಬ್ ನಡೆಸುತ್ತಿದ್ದ ಸತೀಶ್ ಎಂಬವರು ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಆರೋಪಿಗಳು ಖಾಸಗಿ ಲ್ಯಾಬ್‍ನಲ್ಲಿ ಸಂಗ್ರಹಿಸುತ್ತಿದ್ದ ಸ್ವ್ಯಾಬ್ ಅನ್ನು ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುತ್ತಿದ್ದರು. ಪ್ರತಿ ಟೆಸ್ಟ್ ಗೆ 100 ರೂ.ಪಡೆಯುತ್ತಿದ್ದು, ದಿನಕ್ಕೆ ಸುಮಾರು 30-40 ಸ್ವ್ಯಾಬ್ ಪರೀಕ್ಷೆ ಮಾಡಿ ಹಣ ಪಡೆಯುತ್ತಿದ್ದರು.

ಕಳೆದ ಡಿಸೆಂಬರ್‍ನಿಂದ ಇದುವರೆಗೂ 500ಕ್ಕೂ ಹೆಚ್ಚು ಸ್ವ್ಯಾಬ್‍ಗಳನ್ನು ಅಕ್ರಮವಾಗಿ ಪರೀಕ್ಷೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News