17 ಉದ್ಯೋಗಿಗಳು ವಾರ್ ರೂಮ್ ಗೆ ಮರು ನೇಮಕ: ಪತ್ರಕರ್ತರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ತೇಜಸ್ವಿ ಸೂರ್ಯ

Update: 2021-05-10 16:54 GMT

ಬೆಂಗಳೂರು,  ಮೇ 10: "ನೀವು ಓದಿ ಹೇಳಿದ್ದ 17 ಉದ್ಯೋಗಿಗಳನ್ನು ಮತ್ತೆ ವಾರ್ ರೂಮ್ ಗೆ ಮರು ನೇಮಕ ಮಾಡಲಾಗಿದೆ. ಏನು ಹೇಳುತ್ತೀರಿ ?" ಎಂಬ ಪತ್ರಕರ್ತರ ಪ್ರಶ್ನೆಗೆ ಸಂಸದ ತೇಜಸ್ವಿ ಸೂರ್ಯ ಕಕ್ಕಾಬಿಕ್ಕಿಯಾದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಸೋಮವಾರ ಸಂಸದರ ಕಚೇರಿಯಲ್ಲಿ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭ ಪತ್ರಕರ್ತರು ಕೇಳಿದ ಪ್ರಶ್ನೆಗಳಿಕೆ ಉತ್ತರಿಸಲು ಸಂಸದರು ತಡಕಾಡಿದರು. ನೀವು ಓದಿ ಹೇಳಿದ್ದ 17 ಉದ್ಯೋಗಿಗಳನ್ನು ಮತ್ತೆ ವಾರ್ ರೂಮ್ ಗೆ ಮರು ನೇಮಕ ಮಾಡಲಾಗಿದೆ. ಅವರನ್ನು ಬಿಬಿಎಂಪಿ ಕೆಲಸದಿಂದ ತೆಗೆದು ಹಾಕಲು ಕಾರಣವೇನು ಎಂದು ಕೇಳಿದರು. ಇದಕ್ಕೆ ''ಇದು ಹಸೆರುಗಳ ಪಟ್ಟಿ. ಇದು...ಅದನ್ನು ನನಗೆ ನೀಡಲಾಗಿತ್ತು. ಅವರನ್ನು ಯಾಕೆ, ಹೇಗೆ ನೇಮಿಸಿದರು ಮತ್ತು ನೇಮಕಾತಿಯ ಪ್ರಕ್ರಿಯೆಗಳ ಬಗ್ಗೆ ನಾನು ಅಲ್ಲಿ ಪ್ರಶ್ನಿಸಿದ್ದೇನೆ. ಇದರ ಬಗ್ಗೆ ವಿಡಿಯೋಗಳಿವೆ. ನೀವು ಅದನ್ನು ನೋಡಬಹುದು ಎಂದು ಉತ್ತರಿಸಿದರು.

ಬಳಿಕ ಪತ್ರಕರ್ತರು ಆ ಪಟ್ಟಿಯನ್ನು ತಯಾರಿಸಿದ್ದು ಏಕೆ ಎಂದು ಪ್ರಶ್ನಿಸಿದಾಗ, ಅದನ್ನು ತಯಾರಿಸಿದವರಲ್ಲೇ ಕೇಳಬೇಕು ಎಂದು ತೇಜಸ್ವಿ ಸೂರ್ಯ ಉತ್ತರಿಸಿದರು. ಬಳಿಕ ಪತ್ರಕರ್ತರು 'ಮದರಸ' ಪದ ಬಳಸಿದ್ದ ಬಗ್ಗೆ ಪ್ರಶ್ನಿಸಿದಾಗ 'ನಾನು ಯಾವ ಪದಗಳನ್ನು ಬಳಕೆ ಮಾಡಿದ್ದೇನೋ, ಅದರ ಬಗ್ಗೆ ಮಾತನಾಡಿ. ನನ್ನ ಉದ್ದೇಶ ಸ್ಪಷ್ಟವಿದೆ ಎಂದು ತಿಳಿಸಿದರು.

ಇಬ್ಬರು ಶಾಸಕರನ್ನು ನೀವು ಕರೆದುಕೊಂಡು ಹೋಗಿದ್ದೀರಿ. ಅವರು ಇದಕ್ಕೆ ಜವಾಬ್ದಾರರು ಎಂದು ನಿಮ್ಮ ಶಾಸಕರು ಹೇಳುತ್ತಾರೆ. ಅಲ್ಲಿ ಆಗಿದ್ದು ಸರಿ ಅಲ್ಲ ಎಂಬುದು ಸ್ಪಷ್ಟ. ಇದಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸಿದಾಗ 'ನಿಮ್ಮ ಅಜೆಂಡಾ ಬೇರೆ ಇರಬಹುದು. ನನ್ನ ಅಜೆಂಡಾ ಸತ್ಯವನ್ನು ಹೇಳುವುದು. ಅದನ್ನು ಮಾಡಿದ್ದೇನೆ ಎಂದು ಉತ್ತರಿಸಿದರು 

ಸುದ್ದಿಗೋಷ್ಠಿಯಲ್ಲಿ ಎದುರಾದ ಪತ್ರಕರ್ತರ ಪ್ರಶ್ನೆಗಳಿಗೆ ಮುಜುಗರಕ್ಕೊಳಗಾದ ಸಂಸದ ತೇಜಸ್ವಿ ಸೂರ್ಯ, ನಾನು ಅಕ್ರಮ ಬಯಲಿಗೆಳೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೊಟ್ಟ ಪಟ್ಟಿ ಓದಿದ್ದೇನೆ, ಮದರಸಾ ಎಂಬ ಪದವನ್ನು ಶಾಸಕರು ಬಳಸಿದ್ದಾರೆ, ಅಂದು ನಾನು ಏನು ಮಾತನಾಡಿದ್ದೇನೋ ಅದಕ್ಕಷ್ಟೇ ಬದ್ಧ ಎಂದರು. ಆದರೆ ಪತ್ರಕರ್ತರ ಪ್ರಶ್ನೆಗಳು ಮುಂದುವರೆದಂತೆ ಸಂಸದರು ಕಸಿವಿಸಿಗೊಂಡದ್ದು ಎದ್ದು ಕಾಣುತ್ತಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News