ಕೋವಿಡ್ ಚಿಕಿತ್ಸೆಗೆ 2 ಲಕ್ಷಕ್ಕಿಂತ ಅಧಿಕ ನಗದು ಪಾವತಿ ಮಾಡಲು ಸಿಬಿಡಿಟಿ ಅನುಮತಿ

Update: 2021-05-08 04:37 GMT

ಮುಂಬೈ: ದೇಶದಲ್ಲಿ ಕೋವಿಡ್-19 ಸೋಂಕಿನ ತೀವ್ರತೆ ಹಿನ್ನೆಲೆಯಲ್ಲಿ, ಕೋವಿಡ್-19 ರೋಗಿಗಳ ಕುಟುಂಬದವರು ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ 2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಕೂಡಾ ನಗದು ರೂಪದಲ್ಲಿ ನೀಡಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)  ಅನುಮತಿ ನೀಡಿದೆ.

ಆದಾಯ ತೆರಿಗೆ ನಿಬಂಧನೆಗಳ ಪ್ರಕಾರ, ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳು 2 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವುದು ನಿಷಿದ್ಧ. ಈ ಕಟ್ಟುನಿಟ್ಟಿನ ಕಾನೂನನ್ನು ಮೇ 31ರವರೆಗೆ ಸಡಿಲಿಸಲಾಗಿದೆ ಎಂದು ಸಿಬಿಡಿಟಿ ಪ್ರಕಟಿಸಿದೆ.

ನೆಟ್‌ಬ್ಯಾಂಕಿಂಗ್ ಸೌಲಭ್ಯದ ಬಗ್ಗೆ ಅರಿವು ಇಲ್ಲದ ಬಹಳಷ್ಟು ಕುಟುಂಬಗಳ ರೋಗಿಗಳು ಸಂಕಷ್ಟಕ್ಕೀಡಾಗಿದ್ದು, ಇಂಥವರು ನೆಟ್ ಬ್ಯಾಂಕಿಂಗ್ ಮೂಲಕ ಬಿಲ್ ಪಾವತಿಸುವುದು ಅಸಾಧ್ಯ. ಆಸ್ಪತ್ರೆಗಳು ಸಾಮಾನ್ಯವಾಗಿ ಚೆಕ್‌ಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಮಿತಿ ಇರುವುದರಿಂದ ಈ ಸಮಸ್ಯೆ ಉದ್ಭವಿಸಿತ್ತು.

ಸಿಬಿಟಿಡಿಯ ಹೊಸ ಅಧಿಸೂಚನೆ ಪ್ರಕಾರ, ಆಸ್ಪತ್ರೆಗಳು, ಡಿಸ್ಪೆನ್ಸರಿಗಳು, ನರ್ಸಿಂಗ್‌ಹೋಂ, ಕೋವಿಡ್-19 ಆರೈಕೆ ಕೇಂದ್ರಗಳು ಅಥವಾ ಇಂಥದ್ದೇ ಇತರ ವೈದ್ಯಕೀಯ ವ್ಯವಸ್ಥೆಗಳನ್ನು ಒಳಗೊಂಡಿದೆ.

ಏಪ್ರಿಲ್ 1ರಿಂದ ಮೇ ಕೊನೆಯ ವರೆಗೆ ವೈದ್ಯಕೀಯ ಕೇಂದ್ರಗಳು ನಗದು ರೂಪದಲ್ಲಿ 2 ಲಕ್ಷಕ್ಕಿಂತ ಅಧಿಕ ಮೊತ್ತ ಪಡೆಯಬಹುದು. ಇದಕ್ಕೆ ರೋಗಿಗಳ ಮತ್ತು ಪಾವತಿ ಮಾಡುವವರ ಪಾನ್ ಅಥವಾ ಆಧಾರ್ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕು. ರೋಗಿ ಮತ್ತು ಹಣ ಪಾವತಿ ಮಾಡುವವರ ನಡುವಿನ ಸಂಬಂಧವನ್ನು ಕೂಡಾ ರಸೀದಿಯಲ್ಲಿ ಉಲ್ಲೇಖಿಸಬೇಕು ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News