×
Ad

ಸೋಮವಾರದಿಂದ ರಾಜ್ಯದಲ್ಲಿ ಲಾಕ್‍ಡೌನ್ ಜಾರಿ

Update: 2021-05-09 19:20 IST

ಬೆಂಗಳೂರು, ಮೇ 9: ರಾಜ್ಯದಲ್ಲಿ ಮಹಾಮಾರಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರಕಾರ ನಾಳೆ(ಮೇ 10) ಬೆಳಗ್ಗೆ 6ಗಂಟೆಯಿಂದ ಇನ್ನೂ ಹದಿನಾಲ್ಕು ದಿನಗಳ (ಮೇ 24ರ ವರೆಗೆ) ಕಾಲ ಲಾಕ್‍ಡೌನ್ ಘೋಷಣೆ ಮಾಡಿದೆ. ಆಸ್ಪತ್ರೆ, ಆ್ಯಂಬುಲೆನ್ಸ್, ಮೆಡಿಕಲ್ ಶಾಪ್‍ಗಳು ಸೇರಿದಂತೆ ತುರ್ತು ಅಗತ್ಯ ಸೇವೆಗಳು, ಕಟ್ಟಡ ನಿರ್ಮಾಣ ಹೊರತುಪಡಿಸಿ ವ್ಯಾಪಾರ-ವಹಿವಾಟು ನಾಳೆಯಿಂದ ಬಂದ್ ಆಗಲಿದ್ದು, ಇಡೀ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ.

ಕೊರೋನ ವೈರಸ್ ಸೋಂಕು ರಾಜ್ಯದಲ್ಲಿ ಮಿತಿ ಮೀರುತ್ತಿದ್ದು, ಸೋಂಕಿತರಿಗೆ ಆಸ್ಪತ್ರೆ, ಹಾಸಿಗೆ, ಆಕ್ಸಿಜನ್ ಸಿಗದೆ ಜನ ಸಾವಿನ ಭೀತಿಯಲ್ಲಿದ್ದರೆ, ಮತ್ತೊಂಡೆ ಉದ್ಯೋಗವಿಲ್ಲದ ಸಂಕಷ್ಟಕ್ಕೆ ಸಿಲುಕಿರುವ ಜನತೆ ರಾಜಧಾನಿ ಬೆಂಗಳೂರು ಸೇರಿದಂತೆ ಇತರೆ ನಗರಗಳಿಂದ ತಮ್ಮ ಹಳ್ಳಿಗಳಿಗೆ ಕೊನೆಯ ಕ್ಷಣದಲ್ಲಿ ಗುಂಪು-ಗುಂಪಾಗಿ ಸಿಕ್ಕ-ಸಿಕ್ಕ ವಾಹನಗಳಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕರ್ಫ್ಯೂವಿನ ನಡುವೆಯೇ ರಾಜ್ಯದಲ್ಲಿ ರವಿವಾರ ಹಾಲು, ದಿನಸಿ, ಮೀನು-ಮಾಂಸ, ಮದ್ಯ ಖರೀದಿಗೆ ಮುಗಿಬಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಳೆಯಿಂದ ಇನ್ನೂ 14 ದಿನಗಳ ಕಾಲ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳನ್ನು ಹೊರತುಪಡಿಸಿ ಉಳಿದ ಬಹುತೇಕ ರಸ್ತೆಗಳು, ಮೇಲ್ಸೇತುವೆಗಳು, ಜನವಸತಿ ಪ್ರದೇಶಗಳಲ್ಲಿ ರಸ್ತೆಗಳನ್ನು ಬ್ಯಾರಿಕೇಡ್‍ಗಳನ್ನು ಹಾಕಿ ಬಂದ್ ಮಾಡಲಾಗುತ್ತದೆ. ಅಲ್ಲದೆ, ಅಗತ್ಯ ಸೇವೆಗಳಿಗೆ ದ್ವಿಮುಖ ರಸ್ತೆ ಸಂಚಾರ ಬಂದ್ ಮಾಡಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಬೇಕಾಬಿಟ್ಟಿ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ನಗರ ಪೊಲೀಸ್ ಆಯುಕ್ತರು, ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲೆ, ತಾಲೂಕುಗಳ ಹಿರಿಯ ಪೊಲೀಸ್ ಅಧಿಕಾರಿಗಳು ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು. ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಯಾವುದೇ ಕಾರಣಕ್ಕೂ ಜನರ ಓಡಾಟಕ್ಕೆ ಅವಕಾಶ ನೀಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಅವಕಾಶ: ಹಾಲು, ದಿನಸಿ, ಹಣ್ಣು, ಸೊಪ್ಪು, ತರಕಾರಿ ಸಹಿತ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ದಿನಸಿ, ಮೀನು, ಮಾಂಸ, ಮದ್ಯದಂಗಡಿ ಮಾರಾಟ (ಪಾರ್ಸಲ್ ಸೇವೆ ಮಾತ್ರ) ಮಳಿಗೆಗಳು ತೆರೆದಿರಲಿವೆ. ದಿನದ 24 ಗಂಟೆಗಳು ಅಗತ್ಯ ವಸ್ತುಗಳ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.

ವಿಮಾನ ಮತ್ತು ರೈಲ್ವೆ ಸೇವೆ ಎಂದಿನಂತೆ ಇರಲಿದೆ. ಟ್ಯಾಕ್ಸಿ, ಆಟೋರಿಕ್ಷಾ ತುರ್ತು ಸಂದರ್ಭದಲ್ಲಿ ಬಳಕೆ ಮಾಡಬಹುದು. ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಆಹಾರ ಸಾಮಗ್ರಿ, ದಿನಸಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು ಮಳಿಗೆಗಳು, ಪಶು ಆಹಾರದ ಮಳಿಗೆಗಳು ಬೆಳಗ್ಗೆ 6ಗಂಟೆಯಿಂದ 10ಗಂಟೆಯ ವರೆಗೆ ಅವಕಾಶವಿದ್ದು, ಹಾಲಿನ ಬೂತ್‍ಗಳು, ತಳ್ಳುವಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಅವಕಾಶ ನೀಡಲಾಗಿದೆ. ದೂರ ಸಂಪರ್ಕ, ಇಂಟರ್ ನೆಟ್, ಪ್ರಸಾರ ಮತ್ತು ಕೇಬಲ್ ಸೇವೆ, ಐಟಿ ಕಂಪೆನಿಗಳ ಅಗತ್ಯ ಸಿಬ್ಬಂದಿ ಕಾರ್ಯಕ್ಕೆ ಅವಕಾಶವಿದೆ. ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ನಿರಂತರ ಚಟುವಟಿಕೆಗೆ ಅವಕಾಶ ನೀಡಲಾಗಿದೆ.

ನಿರ್ಬಂಧ: ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‍ಗಳ ಸಹಿತ ಖಾಸಗಿ ಬಸ್‍ಗಳು, ಟ್ಯಾಕ್ಸಿ, ರಿಕ್ಷಾ, ಕ್ಯಾಬ್‍ಗಳ ಸಂಚಾರಕ್ಕೆ ನಿರ್ಬಂಧ. ಶಾಲೆ, ಕಾಲೇಜು, ಕೋಚಿಂಗ್ ಸೆಂಟರ್‍ಗಳು, ಸಿನಿಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಪಾರ್ಕ್‍ಗಳು, ಬಾರ್. ಸಮುದಾಯ ಭವನಗಳು ಸಂಪೂರ್ಣ ಬಂದ್ ಆಗಿರಲಿವೆ. ಸಾಮಾಜಿಕ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳಿಗೆ ನಿರ್ಬಂಧ. ಎಲ್ಲ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಮಾರ್ಗಸೂಚಿಯಲ್ಲಿ ಅನುಮತಿಸಿದ ಸಂದರ್ಭಗಳನ್ನು ಹೊರತುಪಡಿಸಿ ಸರಕಾರಿ ಹಾಗೂ ಖಾಸಗಿ ಬಸ್‍ಗಳು ಹಾಗೂ ಇತರೆ ಪ್ರಯಾಣಿಕರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

"ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ತೀವ್ರ ಪರಿಣಾಮ ಬೀರುತ್ತಿರುವುದರಿಂದ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ನಾಳೆಯಿಂದ ಮೇ 24ರ ವರೆಗೆ ರಾಜ್ಯಾದ್ಯಂತ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ನಾಗರಿಕರು ಸಹಕಾರ ನೀಡಬೇಕು"
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

"ರಾಜ್ಯದ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ವಿನಂತಿ. ಸರಕಾರ ಹಾಗೂ ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ, ವಾಹನ ಜಪ್ತಿ ಮಾಡಿ ತೊಂದರೆ ಇಲ್ಲ. ಆದರೆ, ವಯಸ್ಸಾದವರು ಪಾಪ ಯಾವ ಖಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆ, ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಕು ಪ್ರಾಣಹೋಗುವಂತೆ ಭಾರಿಸುತ್ತಾರೆ. ಈ ಹಾಳಾದ ಕೊರೋನ ಮನುಕುಲದ ಅನ್ನ-ದುಡಿಮೆ ನೆಮ್ಮದಿಯ ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲೂ ಮನವಿ ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ದರೆಯೇ ಹತ್ತಿ ಉರಿಯುತ್ತಿದೆ. ದಯಮಾಡಿ ಸ್ವಲ್ಪ ದಿನ ವೈದ್ಯಲೋಕದ ಮಾತಿನಂತೆ ಕೆಲ ತಿಂಗಳ ಎಚ್ಚರವಾಗಿ ಇದ್ದುಬಿಡಿ'
-ಜಗ್ಗೇಶ್, ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News