ಮೆಟ್ರೋ ಎರಡನೆ ಹಂತದ 58 ಕಿ.ಮೀ ಯೋಜನೆಗಳಿಗೆ ಅನುಮೋದನೆ

Update: 2021-05-10 17:05 GMT

ಬೆಂಗಳೂರು, ಮೇ 10: ಬೆಂಗಳೂರು ಮೆಟ್ರೋ ರೈಲು ಯೋಜನೆಯ 2`ಎ' ಮತ್ತು 2`ಬಿ' ಹಂತದ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಸಭೆ ಅನುಮೋದನೆ ನೀಡಿದೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ಯೋಜನೆಗೆ ಅನುಮೋದನೆ ನೀಡಲಾಗಿದೆ. ಎರಡನೆ ಹಂತದ ಮೆಟ್ರೋ ಯೋಜನೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್. ಪುರಂ ವರೆಗೆ 20 ಕಿ.ಮೀ. ಮತ್ತು ಹಂತ 2 ಬಿ ಮೆಟ್ರೋ ಯೋಜನೆಯು ಕೆಆರ್ ಪುರಂನಿಂದ ಹೆಬ್ಬಾಳ ಮೂಲಕ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‍ವರೆಗೆ 38 ಕಿ.ಮೀ ಒಟ್ಟು 58 ಕಿಮೀ ಮತ್ತು 30 ನಿಲ್ದಾಣಗಳು ಒಳಗೊಂಡಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಪ್ರಮುಖ ಯೋಜನೆ ಇದಾಗಿದ್ದು, ಹೊರ ವರ್ತುಲ ರಸ್ತೆ ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಹೆಬ್ಬಾಳ ಉದ್ದಕ್ಕೂ ಇರುವ ದೊಡ್ಡ ಸಂಖ್ಯೆಯ ಐಟಿ ಕೈಗಾರಿಕೆಗಳಿಗೆ ಮತ್ತು ವಿಮಾನ ನಿಲ್ದಾಣ ಪ್ರಯಾಣಿಕರಿಗೆ ವಿಶ್ವಾಸಾರ್ಹ ಸುರಕ್ಷಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತದೆ. ರಾಜ್ಯ ಸರಕಾರವು 2019ರ ಜನವರಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದ್ದು, ಕೇಂದ್ರ ಸರಕಾರ 2021ರ ಎಪ್ರಿಲ್ 28ಕ್ಕೆ 14,788 ಕೋಟಿ ರೂ.ಮೊತ್ತಕ್ಕೆ ಅನುಮೋದನೆ ನೀಡಿದೆ. ಮೆಟ್ರೋ ನಿಗಮವು ಭೂಸ್ವಾಧೀನ ಪ್ರಕ್ರಿಯೆ ಮತ್ತು ಯುಟಿಲಿಟಿ ಸ್ಥಳಾಂತರಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಮತ್ತು ಕಾಮಗಾರಿಗಳನ್ನು ಪ್ರಾರಂಭಿಸಲು ಸಿದ್ಧತೆ ಆಗಿದೆ. 58 ಕಿ.ಮೀ ಮೆಟ್ರೋ ಮಾರ್ಗವನ್ನು 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News