​ಆಮ್ಲಜನಕ ವ್ಯತ್ಯಯ: ತಿರುಪತಿ ಆಸ್ಪತ್ರೆಯಲ್ಲಿ ಕನಿಷ್ಠ 11 ಮಂದಿ ಕೋರೊನ ಸೋಂಕಿತರು ಮೃತ್ಯು

Update: 2021-05-11 18:17 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ಮೇ 11: ಆಮ್ಲಜನಕ ಪೂರೈಕೆಯಲ್ಲಿ ಆದ ವಿಳಂಬದಿಂದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಕೊರೋನ  ರೋಗಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶದ ರಾಯಲ್ ಸೀಮಾ ವಲಯದಲ್ಲಿರುವ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ತಿರುಪತಿ, ಚಿತ್ತೂರು, ನೆಲ್ಲೋರ್ ಮತ್ತು ಕಡಪ ಜಿಲ್ಲೆಯ ಸುಮಾರು 1,000ದಷ್ಟು ಕೊರೋನ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿ ಸುಮಾರು 8:30ರ ವೇಳೆ ಆಮ್ಲಜನಕದ ಕೊರತೆ ಕಾಣಿಸಿಕೊಂಡಿದ್ದು  ಕೆಲ ನಿಮಿಷಗಳಲ್ಲೇ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ನಿಮಿಷಗಳ ಅವಧಿಯಲ್ಲಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ರೋಗಿಗಳು ಸಾವನ್ನಪ್ಪಿದ್ದಾರೆ. ಆಮ್ಲಜನಕದ ಪೂರೈಕೆ ಸಮಸ್ಯೆಯನ್ನು ತಕ್ಷಣ ಸರಿಪಡಿಸಿದ್ದರಿಂದ ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

11 ರೋಗಿಗಳು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಆಕ್ರೋಶದಿಂದ ದಾಂಧಲೆಗೆ ಮುಂದಾಗಿದ್ದು ಆಸ್ಪತ್ರೆಯ ಪೀಠೋಪಕರಣ, ವೈದ್ಯಕೀಯ ಸಾಮಾಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ಐಸಿಯು ಘಟಕದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ನರ್ಸ್ಗಳು ಅಲ್ಲಿಂದ ಹೊರಗೋಡಿದ್ದು ಪೊಲೀಸರು ಬಂದ ಬಳಿಕ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ, ಆಂಧ್ರಪ್ರದೇಶದಿಂದ ತೆಲಂಗಾಣ ರಾಜ್ಯಕ್ಕೆ ಚಿಕಿತ್ಸೆಗಾಗಿ ತೆರಳುವ ಕೊರೋನ ಸೋಂಕಿತರನ್ನು ಕರೆದೊಯ್ಯುವ ಆ್ಯಂಬುಲೆನ್ಸ್ಗಳನ್ನು ತೆಲಂಗಾಣದಲ್ಲಿ ಅಧಿಕಾರಿಗಳು ತಡೆಯುತ್ತಿರುವ ಬಗ್ಗೆ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್ ದಾಸ್ ತೆಲಂಗಾಣ ಸರಕಾರದ ಮುಖ್ಯಕಾರ್ಯದರ್ಶಿಗೆ ಆಕ್ಷೇಪ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ತೆಲಂಗಾಣದಲ್ಲಿ ಕೊರೋನ ಸೋಂಕಿತರ ಪ್ರಮಾಣ ಹೆಚ್ಚಿದ್ದು, ಇದರ ಜೊತೆಗೆ ಆಂಧ್ರಪ್ರದೇಶದಿಂದ ಸೋಂಕಿತರು ಬಂದರೆ ಪರಿಸ್ಥಿತಿ ಕೈಮೀರಬಹುದು. ಈಗಾಗಲೇ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿದೆ ಎಂದು ತೆಲಂಗಾಣದ ಮುಖ್ಯ ಕಾರ್ಯದರ್ಶಿ ಕಳೆದ ವಾರ ಹೇಳಿದ್ದರು. ಆಸ್ಪತ್ರೆಗಳಲ್ಲಿ ಮೊದಲೇ ಹಾಸಿಗೆ ಕಾಯ್ದಿರಿಸಿದ ಸೋಂಕಿತರಿಗೆ  ಮಾತ್ರ ತೆಲಂಗಾಣ ಪ್ರವೇಶಕ್ಕೆ ಅವಕಾಶವಿದೆ ಎಂದು ಪೊಲೀಸರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News