ಸೋಮವಾರ ಮಮತಾ ಬ್ಯಾನರ್ಜಿ ಸಂಪುಟ ರಚನೆ: ಮನೋಜ್ ತಿವಾರಿ ಸಹಿತ 17 ಹೊಸಬರಿಗೆ ಅವಕಾಶ

Update: 2021-05-09 15:51 GMT

ಕೋಲ್ಕತಾ: ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ, ಮಮತಾ ಬ್ಯಾನರ್ಜಿ ನೇತೃತ್ವದ ಮೂರನೇ ಸಂಪುಟವು ಸೋಮವಾರ ರಾಜ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದೆ.

ಕಳೆದ ಬುಧವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬ್ಯಾನರ್ಜಿ 43 ಸಚಿವ ಅಭ್ಯರ್ಥಿಗಳ ಹೆಸರನ್ನು ರಾಜ ಭವನಕ್ಕೆ ಕಳುಹಿಸಿದ್ದಾರೆ. ಈ ಪೈಕಿ 24 ಮಂದಿ ಪೂರ್ಣ ಮಂತ್ರಿಗಳು, 19 ಮಂದಿ ರಾಜ್ಯ ಸಚಿವರು ಹಾಗೂ  10 ಮಂದಿ ಸ್ವತಂತ್ರ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದು Indianexpress.com ವರದಿ ಮಾಡಿದೆ.

ಮೊದಲ ಬಾರಿಗೆ ಶಾಸಕರಾಗಿರುವ ಮನೋಜ್ ತಿವಾರಿ ಸೇರಿದಂತೆ 17 ಹೊಸ ಮುಖಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡರೆ, ಹೆಸರುಗಳಲ್ಲಿ ಅನೇಕ ಮಾಜಿ ಮಂತ್ರಿಗಳೂ ಸೇರಿದ್ದಾರೆ.

ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರ ಈ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ, ಮಾಜಿ ಸಾರಿಗೆ ಸಚಿವ ಮದನ್ ಮಿತ್ರಾ ಅವರು ಕಮರ್ಹತಿ ವಿಧಾನಸಭಾ ಸ್ಥಾನವನ್ನು ಗೆದ್ದರೂ ಹೊರಗುಳಿದಿದ್ದಾರೆ. ಕಳೆದ ಕ್ಯಾಬಿನೆಟ್‌ನ ಇಬ್ಬರು ಸದಸ್ಯರಾದ ತಪಶ್ ರಾಯ್ ಹಾಗೂ  ನಿರ್ಮಲ್ ಮಾಜ್ಹಿಅವರಿಗೆ ಮಂತ್ರಿ ಸ್ಥಾನ ನಿರಾಕರಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಕಣಕ್ಕಿಳಿಸಿದ್ದ ಯಾವುದೇ ಚಲನಚಿತ್ರ ತಾರೆಯರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ, ಅವರಲ್ಲಿ ಹೆಚ್ಚಿನವರು ಆಯಾ ಕ್ಷೇತ್ರಗಳಿಂದ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News