ಕುಂಭಮೇಳ ನಿರ್ಬಂಧಕ್ಕೆ ಮುಂದಾಗಿದ್ದ ತಿವೇಂದ್ರ ಸಿಂಗ್‌ ರನ್ನು ಸಿಎಂ ಸ್ಥಾನದಿಂದ ರಾತ್ರೋರಾತ್ರಿ ವಜಾಗೊಳಿಸಿದ್ದ ಬಿಜೆಪಿ

Update: 2021-05-08 12:13 GMT

ಹರಿದ್ವಾರ:  ಉತ್ತರಖಾಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ರನ್ನು ಕುಂಭಮೇಳಕ್ಕೆ ಅನುಮತಿ ನೀಡಲು ನಿರಾಕರಿಸಿದ್ದರೆಂಬ ಕಾರಣದಿಂದ ರಾತ್ರೋರಾತ್ರಿ ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಲಾಗಿತ್ತು ಎಂದು thecaravan ಮಾಧ್ಯಮವು ವರದಿ ಮಾಡಿದೆ. ಒಂದು ಡಝನ್‌ ಗೂ ಹೆಚ್ಚು ಬಿಜೆಪಿ ನಾಯಕರು, ಅಖಿಲ ಭಾರತೀಯ ಅಖಾರ ಪರಿಷದ್‌ ನ ಹಲವು ಮುಖ್ಯಸ್ಥರು ಹಾಗೂ ಕುಂಭಮೇಳಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಂದರ್ಶನ ಮಾಡಿದ ಬಳಿಕ ಈ ವರದಿಯನ್ನು ಪ್ರಕಟಿಸಲಾಗಿದೆ.

ಐವರು ಮಹಾಂತರು ಮತ್ತು ಇಬ್ಬರು ಬಿಜೆಪಿ ನಾಯಕರ ಪ್ರಕಾರ, ಆರೆಸ್ಸೆಸ್‌ ಮತ್ತು ಉತ್ತರಾಖಂಡದ ಕೆಲ ಕ್ಯಾಬಿನೆಟ್‌ ಸಚಿವರು ʼಭವ್ಯʼ ಕುಂಭಮೇಳ ಆಯೋಜನೆಯ ಯೋಜನೆ ಹಾಕಿಕೊಂಡಿದ್ದರು ಎಂದು ವರದಿ ಉಲ್ಲೇಖಿಸಿದೆ. ಕೋವಿಡ್‌ ನ ನಡುವೆಯೂ ಸಂಪೂರ್ಣ ಕುಂಭಮೇಳ ಆಯೋಜಿಸುವುದು ಒಂದು ರಾಜಕೀಯ ಮತ್ತು ಆರ್ಥಿಕ ಯೋಜನೆಯಾಗಿತ್ತು ಎಂದು ಬಿಜೆಪಿ ನಾಯಕರೊಬ್ಬರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಮುಂದಿನ ಎಂಟು ತಿಂಗಳಿನಲ್ಲಿ ಉತ್ತರ ಪ್ರದೇಶ ಚುನಾವಣೆಯು ನಡೆಯಲಿರುವುದರಿಂದ ಕುಂಭ ಮೇಳ ನಡೆಸುವುದು ಅನಿವಾರ್ಯವಾಗಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ. ಚುನಾವಣೆಗೆ ಮುಂಚೆ ಅಖಾರಗಳ ಮುಖ್ಯಸ್ಥರ ವಿರೋಧ ಕಟ್ಟಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.

೨೦೧೯ರಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್‌ ರಾವತ್‌ ರವರಿಗೆ, "ಕುಂಭಮೇಳಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ. ಅಖಾರದ ಮುಖ್ಯಸ್ಥರಿಗೆ ಯಾವುದೇ ತೊಂದರೆಯುಂಟಾಗಬಾರದು ಮತ್ತು ಯಾವುದೇ ವಿವಾದಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು" ಎಂದು ಹೇಳಿಕೆ ನೀಡಿದ್ದಾಗಿ ಹಿರಿಯ ಬಿಜೆಪಿ ನಾಯಕರು ತಿಳಿಸಿದ್ದಾಗಿ ವರದಿಯಾಗಿದೆ.

ಕುಂಭಮೇಳದಲ್ಲಿ 91 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದು, ಇದೊಂದು ಕೋವಿಡ್‌ ಸೂಪರ್‌ ಸ್ಪ್ರೆಡರ್‌ ಆಗಿ ಪರಿಣಮಿಸಿತ್ತು. ಕುಂಭಮೇಳಕ್ಕೆ ನಿರ್ಬಂಧ ಹೇರುವ ಸಿದ್ಧತೆಯಲ್ಲಿದ್ದ ತಿವೇಂದ್ರ ಸಿಂಗ್‌ ರನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ಮಾಜಿ ಆರೆಸ್ಸೆಸ್‌ ಪ್ರಚಾರಕರಾಗಿದ್ದ ತೀರಥ್‌ ಸಿಂಗ್‌ ರಾವತ್‌ ರನ್ನು ನೇಮಿಸಿತು ಮತ್ತು ಅವರು ಕುಂಭಮೇಳ ಸೂಪರ್‌ ಸ್ಪ್ರೆಡರ್‌ ಆಗಿದೆ ಎಂಬ ವಾದವನ್ನು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ ಎಂದು ವರದಿ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News