ನ್ಯಾ.ಸಾಚಾರ್ ಸಮಿತಿ ಸದಸ್ಯ, ಹಿರಿಯ ಅಧಿಕಾರಿ ಎಂ.ಎಸ್.ಬಾಸಿತ್ ನಿಧನ

Update: 2021-05-10 16:24 GMT

ಬೆಂಗಳೂರು, ಮೇ 10: ಯುಪಿಎ ಸರಕಾರದ ಅವಧಿಯಲ್ಲಿ ರಚಿಸಲಾಗಿದ್ದ ನ್ಯಾ.ಸಾಚಾರ್ ಸಮಿತಿಯ ಸದಸ್ಯ ಹಾಗೂ ರಾಜ್ಯ ಸರಕಾರದ ಯೋಜನಾ ಇಲಾಖೆಯ ಹಿರಿಯ ನಿರ್ದೇಶಕ(ನಿವೃತ್ತ) ಎಂ.ಎಸ್.ಬಾಸಿತ್(68) ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದು, ಅವರ ದಫನ್ ಕಾರ್ಯವನ್ನು ನಗರದ ಖುದ್ದೂಸ್ ಸಾಹೇಬ್ ಖಬರಸ್ಥಾನ್‍ದಲ್ಲಿ ನೆರವೇರಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಬಾಸಿತ್ ಅವರನ್ನು ಶಿವಾಜಿನಗರದಲ್ಲಿರುವ ಎಚ್‍ಬಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 1.45ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜ್ಯ ಸರಕಾರದಲ್ಲಿ 30 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಬಾಸಿತ್ ಅವರನ್ನು ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ರಚಿಸಲಾಗಿದ್ದ ನ್ಯಾ.ಸಾಚಾರ್ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿತ್ತು.

2012ರಲ್ಲಿ ಸರಕಾರಿ ಸೇವೆಯಿಂದ ಬಾಸಿತ್ ನಿವೃತ್ತರಾಗಿದ್ದರು. ಆದರೂ, ಸರಕಾರವು ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಿ ಹೆಚ್ಚುವರಿಯಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಕಳೆದ ಒಂದು ವರ್ಷದಿಂದ ಅವರು ಸರಕಾರಿ ಸೇವೆಯಿಂದ ವಿರಾಮ ಪಡೆದುಕೊಂಡು, ಎಚ್‍ಬಿಆರ್ ಲೇಔಟ್‍ನಲ್ಲಿರುವ ಮಿಲ್ಲತ್ ಇನ್ಸ್ಟಿಟ್ಯೂಟ್‍ನಲ್ಲಿ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುತ್ತಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಹಿರಿಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳು, ಸೇರಿದಂತೆ ಇನ್ನಿತರರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News