ಔಷಧ ಕಂಪೆನಿಗಳ ವಿರುದ್ಧ ಡಿಸಿಎಂ ಅಶ್ವತ್ಥ ನಾರಾಯಣ ಆಕ್ರೋಶ

Update: 2021-05-09 17:48 GMT

ಬೆಂಗಳೂರು, ಮೇ 9: ರಾಜ್ಯಕ್ಕೆ ನಿಗದಿಪಡಿಸಿದ ರೆಮ್‍ಡೆಸಿವಿರ್ ಕೋಟಾವನ್ನು ಸಕಾಲಕ್ಕೆ ಸರಿಯಾಗಿ ಪೂರೈಕೆ ಮಾಡದಿರುವ ಔಷಧ ಕಂಪೆನಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ರವಿವಾರ ಮಲ್ಲೇಶ್ವರದಲ್ಲಿ ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ನಿಗದಿತ ಕೋಟಾ ಕೊಡಲು ಕಂಪೆನಿಗಳಿಗೆ ಏನು ಸಮಸ್ಯೆ? ಕೊಡಬೇಕು ಎಂದರೆ ಕೊಡಬೇಕಷ್ಟೇ. ಅನಕ್ಷರಸ್ಥರಿಗೂ ಕಾನೂನಿನ ಅರಿವು ಇರುತ್ತದೆ. ದೊಡ್ಡ ದೊಡ್ಡ ಔಷಧ ಕಂಪೆನಿಗಳಿಗೆ ಇರುವುದಿಲ್ಲವೆ? ಒಂದು ದಿನ ಸಪ್ಲೈ ಮಾಡಿ ಇನ್ನೊಂದು ದಿನ ಮಾಡದಿದ್ದರೆ ಹೇಗೆ? ಎಂದು ಹರಿಹಾಯ್ದರು. 

ಮಹಾರಾಷ್ಟ್ರದ ನಂತರ ಇಡೀ ದೇಶದಲ್ಲಿಯೇ ಅತಿಹೆಚ್ಚು ರೆಮ್‍ಡೆಸಿವಿರ್ ಹಂಚಿಕೆ ಆಗಿರುವುದು ಕರ್ನಾಟಕ ರಾಜ್ಯಕ್ಕೆ ಮಾತ್ರ. ಆದರೆ, ಪೂರೈಕೆ ನಿರಂತರತೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಇದನ್ನು ಸರಿ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಂಡಿದ್ದೇವೆ. ಸರಿಯಾಗಿ ಪೂರೈಕೆ ಮಾಡದಿದ್ದರೆ ಆ ಕಂಪನಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಡಾ.ಅಶ್ವತ್ಥ ನಾರಾಯಣ ಗುಡುಗಿದರು. 

ಸರಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ನೇರವಾಗಿ ಸರಕಾರವೇ ರೆಮ್‍ಡೆಸಿವಿರ್ ನೀಡುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಪೋರ್ಟಲ್ ಮೂಲಕ ಪಡೆಯಬೇಕು. ಯಾರಿಗೂ ನಾವು ಕೈಗೆ ಈ ಔಷಧ ಕೊಡುವುದಿಲ್ಲ. ಯಾರಿಗೆ ಕೊಡುತ್ತೇವೆಯೋ ಆ ಸೋಂಕಿತರ ಮೊಬೈಲ್‍ಗೂ ಸಂದೇಶ ಹೋಗುತ್ತದೆ. ಎಲ್ಲವೂ ಪಾರದರ್ಶಕವಾಗಿರುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News