ಪೌರಕಾರ್ಮಿಕರ ಸಾವು ಪ್ರಕರಣ ಹೆಚ್ಚಳ: ಕೋವಿಡ್ ಸುರಕ್ಷತಾ ಪರಿಕರಕ್ಕೆ ಒತ್ತಾಯಿಸಿ ಧರಣಿ

Update: 2021-05-07 17:38 GMT

ಬೆಂಗಳೂರು, ಮೇ 7: ಕೋವಿಡ್ ಸೋಂಕಿಗೆ ಪೌರಕಾರ್ಮಿಕರ ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್‍ನಿಂದ ರಕ್ಷಣೆ ಒದಗಿಸಲು ಹಾಗೂ ಜೀವನ ಭದ್ರತೆಗಾಗಿ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪೌರಕಾರ್ಮಿಕರು ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬಾಣಸವಾಡಿ ವಾರ್ಡ್‍ನ ಪೌರಕಾರ್ಮಿಕ ಮಹಿಳೆ ಸುಶೀಲಮ್ಮ(52) ಕೋವಿಡ್‍ನಿಂದಾಗಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಆದರೂ ಪೌರಕಾರ್ಮಿಕರ ಜೀವವನ್ನು ಸಂರಕ್ಷಿಸುವ ದೃಷ್ಟಿಯಿಂದ ಯಾವ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕೋವಿಡ್‍ನಿಂದ ರಕ್ಷಣೆ ಒದಗಿಸುವ ಸುರಕ್ಷತಾ ಪರಿಕರಗಳನ್ನು ಒದಗಿಸುವ ಭರವಸೆ ನೀಡಿದ್ದಾರಷ್ಟೆ, ಕೋವಿಡ್ ಎರಡನೇ ಅಲೆ ಪರಿಣಾಮ ಗಲ್ಲಿ ಗಲ್ಲಿಯಲ್ಲೂ ಸೋಂಕಿತರು ಇದ್ದಾರೆ. ಕೋವಿಡ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಹೀಗಾಗಿ ಪೌರಕಾರ್ಮಿಕರು ಹಿಂದಿಗಿಂತಲೂ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಆತಂಕ ವ್ಯಕ್ತಪಡಿಸಿದ್ದಾರೆ.

ಪೌರಕಾರ್ಮಿಕರ ಪ್ರಮುಖ ಬೇಡಿಕೆಗಳು

-ಆರೋಗ್ಯ ಕಾರ್ಯಕರ್ತರಂತೆ ಪೌರಕಾರ್ಮಿಕರನ್ನೂ ಆಗಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು

-ಕೋವಿಡ್ ಕರ್ತವ್ಯ ನಿರ್ವಹಿಸುವ ಇತರ ಸರಕಾರಿ ನೌಕರರಿಗೆ ನೀಡುವಂತೆ ಪ್ರತಿ ತಿಂಗಳು 10 ಸಾವಿರ ರೂ.ಅಪಾಯ ಭತ್ತೆ ನೀಡಬೇಕು

-ಪೌರಕಾರ್ಮಿಕರಿಗೂ ಸರಕಾರ 50 ಲಕ್ಷ ರೂ.ವಿಮೆ ಭದ್ರತೆ ಒದಗಿಸಬೇಕು

-ಕೋವಿಡ್‍ನಿಂದ ರಕ್ಷಿಸಿಕೊಳ್ಳಲು ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು

-ಕೋವಿಡ್ ಕಾಣಿಸಿಕೊಂಡ ಪೌರಕಾರ್ಮಿಕರಿಗೆ ಉಚಿತ ಚಿಕಿತ್ಸೆ ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಹಾಸಿಗೆ ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News