ಲಾಕ್‌ಡೌನ್: ಬಣ್ಣ ಕರಗಿದ ವ್ಯವಸ್ಥೆಗೆ ಕನ್ನಡಿ

Update: 2021-05-08 19:30 GMT

ಕೊರೋನ ಕುರಿತು ಮಾಹಿತಿಗಳುಳ್ಳ, ಅದರ ಸಾಧಕ, ಬಾಧಕಗಳನ್ನು ತಿಳಿಸಬಲ್ಲ ಹಲವು ಕೃತಿಗಳು ಈ ಒಂದು ವರ್ಷದಲ್ಲಿ ಹೊರ ಬಂದಿವೆ. ಆದರೆ ಇದೇ ಸಂದರ್ಭದಲ್ಲಿ ಕೊರೋನದ ಅಕ್ರಮ ಶಿಶುವಾಗಿರುವ ಲಾಕ್‌ಡೌನ್ ಕುರಿತಂತೆ, ಅದರ ಆರ್ಥಿಕ, ಸಾಮಾಜಿಕ ಅನಾಹುತಗಳ ಕಡೆಗೆ ಬೆಳಕು ಚೆಲ್ಲುವ ಕೃತಿ ಕನ್ನಡದಲ್ಲಿ ಬಂದಿಲ್ಲ. ಕೊರೋನವನ್ನು ತಡೆಯುವುದಕ್ಕೆ ಪೂರಕವಾಗಿ ಲಾಕ್‌ಡೌನ್‌ನ್ನು ನೋಡಿದವರೇ ಅಧಿಕ. ಕೊರೋನ ಮಾಡಿರುವುದಕ್ಕಿಂತ ಹಲವು ಪಟ್ಟು ಹಾನಿಯನ್ನು ಈ ದೇಶಕ್ಕೆ ಲಾಕ್‌ಡೌನ್ ಮಾಡಿದೆ. ಕೊರೋನ ಮತ್ತು ಲಾಕ್‌ಡೌನ್ ಎರಡು ಬೇರೆ ಬೇರೆಯಾದುದು. ಕೊರೋನ ಆತಂಕಿತರು ಲಾಕ್‌ಡೌನ್‌ಗಾಗಿ ಒತ್ತಾಯಿಸುತ್ತಿದ್ದರೆ, ಇತ್ತ ಹಸಿವಿನ ಆತಂಕದಲ್ಲಿರುವವರು ಲಾಕ್‌ಡೌನ್ ಬೇಡ ಎನ್ನುತ್ತಿದ್ದಾರೆ. ಈ ದೇಶ ಕೊರೋನ ಪೀಡಿತರು ಮತ್ತು ಲಾಕ್‌ಡೌನ್ ಪೀಡಿತರು ಎಂದು ಸ್ಪಷ್ಟವಾಗಿ ಇಬ್ಭಾಗವಾಗಿದೆ. ಕೊರೋನಸಂತ್ರಸ್ತರ ಕುರಿತಂತೆ ಸಮಾಜ, ವ್ಯವಸ್ಥೆ ಮಾತನಾಡಿದಷ್ಟು ಲಾಕ್‌ಡೌನ್ ಸಂತ್ರಸ್ತರ ಕುರಿತಂತೆ ಮಾತನಾಡಿಲ್ಲ. ಕಳೆದ ವರ್ಷ ಲಾಕ್‌ಡೌನ್ ಸಂತ್ರಸ್ತರ ಪರವಾಗಿ ಹಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದರಾದರೂ, ಸುಪ್ರೀಂಕೋರ್ಟ್ ಲಾಕ್‌ಡೌನ್ ಸಂತ್ರಸ್ತರ ಅಳಲಿಕೆಗೆ ಕಿವಿಯಾಗುವುದಕ್ಕೆ ಸಿದ್ಧವಿರಲಿಲ್ಲ. ಕೊರೋನದ ಮರೆಯಲ್ಲಿ ಮುಚ್ಚಿಹೋಗಿರುವ ಲಾಕ್‌ಡೌನ್ ಈ ದೇಶದ ಸ್ಥಿತಿಗತಿಯ ಮೇಲೆ ಬೀರಿದ ಪರಿಣಾಮಗಳನ್ನು ಪ್ರತ್ಯೇಕವಾಗಿ ಅಧ್ಯಯನ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿರಿಯ ಲೇಖಕ, ಅಭಿವೃದ್ಧಿ ಮತ್ತು ರಾಜಕೀಯ ಚಿಂತಕ ಡಾ. ಎಂ. ಚಂದ್ರ ಪೂಜಾರಿ ಅವರ ‘ಲಾಕ್‌ಡೌನ್’ ಎನ್ನುವ ಪುಟ್ಟ ಕೃತಿ ಇಂದಿನ ಸಂದರ್ಭಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಲಾಕ್‌ಡೌನ್ ಕಾಲದಲ್ಲಿ ದುಡಿಮೆ ಕಳೆದುಕೊಂಡ ಅಸಂಘಟಿತ ಕಾರ್ಮಿಕರ ಬಗ್ಗೆ, ವೈರಸ್ ಹರಡದಂತೆ ಶ್ರಮಿಸಿದ ವಾರಿಯರ್ಸ್‌- ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಬಗ್ಗೆ, ಸರಕಾರ ದುಡಿಮೆಗಾರರ ಕುರಿತಂತೆ ತಳೆದ ನಿಲುವುಗಳು, ಜಾರಿಗೆ ತಂದ ನೀತಿಗಳ ಬಗ್ಗೆ ಅಲ್ಲಲ್ಲಿ ಬರೆದ ಲೇಖನಗಳ ಸಂಗ್ರಹ ರೂಪವೇ ‘ಲಾಕ್‌ಡೌನ್’ ಕಿರು ಹೊತ್ತಗೆ. ಲಾಕ್‌ಡೌನ್ ಒಂದು ಪ್ರಮಾದ ಎಂದು ಪ್ರತಿಪಾದಿಸುವ ಈ ಕೃತಿ, ಜನರ ಬದುಕಿನ ಮೇಲೆ ಇದು ಸುನಾಮಿಯಂತೆ ಎರಗಿದೆ ಎಂದು ಅಭಿಪ್ರಾಯ ಪಡುತ್ತದೆ.

‘‘ಇಂಡಿಯಾ, ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಕೂಡ ಜನ ಇಷ್ಟೊಂದು ಕಷ್ಟ ನಷ್ಟ ಅನುಭವಿಸಿರಲಿಲ್ಲ. ಶ್ರೇಣೀಕೃತ ಸಮಾಜದಲ್ಲಿ ಎಲ್ಲರೂ ಒಂದೇ ಬಗೆಯ ಕಷ್ಟನಷ್ಟಗಳನ್ನು ಅನುಭವಿಸುವುದಿಲ್ಲ. ಶ್ರೀಮಂತ ಮತ್ತು ಮಧ್ಯಮ ವರ್ಗಕ್ಕೆ ಕಾಲ ಕಳೆಯುವುದು ಕಷ್ಟವಾಗಿರಬಹುದು. ಮಾನಸಿಕ ನೆಮ್ಮದಿಯ ಸಮಸ್ಯೆಗಳನ್ನು ಎದುರಿಸಿರಬಹುದು. ಇವರ್ಯಾರಿಗೂ ತಮ್ಮ ಅಸ್ತಿತ್ವವನ್ನು ಪಣಕ್ಕಿಡುವ ಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ಪಿರಾಮಿಡ್ ಬುಡದಲ್ಲಿರುವ ಮುಕ್ಕಾಲು ಭಾಗ ಜನರ ಅಸ್ತಿತ್ವವನ್ನೇ ಲಾಕ್‌ಡೌನ್ ಪ್ರಶ್ನಿಸಿದೆ’’ ಎಂದು ಲೇಖಕರು ಪ್ರಸಾವನೆಯಲ್ಲಿ ಬರೆಯುತ್ತಾರೆ. ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ಮೊದಲ ಅಧ್ಯಾಯ ಪ್ರಸ್ತಾವನೆಗೆ ಮೀಸಲಾಗಿದೆ. ಲಾಕ್‌ಡೌನ್ ಘೋಷಣೆಗೆ ಕಾರಣ, ಯಾವುದೇ ಪೂರ್ವಯೋಜನೆ ಇಲ್ಲದೆಲಾಕ್‌ಡೌನ್ ವಿಧಿಸಿದ ಪರಿಣಾಮ, ಅದರ ಆಶಯ ಮತ್ತು ಅನುಷ್ಠಾನದಲ್ಲಿ ವೈಫಲ್ಯ ಇತ್ಯಾದಿಗಳನ್ನು ಆಳವಾಗಿ ಚರ್ಚಿಸುತ್ತದೆ.

ಲಾಕ್‌ಡೌನ್ ಅಂತಿಮವಾಗಿ ಈ ದೇಶದ ಆರ್ಥಿಕ ಮತ್ತು ಸಾಮಾಜಿಕ ಬದುಕಿಗೆ ಕೊಟ್ಟದ್ದೇನು ಎನ್ನುವುದರ ವಾಸ್ತವವನ್ನು ತೆರೆದಿಡುತ್ತಾರೆ. ಲಾಕ್‌ಡೌನ್ ಅಧ್ಯಾಯದಲ್ಲಿ, ಯಾಕೆ ಭಾರತದಲ್ಲಿ ಲಾಕ್‌ಡೌನ್ ವಿಫಲವಾಯಿತು ಎನ್ನುವುದನ್ನು ಚರ್ಚಿಸುತ್ತಾರೆ. ಕೊರೋನ ವೈರಸ್ ಹಬ್ಬುವಿಕೆಯನ್ನು ತಡೆಯಲು ಲಾಕ್‌ಡೌನ್ ಉತ್ತಮ ಮಾರ್ಗವೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಲಾಕ್‌ಡೌನ್‌ನ್ನು ಘೋಷಿಸುವ ಮುನ್ನ ಆರು ಕೋಟಿಯಷ್ಟಿರುವ ಅಲೆಮಾರಿಗಳು, 30 ಕೋಟಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿ ಉದ್ಯಮಿಗಳ ಬದುಕನ್ನು ಸರಕಾರ ಗಂಭೀರವಾಗಿ ಸ್ವೀಕರಿಸದೇ ಇರುವುದು ಅನಾಹುತಗಳಿಗೆ ಕಾರಣವಾಯಿತು ಎಂದು ಕೃತಿ ಅಭಿಪ್ರಾಯಪಡುತ್ತದೆ.

ಕೊರೋನ ವಾರಿಯರ್ಸ್‌ ಇಲ್ಲಿ ವ್ಯವಸ್ಥೆಯಿಂದ ಹೇಗೆ ಶೋಷಿತರಾಗಿದ್ದಾರೆ ಎನ್ನುವುದನ್ನು ಇನ್ನೊಂದು ಅಧ್ಯಾಯ ತೆರೆದಿಡುತ್ತದೆ. ಈ ಕೃತಿ ಕೊರೋನೋತ್ತರದ ಕುರಿತಂತೆ ಬರೆಯುವಾಗ ಎರಡನೆಯ ಅಲೆಯ ಪರಿಣಾಮಗಳ ಕುರಿತಂತೆ ಲೇಖಕರಿಗೆ ಅರಿವಿದ್ದಿರಲಿಲ್ಲ. ಈ ಕೃತಿ ಏನನ್ನು ಶಂಕಿಸಿತೋ, ಅದಕ್ಕಿಂತಲೂ ಭೀಕರ ಪರಿಣಾಮವನ್ನು ನಾವು ಎರಡನೆಯ ಅಲೆಯಲ್ಲಿ ಕಾಣುತ್ತಿದ್ದೇವೆ.

ಕೇವಲ ಕಾರ್ಮಿಕರು, ಅಲೆಮಾರಿಗಳು ಮಾತ್ರವಲ್ಲ, ವ್ಯವಸ್ಥೆಯ ಬೇಜವಾಬ್ದಾರಿಯಿಂದಾಗಿ ಮಧ್ಯಮ, ಮೇಲ್ಮಧ್ಯಮ ವರ್ಗದ ಮೇಲೂ ತೀವ್ರ ಪರಿಣಾಮವನ್ನು ಕೊರೋನಮತ್ತು ಲಾಕ್‌ಡೌನ್ ಬೀರಿದೆ. ಈ ಹಿಂದೆ ಕೊರೋನಮತ್ತು ಲಾಕ್‌ಡೌನ್ ನಡುವೆ ಒಂದು ಗೋಡೆಯಿತ್ತು. ಎರಡನೆಯ ಅಲೆಯಲ್ಲಿ ಆ ಗೋಡೆ ತೆಳುವಾಗುತ್ತಿದೆ. ಈ ನಿಟ್ಟಿನಲ್ಲಿ, ಈ ಕೃತಿಯ ಮುಂದಿನ ಭಾಗವನ್ನು ಲೇಖಕರು ಇನ್ನಷ್ಟು ಅಧ್ಯಯನದ ಜೊತೆಗೆ ತೆರೆದಿಡುವ ಅವಕಾಶಗಳಿವೆ.

ಕಂದೀಲು ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 72. ಮುಖಬೆಲೆ 80 ರೂಪಾಯಿ. ಆಸಕ್ತರು 94481 65130 ಹಾಗೂ 63623 74245 ದೂರವಾಣಿಗಳನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News