ಕೃತಕ ಚಂದ್ರನನ್ನು ಸೃಷ್ಟಿಸಿದರೆ....

Update: 2021-05-09 04:22 GMT

‘ವಾರ್ತಾಭಾರತಿ’ಯ ತಿಳಿವಿಜ್ಞಾನ ಅಂಕಣದಲ್ಲಿ ಪ್ರಕಟವಾಗಿದ್ದ ‘ಭೂಮಿಗೆ ಇನ್ನೊಂದು ಚಂದ್ರನಿರುತ್ತಿದ್ದರೆ...’ ಎಂಬ ಲೇಖನ ಓದಿದ ಆಬಿದ್‌ಗೆ ಕೆಲ ಪ್ರಶ್ನೆಗಳು ಕಾಡತೊಡಗಿದವು. ಇನ್ನೊಂದು ಸ್ವಾಭಾವಿಕ ಚಂದ್ರನಿರುತ್ತಿದ್ದರೆ ಒಂದಿಷ್ಟು ತೊಂದರೆಗಳನ್ನು ಭೂಮಿ ಮತ್ತು ಅದರಲ್ಲಿನ ಮಾನವರು ಅನುಭವಿಸಬೇಕಾಗುತ್ತಿತ್ತು ಎಂಬುದನ್ನು ತಿಳಿದುಕೊಂಡ. ಲೇಖನ ಓದಿದ ನಂತರ ತಂದೆಯ ಬಳಿ ತೆರಳಿ ‘‘ಅಬ್ಬಾಜಿ, ಭೂಮಿಗೆ ಕೃತಕ ಚಂದ್ರನನ್ನು ತಯಾರಿಸಿದರೆ ಹೇಗೆ? ಅದರಿಂದ ಏನಾದರೂ ತೊಂದರೆ ಆಗುವುದೇ?’’ ಮುಂತಾದ ಪ್ರಶ್ನೆಗಳನ್ನು ಏಕಕಾಲದಲ್ಲಿಯೇ ಕೇಳಿದ. ತಂದೆ ನಿಧಾನವಾಗಿ ಅವನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸತೊಡಗಿದರು.

ನಾವು ಬಾಹ್ಯಾಕಾಶಕ್ಕೆ ಬೃಹತ್ ಗಾತ್ರದ ವಸ್ತುಗಳನ್ನು ಹಾರಿಬಿಟ್ಟಿದ್ದೇವೆ. ಬೃಹತ್ ಗಾತ್ರದ ಬಾಹ್ಯಾಕಾಶ ನಿಲ್ದಾಣವನ್ನೇ ನಿರ್ಮಿಸಿದ್ದೇವೆ. ಅಂತರಿಕ್ಷ ಕಕ್ಷೆಯಲ್ಲಿ ಸುಮಾರು 5,000ಕ್ಕೂ ಹೆಚ್ಚಿನ ಕೃತಕ ಉಪಗ್ರಹಗಳನ್ನು ಜೋಡಿಸಿದ್ದೇವೆ. ಅವುಗಳಲ್ಲಿ ಕೆಲವು ಈಗಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಲವು ನಿಷ್ಕ್ರಿಯವಾಗಿವೆ. ಅಂತರಿಕ್ಷದಲ್ಲಿ ಇಷ್ಟೆಲ್ಲಾ ಉಪಗ್ರಹಗಳನ್ನು ಜೋಡಿಸಿದ ನಮಗೆ ಪ್ರಕಾಶಮಾನ ವಸ್ತುವನ್ನು ಏಕೆ ನಿರ್ಮಿಸಲಾಗಿಲ್ಲ ಎಂಬ ಪ್ರಶ್ನೆ ಮೂಡದೇ ಇರದು. ಸೂರ್ಯನಿಂದ ಶಕ್ತಿಶಾಲಿಯಾದ ಬೆಳಕು ಸದಾ ಹೊರಸೂಸುತ್ತಲೇ ಇರುತ್ತದೆ. ಭೂಮಿಯು ಸೂರ್ಯನ ಸುತ್ತ ಸುತ್ತುವುದರಿಂದ ಭೂಮಿಯ ಅರ್ಧ ಭಾಗಕ್ಕೆ ಹಗಲು ಉಳಿದ ಅರ್ದ ಭಾಗಕ್ಕೆ ರಾತ್ರಿಯಾಗಿರುತ್ತದೆ. ರಾತ್ರಿಯಾದ ಭೂ ಭಾಗಕ್ಕೆ ಸೂರ್ಯನ ಬೆಳಕು ಬೀಳುವುದಿಲ್ಲ. ಚಂದ್ರನು ಭೂಮಿಯ ಸ್ವಾಭಾವಿಕ ಉಪಗ್ರಹವಾಗಿದ್ದು, ಭೂಮಿಯನ್ನು ಸುತ್ತುವರಿಯುತ್ತದೆ. ಚಂದ್ರನಿಗೂ ಸ್ವಂತ ಬೆಳಕಿಲ್ಲ. ಅದು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ ಎಂದು ನಮಗೆಲ್ಲಾ ಗೊತ್ತು. ಚಂದ್ರನ ಬೆಳಕು ನೇರವಾಗಿ ಬೀಳುವ ಭೂಭಾಗ ಮಾತ್ರ ರಾತ್ರಿ ವೇಳೆಯೂ ಬೆಳಕಿನಿಂದ ಕೂಡಿರುತ್ತದೆ. ಆದರೆ ಉಳಿದ ಭಾಗ ಕತ್ತಲೆಯಲ್ಲಿಯೇ ಇರುತ್ತದೆ. ಕತ್ತಲೆಯನ್ನು ಹೊಡೆದೋಡಿಸಲು ಮಾನವ ಕೃತಕ ಬೆಳಕಿನ ಆಕರಗಳನ್ನು ಬಳಸಿಕೊಳ್ಳುತ್ತಾನೆ. ಬಹುತೇಕವಾಗಿ ಎಲ್ಲಾ ಕೃತಕ ಬೆಳಕಿನ ಆಕರಗಳು ಇಂಧನ ಬಳಸಿಕೊಳ್ಳುತ್ತವೆ. ಕೃತಕ ಚಂದ್ರನನ್ನು ನಿರ್ಮಿಸಿದರೆ ಕೃತಕ ಬೆಳಕಿನ ಅಗತ್ಯವಿರುವುದಿಲ್ಲ ಅಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಮನೆಯ/ಕಟ್ಟಡದ ಹೊರಗಿನ ಕತ್ತಲೆ ಓಡಿಸಲು ಚಂದ್ರನ ಬೆಳಕು ಸಹಾಯವಾಗಬಹುದು. ಆದರೆ ಒಳಗಿನ ಕತ್ತಲೆಗೆ ಕೃತಕ ಬೆಳಕು ಬೇಕೇ ಬೇಕು. ಹೌದು ಪ್ರತಿ ತಿಂಗಳು ಬೀದಿ ದೀಪಗಳನ್ನು ಬೆಳಗಿಸಲು ಸಾಕಷ್ಟು ಪ್ರಮಾಣದ ವಿದ್ಯುತನ್ನು ಬಳಸಿಕೊಳ್ಳುತ್ತೇವೆ. ಅದಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಲೇ ಇದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಕೃತಕ ಚಂದ್ರನನ್ನು ತಯಾರಿಸಿದರೆ ಹೇಗೆ? ಎಂಬ ಪ್ರಶ್ನೆ ಕಾಡುವುದು ಸಹಜ. ಒಂದು ವೇಳೆ ಇಂತಹ ಕೃತಕ ಚಂದ್ರನನ್ನು ತಯಾರಿಸಿದರೆ ಏನಾಗುತ್ತದೆ? ಎಂಬುದರ ಕುರಿತು ಒಂದಿಷ್ಟು ಚರ್ಚಿಸೋಣ.

ಅಂತರಿಕ್ಷಕ್ಕೆ ಹಾರುವುದು ಅಥವಾ ಅಲ್ಲಿ ವಾಸಿಸುವುದು ಈಗ ಹೊಸದೇನಲ್ಲ. ಈಗಾಗಲೇ ಬೇರೆ ಬೇರೆ ಗ್ರಹಗಳಿಗೆ ಹಲವಾರು ಅಂತರಿಕ್ಷ ನೌಕೆಗಳನ್ನು ಕಳಸಿದ್ದೇವೆ. ಅಲ್ಲದೆ ಬಾಹ್ಯಾಕಾಶದಲ್ಲಿ ಫುಟ್ಬಾಲ್ ಮೈದಾನ ಗಾತ್ರದ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನೂ ಸಹ ನಿರ್ಮಿಸಿಕೊಂಡಿದ್ದೇವೆ. ಅದು ನಮ್ಮ ಭೂಮಿಯಿಂದ 400 ಕಿ.ಮೀ. ದೂರದಲ್ಲಿದ್ದು, ಭೂಮಿಯನ್ನು ಸುತ್ತುತ್ತಿದೆ. ಕೆಲವು ಕೃತಕ ಉಪಗ್ರಹಗಳು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ ಮೇಲಿನ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಭೂಮಿಯ ಸಮಭಾಜಕ ವೃತ್ತದಿಂದ ಸುಮಾರು 35,000 ಕಿ.ಮೀ. ಭೂಸ್ಥಾಯಿ ಕಕ್ಷೆಯಲ್ಲಿ ನಿಲ್ಲಿಸಲಾಗಿದೆ. ನಮ್ಮ ನಿಜವಾದ ಚಂದ್ರ 3,80,000 ಕಿ.ಮೀ. ದೂರದಿಂದ ಗಂಟೆಗೆ 3,700 ಕಿ.ಮೀ. ವೇಗದಲ್ಲಿ ಭೂಮಿಯನ್ನು ಸುತ್ತುತ್ತಾನೆ. ಒಂದು ವೇಳೆ ಕೃತಕ ಚಂದ್ರನನ್ನು ನಿರ್ಮಿಸುವುದಾದರೆ 3,80,000 ಕಿ.ಮೀ. ದೂರದಲ್ಲಿ ನಿರ್ಮಿಸಲಾಗದು. ಆದರೆ ಅದನ್ನು ನಮ್ಮ ಈಗಿನ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಬಹುದಲ್ಲವೇ? ಭೂಮಿಗೆ ಭ್ರಮಣೆ ಮತ್ತು ಪರಿಭ್ರಮಣೆ ಇದೆ. ಭೂಮಿಯ ಭ್ರಮಣ ಅವಧಿ 24 ಗಂಟೆ ಹಾಗೂ ಪರಿಭ್ರಮಣ ಅವಧಿ 1 ವರ್ಷ ಎಂಬುದು ನಮಗೆಲ್ಲಾ ತಿಳಿದಿದೆ. ಭೂಮಿಯು ಸೆಕೆಂಡಿಗೆ 30,000 ಕಿ.ಮೀ. ವೇಗದಲ್ಲಿ ತನ್ನ ಸುತ್ತು ತಾನೇ ಸುತ್ತುತ್ತದೆ. ಒಂದುವೇಳೆ ಕೃತಕ ಚಂದ್ರನನ್ನು ನಿರ್ಮಿಸಿದರೆ ಇದೇ ವೇಗದಲ್ಲಿ ಭೂಮಿಯನ್ನು ಸುತ್ತುವಂತೆ ನಿರ್ಮಿಸಬೇಕಾಗುತ್ತದೆ. ಕೃತಕ ಚಂದ್ರನ ವೇಗವು ಅದನ್ನು ಇರಿಸುವ ಕಕ್ಷೆಯ ದೂರವನ್ನು ಅವಲಂಬಿಸಿರುತ್ತದೆ. ಕಕ್ಷೆಯು ದೂರವಾದಷ್ಟೂ ವೇಗವು ಹೆಚ್ಚುತ್ತದೆ. ಚೀನಾದ ಬಾಹ್ಯಾಕಾಶ ಇಂಜಿನಿಯರ್‌ಗಳು ಈಗಾಗಲೇ ಕೃತಕ ಚಂದ್ರನನ್ನು ತಯಾರಿಸಲು ಕೆಲಸ ಮಾಡುತ್ತಿದ್ದಾರೆ. 2022ರ ವೇಳೆಗೆ ಮೂರು ಕೃತಕ ಚಂದ್ರನನ್ನು ಭೂಕಕ್ಷೆಗೆ ಸೇರಿಸಲು ಯೋಜಿಸಿದ್ದಾರೆ. ಚೀನಾದ ಚೆಂಗ್ಡು ನಗರದ ಮೇಲೆ ಕೃತಕ ಚಂದ್ರನನ್ನು ನಿರ್ಮಿಸಲಿದ್ದಾರೆ. ಇದನ್ನು ಭೂಮಿಯಿಂದ 35,405 ಕಿ.ಮೀ.(22,000 ಮೈಲಿಗಳು) ದೂರದ ಕಕ್ಷೆಗೆ ಸೇರಿಸಲಾಗುತ್ತದೆ. ಇದು 80 ಕಿ.ಮೀ.(50ಮೈಲಿ) ದೂರದ ವ್ಯಾಸದಲ್ಲಿ ಬೆಳಕನ್ನು ನೀಡುವ ಸಾಮರ್ಥ್ಯ ಹೊಂದಲಿದೆ ಎಂದು ಅಲ್ಲಿನ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ. ನೈಸರ್ಗಿಕ ಚಂದ್ರನಿಗಿಂತ ಎಂಟು ಪಟ್ಟು ಪ್ರಕಾಶಮಾನವಾಗಿ ಹೊಳೆಯುವ ಕೃತಕ ಚಂದ್ರನನ್ನು ನಿರ್ಮಿಸುತ್ತಿದ್ದಾರೆ. ಅದರಿಂದ ಅವರು ವಾರ್ಷಿಕವಾಗಿ 173 ಮಿಲಿಯನ್ ಡಾಲರ್ ಮೊತ್ತದ ವಿದ್ಯುತ್ ಬಿಲ್ ಉಳಿಸುವ ಯೋಜನೆ ಹಾಕಿಕೊಂಡಿದ್ದಾರೆ. 1990ಲ್ಲಿ ರಶ್ಯ ದೇಶವೂ ಸಹ ಇಂತಹ ಯೋಜನೆ ತಯಾರಿಸಿತ್ತು. ‘ಬಾಹ್ಯಾಕಾಶ ಕನ್ನಡಿ’ ಹೆಸರಿನಲ್ಲಿ 5 ಕಿ.ಮೀ. (3 ಮೈಲಿ) ವಿಸ್ತೀರ್ಣ ಹಾಗೂ ಸ್ವಾಭಾವಿಕ ಚಂದ್ರನಿಗಿಂತ 3ರಿಂದ 5 ಪಟ್ಟು ಪ್ರಕಾಶಮಾನ ಬೆಳಗುವ ಸೌರ ಪ್ರತಿಫಲಿತ ವ್ಯವಸ್ಥೆಯನ್ನು ರೂಪಿಸುವ ಉದ್ದೇಶ ಹೊಂದಿತ್ತು. ಆದರೆ ಕಾರಣಾಂತರಗಳಿಂದ ಈ ಯೋಜನೆ ವಿಫಲವಾಯಿತು.

ಕೃತಕ ಚಂದ್ರನನ್ನೇನೋ ನಿರ್ಮಿಸಿಬಿಡಬಹುದು. ಆದರೆ ಅದರಿಂದ ಆಗುವ ತೊಂದರೆಗಳನ್ನೂ ಸಹ ಗಮನಿಸಬೇಕಾಗುತ್ತದೆ. ಏನು! ಕೃತಕ ಚಂದ್ರನಿಂದ ತೊಂದರೆಯೇ? ಎಂದು ಹುಬ್ಬೇರಿಸಬೇಡಿ. ಹೌದು ಕೃತಕ ಚಂದ್ರ ಖಂಡಿತವಾಗಿ ನಮ್ಮ ಜೀವನದ ಮೇಲೆ ಸಾಕಷ್ಟು ಬದಲಾವಣೆಗಳನ್ನು ತರುತ್ತಾನೆ. ಕತ್ತಲೆಯು ಕೆಲ ಜೀವಿಗಳಿಗೆ ಬೇಕು. ಬೇಟೆಗೆ, ಸಂಚಾರಕ್ಕೆ ಕೂಟಕ್ಕೆ ಅನುಕೂಲ. ರಾತ್ರಿ ವೇಳೆ ಹೆಚ್ಚು ಬೆಳಕು ನಮ್ಮ ದೇಹಾರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಮತ. ರಾತ್ರಿ ವೇಳೆ ಹೆಚ್ಚು ಬೆಳಕಿನ ಜೊತೆ ಕಾಲ ಕಳೆಯುವವರಲ್ಲಿ ಬೊಜ್ಜು, ಹೃದಯ ಕಾಯಿಲೆ, ಮಧುಮೇಹ ಮತ್ತು ಖಿನ್ನತೆಗೆ ಅವಕಾಶ ನೀಡುತ್ತದೆ ಎಂಬುದು ಅವರ ವಾದ.

ಚಂದ್ರನಿಲ್ಲದ ರಾತ್ರಿ ಆಗಸದಲ್ಲಿನ ಆಕಾಶಕಾಯಗಳನ್ನು ಸ್ಪಷ್ಟವಾಗಿ ನೋಡಬಹುದು. ಆದರೆ ಚಂದ್ರನಿರುವಾಗ ಆಕಾಶಕಾಯಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಒಂದುವೇಳೆ ಕೃತಕ ಚಂದ್ರನನ್ನು ನಿರ್ಮಿಸಿದರೆ ಶಾಶ್ವತವಾಗಿ ಬರಿಗಣ್ಣಿನಿಂದ ಆಕಾಶ ಕಾಯಗಳನ್ನು ನೋಡುವ ಅವಕಾಶ ಕಳೆದುಕೊಳ್ಳುತ್ತೇವೆ. ಕೃತಕ ಚಂದ್ರನನ್ನು ಆಗಸದಲ್ಲಿ ಬಂಧಿಸಿದರೆ ಆಗಾಗ ಭೂಮಿಯ ಬಳಿ ಬಂದು ಹೋಗುವ ಧೂಮಕೇತುಗಳು, ಕೆಲವು ವೇಳೆ ರಾತ್ರಿಯಿಡೀ ಬಾನಂಗಳದಿ ಹೂಮಳೆಯಂತೆ ಸುರಿಯುವ ಉಲ್ಕಾಪಾತ, ಕೆಲವು ಪ್ರದೇಶಗಳ ಬಳಿ ಕಾಣುವ ಆರೋರಾ ಮುಂತಾದವುಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವೇ?.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News