ಕೋವಿಡ್-19 ಮತ್ತು ಹೃದಯಾಘಾತದ ನಡುವಿನ ನಂಟು ಏನು?

Update: 2021-05-08 12:29 GMT

ವಿಶ್ವಾದ್ಯಂತ ದಿನೇ ದಿನೇ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ದರ ಹೆಚ್ಚುತ್ತಲೇ ಇವೆ. ಭಾರತದಲ್ಲಂತೂ ಸಾರ್ವಜನಿಕ ಆರೋಗ್ಯ ರಕ್ಷಣೆ ವ್ಯವಸ್ಥೆಯೇ ಕುಸಿದುಬಿದ್ದಿದೆ. ಆಮ್ಲಜನಕ ಸಿಲಿಂಡರ್ಗಳು,ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ಗಳಂತಹ ಮುಖ್ಯ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಜನರು ಪರದಾಡುತ್ತಿದ್ದಾರೆ.

ಕೋವಿಡ್-19 ಜೊತೆ ಗುರುತಿಸಿಕೊಂಡಿರುವ ಕೆಲವು ತೊಂದರೆಗಳು ರೋಗಿಗಳಿಗೆ ಮಾರಣಾಂತಿಕವಾಗಬಲ್ಲವು. ಹೃದಯದ ಆರೋಗ್ಯಕ್ಕೂ ಕೋವಿಡ್-19ಕ್ಕೂ ಸಂಬಂಧವಿದೆ ಎನ್ನುವುದನ್ನು ಹಲವಾರು ಪ್ರಕರಣಗಳಲ್ಲಿ ವೈದ್ಯರು ಗಮನಿಸಿದ್ದಾರೆ. ಹೃದಯ ಸಮಸ್ಯೆಯು ನಿಜಕ್ಕೂ ಗಂಭೀರ ಕೋವಿಡ್ ಲಕ್ಷಣಗಳ ಹಿಂದಿನ ಅಪಾಯದ ಅಂಶವಾಗಿದೆ. ಕೊರೋನವೈರಸ್ನ ಪರಿಣಾಮವು ಹೃದಯಾಘಾತಕ್ಕೂ ಕಾರಣವಾಗಬಲ್ಲದು.

 ಕೊರೋನವೈರಸ್ ಸೋಂಕುಂಟಾದ ಬಳಿಕ ರೋಗಿಗಳು ದಿಢೀರ್ ಸಾವನ್ನಪ್ಪಿರುವ ಹಲವಾರು ಪ್ರಕರಣಗಳು ವರದಿಯಾಗಿವೆ. ಹೀಗೇಕೆ ಸಂಭವಿಸುತ್ತದೆ ಎನ್ನುವುದು ನಿಮಗೆ ಗೊತ್ತೇ? ಕೆಲವು ರೋಗಿಗಳಲ್ಲಿ ಕೋವಿಡ್ನಿಂದಾಗಿ ಹೃದಯದಲ್ಲಿ ಅಥವಾ ರಕ್ತದಲ್ಲಿ ಹೆಪ್ಪುಗಟ್ಟುವಿಕೆ ಕಂಡು ಬಂದಿದೆ. ಇದು ರಕ್ತವನ್ನು ದಪ್ಪಗಾಗಿಸುತ್ತದೆ ಮತ್ತು ಬಳಿಕ ನಿರ್ದಿಷ್ಟ ಹೃದಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಹೃದ್ರೋಗದಂತಹ ಹೆಚ್ಚಿನ ಅಪಾಯದ ಅಂಶಗಳನ್ನು ಹೊಂದಿರುವವರಿಗೆ ಹೃದಯಘಾತವುಂಟಾಗುವ ಸಾಧ್ಯತೆಯನ್ನು ತಗ್ಗಿಸಲು ವೈದ್ಯರು ಬ್ಲಡ್ ಥಿನ್ನರ್ಗಳನ್ನು ಅಥವಾ ರಕ್ತವನ್ನು ತೆಳ್ಳಗಾಗಿಸುವ ಔಷಧಿಗಳನ್ನು ನೀಡುತ್ತಾರೆ. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮತ್ತು ನಿಯಮಿತವಾಗಿ ವೈದ್ಯರ ಸಂಪರ್ಕದಲ್ಲಿರುವ ಮೂಲಕ ಈ ಅಪಾಯವನ್ನು ತಡೆಯಬಹುದು.

 ಈಗಾಗಲೇ ಪರಿಧಮನಿ ರೋಗವನ್ನು ಹೊಂದಿರುವ ಕೋವಿಡ್ ಸೋಂಕಿತರು ಹೃದಯ ಸಂಬಂಧಿ ತೊಂದರೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಈ ರೋಗಿಗಳಲ್ಲಿ ಈಗಾಗಲೇ ಹೃದಯಕ್ಕೆ ರಕ್ತಸಂಚಾರಕ್ಕೆ ವ್ಯತ್ಯಯವುಂಟಾಗಿರುತ್ತದೆ ಮತ್ತು ರಕ್ತನಾಳಗಳ ಕಾರ್ಯ ದುರ್ಬಲಗೊಂಡಿರುತ್ತದೆ. ಕೋವಿಡ್-19ರಿಂದಾಗಿ ಹೃದಯಕ್ಕೆ ತನ್ನ ಕೋಶಗಳಿಗೆ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಈ ಕೋಶಗಳು ಹಾನಿಗೀಡಾಗಬಹುದು ಮತ್ತು ರೋಗಿಯು ಹೃದಯಾಘಾತಕ್ಕೆ ಗುರಿಯಾಗಬಹುದು. ಇಂತಹ ಕಠಿಣ ಸ್ಥಿತಿಯಲ್ಲಿ ವೈದ್ಯರ ನಿರ್ದೇಶದ ಮೇರೆಗೆ ತೆಗೆದುಕೊಳ್ಳಬಹುದಾದ ಔಷಧಿಗಳು ಮತ್ತು ಕ್ರಮಗಳಿವೆ. ಕೋವಿಡ್ ಸೋಂಕಿತರು ಈಗಾಗಲೇ ಹೃದಯ ಸಮಸ್ಯೆಯನ್ನು ಹೊಂದಿದ್ದರೆ ಆ ಬಗ್ಗೆ ವ್ಯೆದ್ಯರೊಂದಿಗೆ ಚರ್ಚಿಸುವುದು ಅಗತ್ಯವಾಗುತ್ತದೆ.

 ಕೋವಿಡ್-19 ಸೋಂಕಿನ ಪರಿಣಾಮ ಕೇವಲ ಶ್ವಾಸಕೋಶಗಳಿಗೆ ಸೀಮಿತವಾಗಿಲ್ಲ ಎನ್ನುವುದನ್ನು ಹಾಲಿ ನಡೆಯುತ್ತಿರುವ ಅಧ್ಯಯನಗಳು ಬೆಟ್ಟು ಮಾಡುತ್ತಿವೆ. ಹಲವು ಸೋಂಕಿತರು ಹೃದಯ ಸಮಸ್ಯೆಗಳನ್ನೂ ಅನುಭವಿಸಬಹುದು. ಇಂತಹ ಹೆಚ್ಚಿನ ರೋಗಿಗಳು ಈಗಾಗಲೇ ಹೃದಯರೋಗ ಅಥವಾ ಅಧಿಕ ರಕ್ತದೊತ್ತಡದಂಹ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ,ಅಲ್ಲದೆ ಇತರ ಯಾವುದೇ ಅನಾರೋಗ್ಯಗಳಿಲ್ಲದ ರೋಗಿಗಳಲ್ಲಿಯೂ ರಕ್ತನಾಳಗಳಿಗೆ ಹಾನಿ,ರಕ್ತ ಹೆಪ್ಪುಗಟ್ಟುವಿಕೆ,ಅನಿಯಮಿತ ಹೃದಯಬಡಿತ,ಪಾರ್ಶ್ವವಾಯು ಮತ್ತು ಹೃದಯಘಾತದಂತಹ ಸಮಸ್ಯೆಗಳು ಕಂಡು ಬಂದಿವೆ. ವ್ಯಕ್ತಿಯನ್ನು ತೀವ್ರ ಕೋವಿಡ್-19 ರೋಗಕ್ಕೆ ತುತ್ತಾಗಿಸುವಲ್ಲಿ ಈಗಾಗಲೇ ಇರುವ ಅನಾರೋಗ್ಯಗಳು ಪ್ರಮುಖ ಪಾತ್ರವನ್ನು ಹೊಂದಿರುತ್ತವೆ.

ಕೋವಿಡ್-19 ಮತ್ತು ಹೃದಯಾಘಾತದ ನಡುವೆ ಸಂಬಂಧವಿದೆ ಎನ್ನುವುದು ಹಲವಾರು ಪ್ರಕರಣಗಳಿಂದ ಖಚಿತಪಟ್ಟಿದೆ. ಕೋವಿಡ್-19 ಶ್ವಾಸಕೋಶಗಳ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತದೆಯಾದರೂ ಹಲವಾರು ರೋಗಿಗಳಲ್ಲಿ ಹೊಸ ಕೊರೋನವೈರಸ್ ಸೋಂಕಿನಿಂದ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೋವಿಡ್-19 ಹೃದಯಕ್ಕೆ ಹಾನಿಯುಂಟು ಮಾಡುವಲ್ಲಿ ಉರಿಯೂತದಂತಹ ಕೆಲವು ಅಂಶಗಳ ಪಾತ್ರವಿದೆ. ವೈರಸ್ ನೇರವಾಗ ಹೃದಯನಾಳೀಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವುದಿಲ್ಲ, ಆದರೆ ಸೋಂಕಿನ ಒಟ್ಟಾರೆ ಪರಿಣಾಮಗಳು ಮೊದಲೇ ಇರುವ ಹೃದಯ ಸಮಸ್ಯೆಗಳನ್ನು ಉಲ್ಬಣಿಸುತ್ತವೆ.

ಮಾಹಿತಿ: ಡಾ.ಪ್ರವೀಣಚಂದ್ರ ಹಾರ್ಟ್ ಇನ್ಸ್ಟಿಟ್ಯೂಟ್, ಮೇದಾಂತ-ದಿ ಮೆಡಿಸಿಟಿ,ಗುರ್ಗಾಂವ್

 ಕೃಪೆ: Onlymyhealth

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News